ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟ (Mysore Chamundi Hill) ಹಾಗೂ ಚಾಮುಂಡೇಶ್ವರಿ ದೇವಾಲಯದ (Chamundeshwari Temple) ದೇವಸ್ಥಾನದ ಅಭಿವೃದ್ಧಿ ಹಾಗೂ ನಿರ್ವಹಣೆಯಲ್ಲಿ ರಾಜಮನೆತನದವರ (Mysore dynasty) ಅಧಿಕಾರ ಮೊಟಕುಗೊಳಿಸುವ ‘ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ-2024’ ಜಾರಿಗೊಳಿಸದಂತೆ ರಾಜ್ಯ ಸರ್ಕಾರಕ್ಕೆ (Karnataka Govt) ನಿರ್ದೇಶಿಸಿ ಹೈಕೋರ್ಟ್ (Karnataka High Court) ಮಧ್ಯಂತರ ಆದೇಶ ನೀಡಿದೆ.
ರಾಜ್ಯ ಸರ್ಕಾರ ಜಾರಿ ಮಾಡಿರುವ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ-2024ರ ಹಲವು ಸೆಕ್ಷನ್‌ಗಳನ್ನು ಪ್ರಶ್ನಿಸಿ ಮೈಸೂರು ಒಡೆಯರ್ ವಂಶಸ್ಥೆ ಪ್ರಮೋದಾದೇವಿ ಒಡೆಯರ್ (Pramodadevi wadiyer) ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಪೀಠ, ಕಾಯಿದೆಯನ್ನು ಆ.22ರವರೆಗೆ ಜಾರಿಗೊಳಿಸದಂತೆ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಮೈಸೂರು ಅರಮನೆ ಮುಜರಾಯಿ ಸಂಸ್ಥೆಯ ಮುಖ್ಯಸ್ಥರೂ ಆದ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ.
ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆಯ ಪ್ರಕಾರ, ಚಾಮುಂಡೇಶ್ವರಿ ಬೆಟ್ಟದ ಅಭಿವೃದ್ಧಿ, ದೇವಸ್ಥಾನದ ಆಡಳಿತ ನಿರ್ವಹಣೆ, ಪೂಜಾ ಕೈಂಕರ್ಯ ನಡೆಸಲು ಪ್ರಾಧಿಕಾರದ ರಚನೆ ಮಾಡಲಾಗುತ್ತದೆ. ಆ ಪ್ರಾಧಿಕಾರದ ರಚನೆಯ ಸಂಪೂರ್ಣ ಅಧಿಕಾರ ಸರ್ಕಾರಕ್ಕೆ ಸೇರಿರುತ್ತದೆ. ಮುಖ್ಯಮಂತ್ರಿಗಳು ಪ್ರಾಧಿಕಾರದ ಅಧ್ಯಕ್ಷರಾಗಲಿದ್ದಾರೆ. ಪದಾಧಿಕಾರಿಗಳಾಗಿ ಸ್ಥಳೀಯ ಶಾಸಕರು, ಸಚಿವರು, ಸಂಸದರು ಹಾಗೂ ಅಧಿಕಾರಿಗಳು ಇರಲಿದ್ದಾರೆ.
ದೇವಸ್ಥಾನಕ್ಕೆ ಅರ್ಚಕರನ್ನು ನೇಮಕ ಮಾಡುವ ಅಧಿಕಾರವನ್ನು ಸರ್ಕಾರ ಹೊಂದಿರುತ್ತದೆ. ಪ್ರಾಧಿಕಾರದ ತೀರ್ಮಾನಗಳನ್ನು ಜಾರಿ ಮಾಡುವ ಹೊಣೆ ಕಾರ್ಯದರ್ಶಿಗೆ ನೀಡಲಾಗಿದೆ. ಆ ಮೂಲಕ ದೇವಸ್ಥಾನದ ನಿರ್ವಹಣೆ, ಜವಾಬ್ದಾರಿಗಳಲ್ಲಿ ಮೈಸೂರು ರಾಜಮನೆತನದವರು ಹೊಂದಿದ್ದ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಚಾಮುಂಡೇಶ್ವರಿಯು ಮೈಸೂರು ರಾಜಮನೆತನದ ದೇವತೆ. ಮೈಸೂರು ಮಹಾರಾಜರು ದೇವಸ್ಥಾನದ ಅಭಿವೃದ್ಧಿ, ನಿರ್ವಹಣೆ ಮತ್ತು ಪೂಜಾ ಕಾರ್ಯಗಳಲ್ಲಿ ಸದಾ ಪಾಲುದಾರರಾಗಿದ್ದಾರೆ. ಬೆಟ್ಟ ಹಾಗೂ ದೇವಸ್ಥಾನದ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದಾರೆ. ದೇವಸ್ಥಾನಕ್ಕೆ ತಮ್ಮ ಅಮೂಲ್ಯ ಹಾಗೂ ಬೆಳೆಬಾಳುವ ಆಭರಣ, ಭೂಮಿ ನೀಡಿದ್ದಾರೆ. ಹೀಗಿದ್ದರೂ, ದೇವಸ್ಥಾನದ ಆಡಳಿತದಿಂದ ರಾಜಮನೆತನದವರು ಹೊಂದಿರುವ ಅಧಿಕಾರ ಮೊಟಕುಗೊಳಿಸಲು ಸರ್ಕಾರ ಈ ಕಾಯಿದೆ ರೂಪಿಸಿ ಜಾರಿಗೆ ತರಲು ಉದ್ದೇಶಿಸಿದೆ. ಆದ್ದರಿಂದ ಕಾಯಿದೆಯನ್ನು ಸಂವಿಧಾನಬಾಹಿರ ಹಾಗೂ ಅಕ್ರಮ ಎಂಬುದಾಗಿ ಘೋಷಿಸಬೇಕು ಎಂದು ಪ್ರಮೋದಾ ದೇವಿ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.
ಇದನ್ನೂ ಓದಿ: Ram Charan: ಮೈಸೂರಿನ ಚಾಮುಂಡೇಶ್ವರಿ ದರ್ಶನ ಪಡೆದ ರಾಮ್ ಚರಣ್!