Site icon Vistara News

Indian Navy: ಇರಾನ್‌ ಹಡಗು, 23 ಪಾಕಿಸ್ತಾನಿಗಳನ್ನು ಕಡಲ್ಗಳ್ಳರಿಂದ ರಕ್ಷಿಸಿದ ಭಾರತೀಯ ನೌಕಾಪಡೆ

Indian Navy Rescues 23 Pak Nationals From Iranian Fishing Vessel Attacked By Pirates

ಹೊಸದಿಲ್ಲಿ: ಅರಬ್ಬಿ ಸಮುದ್ರದಲ್ಲಿ ಕಡಲ್ಗಳ್ಳರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ನೌಕಾಪಡೆಯು (Indian Navy) 12 ಗಂಟೆಗಳ ಕಾಲ ನಡೆದ ಕಡಲ್ಗಳ್ಳತನ (pirates) ವಿರೋಧಿ ಕಾರ್ಯಾಚರಣೆಯಲ್ಲಿ ಇರಾನ್ ಮೀನುಗಾರಿಕಾ ಹಡಗು ಮತ್ತು 23 ಪಾಕಿಸ್ತಾನಿ ಸಿಬ್ಬಂದಿಯನ್ನು ರಕ್ಷಿಸಿದೆ.

“ಮಾರ್ಚ್ 28ರಂದು ತಡರಾತ್ರಿ ಇರಾನಿನ ಮೀನುಗಾರಿಕಾ ನೌಕೆ ʼಅಲ್-ಕಂಬಾರ್ 786’ನಲ್ಲಿ ಕಡಲ್ಗಳ್ಳತನ ಘಟನೆಯ ಮಾಹಿತಿಯ ಆಧಾರದ ಮೇಲೆ, ಎರಡು ಭಾರತೀಯ ನೌಕಾಪಡೆಯ ಹಡಗುಗಳು ಅಪಹರಣಕ್ಕೊಳಗಾದ ಮೀನುಗಾರಿಕಾ ಹಡಗನ್ನು ತಡೆದು ರಕ್ಷಿಸಿವೆ” ಎದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.

“ಭಾರತೀಯ ನೌಕೆಗಳನ್ನು ಕಡಲ ಭದ್ರತಾ ಕಾರ್ಯಾಚರಣೆಗಳಿಗಾಗಿ ಅರಬ್ಬಿ ಸಮುದ್ರದಲ್ಲಿ ನಿಯೋಜಿಸಲಾಗಿತ್ತು. 12 ಗಂಟೆಗಳಿಗೂ ಹೆಚ್ಚು ಕಾಲ ಯುದ್ಧತಂತ್ರದ ಕ್ರಮಗಳ ನಂತರ, ಅಪಹರಿಸಲಾದ ಎಫ್‌ವಿಯಲ್ಲಿದ್ದ ಕಡಲ್ಗಳ್ಳರು ಶರಣಾಗುವಂತೆ ಮಾಡಲಾಯಿತು. 23 ಪಾಕಿಸ್ತಾನಿ ಪ್ರಜೆಗಳನ್ನು ಒಳಗೊಂಡಿರುವ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ” ಎಂದು ಅದು ಹೇಳಿದೆ.‌

ನಂತರ ಭಾರತೀಯ ನೌಕಾಪಡೆಯ ತಂಡಗಳು ಹಡಗನ್ನು ಸಂಪೂರ್ಣವಾಗಿ ಕಳ್ಳರಿಂದ ಮುಕ್ತಗೊಳಿಸಿದವು. ಹಡಗನ್ನು ಸುರಕ್ಷಿತವಾಗಿ ಕರೆದೊಯ್ಯುವಂತೆ ಪರಿಶೀಲಿಸಿ ಬಿಡಲಾಯಿತು. ಇದರಿಂದಾಗಿ ಸಾಮಾನ್ಯ ಮೀನುಗಾರಿಕೆ ಚಟುವಟಿಕೆಗಳು ಪುನರಾರಂಭಗೊಳ್ಳಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಾರ್ಚ್ 29ರಂದು FV ಅಲ್-ಕಂಬಾರ್ ಮೀನುಗಾರಿಕಾ ಹಡಗನ್ನು ಮುಂಜಾನೆ ಕಡಲ್ಗಳ್ಳರು ತಡೆದರು. INS ಸುಮೇಧಾಗೆ ಸಂಕಷ್ಟದ ಕರೆಯನ್ನು ಕಳುಹಿಸಲಾಯಿತು. ಮತ್ತು ನಂತರ ಮಾರ್ಗದರ್ಶಿ ಕ್ಷಿಪಣಿ ಯುದ್ಧನೌಕೆ INS ತ್ರಿಶೂಲ್ ಜೊತೆಗೆ ಸೇರಿಕೊಂಡಿತು. ಹಿಂದೂ ಮಹಾಸಾಗರದ ದ್ವೀಪವಾದ ಸೊಕೊಟ್ರಾದ ನೈಋತ್ಯಕ್ಕೆ ಸುಮಾರು 90 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಒಂಬತ್ತು ಶಸ್ತ್ರಸಜ್ಜಿತ ಕಡಲ್ಗಳ್ಳರು ಹಡಗನ್ನು ವಶಪಡಿಸಿಕೊಂಡಿದ್ದರು.

