Site icon Vistara News

Modi In Austria: ಭಾರತ ಜಗತ್ತಿಗೆ ಬುದ್ಧನನ್ನು ಕೊಟ್ಟಿದೆ, ಯುದ್ಧವನ್ನಲ್ಲ; ಆಸ್ಟ್ರಿಯಾದಲ್ಲಿ ಮೋದಿ ಮಾತಿನ ಮೋಡಿ

Waqf Bill

ವಿಯೆನ್ನಾ: ಕಳೆದ 41 ವರ್ಷಗಳಲ್ಲಿಯೇ ಭಾರತದ ಯಾವೊಬ್ಬ ಪ್ರಧಾನಿಯೂ ಮಾಡದ ದಾಖಲೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬರೆದರು. ಆಸ್ಟ್ರಿಯಾ ಭೇಟಿಯನ್ನು ಯಶಸ್ವಿಯಾಗಿ ಕೈಗೊಂಡಿರುವ ಮೋದಿ ಅವರು 41 ವರ್ಷದಲ್ಲಿಯೇ ಆಸ್ಟ್ರಿಯಾಗೆ ಭೇಟಿ (Modi In Austria) ನೀಡಿದ ಮೊದಲ ಪ್ರಧಾನಿ ಎನಿಸಿದರು. ಆಸ್ಟ್ರಿಯಾದಲ್ಲಿ ದ್ವಿಪಕ್ಷೀಯ ಮಾತುಕತೆ ಜತೆಗೆ ವಿಯೆನ್ನಾದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಅವರು ಭಾರತದ ಘನತೆಯನ್ನು ಎತ್ತಿಹಿಡಿದರು. “ಭಾರತವು ಜಗತ್ತಿಗೆ ಬುದ್ಧನನ್ನು ಕೊಟ್ಟಿದೆಯೇ ಹೊರತು, ಯುದ್ಧವನ್ನಲ್ಲ” ಎಂದು ಹೇಳಿದರು.

“ಭಾರತ ಹಾಗೂ ಆಸ್ಟ್ರಿಯಾ ನಡುವೆ ಹಲವು ಸಾಮ್ಯತೆಗಳಿವೆ. ಸಂಸ್ಕೃತಿ, ಆರ್ಥಿಕತೆ, ವೈಚಾರಿಕತೆಯು ಒಂದೇ ಇವೆ. 200 ವರ್ಷಗಳ ಹಿಂದೆಯೇ ವಿಯೆನ್ನಾ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತದ ಬೋಧನೆ ನಡೆಯುತ್ತಿತ್ತು. ರವೀಂದ್ರ ನಾಥ್‌ ಟ್ಯಾಗೋರ್‌, ಸುಭಾಷ್‌ ಚಂದ್ರ ಬೋಸ್‌ ಅವರಂತಹ ಧೀಮಂತರನ್ನು ಆಸ್ಟ್ರಿಯಾ ಕೂಡ ಕಂಡಿದೆ. ಇನ್ನು ಮಹಾತ್ಮ ಗಾಂಧೀಜಿಯವರ ಶಿಷ್ಯ ಮೀರಾ ಬೆನಾ ಅವರು ಕೊನೆಯ ದಿನಗಳನ್ನು ಆಸ್ಟ್ರಿಯಾದಲ್ಲಿಯೇ ಕಳೆದರು. ಅಷ್ಟರಮಟ್ಟಿಗೆ, ಭಾರತ ಹಾಗೂ ಆಸ್ಟ್ರಿಯಾ ನಂಟು ತುಂಬ ಹಳೆಯದು” ಎಂದು ಹೇಳಿದರು.

