ಭಾರತ `ಕ್ಯಾನ್ಸರ್‌ನ ರಾಜಧಾನಿ’ (Cancer Capital) ಆಗುವತ್ತ ಸಾಗಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ. 2024ರ ವಿಶ್ವ ಆರೋಗ್ಯ ದಿನದಂದು ಬಿಡುಗಡೆಯಾದ ಅಪೊಲೊ ಆಸ್ಪತ್ರೆಗಳ ‘ಹೆಲ್ತ್ ಆಫ್ ನೇಷನ್’ ವರದಿಯ 4ನೇ ಆವೃತ್ತಿಯು ಭಾರತವನ್ನು ʼವಿಶ್ವದ ಕ್ಯಾನ್ಸರ್ ರಾಜಧಾನಿʼ ಎಂದು ಕರೆದಿದೆ. ವರದಿಯ ಪ್ರಕಾರ, ಮೂವರು ಭಾರತೀಯರಲ್ಲಿ ಒಬ್ಬರು ಪ್ರಿ ಡಯಾಬಿಟೀಸ್‌ನಿಂದ, ಮೂವರಲ್ಲಿ ಇಬ್ಬರು ಪೂರ್ವ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. 10ರಲ್ಲಿ ಒಬ್ಬರು ಖಿನ್ನತೆಗೆ ಒಳಗಾಗಿದ್ದಾರೆ. ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯರಕ್ತನಾಳದ ಕಾಯಿಲೆಗಳು ಮತ್ತು ಮಾನಸಿಕ ಆರೋಗ್ಯ ಅಸ್ವಸ್ಥತೆಗಳು ನಿರ್ಣಾಯಕ ಮಟ್ಟ ತಲುಪಿವೆ. ಇದು ಒಟ್ಟಾರೆ ರಾಷ್ಟ್ರದ ಆರೋಗ್ಯದ ಮೇಲೆಯೇ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಕ್ಯಾನ್ಸರ್ ಪ್ರಕರಣಗಳು ಭಾರತದಲ್ಲಿ ಉಲ್ಬಣಿಸಿವೆ; ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಭಾರತದಲ್ಲಿ ಪತ್ತೆಯಾಗುವ ಸಾಮಾನ್ಯ ಕ್ಯಾನ್ಸರ್‌ಗಳಾಗಿದ್ದು, ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್, ಬಾಯಿಯ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿವೆ.
ಚಿಂತೆಗೀಡುಮಾಡುವ ಇನ್ನೊಂದು ಅಂಶ ಎಂದರೆ, ಇತರ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಕ್ಯಾನ್ಸರ್ ರೋಗನಿರ್ಣಯದ ವಯಸ್ಸು ಕಡಿಮೆಯಾಗುತ್ತಿರುವುದು. ಅಂದರೆ, ಯುಎಸ್, ಯುಕೆ ಮತ್ತು ಚೀನಾದಲ್ಲಿ ಕ್ಯಾನ್ಸರ್ ರೋಗನಿರ್ಣಯದ ವಯಸ್ಸು 60 ಮತ್ತು 70 ವರ್ಸದ ಆಸುಪಾಸಿನಲ್ಲಿ ಇದ್ದರೆ, ಭಾರತದಲ್ಲಿ ಸ್ತನ ಕ್ಯಾನ್ಸರ್ ರೋಗನಿರ್ಣಯಕ್ಕೆ ಸರಾಸರಿ 52 ವರ್ಷ, ಶ್ವಾಸಕೋಶದ ಕ್ಯಾನ್ಸರ್‌ಗೆ ಸರಾಸರಿ 54 ವರ್ಷ ಇದೆ. ಇನ್ನೊಂದು ಕಳವಳದ ಅಂಶವೆಂದರೆ ಅಸಮರ್ಪಕ ತಪಾಸಣೆ. ಇದು ಜಾಗತಿಕ ಮಾನದಂಡಗಳಿಗಿಂತ ಬಹಳ ಕಡಿಮೆ.
