ನ್ಯೂಯಾರ್ಕ್: ಅಮೆರಿಕದ ಓಹಿಯೋ ರಾಜ್ಯದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ (Indian Student death) ಮೃತಪಟ್ಟಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತದ ದೂತಾವಾಸ (Indian Consulate) ಶುಕ್ರವಾರ ತಿಳಿಸಿದೆ. ಇದು ಇಲ್ಲಿನ ಭಾರತೀಯ ಮೂಲದ ವಿದ್ಯಾರ್ಥಿ ಸಮುದಾಯವನ್ನು (Indian Diaspora) ಬೆಚ್ಚಿಬೀಳಿಸಿರುವ ದುರಂತಗಳ ಸರಣಿಯಲ್ಲಿ ಇತ್ತೀಚಿನದು.
“ಓಹಿಯೋದ ಕ್ಲೀವ್‌ಲ್ಯಾಂಡ್‌ನಲ್ಲಿರುವ ಭಾರತೀಯ ವಿದ್ಯಾರ್ಥಿ ಉಮಾ ಸತ್ಯ ಸಾಯಿ ಗಡ್ಡೆ ಅವರು ನಿಧನ ಹೊಂದಿದ್ದಾರೆ. ಅವರ ಸಾವಿನಿಂದ ತೀವ್ರ ದುಃಖವಾಗಿದೆ” ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಸಾವಿನ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ. ಭಾರತದಲ್ಲಿನ ಅವರ ಕುಟುಂಬದೊಂದಿಗೆ ಸಂಪರ್ಕ ಇಟ್ಟುಕೊಳ್ಳಲಾಗಿದೆ ಎಂದು ಕಾನ್ಸುಲೇಟ್ ತಿಳಿಸಿದೆ.
“ಉಮಾ ಗಡ್ಡೆಯವರ ಪಾರ್ಥಿವ ಶರೀರವನ್ನು ಭಾರತಕ್ಕೆ ಶೀಘ್ರವಾಗಿ ಸಾಗಿಸುವುದು ಸೇರಿದಂತೆ ಸಾಧ್ಯವಿರುವ ಎಲ್ಲ ಸಹಾಯವನ್ನು ವಿಸ್ತರಿಸಲಾಗುತ್ತಿದೆ” ಎಂದು ಕಾನ್ಸುಲೇಟ್ ತಿಳಿಸಿದೆ.
2024ರ ಆರಂಭದಿಂದ, ಅಮೆರಿಕದಲ್ಲಿ ಕನಿಷ್ಠ ಅರ್ಧ ಡಜನ್ ಭಾರತೀಯ ಮತ್ತು ಭಾರತೀಯ ಮೂಲದ ವಿದ್ಯಾರ್ಥಿಗಳ ಸಾವುಗಳು ಸಂಭವಿಸಿವೆ. ಇವರ ಮೇಲಿನ ದಾಳಿಗಳ ಸಂಖ್ಯೆಯಲ್ಲಿ ಹೆಚ್ಚಳ ಆಗಿದ್ದು, ಸಮುದಾಯದಲ್ಲಿ ಆತಂಕಕ್ಕೂ ಕಾರಣವಾಗಿದೆ.
ಕಳೆದ ತಿಂಗಳು, ಮಿಸೌರಿಯ ಸೇಂಟ್ ಲೂಯಿಸ್‌ನಲ್ಲಿ ಭಾರತದ 34 ವರ್ಷದ ಶಾಸ್ತ್ರೀಯ ನೃತ್ಯಗಾರ ಅಮರನಾಥ್ ಘೋಷ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಪರ್ಡ್ಯೂ ವಿಶ್ವವಿದ್ಯಾನಿಲಯದ 23 ವರ್ಷದ ಭಾರತೀಯ-ಅಮೆರಿಕನ್ ವಿದ್ಯಾರ್ಥಿ ಸಮೀರ್ ಕಾಮತ್ ಫೆಬ್ರವರಿ 5ರಂದು ಇಂಡಿಯಾನಾದ ವನ್ಯ ಉದ್ಯಾನದಲ್ಲಿ ಶವವಾಗಿ ಪತ್ತೆಯಾಗಿದ್ದರು.
ಫೆಬ್ರವರಿ 2ರಂದು, 41 ವರ್ಷದ, ಭಾರತೀಯ ಮೂಲದ ಐಟಿ ಎಕ್ಸಿಕ್ಯೂಟಿವ್ ವಿವೇಕ್ ತನೇಜಾ ಅವರು ವಾಷಿಂಗ್ಟನ್‌ನ ರೆಸ್ಟೋರೆಂಟ್‌ನ ಹೊರಗೆ ನಡೆದ ದಾಳಿಯ ಸಂದರ್ಭದಲ್ಲಿ ಮಾರಣಾಂತಿಕ ಗಾಯಗೊಂಡು ಮೃತಪಟ್ಟರು. ಇದು ಇತ್ತೀಚಿನ ತಿಂಗಳುಗಳಲ್ಲಿ ಭಾರತೀಯ ಅಥವಾ ಭಾರತೀಯ-ಅಮೆರಿಕನ್‌ನ ಏಳನೇ ಸಾವು.
ಮಾರ್ಚ್‌ನಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಮೊಹಮ್ಮದ್ ಅಬ್ದುಲ್ ಅರಾಫತ್, ಕ್ಲೀವ್‌ಲ್ಯಾಂಡ್ ಪ್ರದೇಶದಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ನಂತರ ಆತನ ಕುಟುಂಬಕ್ಕೆ ಆತನ ಬಿಡುಗಡೆಗೆ ಹಣ ನೀಡುವಂತೆ ಸುಲಿಗೆ ಕರೆ ಬಂದಿತ್ತು.
ಭಾರತೀಯರು ಮತ್ತು ಭಾರತೀಯ ಮೂಲದ ವ್ಯಕ್ತಿಗಳ ಮೇಲಿನ ಸರಣಿ ದಾಳಿಗಳ ಹಿನ್ನೆಲೆಯಲ್ಲಿ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ವಿವಿಧ ಸ್ಥಳಗಳಲ್ಲಿರುವ ಅದರ ಕಾನ್ಸುಲೇಟ್‌ಗಳು ಯುಎಸ್‌ನಾದ್ಯಂತ ಇರುವ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲು ಪ್ರೇರೇಪಿಸಿದೆ. ವಿದ್ಯಾರ್ಥಿಗಳ ಯೋಗಕ್ಷೇಮದ ವಿವಿಧ ಅಂಶಗಳನ್ನು ಚರ್ಚಿಸಲಾಗಿದೆ.
ಪ್ರಭಾರ ರಾಯಭಾರಿ ಶ್ರೀಪ್ರಿಯಾ ರಂಗನಾಥನ್ ನೇತೃತ್ವದಲ್ಲಿ ನಡೆದ ಸಂವಾದದಲ್ಲಿ ಸುಮಾರು 150 ಭಾರತೀಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು 90 ಯುಎಸ್ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಟ್ಲಾಂಟಾ, ಚಿಕಾಗೋ, ಹೂಸ್ಟನ್, ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಸಿಯಾಟಲ್‌ನಲ್ಲಿ ಭಾರತದ ಕಾನ್ಸುಲ್ ಜನರಲ್‌ಗಳು ಸಹ ಭಾಗವಹಿಸಿದ್ದರು.
ಇದನ್ನೂ ಓದಿ: Student Murder: ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಕೊಲೆ; 9ನೇ ಘಟನೆ