Site icon Vistara News

ವಿಸ್ತಾರ ಸಂಪಾದಕೀಯ: ಭಾರತದ ಮಿಲಿಟರಿ ಶಕ್ತಿ ಈಗ ರಫ್ತಿಗೂ ಸೈ

Indian Army Export

ಮಿಲಿಟರಿ ಶಸ್ತ್ರಾಸ್ತ್ರಗಳು ಹಾಗೂ ರಕ್ಷಣಾ ಸಾಧನಗಳ ರಫ್ತು ವಹಿವಾಟಿನಲ್ಲಿ ಭಾರತ ದಾಪುಗಾಲು ಹಾಕುತ್ತಿದೆ. ಹೊಸ ಬೆಳವಣಿಗೆಯೊಂದರಲ್ಲಿ, ಭಾರತವು ಫಿಲಿಪ್ಪಿನ್ಸ್‌ಗೆ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಮಾರಲು ಮುಂದಾಗಿದೆ. ಉಭಯ ದೇಶಗಳು ಸುಮಾರು $375 ದಶಲಕ್ಷ (3117 ಕೋಟಿ ರೂ.) ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿವೆ. ಇದರ ಮೂಲ ವ್ಯವಸ್ಥೆಗಳು 10 ದಿನಗಳಲ್ಲಿ ಫಿಲಿಪ್ಪಿನ್ಸ್‌ ಅನ್ನು ತಲುಪಲಿವೆ. ಮಾರ್ಚ್ ವೇಳೆಗೆ ಕ್ಷಿಪಣಿಗಳನ್ನು ತಲುಪಿಸಲಾಗುತ್ತದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮುಖ್ಯಸ್ಥ ಸಮೀರ್ ವಿ. ಕಾಮತ್ ತಿಳಿಸಿದ್ದಾರೆ. ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ಕ್ಷಿಪಣಿಗೆ ಇದು ಮೊದಲ ರಫ್ತು ಬೇಡಿಕೆಯಾಗಿದೆ. ಕ್ಷಿಪಣಿಯಂಥಾ ಸಾಧನವನ್ನು ರಫ್ತು ಮಾಡುವ ಹಂತಕ್ಕೂ ಭಾರತ ಬೆಳೆದಿರುವುದು ಹೆಮ್ಮೆಯ ಸಂಗತಿ.

ಭಾರತವು 2024-25ರಲ್ಲಿ ₹35,000 ಕೋಟಿ ಮೌಲ್ಯದ ರಕ್ಷಣಾ ರಫ್ತು ಗುರಿಯನ್ನು ಹೊಂದಿದೆ. 2022ರ ನವೆಂಬರ್‌ನಲ್ಲಿ ಭಾರತೀಯ ರಕ್ಷಣಾ ಸಂಸ್ಥೆ ಕಲ್ಯಾಣಿ ಸ್ಟ್ರಾಟೆಜಿಕ್ ಸಿಸ್ಟಮ್ಸ್ ಲಿಮಿಟೆಡ್, ಅರ್ಮೇನಿಯಾಕ್ಕೆ ಫಿರಂಗಿ ಬಂದೂಕುಗಳನ್ನು ಪೂರೈಸುವ $155.5 ಮಿಲಿಯ ಮೌಲ್ಯದ ರಫ್ತು ಆದೇಶ ಪಡೆದಿದೆ. ಇದು 155 ಎಂಎಂ ಬಂದೂಕಿಗೆ ಪಡೆದ ಮೊದಲ ವಿದೇಶಿ ಬೇಡಿಕೆ. 2025ರೊಳಗೆ ಇದರ ರಫ್ತು ಆಗಲಿದೆ. ಅರ್ಮೇನಿಯಾ ಭಾರತದಿಂದ ಪಿನಾಕಾ ರಾಕೆಟ್ ವ್ಯವಸ್ಥೆಯನ್ನು ಕೂಡ ಖರೀದಿಸಲಿದೆ. ಭಾರತೀಯ ಮಿಲಿಟರಿ ಸಾಧನಗಳ ರಫ್ತು ಕಳೆದ ಕಳೆದ ಒಂಬತ್ತು ವರ್ಷಗಳಲ್ಲಿ ತೀವ್ರಗತಿಯಲ್ಲಿ ಏರಿದೆ. ಶಸ್ತ್ರಾಸ್ತ್ರಗಳ ಆಮದು ಕುಸಿತವನ್ನು ದಾಖಲಿಸಿದೆ. 2013-14 ಮತ್ತು 2022-23ರ ನಡುವೆ ಶಸ್ತ್ರಾಸ್ತ್ರ ರಫ್ತು ₹686 ಕೋಟಿಯಿಂದ ₹16,000 ಕೋಟಿಗೆ, ಅಂದರೆ 23 ಪಟ್ಟು ಬೆಳೆದಿದೆ. ಆಮದು ಮಾಡಿಕೊಂಡ ಶಸ್ತ್ರಾಸ್ತ್ರಗಳು ಮತ್ತು ರಕ್ಷಣಾ ಸಾಧನಗಳ ಮೇಲಿನ ವೆಚ್ಚ 2018-19ರಲ್ಲಿ 10% ಇಳಿದಿದೆ.

