Site icon Vistara News

ವಿಸ್ತಾರ ಸಂಪಾದಕೀಯ: ಡಿಜಿಟಲ್ ಪಾವತಿಯಲ್ಲಿ ಭಾರತ ನಂ.1, ಭಾರತೀಯರ ಪ್ರೌಢಿಮೆಗೆ ಇದು ಸಾಕ್ಷಿ

Digital Payment

#image_title

ಜಗತ್ತಿನಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ಪಾವತಿಯಾಗುವ ದೇಶಗಳಲ್ಲಿ ಭಾರತ ನಂ.1 ಆಗಿ ಹೊರಹೊಮ್ಮಿದೆ. 2022ರ ಅಂಕಿ ಅಂಶಗಳ ಪ್ರಕಾರ, ಡಿಜಿಟಲ್ ಪೇಮೆಂಟ್ಸ್‌ನಲ್ಲಿ ಭಾರತವು ನಾಲ್ಕು ರಾಷ್ಟ್ರಗಳನ್ನು ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದ್ದು, ಇಲ್ಲಿ 8.95 ಕೋಟಿ ಡಿಜಿಟಲ್ ಪಾವತಿಗಳಾಗಿವೆ ಎಂದು ಮೈಗೌವ್‌ಇಂಡಿಯಾ (MyGovIndia) ಅಂಕಿ ಅಂಶಗಳಿಂದ ಗೊತ್ತಾಗಿದೆ. ಜಾಗತಿಕವಾಗಿ ನಡೆಯುವ ರಿಯಲ್‌ಟೈಮ್ ಡಿಜಿಟಲ್ ಪೇಮೆಂಟ್‌ಗಳಿಗೆ ಭಾರತದ ಕೊಡುಗೆಯೇ ಶೇ.46ರಷ್ಟಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕಿನ ತಜ್ಞರ ಪ್ರಕಾರ, ಭಾರತದ ಡಿಜಿಟಲ್ ಪಾವತಿ ವಲಯವು ಮೌಲ್ಯ ಮತ್ತು ಪ್ರಮಾಣ ಎರಡರಲ್ಲೂ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ. ಅನೇಕ ಕಾರಣಗಳಿಂದಾಗಿ ಇದೊಂದು ಗಮನಾರ್ಹ ಸಾಧನೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಅದರ ಪರಿಣಾಮವೇ ಈಗಿನ ಈ ಸಾಧನೆ. ನೋಟ್ ಬ್ಯಾನ್ ಮಾಡಿದ ಬಳಿಕವಂತೂ ದೇಶದಲ್ಲಿ ಪರೋಕ್ಷವಾಗಿ ಡಿಜಿಟಲ್ ಕ್ರಾಂತಿಯೇ ಶುರುವಾಗಿತ್ತು. ದೊಡ್ಡ ಮೊತ್ತದ ಕರೆನ್ಸಿ ನೋಟುಗಳು ಮರೆಗೆ ಸರಿದಾಗ ಸಹಜವಾಗಿಯೇ ದೊಡ್ಡ ಮೊತ್ತದ ವ್ಯಾಪಾರ ವಹಿವಾಟುಗಳು ಡಿಜಿಟಲ್‌ ಮೂಲಕ ಆಗತೊಡಗಿದವು. ಇದರ ಜತೆಗೆ ಆದಾಯ ತೆರಿಗೆ ಇಲಾಖೆ ಮತ್ತು ಜಿಎಸ್‌ಟಿ ವ್ಯವಸ್ಥೆಯೂ ದೊಡ್ಡ ಮೊತ್ತದ ವಹಿವಾಟುಗಳ ಮೇಲೆ ಹೆಚ್ಚಿನ ನಿಗಾ ಇಟ್ಟಿತು. ಕರೆನ್ಸಿ ವಹಿವಾಟಿನ ಮೂಲಕ ಯಾವುದೆಲ್ಲ ತೆರಿಗೆ ಹಿಡಿತದಿಂದ ತಪ್ಪಿಸಿಕೊಳ್ಳುತ್ತಿತ್ತೋ ಅದೆಲ್ಲವೂ ಡಿಜಿಟಲ್‌ ಪಾವತಿಯಿಂದಾಗಿ ತೆರಿಗೆ ವ್ಯಾಪ್ತಿಯೊಳಗೆ ಬಂದವು. ಇದು ದೇಶದ ತೆರಿಗೆ ಸಂಗ್ರಹಕ್ಕೂ ಗಣನೀಯ ಕೊಡುಗೆ ನೀಡಿದ್ದನ್ನು ಮರೆಯುವಂತಿಲ್ಲ.