ಭಾರತೀಯರಲ್ಲಿ ಯಾಕೆ ಹೆಚ್ಚುತ್ತಿರಬಹುದು? ವರದಿಯ ಪ್ರಕಾರ ಭಾರತೀಯರಲ್ಲಿ ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಸ್ಲೀಪ್ ಅಪ್ನಿಯಾ (ನಿದ್ರೆಯ ಸಮಸ್ಯೆ) ಸಮಸ್ಯೆ ಗಮನಾರ್ಹ ಹೆಚ್ಚಳ ಕಂಡಿವೆ. ಸ್ಥೂಲಕಾಯದ ಪ್ರಮಾಣ 2016ರಲ್ಲಿ ಇದ್ದ 9 ಪ್ರತಿಶತದಿಂದ 2023ರಲ್ಲಿ 20 ಪ್ರತಿಶತಕ್ಕೆ ಏರಿದೆ. ಇದೇ ಅವಧಿಯಲ್ಲಿ ಅಧಿಕ ರಕ್ತದೊತ್ತಡ ಪ್ರಕರಣಗಳು ಶೇಕಡಾ 9ರಿಂದ 13ಕ್ಕೆ ಏರಿದೆ. ಹೆಚ್ಚಿನ ಪ್ರಮಾಣದ ಭಾರತೀಯರು ಸ್ಲೀಪ್ ಅಪ್ನಿಯಾ ಅಪಾಯದಲ್ಲಿದ್ದಾರೆ. ಒತ್ತಡ, ಜೀವನಶೈಲಿ ಸಮಸ್ಯೆಗಳು, ವ್ಯಾಯಾಮದ ಕೊರತೆ, ಸರಿಯಾದ ಡಯಟ್ ಕೊರತೆ, ವಿಕಿರಣ ಅಥವಾ ಕ್ಯಾನ್ಸರ್‌ಕಾರಕ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವಿಕೆ, ಇವೆಲ್ಲವೂ ಕ್ಯಾನ್ಸರ್‌ಗೆ ಕಾರಣಗಳಾಗಿವೆ. ಡಾಕ್ಟರ್‌ಗಳ ಪ್ರಕಾರ ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಸ್ಥೂಲಕಾಯದ ಸಮಸ್ಯೆಗಳ ವಿರುದ್ಧ ಹೋರಾಡಲು, ತಡೆಗಟ್ಟಲು ಮತ್ತು ಹಿಮ್ಮೆಟ್ಟಿಸಲು ತಕ್ಷಣದ ಕ್ರಮಗಳಾಗಬೇಕು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಯುಗಾದಿ ದೇಶಕ್ಕೆ ಶುಭ ಹೊತ್ತು ತರಲಿ
ಪ್ರತಿಯೊಬ್ಬರೂ ಸೂಕ್ತ ಜೀವನಶೈಲಿ, ಆಹಾರ, ದುಶ್ಚಟಗಳ ನಿವಾರಣೆಯ ಮೂಲಕ ಈ ಕ್ಯಾನ್ಸರ್ ತಡೆಗಟ್ಟಲು ಗರಿಷ್ಠ ಯತ್ನಿಸಬಹುದು. ತಂಬಾಕು ಬಳಸದಿರುವಿಕೆ, ಆಲ್ಕೋಹಾಲ್ ಸೇವನೆ ಮಾಡದಿರುವುದು ಅಥವಾ ಕಡಿಮೆ ಮಾಡುವುದು, ಲಸಿಕೆ ಶಿಫಾರಸು ಮಾಡಿದ ಗುಂಪಿಗೆ ಸೇರಿದವರಾಗಿದ್ದರೆ ಎಚ್‌ಪಿವಿ ಮತ್ತು ಹೆಪಟೈಟಿಸ್ ಬಿ ವಿರುದ್ಧ ಲಸಿಕೆ ಪಡೆಯುವುದು, ವಿಕಿರಣಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸುವುದು, ಯುರೇನಿಯಂನ ನೈಸರ್ಗಿಕ ಕೊಳೆಯುವಿಕೆಯಿಂದ ಉತ್ಪತ್ತಿಯಾಗುವ ವಿಕಿರಣಶೀಲ ಅನಿಲ ರೇಡಾನ್‌ಗೆ ಒಡ್ಡಿಕೊಳ್ಳದಿರುವುದು- ಇವುಗಳು ಅಗತ್ಯ. ನಮ್ಮಲ್ಲಿ ನಿಯಮಿತ ಆರೋಗ್ಯ ತಪಾಸಣೆಯ ಮಹತ್ವದ ಬಗ್ಗೆ ಜನತೆಗೆ ಅರಿವೇ ಇಲ್ಲ. ಆರೋಗ್ಯ ತಪಾಸಣೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಹೆಚ್ಚಾಗಬೇಕು ರಕ್ತದೊತ್ತಡ ಮತ್ತು ಬಾಡಿ ಮಾಸ್ ಇಂಡೆಕ್ಸ್ ಮಟ್ಟಗಳ ಬಗ್ಗೆ ನಿಗಾ ಇಡುವ ಮೂಲಕ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬೇಕು.
ಆನುವಂಶಿಕವಾಗಿಯೂ ಕ್ಯಾನ್ಸರ್ ಬರುತ್ತದೆ. ಕುಟುಂಬದಲ್ಲಿ ಇದರ ಹಿನ್ನೆಲೆ ಇರುವವರು ಜಾಗರೂಕರಾಗಿರಬೇಕಿದೆ. ನಿಯಮಿತ ಆರೋಗ್ಯ ತಪಾಸಣೆ ಅಗತ್ಯ. ಕ್ಯಾನ್ಸರ್‌ಗೆ ಮದ್ದೇ ಇಲ್ಲ ಎಂದೇನೂ ಇಲ್ಲ. ಆದರೆ ಕ್ಯಾನ್ಸರ್‌ನ ಬಗ್ಗೆ ಇರುವ ಆತಂಕ- ಭಯಗಳು ರೋಗಿಯನ್ನು ಅರ್ಧಕ್ಕರ್ಧ ಕುಗ್ಗಿಸಿಬಿಡುತ್ತವೆ. ನಮ್ಮಲ್ಲಿ ಕ್ಯಾನ್ಸರ್ ಚಿಕಿತ್ಸೆಯ ವೆಚ್ಚವೂ ಬಲು ದುಬಾರಿ. ಆರೋಗ್ಯ ವಿಮೆ ಹೊಂದಿಲ್ಲದಿದ್ದರೆ ಈ ರೋಗಿಗಳ ಬದುಕು ದುರ್ಭರ. ಸರ್ಕಾರ ಇದನ್ನು ಗಮನಿಸಿ ಮಧ್ಯಮ- ಬಡವರ್ಗದಲ್ಲಿ ರೋಗತಪಾಸಣೆ, ರೋಗನಿದಾನಕ್ಕೆ ಲಭ್ಯ ವ್ಯವಸ್ಥೆಯನ್ನು ಒದಗಿಸಬೇಕು.