“ನಾನು ಇದೇ ಮೊದಲ ಬಾರಿಗೆ ಆಸ್ಟ್ರಿಯಾಗೆ ಭೇಟಿ ನೀಡಿದ್ದೇನೆ. ಇಲ್ಲಿನ ಜನರ ಉತ್ಸಾಹ ಕಂಡು ನಾನು ಮೂಕವಿಸ್ಮಿತನಾಗಿದ್ದೇನೆ. 41 ವರ್ಷಗಳ ಬಳಿಕ ಭಾರತದ ಪ್ರಧಾನಿ ಇಲ್ಲಿಗೆ ಬಂದಿದ್ದು, ನೀವು ನೀಡಿದ ಬೆಂಬಲ ಅದ್ಭುತವಾಗಿದೆ. ಇಲ್ಲಿರುವ ತುಂಬ ಜನರಿಗೆ ಗೊತ್ತಿರಲಿಕ್ಕಿಲ್ಲ. ಭಾರತ ಹಾಗೂ ಆಸ್ಟ್ರಿಯಾ ದೇಶಗಳು ದ್ವಿಪಕ್ಷೀಯ ಸಂಬಂಧದಲ್ಲಿ 75 ವರ್ಷಗಳನ್ನು ಪೂರೈಸಿವೆ” ಎಂದರು.

ನರೇಂದ್ರ ಮೋದಿ ಅವರು ಭಾಷಣದ ವೇಳೆ ಹತ್ತಾರು ವಿಷಯಗಳನ್ನು ಪ್ರಸ್ತಾಪಿಸಿದರು. ಭಾರತವು 2047ರ ವೇಳೆಗೆ ವಿಕಸಿತ ಆಗುವುದು. ಸ್ವಾತಂತ್ರ್ಯದ ಅಮೃತ ಮಹೋತ್ಸವ, ಲೋಕಸಭೆ ಚುನಾವಣೆ ವೇಳೆ ವಿದ್ಯುನ್ಮಾನ ಮತಯಂತ್ರಗಳ ಸಮರ್ಥ ಬಳಕೆ, ಜಗತ್ತಿನೇ ಮೂರನೇ ಬೃಹತ್‌ ವಿತ್ತೀಯ ರಾಷ್ಟ್ರವಾಗಿ ಹೊರಹೊಮ್ಮುವ ಗುರಿ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ನರೇಂದ್ರ ಮೋದಿ ಅವರ ಭಾಷಣದ ಕೊನೆಗೆ ಅನಿವಾಸಿ ಭಾರತೀಯರು ವಂದೇ ಮಾತರಂ, ಮೋದಿ ಮೋದಿ ಎಂದು ಘೋಷಣೆ ಕೂಗಿದರು.

ಇದಕ್ಕೂ ಮೊದಲು ಆಸ್ಟ್ರಿಯಾದ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಶಾಲೆನ್ಬರ್ಗ್ ಸೇರಿದಂತೆ ಹಲವು ಗಣ್ಯರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಆಸ್ಟ್ರಿಯಾ ಪ್ರಜೆಗಳು ‘ವಂದೇ ಮಾತರಂ’ ಗಾಯನ ಪ್ರಸ್ತುತ ಪಡಿಸಿದ್ದು ಗಮನ ಸೆಳೆಯಿತು. ಈ ವಿಡಿಯೊ ತುಣುಕನ್ನು ನರೇಂದ್ರ ಮೋದಿ ಅವರು ತಮ್ಮಸಾಮಾಜಿಕ ಜಾಲತಾಣತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

4೦ ವರ್ಷಗಳ ಬಳಿಕ ಪ್ರಧಾನಿ ಭೇಟಿ

ಆಸ್ಟ್ರಿಯಾಕ್ಕೆ ಬರೋಬ್ಬರಿ ಸುಮಾರು 41 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡಿದ್ದಾರೆ ಎನ್ನುವುದು ವಿಶೇಷ. ಈ ಹಿಂದೆ ಇಂದಿರಾ ಗಾಂಧಿ ಅವರು ಆಸ್ಟ್ರಿಯಾಕ್ಕೆ ತೆರಳಿದ್ದರು. ಅದಾದ ಬಳಿಕ ಯಾರೂ ಹೋಗಿರಲಿಲ್ಲ. ಈಗ ಮೋದಿ ಅವರು ಹೊಸ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ: PM Modi Russia Visit : ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ಟಲ್’ ಪ್ರದಾನ

Exit mobile version