ಜನಸಂಖ್ಯೆಯಲ್ಲೀಗ ಚೀನಾವನ್ನು ಮೀರಿಸಿ ಭಾರತ ವಿಶ್ವದಲ್ಲೇ ನಂ.1 ಆಗಿದೆ. ಭಾರತದ ಜನಸಂಖ್ಯೆ ಈಗ 142.86 ಕೋಟಿ ದಾಟಿದೆ. ಚೀನಾಕ್ಕಿಂತ 29 ಲಕ್ಷ ಹೆಚ್ಚಿನ ಜನಸಂಖ್ಯೆ ಭಾರತದಲ್ಲಿದೆ. ವಿಶ್ವಸಂಸ್ಥೆಯ UNFPA ವರದಿ ಇದನ್ನು ಖಚಿತಪಡಿಸಿದೆ. ಭಾರತದ ಜನಸಂಖ್ಯೆ ಮುಂಬರುವ ಮೂರು ದಶಕಗಳಲ್ಲಿ 165 ಕೋಟಿಗೆ ಏರಿಕೆಯಾಗಲಿದ್ದು, ಬಳಿಕ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಜನಸಂಖ್ಯಾ ಹೆಚ್ಚಳವನ್ನು ಹೇಗೆ ನೋಡಬೇಕು ಎಂಬುದು ಈಗ ನಮ್ಮ ಮುಂದಿರುವ ಪ್ರಶ್ನೆ.
ವಿಶೇಷವೆಂದರೆ ಭಾರತದಲ್ಲಿ ಈಗ ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.25ರಷ್ಟು ಮಂದಿ 0-14 ವರ್ಷದವರಾಗಿದ್ದಾರೆ. 10ರಿಂದ 19 ವರ್ಷದವರು ಶೇ.18ರಷ್ಟಿದ್ದಾರೆ. 15ರಿಂದ 64 ವರ್ಷ ವಯಸ್ಸಿನ ವಯೋಮಿತಿಯ ಜನರು 68% ಇದ್ದಾರೆ. 65ಕ್ಕಿಂತ ಮೇಲಿನವರ ಪ್ರಮಾಣ ಶೇ.7 ಮಾತ್ರ. ಅಂದರೆ ಇದು ಯುವ ಭಾರತ ಎನ್ನುವುದನ್ನು ಸಾರುತ್ತಿದೆ. ಜನಸಂಖ್ಯೆ ನಿಯಂತ್ರಣಕ್ಕೆ ಕಳೆದ 50 ವರ್ಷಗಳಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗಿತ್ತು. ಜನಸಂಖ್ಯೆ ನಿಯಂತ್ರಣಕ್ಕೆ ಒತ್ತು ನೀಡಲಾಗಿತ್ತು. ಇಷ್ಟಾಗಿಯೂ ಭಾರತ ಈಗ ಚೀನಾವನ್ನೂ ಮೀರಿಸಿ ಜನಸಂಖ್ಯೆಯಲ್ಲಿ ನಂ.1 ಆಗಿದೆ. ಇನ್ನು ನಾವೀಗ ಈ ಜನಸಂಖ್ಯೆಯ ಪರಿಣಾಮಕಾರಿ ಸದ್ಬಳಕೆ ಮಾಡುವತ್ತ ಗಮನ ನೀಡಬೇಕಿದೆ.
ಈ ಮೊದಲು ಜನಸಂಖ್ಯಾ ಏರಿಕೆ ಎಂಬುದನ್ನು ಒಂದು ಹೊರೆ ಎಂಬಂತೆ ನೋಡಲಾಗುತ್ತಿತ್ತು. ಆದರೆ ಇಂದು ಇದರ ಬಗ್ಗೆ ಬೇರೆ ವ್ಯಾಖ್ಯಾನಗಳಿವೆ. ಒಂದು ದೇಶದ ಜನಸಂಖ್ಯೆಯಲ್ಲಿ ಎಷ್ಟು ಪ್ರಮಾಣದ ಯುವಜನತೆ ಇದೆ, ಎಷ್ಟು ಪ್ರಮಾಣದಲ್ಲಿ ದುಡಿಯುವವರು ಇದ್ದಾರೆ ಎಂಬುದರ ಮೇಲೆ ಆ ದೇಶದ ಪ್ರಗತಿ, ಜಿಡಿಪಿ ಇತ್ಯಾದಿಗಳು ನಿರ್ಧಾರವಾಗುತ್ತವೆ. ಮುಂದುವರಿದ ದೇಶಗಳು ಜನಸಂಖ್ಯಾ ನಿಯಂತ್ರಣದಲ್ಲಿ ಭಾರಿ ಪ್ರಗತಿ ಸಾಧಿಸಿವೆ. ಉದಾಹರಣೆಗೆ ಜಪಾನ್, ಜರ್ಮನಿ. ಆದರೆ ಅಲ್ಲಿ ಈಗಿರುವ ದುಡಿಯುವ ಜನತೆ ಇನ್ನು ಕೆಲವೇ ವರ್ಷಗಳಲ್ಲಿ ವೃದ್ಧರಾಗುತ್ತಿದ್ದಾರೆ, ಫಲವತ್ತತೆ ದರ 1.5ಕ್ಕಿಂತಲೂ ಕಡಿಮೆಯಾಗಿದೆ. ಜನಸಂಖ್ಯೆ ಪುನಃಪೂರಣಕ್ಕೆ ಆದರ್ಶ ಫಲವತ್ತತೆ ದರ 2.1ರಷ್ಟಿರಬೇಕು. ಭಾರತದಲ್ಲಿ ಅದು 2.1ಕ್ಕಿಂತ ಮೇಲಿದೆ. ಅಂದರೆ ಭಾರತದಲ್ಲಿ ದುಡಿಯುವ ಜನತೆ ವೃದ್ಧರಾಗುತ್ತಿದ್ದಂತೆ, ಅವರ ಜಾಗದಲ್ಲಿ ಹೊಸ ದುಡಿಯುವ ಜನತೆ ಬರುತ್ತಿದ್ದಾರೆ. ಪ್ರಗತಿಯ ಚಕ್ರ ಅಡೆತಡೆಯಿಲ್ಲದೆ ಮುಂದುವರಿಯುತ್ತದೆ. ಇಂದು ಚೀನಾ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ, ಕಳೆದ ತಲೆಮಾರಿನಲ್ಲಿ ಜನಸಂಖ್ಯೆಯನ್ನು ಅತಿಯಾಗಿ ನಿಯಂತ್ರಿಸಿದ ಪರಿಣಾಮ ಫಲವತ್ತತೆ ದರ ಇಳಿದಿದೆ.