ಭಾರತವು ಪ್ರಸ್ತುತ 85ಕ್ಕೂ ಹೆಚ್ಚು ದೇಶಗಳಿಗೆ ಮಿಲಿಟರಿ ಯಂತ್ರಾಂಶವನ್ನು ರಫ್ತು ಮಾಡುತ್ತಿದೆ. ಸುಮಾರು 100 ದೇಶೀಯ ಸಂಸ್ಥೆಗಳು ಇದರಲ್ಲಿ ತೊಡಗಿಸಿಕೊಂಡಿವೆ. ಯಂತ್ರಾಂಶಗಳಲ್ಲಿ ಕ್ಷಿಪಣಿಗಳು, ಫಿರಂಗಿ ಬಂದೂಕುಗಳು, ರಾಕೆಟ್‌ಗಳು, ಶಸ್ತ್ರಸಜ್ಜಿತ ವಾಹನಗಳು, ಕಡಲಿನ ಗಸ್ತು ಹಡಗುಗಳು, ವೈಯಕ್ತಿಕ ರಕ್ಷಣಾ ಸಾಧನಗಳು, ವಿವಿಧ ರಾಡಾರ್‌ಗಳು, ಕಣ್ಗಾವಲು ವ್ಯವಸ್ಥೆಗಳು ಮತ್ತು ಯುದ್ಧಸಾಮಗ್ರಿಗಳಿವೆ. ಭಾರತವು ಆಸ್ಟ್ರೇಲಿಯಾ, ಜಪಾನ್, ಇಸ್ರೇಲ್ ಮತ್ತು ಬ್ರೆಜಿಲ್ ಸೇರಿದಂತೆ 34 ದೇಶಗಳಿಗೆ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ರಫ್ತು ಮಾಡುತ್ತಿದೆ. ಯುನೈಟೆಡ್ ಅರಬ್ ಎಮಿರೇಟ್ಸ್, ಈಜಿಪ್ಟ್, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ ಸೇರಿದಂತೆ ಸುಮಾರು 10 ದೇಶಗಳಿಗೆ ಯುದ್ಧಸಾಮಗ್ರಿ, ಮಾರಿಷಸ್‌ಗೆ ವೇಗದ ಪ್ರತಿಬಂಧಕ ದೋಣಿಗಳು, ಸೀಶೆಲ್ಸ್, ಮಾಲ್ಡೀವ್ಸ್, ಅಮೆರಿಕ, ಇಂಗ್ಲೆಂಡ್‌, ಫ್ರಾನ್ಸ್‌ನಂತಹ ದೇಶಗಳಿಗೆ ರಕ್ಷಣಾ ಎಲೆಕ್ಟ್ರಾನಿಕ್ಸ್ ಒದಗಿಸುತ್ತಿದೆ. ದಕ್ಷಿಣ ಅಮೆರಿಕಾ, ಆಫ್ರಿಕಾ, ಮಧ್ಯ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ದೇಶಗಳು ಭಾರತದ ಶಸ್ತ್ರಾಸ್ತ್ರಗಳು ಮತ್ತು ಸಾಧನಗಳ ಬಗ್ಗೆ ಆಸಕ್ತಿ ತೋರಿಸಿವೆ. ನಮ್ಮ ಹೆಮ್ಮೆಯ ವಿಮಾನ ತಯಾರಕ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಹಲವಾರು ದೇಶಗಳಿಗೆ ಫೈಟರ್ ಜೆಟ್‌ಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಮಾರಾಟ ಮಾಡುವ ಅವಕಾಶಗಳನ್ನು ಪಡೆದಿದೆ. ಇದು ಪ್ರಸ್ತುತ ಅರ್ಜೆಂಟೀನಾ, ನೈಜೀರಿಯಾ, ಈಜಿಪ್ಟ್ ಮತ್ತು ಫಿಲಿಪೈನ್ಸ್ ದೇಶಗಳಿಗೆ ಲಘು ಯುದ್ಧ ವಿಮಾನ (LCA) Mk-1A ಮತ್ತು ಸುಧಾರಿತ ಲಘು ಹೆಲಿಕಾಪ್ಟರ್ (ALH) ಗಳನ್ನು ಮಾರಲು ಮುಂದಾಗಿದೆ.

