Site icon Vistara News

ವಿಸ್ತಾರ ಸಂಪಾದಕೀಯ: ಮುಗಿದ ಐಪಿಎಲ್‌ ಹಬ್ಬ, ಕ್ರಿಕೆಟ್‌ ಜಗತ್ತಿಗೊಬ್ಬರೇ ಧೋನಿ!

MS Dhoni playing IPL 2023

#image_title

ಹದಿನಾರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಮೆಂಟ್‌ ಮುಗಿದಿದೆ. ಐದನೇ ಬಾರಿಗೆ ಚೆನ್ನೈ ಸೂಪರ್‌ ಕಿಂಗ್‌ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಮತ್ತೊಮ್ಮೆ ಶತಕೋಟಿ ಭಾರತೀಯರ ಹೃದಯ ಗೆದ್ದಿದ್ದಾರೆ. 41ರ ಹರೆಯದಲ್ಲೂ ಧೋನಿಯ ನಾಯಕತ್ವ ಗುಣ, ದಿಟ್ಟ ಆಟ ಎಂಥವರಿಗೂ ಸ್ಫೂರ್ತಿ ತುಂಬುವಂತಿದೆ. ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡ ಹತ್ತು ಬಾರಿ ಫೈನಲ್‌ಗೆ ಹೋಗಿ, ಐದು ಬಾರಿ ಚಾಂಪಿಯನ್‌ ಆಗಿರುವುದು ವಿಶೇಷ. ಈ ಬಾರಿಯ ಐಪಿಎಲ್‌ ಆವೃತ್ತಿಯಲ್ಲೂ ತಂಡವನ್ನು ಧೋನಿ ಮುನ್ನಡೆಸಿದ ರೀತಿ ಅದ್ಭುತ. ಟ್ರೋಫಿ ಗೆದ್ದ ನಂತರದ ಒಂದು ಫೋಟೋದಲ್ಲಿ ಇಡೀ ತಂಡ ಸಂಭ್ರಮಾಚರಣೆ ಮಾಡುತ್ತಿದ್ದರೆ, ಧೋನಿ ಹಿನ್ನೆಲೆಯಲ್ಲಿ ಮುಗುಳುನಗುವಿನೊಂದಿಗೆ ನಿಂತಿರುವುದು ಕಂಡುಬಂದಿದೆ. ಈ ಚಿತ್ರವೇ ಧೋನಿ ನಾಯಕತ್ವದ ಗುಣದ ಬಗ್ಗೆ ಹಲವು ಸಂಗತಿಗಳನ್ನು ಹೇಳುವಂತಿದೆ.