ಈ ತಿಂಗಳ ಆರಂಭದಲ್ಲಿ, ಭಾರತೀಯ ನೌಕಾಪಡೆಯು ಮತ್ತೊಂದು ಧೈರ್ಯಶಾಲಿ ಕಾರ್ಯಾಚರಣೆಯನ್ನು ನಡೆಸಿತ್ತು. ಕಡಲ್ಗಳ್ಳರು ದಾಳಿ ಮಾಡಿ ಭಾರತೀಯ ಕರಾವಳಿ ತೀರದಿಂದ ಸುಮಾರು 2,600 ಕಿ.ಮೀ ದೂರದಲ್ಲಿ ಸಾಗುತ್ತಿದ್ದ ರುಯೆನ್ ಎಂಬ ಹಡಗನ್ನು ಹಿಡಿದಿದ್ದರು. ನೌಕಾಪಡೆಯು ಕಡಲುಗಳ್ಳರ ಹಡಗನ್ನು ತಡೆಹಿಡಿದಿತ್ತು.

40 ಗಂಟೆಗಳ ರಕ್ಷಣಾ ಕಾರ್ಯಾಚರಣೆಯಲ್ಲಿ, INS ಕೋಲ್ಕತ್ತಾ ಎಲ್ಲಾ 35 ಕಡಲ್ಗಳ್ಳರನ್ನು ಯಶಸ್ವಿಯಾಗಿ ಶರಣಾಗುವಂತೆ ಮಾಡಿತ್ತು. ಮತ್ತು ಯಾವುದೇ ಗಾಯಗಳಿಲ್ಲದೆ ಹಡಗಿನಿಂದ 17 ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿತ್ತು.

ಮತ್ತೊಂದು ಕಾರ್ಯಾಚರಣೆಯಲ್ಲಿ, ನೌಕಾಪಡೆಯು ಗಲ್ಫ್ ಆಫ್ ಅಡೆನ್‌ನಿಂದ ಬಂದ ಸಂಕಟದ ಕರೆಗೆ ತಕ್ಷಣವೇ ಪ್ರತಿಕ್ರಿಯಿಸಿತ್ತು. ಅಲ್ಲಿ ಕ್ಷಿಪಣಿ ಅಪ್ಪಳಿಸಿದ ವ್ಯಾಪಾರಿ ಹಡಗಿಗೆ ಬೆಂಕಿ ಹೊತ್ತಿಕೊಂಡಿದ್ದು, ಒಬ್ಬ ಭಾರತೀಯ ಸೇರಿದಂತೆ 21 ಸಿಬ್ಬಂದಿಯನ್ನು ರಕ್ಷಿಸಲಾಗಿತ್ತು.

“ಭಾರತೀಯ ನೌಕಾಪಡೆಯು ಈ ಪ್ರದೇಶದಲ್ಲಿ ಕಡಲ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಸಮುದ್ರಯಾನದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ” ಎಂದು ಹೇಳಿದೆ.

ಇದನ್ನೂ ಓದಿ: Indian Navy Power: ಸೊಮಾಲಿಯಾದ ಕಡಲ್ಗಳ್ಳರನ್ನು ಬಗ್ಗುಬಡಿದು ಜಗತ್ತಿಗೆ ಸಂದೇಶ ನೀಡಿದೆ ಭಾರತದ ಕ್ಷಾತ್ರ!

Exit mobile version