ವಾಷಿಂಗ್ಟನ್: ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್ (Sunita Williams) ಅವರು ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ನಾಸಾದ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ (Boeing Starliner) ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನ ಆರಂಭಿಸಿದ್ದಾರೆ. ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶಯಾನ ಕೈಗೊಳ್ಳುವ ವಿಡಿಯೊ ಈಗ ಭಾರಿ ವೈರಲ್ ಆಗಿದೆ.
ಫ್ಲೊರಿಡಾದಲ್ಲಿರುವ ಕೇಪ್ ಕ್ಯಾನವರಲ್ ಸ್ಪೇಸ್ ಫೋರ್ಸ್ ಸೆಂಟರ್‌ನಿಂದ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಯಿತು. ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರು ಒಂದು ವಾರ ಇರಲಿದ್ದಾರೆ. ನಾಸಾ ಬಾಹ್ಯಾಕಾಶ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಆರನೇ ಬಾಹ್ಯಾಕಾಶ ನೌಕೆ ಎಂಬ ಖ್ಯಾತಿಗೆ ಸ್ಟಾರ್‌ಲೈನರ್ ಭಾಜನವಾಯಿತು. ಇದಕ್ಕೂ ಮೊದಲು ಮರ್ಕ್ಯುರಿ, ಜೆಮಿನಿ, ಅಪೋಲೊ, ಸ್ಪೇಸ್ ಶಟಲ್ ಹಾಗೂ ಸ್ಪೇಸ್‌ಎಕ್ಸ್‌ನ ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಗಳನ್ನು ಉಡಾವಣೆ ಮಾಡಲಾಗಿತ್ತು.
Starliner / Sunita Williams et Butch Wilmore en route vers le pas de tir !pic.twitter.com/OvplqNiWE1
— GoForLaunch 🚀🌒 (@AuDelaDeLOrbite) June 5, 2024
ಸುನೀತಾ ವಿಲಿಯಮ್ಸ್ ಹಿನ್ನೆಲೆ
ಭಾರತದ ಮೂಲದ ಡಾ. ದೀಪಕ್ ಪಾಂಡ್ಯಾ ಮತ್ತು ಬೋನಿ ಪಾಂಡ್ಯ ಪುತ್ರಿಯಾಗಿರುವ 59 ವರ್ಷದ ಸುನೀತಾ, ಬಾಹ್ಯಾಕಾಶಕ್ಕೆ ಹೋದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಮೊದಲ ಬಾರಿಗೆ 2006ರಲ್ಲಿ ಯಶಸ್ವಿ ಗಗನಯಾತ್ರೆ ಕೈಗೊಂಡಿದ್ದರು. ಇದಾದ ಬಳಿಕ 2012ರಲ್ಲಿ ಮತ್ತೆ ಗಗನಯಾತ್ರೆ ಕೈಗೊಂಡಿದ್ದರು. ಅವರು ಬಾಹ್ಯಾಕಾಶದಲ್ಲಿ ಬರೋಬ್ಬರಿ 322 ದಿನಗಳನ್ನು ಕಳೆದಿದ್ದಾರೆ. ಸುನೀತಾ ವಿಲಿಯಮ್ಸ್ ಅತೀ ಹೆಚ್ಚು ಬಾರಿ ಬಾಹ್ಯಾಕಾಶಕ್ಕೆ ಹಾರಿದ ಹಾಗೂ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಿದ ಮಹಿಳಾ ಗಗನ ಯಾತ್ರಿ ಎಂದೂ ಗುರುತಿಸಲ್ಪಡುತ್ತಿದ್ದಾರೆ.
ಇದುವರೆಗೆ ಸುನೀತಾ ವಿಲಿಯಮ್ಸ್ ಗರಿಷ್ಠ ಬಾಹ್ಯಾಕಾಶ ಪ್ರಯಾಣ ಮಾಡಿದ್ದಾರೆ. ಮಹತ್ವದ ಅಧ್ಯಯನಕ್ಕಾಗಿ ಮಂಗಳವಾರ ಮೂರನೇ ಬಾರಿ ಬಾಹ್ಯಾಕಾಶಕ್ಕೆ ಹಾರಲಿದ್ದ ಸುನೀತಾ ವಿಲಿಯಮ್ಸ್ ಎಲ್ಲ ತಯಾರಿ ಮಾಡಿಕೊಂಡಿದ್ದರು. ʼʼಕೊಂಚ ನರ್ವಸ್ ಆಗಿದ್ದೇನೆ. ಆದರೆ ಮತ್ತೆ ತವರಿಗೆ ಮರಳು ಅನುಭವವಾಗುತ್ತಿದೆ. ಬಾಹ್ಯಕಾಶವೇ ನನಗೆ ತವರಾಗಿದೆʼʼ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದರು.
ಗಣೇಶನ ಆರಾಧಕಿ
ʼʼಯಾವುದೇ ಕೆಲಸಕ್ಕೂ ಮೊದಲು ಗಣೇಶನ ಪ್ರಾರ್ಥಿಸುತ್ತೇನೆ. ಸಿದ್ಧಿ ವಿನಾಯಕ ನನ್ನ ಶುಭ ಸಂಕೇತʼʼ ಎಂದು ಅವರು ಈ ಹಿಂದೆ ಹೇಳಿದ್ದರು. ʼʼಬಾಹ್ಯಾಕಾಶ ಪ್ರಯಾಣ ಸೇರಿದಂತೆ ಯಾವುದೇ ಕೆಲಸಕ್ಕೂ ಗಣೇಶನ ಆಶೀರ್ವಾದ ನನಗೆ ಬೇಕು. ಗಣೇಶ ನನ್ನ ಎಲ್ಲ ಕಾರ್ಯಗಳಿಗೆ ಶಕ್ತಿಯಾಗಿದ್ದಾನೆ. ಪ್ರತಿ ಬಾರಿ ನಾನು ಬಾಹ್ಯಾಕಾಶ ಪ್ರಯಾಣದಲ್ಲೂ ಸಣ್ಣ ಗಣೇಶನ ವಿಗ್ರಹವನ್ನು ತೆಗೆದುಕೊಂಡು ಹೋಗುತ್ತೇನೆʼʼ ಎಂದು ಸುನೀತಾ ವಿಲಿಯಮ್ಸ್ ತಿಳಿಸಿದ್ದರು. ಈ ಹಿಂದೆ ಅವರು ಬಾಹ್ಯಾಕಾಶಕ್ಕೆ ಭಗವದ್ಗೀತೆ ಒಯ್ಯುವ ಮೂಲಕ ಭಾರತೀಯರ ಗಮನ ಸೆಳೆದಿದ್ದರು.
ಇದನ್ನೂ ಓದಿ: Gaganyaan : ಗಗನಯಾನ ಪೈಲೆಟ್ ಪ್ರಶಾಂತ್ ನಾಯರ್ ಮದುವೆಯಾದ ಕೇರಳದ ನಟಿ ಲೆನಾ