2020ರಲ್ಲಿ ಧೋನಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ತಮ್ಮ ವೃತ್ತಿ ಜೀವನದಲ್ಲಿ ಅವರು 2011ರಲ್ಲಿ ಒನ್‌ ಡೇ ವಿಶ್ವಕಪ್‌ ಮತ್ತು 2007ರಲ್ಲಿ ಟಿ 20 ವಿಶ್ವಕಪ್‌, ಜತೆಗೆ ಏಷ್ಯಾ ಕಪ್‌ಗಳನ್ನು ಭಾರತದ ಮಡಿಲಿಗೆ ತಂದೊಪ್ಪಿಸಿದ್ದಾರೆ. ಟಿ20 ಮಾದರಿಯ ಕ್ರಿಕೆಟ್​ನಲ್ಲಿ 300 ಆಟಗಾರರನ್ನು ಔಟ್‌ ಮಾಡಿದ ಹೆಗ್ಗಳಿಕೆ ಅವರದು. ಧೋನಿ ಐಪಿಎಲ್‌ನಲ್ಲಿ ಗರಿಷ್ಠ 250 ಪಂದ್ಯ ಆಡಿದ್ದಾರೆ. ವಿಶ್ವದ ಬೆಸ್ಟ್‌ ಫಿನಿಷರ್‌, ಬೆಸ್ಟ್‌ ವಿಕೆಟ್‌ ಕೀಪರ್‌, ಬೆಸ್ಟ್‌ ಕ್ಯಾಪ್ಟನ್‌ ಆಗಿ ಭಾರತ ಮಾತ್ರವಲ್ಲ ವಿಶ್ವದ ಕ್ರಿಕೆಟ್ ಪ್ರಿಯರ ಮೆಚ್ಚಿನ ಆಟಗಾರ. ಭಾರತ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ಆಗಿದ್ದಗಲೂ ಅವರು ʼಕೂಲ್‌ ಕ್ಯಾಪ್ಟನ್ʼ ಎನಿಸಿಕೊಂಡಿದ್ದರು. ತಾವೂ ಶ್ರೇಷ್ಠ ಇನಿಂಗ್ಸ್‌ ಪ್ರದರ್ಶಿಸುವುದು, ತಮ್ಮ ಜೊತೆಗೆ ಇರುವವರನ್ನೂ ಪ್ರೋತ್ಸಾಹಿಸಿ ತಂಡ ಸ್ಫೂರ್ತಿಯಿಂದ ಆಡುವಂತೆ ಮಾಡಿ ಉತ್ತಮ ಪ್ರದರ್ಶನ ತೆಗೆಯುವುದು ಅವರಿಗೆ ಕರತಲಾಮಲಕ. ಕಪಿಲ್‌ ದೇವ್‌, ಸೌರವ್‌ ಗಂಗೂಲಿ ಮುಂತಾದ ಉತ್ತಮ ಸಾಧಕ ಕ್ಯಾಪ್ಟನ್‌ಗಳ ಸಾಲಿನಲ್ಲಿ ನಿಲ್ಲಬಲ್ಲಂಥ ವ್ಯಕ್ತಿತ್ವ ಅವರದು. ಕೊನೆಯ ಪಂದ್ಯದ ಬಳಿಕ ನೀಡಿದ ಹೇಳಿಕೆಯಲ್ಲಿ, ತಾನು ಮುಂದಿನ ವರ್ಷವೂ ಐಪಿಎಲ್‌ ಆಡುವುದಾಗಿ ಧೋನಿ ಹೇಳಿದ್ದಾರೆ. ಒಂದು ವೇಳೆ ನಿವೃತ್ತಿ ಘೋಷಿಸಿದರೂ ಭಾರತೀಯ ಕ್ರಿಕೆಟ್‌ ತಂಡಕ್ಕೆ, ಯುವ ಆಟಗಾರರಿಗೆ ಧೋನಿಯ ಮಾರ್ಗದರ್ಶನ ಸಿಗಲಿ ಎಂದು ನಾವು ಹಾರೈಸಬಹುದು.

