ಮುಂಬೈ: ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶ ಪ್ರಕಟವಾಗುವ ಜೂನ್ 4ರ ಬಳಿಕ ಭಾರತದ ಷೇರು ಮಾರುಕಟ್ಟೆಯನ್ನು ಹಿಡಿಯಲು ಆಗುವುದಿಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಜೂನ್ 4ರ ಬಳಿಕ ಹೂಡಿಕೆದಾರರಿಗೆ ಭಾರಿ ಲಾಭವಾಗಲಿದೆ ಎಂಬುದಾಗಿ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ಕಳೆದ 6 ತಿಂಗಳಲ್ಲಿ ಬಾಂಬ್ ಸ್ಟಾಕ್ ಎಕ್ಸ್‌ಚೇಂಜ್ (BSE) ಪಟ್ಟಿಯಲ್ಲಿರುವ ಕಂಪನಿಗಳು 1 ಲಕ್ಷ ಕೋಟಿ ಡಾಲರ್ ಗಳಿಸಿವೆ ಎಂಬುದಾಗಿ ತಿಳಿದುಬಂದಿದೆ. ಇದರೊಂದಿಗೆ ಭಾರತದ ಈಕ್ವಿಟಿ ಮಾರುಕಟ್ಟೆಯ ಮೌಲ್ಯವು 5 ಲಕ್ಷ ಕೋಟಿ ಡಾಲರ್ ದಾಟುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾದಂತಾಗಿದೆ.
ಹೌದು, 2023ರ ನವೆಂಬರ್‌ನಲ್ಲಿ ಬಿಎಸ್‌ಇ ಒಟ್ಟು ಮಾರುಕಟ್ಟೆ ಮೊತ್ತವು 4 ಲಕ್ಷ ಕೋಟಿ ಡಾಲರ್ ಇತ್ತು. ಬಿಎಸ್‌ಇನಲ್ಲಿ ಲಿಸ್ಟ್ ಆಗಿರುವ ಕಂಪನಿಗಳ ಮಾರುಕಟ್ಟೆ ಬಂಡವಾಳವು ಕಳೆದ 6 ತಿಂಗಳಲ್ಲಿಯೇ 1 ಲಕ್ಷ ಕೋಟಿ ಡಾಲರ್ ಜಾಸ್ತಿಯಾಗಿದೆ. ಬಿಎಸ್‌ಇ ಲಿಸ್ಟ್ ಆಗಿರುವ ಕಂಪನಿಯಗಳ ಮಾರುಕಟ್ಟೆ ಬಂಡವಾಳವು 2007ರ ಮೇ ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್ ತಲುಪಿತ್ತು. ಇದಾದ ಒಂದು ದಶಕದ ಬಳಿಕ ಅಂದರೆ, 2017ರ ಜುಲೈನಲ್ಲಿ 2 ಲಕ್ಷ ಕೋಟಿ ಡಾಲರ್ ತಲುಪಿತ್ತು. ಇನ್ನು 2021ರ ಮೇ ತಿಂಗಳಲ್ಲಿ 4 ಲಕ್ಷ ಕೋಟಿ ಡಾಲರ್ ಆಗಿತ್ತು. ಈಗ ಆರೇ ತಿಂಗಳಲ್ಲಿ ಮಾರುಕಟ್ಟೆ ಬಂಡವಾಳವು 1 ಲಕ್ಷ ಕೋಟಿ ಡಾಲರ್ ಜಾಸ್ತಿಯಾಗಿದೆ.
ಇದರೊಂದಿಗೆ ಮಾರುಕಟ್ಟೆ ಬಂಡವಾಳ ಮೌಲ್ಯವು 5 ಲಕ್ಷ ಕೋಟಿ ಡಾಲರ್ ತಲುಪಿರುವುದು ಐತಿಹಾಸಿಕ ಎಂದೇ ಹೇಳಲಾಗುತ್ತಿದೆ. ಇದರಿಂದ ಹೂಡಿಕೆದಾರರ ವಿಶ್ವಾಸವೂ ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗಿದೆ. 5 ಲಕ್ಷ ಕೋಟಿ ಡಾಲರ್ ಎಂದರೆ ಭಾರತದ 414.75 ಲಕ್ಷ ಕೋಟಿ ರೂ. ಆಗಿದೆ. ಭಾರತದ ಈಕ್ವಿಟಿ ಮಾರುಕಟ್ಟೆಯಲ್ಲಿಯೇ ಮೊದಲ ಬಾರಿಗೆ ಇಷ್ಟೊಂದು ವೇಗದಲ್ಲಿ ಮಾರುಕಟ್ಟೆಯ ಬಂಡವಾಳವು ಏರಿಕೆಯಾಗಿದೆ ಎಂಬುದಾಗಿ ತಜ್ಞರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ನಿರೀಕ್ಷಿಸಲಾಗಿದೆ.
ಸದ್ಯ, ನಿಫ್ಟಿಯು ತನ್ನ ಗರಿಷ್ಠ ಪಾಯಿಂಟ್‌ಗಳಿಗಿಂತ 250 ಪಾಯಿಂಟ್ ಹಿಂದಿದೆ. ಆದರೂ, ಸಣ್ಣ ಹಾಗೂ ಮಧ್ಯಮ ಶ್ರೇಣಿಯ ಹೂಡಿಕೆಯು ಹೆಚ್ಚಾಗಿದೆ. ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಭಾರತದ ಷೇರುಪೇಟೆಯು ಮಹತ್ವದ ಸ್ಥಾನ ಪಡೆದಿದೆ. ಹಾಂಕಾಂಗ್, ಜಪಾನ್, ಚೀನಾ ಹಾಗೂ ಅಮೆರಿಕದ ನಂತರ ಭಾರತದ ಷೇರುಪೇಟೆಯು ಬೃಹತ್ ಷೇರು ಮಾರುಕಟ್ಟೆ ಎನಿಸಿದೆ. 2027ರ ವೇಳೆಗೆ ಭಾರತವು ವಿಶ್ವದಲ್ಲೇ ಮೂರನೇ ಬೃಹತ್ ಆರ್ಥಿಕತೆ ರಾಷ್ಟ್ರ ಎಂಬ ಖ್ಯಾತಿ ಗಳಿಸುವ ವಿಶ್ವಾಸ ಹೊಂದಿದೆ. 2030ರ ವೇಳೆಗೆ ಮಾರುಕಟ್ಟೆ ಬಂಡವಾಳವು 10 ಲಕ್ಷ ಡಾಲರ್ ತಲುಪಬೇಕು ಎಂಬ ಗುರಿ ಇದೆ. ಇದರ ದಿಸೆಯಲ್ಲಿ ಈಕ್ವಿಟಿ ಮೌಲ್ಯವು ಗಣನೀಯವಾಗಿ ಏರಿಕೆಯಾಗಿರುವುದು ಸಕಾರಾತ್ಮಕ ಸಂಗತಿಯಾಗಿದೆ.
ಇದನ್ನೂ ಓದಿ: LIC: ಎಲ್‌ಐಸಿಗೆ ಬಿಗ್ ರಿಲೀಫ್; ಸಾರ್ವಜನಿಕರ ಷೇರು ಪಾಲು ಶೇ. 10ಕ್ಕೆ ಹೆಚ್ಚಿಸಲು 3 ವರ್ಷ ಹೆಚ್ಚುವರಿ ಕಾಲಾವಕಾಶ