ದೇಶದ ರಕ್ಷಣಾ ಉತ್ಪಾದನೆಯ ಮೌಲ್ಯ ಮೊದಲ ಬಾರಿಗೆ ₹1 ಲಕ್ಷ ಕೋಟಿಯನ್ನು ದಾಟಿದೆ ಎಂದು ಭಾರತ ಮೇ 2023ರಲ್ಲಿ ಘೋಷಿಸಿದೆ. ಈ ವಲಯದ ಬೆಳವಣಿಗೆಯನ್ನು ಉತ್ತೇಜಿಸಲು ಪ್ರಮುಖ ಸುಧಾರಣೆಗಳನ್ನು ಸರ್ಕಾರ ಘೋಷಿಸಿದೆ. ಸರ್ಕಾರಿ ಸ್ವಾಮ್ಯದ ಕಂಪನಿಗಳು ಮತ್ತು ಖಾಸಗಿ ವಲಯದ ರಕ್ಷಣಾ ಉತ್ಪಾದನೆಯ ಮೌಲ್ಯ ಕಳೆದ ಐದು ವರ್ಷಗಳಲ್ಲಿ ಸುಮಾರು ದ್ವಿಗುಣಗೊಂಡಿದೆ. ರಕ್ಷಣೆಯಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸಲು ಭಾರತ ಕಳೆದ ಆರು ವರ್ಷಗಳಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಶಸ್ತ್ರಾಸ್ತ್ರಗಳ ಆಮದಿನ ಮೇಲೆ ಹಂತಹಂತವಾಗಿ ನಿಷೇಧ ಹೇರುವುದು, ಸ್ಥಳೀಯವಾಗಿ ತಯಾರಿಸಿದ ಮಿಲಿಟರಿ ಯಂತ್ರಾಂಶವನ್ನು ಖರೀದಿಸಲು ಪ್ರತ್ಯೇಕ ಬಜೆಟ್, ವಿದೇಶಿ ನೇರ ಹೂಡಿಕೆಯನ್ನು 49%ರಿಂದ 74%ಕ್ಕೆ ಹೆಚ್ಚಿಸುವುದು ಮತ್ತು ವ್ಯವಹಾರವನ್ನು ಸುಲಭಗೊಳಿಸುವುದು ಇವುಗಳೆಲ್ಲ ನಡೆದಿವೆ. 2025ರ ವೇಳೆಗೆ ರಕ್ಷಣಾ ಉತ್ಪಾದನೆಯಲ್ಲಿ ₹1.75 ಲಕ್ಷ ಕೋಟಿ ವಹಿವಾಟು ನಡೆಸಲಿದೆ ಭಾರತ.

ಹೀಗೆ ನಮ್ಮ ದೇಶ, ಮಿಲಿಟರಿ ವ್ಯವಸ್ಥೆಯಲ್ಲೂ ಆತ್ಮನಿರ್ಭರವಾಗುವುದಷ್ಟೇ ಅಲ್ಲ, ಇತರ ದೇಶಗಳಿಗೆ ರಫ್ತು ಮಾಡಿ ಅದರಿಂದ ಹಣ ಗಳಿಸುವುದರಲ್ಲೂ ಮುಂದಿದೆ. ಸ್ವಾವಲಂಬನೆ ಹಾಗೂ ವಾಣಿಜ್ಯ ವಹಿವಾಟು ಎರಡೂ ಸೇರಿ ಭಾರತವನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತಿವೆ. ಈಗಾಗಲೇ ಭಾರತ ಜಗತ್ತಿನ ನಾಲ್ಕನೇ ದೊಡ್ಡ ಮಿಲಿಟರಿ ಪವರ್‌ ಎನಿಸಿದೆ. ನಮ್ಮ ಸೈನ್ಯಶಕ್ತಿ ಆಕ್ರಮಣಕ್ಕಲ್ಲ; ಸ್ವಾವಲಂಬನೆಗಾಗಿ ಹಾಗೂ ಸೌಹಾರ್ದಕ್ಕಾಗಿ. ಜೊತೆಗೆ ನಮ್ಮ ರಕ್ಷಣಾ ಸಂಶೋಧನೆ- ಅಭಿವೃದ್ಧಿಗಳು ವಾಣಿಜ್ಯಕ್ಕಾಗಿ ಕೂಡ. ಇದು ಭಾರತದ ಹಿರಿಮೆಯನ್ನು ಇನ್ನೊಂದು ಹಂತ ಮೇಲಕ್ಕೆತ್ತಿವೆ.

Exit mobile version