ಈ ನಡುವೆ, ಗುಜರಾತ್‌ ಮತ್ತು ಚೆನ್ನೈ ನಡುವಿನ ಫೈನಲ್‌ ಪಂದ್ಯದ ಫಲಿತಾಂಶವನ್ನು ಗುಜರಾತ್‌ ಮಾಡೆಲ್‌ ವಿರುದ್ಧ ದ್ರಾವಿಡ ಮಾಡೆಲ್‌ ಜಯ ಎಂದು ರಾಜಕೀಯಕರಣ ಮಾಡುತ್ತಿರುವುದು ಖಂಡನೀಯ. ʼರವೀಂದ್ರ ಜಡೇಜಾ ಬಿಜೆಪಿ ಕಾರ್ಯಕರ್ತ, ಹಾಗಾಗಿ ಗೆಲ್ಲಿಸಿದರುʼ ಎಂದು ಇದಕ್ಕೆ ಪ್ರತಿಕ್ರಿಯೆ ನೀಡಿದವರು ಆಡಿದ ಮಾತು ಕೂಡ ಅಷ್ಟೇ ಅರ್ಥಹೀನ. ಕ್ರಿಕೆಟ್‌ ಎಂದಲ್ಲ, ಯಾವ ಕ್ರೀಡೆಯ ಜತೆಗೂ ರಾಜಕೀಯವನ್ನು ಯಾವ ಕಾರಣದಿಂದಲೂ ಬೆರೆಸಬಾರದು. ʼಕ್ರೀಡಾಸ್ಫೂರ್ತಿʼ ಎಂಬ ಮಾತಿಗೆ ಒಂದು ಅಪೂರ್ವ ಘನತೆಯಿದೆ. ಅದು ಜಾತಿಭೇದ, ಧರ್ಮಭೇದ, ಲಿಂಗಭೇದಗಳನ್ನು ಲೆಕ್ಕಕ್ಕಿಡುವುದಿಲ್ಲ. ಅಲ್ಲಿ ಕ್ರೀಡೆಯ ಮೇಲಿನ ಪ್ರೇಮವೊಂದೇ ಮುಖ್ಯವಾಗುತ್ತದೆ. ಯಾರೇ ಸೋಲಲಿ, ಗೆಲ್ಲಲಿ, ಆಟ ಗೆಲ್ಲುತ್ತದೆ ಎಂಬ ಮಾತಿನಲ್ಲಿ ತಥ್ಯವಿದೆ. ಮಳೆಯ ಕಾರಣ ಬೆಳಗಿನ ಜಾವ 2 ಗಂಟೆಯವರೆಗೆ ಆಟ ಮುಂದುವರಿದರೂ ಸ್ಟೇಡಿಯಂನಲ್ಲಿ ಲಕ್ಷಾಂತರ ಜನ ಮತ್ತು ಮನೆಯಲ್ಲಿ ಟಿವಿ ಮೂಲಕ ಕೋಟ್ಯಂತರ ಜನ ಪಂದ್ಯ ವೀಕ್ಷಿಸಲು ಕುಳಿತದ್ದೇ ಇದಕ್ಕೆ ಸಾಕ್ಷಿ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಮೋದಿ ಸರ್ಕಾರಕ್ಕೆ 9 ವರ್ಷ; ದೇಶದ ಇತಿಹಾಸದಲ್ಲಿ ಇದು ಮಹತ್ವದ ಅವಧಿ

ಈ ಬಾರಿಯ ಐಪಿಎಲ್‌ ಕ್ರಿಕೆಟ್‌ ಪ್ರಿಯರಿಗೆ ಸಾಕಷ್ಟು ಥ್ರಿಲ್‌ ಕೊಟ್ಟಿದೆ. ಮಧ್ಯೆ ವಿರಾಟ್‌ ಕೊಹ್ಲಿ- ಗಂಭೀರ್‌ ಕೋಳಿ ಜಗಳದಂಥ ಪ್ರಕರಣಗಳು ನಡೆದರೂ ಅವು ಅಷ್ಟೇ ಬೇಗ ನೆನಪಿನಿಂದ ಮರೆಯಾಗಿವೆ. ಈ ಸಲವೂ ಕಪ್‌ ನಮ್ಮದಾಗಲಿಲ್ಲ ಎಂದು ಆರ್‌ಸಿಬಿ ಅಭಿಮಾನಿಗಳು ಕೊರಗಿರಬಹುದು. ಆದರೆ ಮುಂದಿನ ಸಲದ ಭರವಸೆ ಇದ್ದೇ ಇದೆ. ಐಪಿಎಲ್‌ ಅದರ ಎಲ್ಲ ವೈಭವ, ಸೊಗಸು, ಕೌಶಲ, ತಂತ್ರಗಾರಿಕೆ, ಇತ್ಯಾದಿಗಳ ಮೂಲ ಕೋಟ್ಯಂತರ ಕ್ರೀಡಾಪ್ರಿಯರ ಮನಗೆದ್ದಿದೆ ಎಂದು ಹೇಳಬಹುದು.

Exit mobile version