Site icon Vistara News

International Yoga day 2024: ತೆಲಂಗಾಣದಲ್ಲಿ ಕಠಿಣ ಯೋಗಾಸನ ಪ್ರದರ್ಶಿಸಿದ ಪೇಜಾವರ ಶ್ರೀಗಳು

international yoga day 2024 pejavara sri

ಉಡುಪಿ: ವಿಶ್ವದಾದ್ಯಂತ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ (International Yoga day 2024) ನಡೆಯುತ್ತಿದ್ದು, ಇದರ ನಿಮಿತ್ತವಾಗಿ ತೆಲಂಗಾಣದಲ್ಲಿ ಯೋಗಾಸನದ (Yogasana) ನಾನಾ ಕಠಿಣ ಭಂಗಿಗಳನ್ನು ಪೇಜಾವರ ಶ್ರೀಪಾದರು (Sri Vishwaprasanna Tirtha Swami) ಯಾವುದೇ ಶ್ರಮವಿಲ್ಲದೆ ಮಾಡಿ ತೋರಿಸಿದರು.

ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ (Sri Vishwaprasanna Tirtha Swamiji) ಅವರು ತೆಲಂಗಾಣ ರಾಜ್ಯ ಪ್ರವಾಸದಲ್ಲಿದ್ದು, ಸದ್ಯ ಸಿಕಂದರಾಬಾದ್‌ನಲ್ಲಿದ್ದಾರೆ. ಇಂದು ಸಿಕಂದರಾಬಾದ್ ಪೂರ್ಣಬೋಧ ವಿದ್ಯಾಪೀಠ ಮಠದಂಗಳದಲ್ಲಿ ಅವರು ಯೋಗಾಭ್ಯಾಸ ಮಾಡಿದರು. ನುರಿತ ಯೋಗಪಟುವಾಗಿರುವ ಶ್ರೀಗಳು ಪ್ರತಿದಿನ ಬೆಳಿಗ್ಗೆ ವಿವಿಧ ಕಠಿಣ ಯೋಗ ಭಂಗಿಗಳನ್ನು ಅಭ್ಯಾಸ ಮಾಡುತ್ತಾರೆ. ನೂರಕ್ಕಿಂತ ಹೆಚ್ಚಿನ ಆಸನಗಳನ್ನು ಸುಲಲಿತವಾಗಿ ಮಾಡುವ ವಿಶ್ವ ಪ್ರಸನ್ನ ತೀರ್ಥರು, ಯೋಗ ದಿನಾಚರಣೆಯ ಪ್ರಯುಕ್ತ ಶಿಷ್ಯರ ಜೊತೆ ಹಾಗೂ ನೂರಾರು ಮಂದಿ ಯೋಗಾಸಕ್ತರ ಮುಂದೆ ತಮ್ಮ ಯೋಗಾಸನಗಳನ್ನು ಪ್ರದರ್ಶಿಸಿದರು.

ಯೋಗ ದಿನಚರಿಯ ಭಾಗವಾಗಲಿ: ಶ್ರೀನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (jammu and kashmir) ಶ್ರೀನಗರದಲ್ಲಿ ಇಂದು ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ (International Yoga Day 2024) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಯೋಗವನ್ನು ಎಲ್ಲರೂ ತಮ್ಮ ದೈನಂದಿನ ಜೀವನದ ಭಾಗವಾಗಿಸಲು ಕರೆ ನೀಡಿದರು.

“ವಿಶ್ವದಾದ್ಯಂತ ಯೋಗಾಭ್ಯಾಸ ಮಾಡುವವರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಯೋಗದ ಮೂಲಕ ನಾವು ಹೆಚ್ಚಿನ ಶಕ್ತಿಯನ್ನು ಪಡೆಯಬಹುದು. ಯೋಗ ದಿನದಂದು ದೇಶದ ಜನರಿಗೆ ಮತ್ತು ವಿಶ್ವದ ಮೂಲೆ ಮೂಲೆಗಳಲ್ಲಿ ಯೋಗ ಮಾಡುವ ಜನರಿಗೆ ನಾನು ಶುಭಾಶಯಗಳನ್ನು ಹೇಳುತ್ತೇನೆ. ಅಂತಾರಾಷ್ಟ್ರೀಯ ಯೋಗ ದಿನವು 10 ವರ್ಷಗಳ ಐತಿಹಾಸಿಕ ಪ್ರಯಾಣವನ್ನು ಪೂರ್ಣಗೊಳಿಸಿದೆ. 2014ರಲ್ಲಿ ನಾನು ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರಸ್ತಾಪಿಸಿದೆ. ಭಾರತದ ಈ ಪ್ರಸ್ತಾಪವನ್ನು 177 ರಾಷ್ಟ್ರಗಳು ಬೆಂಬಲಿಸಿದವು. ಅಂದಿನಿಂದ ಯೋಗ ದಿನವು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ” ಎಂದು ಮೋದಿ ನುಡಿದರು.