ಇದೇನೂ ಸುಲಭದ ನಡಿಗೆಯಾಗಿರಲಿಲ್ಲ. ಭಾರತದಲ್ಲಿ ಬಡವರು, ಅನಕ್ಷರಸ್ಥರೇ ಹೆಚ್ಚಿದ್ದಾರೆ. ಅವರೆಲ್ಲ ನೋಟು ಬಳಸದೆ ಡಿಜಿಟಲ್ ವ್ಯವಹಾರ ನಡೆಸಲು ಹೇಗೆ ಸಾಧ್ಯ ಎಂಬ ಬಗ್ಗೆ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ದೇಶದ ಸಾಮಾನ್ಯ ಜನರೇ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ವಹಿವಾಟಿಗೆ ಇಳಿದರು. ಎಳನೀರು ಮಾರುವವರು, ಚಪ್ಪಲಿ ಹೊಲಿಯುವವರು, ರಸ್ತೆ ಬದಿ ತರಕಾರಿ ಮಾರುವವರೂ ಈಗ QR ಕೋಡ್ ಬಳಸಿ ಡಿಜಿಟಲ್ ಮೂಲಕವೇ ವ್ಯವಹರಿಸುತ್ತಿದ್ದಾರೆ. ಡಿಜಿಟಲ್‌ ಪಾವತಿಯಿಂದ ಅನುಕೂಲಗಳು ಸಾಕಷ್ಟಿವೆ. ಇದು ಸುಲಭ ಹಾಗೂ ಬಹುದೂರದಲ್ಲಿರುವವರ ಪಾವತಿಯನ್ನೂ ಇದರಿಂದ ಮಾಡಬಹುದು. ಇದರಲ್ಲಿ ಭದ್ರತೆ ಹೆಚ್ಚು. ಸರ್ಕಾರಿ ಯೋಜನೆಗಳು ಫಲಾನುಭವಿಗಳನ್ನು ನೇರವಾಗಿ ತಲುಪುತ್ತಿರುವುದು ಈ ಪಾವತಿ ಮೂಲಕವೇ ಆಗಿವೆ. ತೆರಿಗೆ ವಂಚನೆ ತಡೆಗಟ್ಟಲು ಸಾಧ್ಯವಾಗಿದೆ. ಭವಿಷ್ಯದಲ್ಲಿ ಎಲ್ಲ ಹಣದ ವಹಿವಾಟುಗಳೂ ಡಿಜಿಟಲ್‌ ಆಗಿಬಿಡುವ ಸಂಭವ ಇರುವುದರಿಂದ, ನಾವು ಆ ಹಾದಿಯಲ್ಲಿ ಶೀಘ್ರ ಹೆಜ್ಜೆ ಹಾಕುತ್ತಿದ್ದೇವೆ ಎಂದು ಹೆಮ್ಮೆ ಪಟ್ಟುಕೊಳ್ಳಬಹುದು.

ಇದನ್ನೂ ಓದಿ : ವಿಸ್ತಾರ TOP 10 NEWS: ಸ್ತ್ರೀಯರಿಗೆ ಭಾನುವಾರದಿಂದ ಫ್ರೀ ʼಶಕ್ತಿʼ, ಡಿಜಿಟಲ್‌ ಪಾವತಿಯಲ್ಲಿ ಭಾರತದ ಕೀರ್ತಿ ಹಾಗೂ ಇನ್ನಿತರೆ ಪ್ರಮುಖ ಸುದ್ದಿಗಳಿವು

ಆದರೆ ಇದರಲ್ಲಿರುವ ಕೆಲವು ಅನನುಕೂಲಗಳು ಮತ್ತು ವಂಚನೆಯ ಸಾಧ್ಯತೆಗಳೂ ಇದ್ದು, ಇವನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು. ಆನ್‌ಲೈನ್‌ ವ್ಯವಹಾರದಲ್ಲಿ ಪರಿಣತರಲ್ಲದವರನ್ನು ಇದರಲ್ಲಿ ಮೋಸಗೊಳಿಸಬಹುದಾಗಿದೆ. ಹಾಗೆಯೇ ಡಿಜಿಟಲ್ ಪಾವತಿಯ ಮೇಲೆ ಸೇವಾ ಶುಲ್ಕ ವಿಧಿಸುತ್ತಿರುವುದು ಕೂಡ ಸರಿಯಲ್ಲ. ಒಂದು ಕಡೆ ನಗದಿನ ಬದಲು ಡಿಜಿಟಲ್ ವಹಿವಾಟು ಉತ್ತೇಜಿಸುವ ಸರ್ಕಾರ, ಇನ್ನೊಂದು ಕಡೆ ಶುಲ್ಕದ ಬರೆ ಹಾಕುವುದು ಸರಿಯಲ್ಲ. ಡಿಜಿಟಲ್ ಪಾವತಿಯನ್ನು ಸರ್ಕಾರ ಶುಲ್ಕ ಮುಕ್ತಗೊಳಿಸಬೇಕು. ಡಿಜಿಟಲ್‌ ಪಾವತಿ ಒದಗಿಸುವ ಮಧ್ಯವರ್ತಿಗಳನ್ನು ಬೇಕಿದ್ದರೆ ನಿಯಂತ್ರಿಸುವ ಕಾಯಿದೆಗಳನ್ನು ರೂಪಿಸಲಿ, ಆದರೆ ಸಣ್ಣ ಪ್ರಮಾಣದ ಡಿಜಿಟಲ್‌ ಪಾವತಿಗೂ ಶುಲ್ಕ ತೆರುವಂತಾದರೆ ಅದು ಸಾಮಾನ್ಯನಿಗೆ ದುಬಾರಿಯಾಗುತ್ತದೆ.

Exit mobile version