ಈ ಜನಸಂಖ್ಯೆಯ ಪರಿಣಾಮ ಒಳಿತೂ ಇದೆ; ಸವಾಲುಗಳೂ ಇವೆ. ಏಷ್ಯಾದ ಮೂರನೇ ಅತಿ ದೊಡ್ಡ ಎಕಾನಮಿಯಾಗಿರುವ ಭಾರತವು ಜಗತ್ತಿನ ಜನಸಂಖ್ಯೆಯ ಐದನೇ ಒಂದರಷ್ಟು ಪಾಲನ್ನು ಹೊಂದಿರುವುದರಿಂದ ಅಗಾಧ ಮಾನವ ಸಂಪನ್ಮೂಲದೊಂದಿಗೆ ವಿಶಾಲವಾದ ಮಾರುಕಟ್ಟೆಯನ್ನೂ ಸೃಷ್ಟಿಸಿದೆ. ವಿದೇಶಗಳಲ್ಲೂ ಭಾರತೀಯರು ದುಡಿದು ತವರಿಗೆ ರವಾನಿಸುತ್ತಿದ್ದಾರೆ. ಆದರೆ ಇದೇ ವೇಳೆ ಹೆಚ್ಚುತ್ತಿರುವ ಜನಸಂಖ್ಯೆಯ ಪರಿಣಾಮ ಎಲ್ಲರಿಗೂ ಉದ್ಯೋಗಾವಕಾಶಗಳನ್ನು ನೀಡುವುದು ಸವಾಲಾಗಿ ಪರಿಣಮಿಸಿದೆ. ಭಾರತದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಂದಿ 30 ವರ್ಷ ವಯೋಮಿತಿಗಿಂತ ಕಡಿಮೆ ವಯಸ್ಸಿನವರು. ಕೃಷಿ ವಲಯದಿಂದ ಅನೇಕ ಮಂದಿ ವಿಮುಖರಾಗುತ್ತಿದ್ದು, ಅವರಿಗೂ ಉದ್ಯೋಗಾವಕಾಶಗಳ ಸೃಷ್ಟಿ ಮುಖ್ಯವಾಗಿದೆ. ದುಡಿಯುವ ಕಾರ್ಮಿಕ ಜನ ಸಂಪನ್ಮೂಲ ಹೇರಳವಾಗಿ ಇರುವುದರಿಂದ ಜಾಗತಿಕ ಉತ್ಪಾದಕ ಕಂಪನಿಗಳು ಭಾರತದಲ್ಲಿ ತಮ್ಮ ವಸ್ತುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಮುಂದಾಗಿವೆ. ಜತೆಗೆ ದೇಶದ ಉತ್ಪಾದಕ ಶಕ್ತಿ ವೃದ್ಧಿಸುತ್ತದೆ. ಅದು ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತಿದೆ. ಉದ್ಯೋಗ ಸೃಷ್ಟಿಗೂ ಕಾರಣವಾಗುತ್ತಿದೆ.
ಇದನ್ನೂ ಓದಿ: Most populous country : ಜನಸಂಖ್ಯೆಯಲ್ಲಿ ಭಾರತ ಈಗ ನಂ.1, ಆರ್ಥಿಕ ಪ್ರಗತಿಗೆ ದುಡಿಯುವ ಯುವಜನರೇ ನಿರ್ಣಾಯಕ
ಮಾನವ ಶಕ್ತಿ, ಮಾನವ ಸಂಪನ್ಮೂಲವನ್ನು ದೇಶದ ಅಭಿವೃದ್ಧಿಯತ್ತ ತಿರುಗಿಸುವ ಅಗತ್ಯ ಇದೆ. ಭಾರತವು 2030ರ ವೇಳೆಗೆ ಜರ್ಮನಿ ಮತ್ತು ಜಪಾನನ್ನು ಮೀರಿಸಿ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಗುರಿ ಹೊಂದಿದೆ. ಭಾರತ ಹೊಂದಿರುವ ಯುವ ಜನ ಶಕ್ತಿಯನ್ನು ಸರಿಯಾಗಿ ಬಳಸಿಕೊಂಡರೆ ಈ ಗುರಿ ಸಾಧನೆ ಕಷ್ಟವಾಗಲಾರದು.