“ನಾನು ವಿದೇಶದಲ್ಲಿರುವಾಗ ಜಾಗತಿಕ ನಾಯಕರು ಯೋಗದ ಬಗ್ಗೆ ನನ್ನೊಂದಿಗೆ ಚರ್ಚಿಸುತ್ತಾರೆ. ನಾವು 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿರುವ ಹೊತ್ತಿನಲ್ಲಿ, ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವಾಗಿಸಲು ನಾನು ಪ್ರತಿಯೊಬ್ಬರನ್ನು ಕೋರುತ್ತೇನೆ” ಎಂದು ಅವರು ಕರೆ ನೀಡಿದರು.

ಶ್ರೀನಗರದ ಶೇರ್-ಎ-ಕಾಶ್ಮೀರ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ (SKICC) ನಲ್ಲಿ ನಡೆದ 10ನೇ ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆಯ ನೇತೃತ್ವವನ್ನು ಪ್ರಧಾನಿ ಮೋದಿ ವಹಿಸಿದರು. 30 ನಿಮಿಷಗಳ ಕಾಲ ನಡೆಯುವ ಯೋಗಾಭ್ಯಾಸ ಕಾರ್ಯಕ್ರಮ ಬೆಳಗ್ಗೆ 7 ಗಂಟೆಗೆ ಆರಂಭವಾಗಬೇಕಿತ್ತು. ದಾಲ್‌ ಸರೋವರದ ದಡದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಧಾರಾಕಾರ ಮಳೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ಕಾರ್ಯಕ್ರಮವೂ ತಡವಾಗಿ, ಒಳಾಂಗಣ ಹಾಲ್‌ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಆಯುಷ್ ಸಚಿವ ಪ್ರತಾಪ್ರರಾವ್ ಗಣಪತರಾವ್ ಜಾಧವ್ ಸೇರಿದಂತೆ ಇತರರು ಭಾಗವಹಿಸಿದರು.

“ಈ ವರ್ಷ ಫ್ರಾನ್ಸ್‌ನ 101 ವರ್ಷದ ಮಹಿಳಾ ಯೋಗ ಶಿಕ್ಷಕಿಗೆ ಪದ್ಮಶ್ರೀ ನೀಡಲಾಗಿದೆ. ಅವರು ಎಂದಿಗೂ ಭಾರತಕ್ಕೆ ಬಂದಿರಲಿಲ್ಲ. ಆದರೆ ಅವರು ಯೋಗದ ಬಗ್ಗೆ ಜಾಗೃತಿ ಮೂಡಿಸಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಇಂದು ಯೋಗದ ಕುರಿತು ಪ್ರಪಂಚದಾದ್ಯಂತ ಸಂಶೋಧನೆ ನಡೆಸಲಾಗುತ್ತಿದೆ. ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುತ್ತಿವೆ” ಎಂದು ಪ್ರಧಾನಿ ಹೇಳಿದರು.

ಈ ನಡುವೆ ದಾಲ್‌ ಸರೋವರದ ತೀರದಲ್ಲಿ ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಮಂದಿ ಯೋಗ ಮಾಡಿದರು. ಪ್ರಧಾನಿ ಮೋದಿ ಭಾಗವಹಿಸಿದ ಕಾರ್ಯಕ್ರಮ ಒಳಾಂಗಣದಲ್ಲಿ ನಡೆಯಿತು ಹಾಗೂ ಅದನ್ನು ಸಾರ್ವಜನಿಕ ಟೆಲಿಕಾಸ್ಟ್‌ ಮಾಡಲಾಯಿತು.

ಇಂದು ದೇಶಾದ್ಯಂತ ಹಾಗೂ ವಿದೇಶಗಳಲ್ಲಿಯೂ ಯೋಗ ದಿನ ಆಚರಿಸಲಾಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ವಿಶ್ವ ಸಂಸ್ಥೆ, ಅಮೆರಿಕ, ಇಂಗ್ಲೆಂಡ್‌, ಅರಬ್‌ ದೇಶಗಳಲ್ಲಿ ಕೂಡ ಯೋಗ ದಿನಾಚರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: International Yoga Day 2024: ಮೋದಿ ಶಿಫಾರಸು ಮಾಡಿರುವ 7 ಯೋಗಾಸನಗಳ ವಿಡಿಯೊ ಇಲ್ಲಿದೆ, ನೀವೂ ಪ್ರಯತ್ನಿಸಿ!

Exit mobile version