ವಾಷಿಂಗ್ಟನ್: ಲೆಬನಾನ್‌ನ (Lebanon) ಭಯೋತ್ಪಾದಕ ಗುಂಪು ಹಿಜ್ಬುಲ್ಲಾ (Hezbollah) ಶುಕ್ರವಾರ ಇಸ್ರೇಲ್ (Israel) ದೇಶದ ಫಿರಂಗಿ ಸ್ಥಾನಗಳ ಮೇಲೆ ಡಜನ್‌ಗಟ್ಟಲೆ ಕತ್ಯುಶಾ ರಾಕೆಟ್‌ಗಳನ್ನು ಹಾರಿಸಿದೆ. ಇಸ್ರೇಲ್ ಮೇಲೆ ಇರಾನ್ (Iran) ಇಷ್ಟರಲ್ಲಿಯೇ ದಾಳಿ ನಡೆಸಲಿದ್ದು, ಬೃಹತ್ ಪ್ರಮಾಣದ ಯುದ್ಧ (Israel- Iran tension) ಆರಂಭವಾಗಲಿದೆ ಎಂಬ ಊಹೆಗಳ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ (US President Joe Biden) ಅವರು ಕೂಡ “ಇಸ್ರೇಲ್ ಮೇಲೆ ಇರಾನ್ ಸದ್ಯದಲ್ಲಿಯೇ ದಾಳಿ ನಡೆಸಬಹುದು ಎಂಬುದು ನನ್ನ ನಿರೀಕ್ಷೆ” ಎಂದು ಹೇಳಿದ್ದು, “ದಾಳಿಗೆ ಮುಂದಾಗಬೇಡಿ” ಎಂದು ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.
ದಕ್ಷಿಣದಲ್ಲಿ ಇಸ್ರೇಲಿ ದಾಳಿಗೆ ಪ್ರತಿಕ್ರಿಯೆಯಾಗಿ ಹಿಜ್ಬುಲ್ಲಾ ಕ್ಷಿಪಣಿ ದಾಳಿ ನಡೆಸಿದೆ ಎಂದು ಇರಾನ್ ಬೆಂಬಲಿತ ಲೆಬನಾನಿನ ಉಗ್ರರ ಗುಂಪು ಹೇಳಿದೆ. ಕಳೆದ ವಾರ ಸಿರಿಯಾದ ದಮಾಸ್ಕಸ್‌ನಲ್ಲಿರುವ ಇರಾನ್ ಕಾನ್ಸುಲೇಟ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿ, ಅಲ್ಲಿದ್ದ ಮೂವರು ಇರಾನ್ ಸೈನ್ಯದ ಜನರಲ್‌ಗಳನ್ನು ಕೊಂದುಹಾಕಿದೆ. ಇದಾದ ನಂತರ ಈ ಪ್ರಾಂತ್ಯದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಇರಾನ್ ಯಾವ ಕ್ಷಣದಲ್ಲಿಯಾದರೂ ಇಸ್ರೇಲ್ ಮೇಲೆ ಪ್ರತೀಕಾರದ ದಾಳಿ ನಡೆಸಬಹುದು ಎಂದು ಊಹಿಸಲಾಗಿದೆ.
ಸುಮಾರು 40 ರಾಕೆಟ್ ಉಡಾವಣೆಗಳು ಲೆಬನಾನಿನ ಪ್ರದೇಶದಿಂದ ಗಡಿ ದಾಟುತ್ತಿರುವುದನ್ನು ಇಸ್ರೇಲ್ ಸೈನ್ಯ ಗುರುತಿಸಿದ್ದು, ಅವುಗಳನ್ನು ನಿಷ್ಕ್ರಿಯಗೊಳಿಸಿದೆ. ಯಾವುದೇ ಸಾವು ನೋವು ವರದಿಯಾಗಿಲ್ಲ. ಇದು ಮೊದಲು ಲೆಬನಾನ್‌ನಿಂದ ದಾಟಿದ ಎರಡು ಹಿಜ್ಬುಲ್ಲಾ ದಾಳಿ ಡ್ರೋನ್‌ಗಳನ್ನು ಅದು ತಡೆದಿತ್ತು.
ಯುಎಸ್ ಅಧ್ಯಕ್ಷ ಜೋ ಬೈಡೆನ್ ಶುಕ್ರವಾರ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಇರಾನ್ ಇಸ್ರೇಲ್ ಮೇಲೆ ದಾಳಿ ಮಾಡಲಿದೆ ಎಂದು ನಿರೀಕ್ಷಿಸಿದ್ದಾರೆ. “ನಾವು ಇಸ್ರೇಲ್ ರಕ್ಷಣೆಗೆ ಬದ್ಧರಾಗಿದ್ದೇವೆ. ನಾವು ಇಸ್ರೇಲ್ ಅನ್ನು ಬೆಂಬಲಿಸುತ್ತೇವೆ. ನಾವು ಇಸ್ರೇಲ್ ಅನ್ನು ರಕ್ಷಿಸಲು ಸಹಾಯ ಮಾಡುತ್ತೇವೆ. ಇರಾನ್ ಯಶಸ್ವಿಯಾಗುವುದಿಲ್ಲ. ಯುಎಸ್ ಹೆಚ್ಚುವರಿ ರಕ್ಷಣಾ ಸಾಧನಗಳನ್ನು ಪಶ್ಚಿಮ ಏಷ್ಯಾಕ್ಕೆ ಸ್ಥಳಾಂತರಿಸಿದ್ದು, ಇಸ್ರೇಲ್ ರಕ್ಷಣೆಗೆ ಮೀಸಲಿಟ್ಟಿದೆ,” ಎಂದು ಬೈಡೆನ್ ಹೇಳಿದ್ದಾರೆ.
ಇಸ್ರೇಲ್ ರಚನೆಯಾದಾಗಿನಿಂದ ಅದು ಹಾಗೂ ಲೆಬನಾನ್ ಸಮರದಲ್ಲಿವೆ. 2006ರಲ್ಲಿ ಎರಡೂ ದೇಶಗಳ ನಡುವೆ ಸಾಮಾನ್ಯ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿದೆ. ಹಿಂಸಾಚಾರವು ಲೆಬನಾನ್‌ನಲ್ಲಿ ಇದುವರೆಗೆ ಕನಿಷ್ಠ 363 ಜನರನ್ನು ಕೊಂದಿದೆ. ಇವರು ಹೆಚ್ಚಾಗಿ ಹಿಜ್ಬುಲ್ಲಾ ಹೋರಾಟಗಾರರು. ಕನಿಷ್ಠ 70 ನಾಗರಿಕರು ಸತ್ತಿದ್ದಾರೆ. ಇಸ್ರೇಲ್‌ನಲ್ಲಿ 10 ಸೈನಿಕರು ಮತ್ತು ಎಂಟು ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಮಿಲಿಟರಿ ಹೇಳಿದೆ. ನೂರಾರು ನಾಗರಿಕರು ಗಡಿಯ ಎರಡೂ ಬದಿಗಳಲ್ಲಿ ತಮ್ಮ ಮನೆಗಳನ್ನು ತೊರೆದಿದ್ದಾರೆ.
ಇರಾನ್ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾದಂತಹ ಪ್ರಾಕ್ಸಿ ಪಡೆಗಳಿಗಿಂತ ಇಸ್ರೇಲಿ ನೆಲದ ಮೇಲೆ ತಾನೇ ನೇರ ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ. ಭಾರತ, ಫ್ರಾನ್ಸ್ ಮತ್ತು ರಷ್ಯಾ ಸೇರಿದಂತೆ ಹಲವು ದೇಶಗಳು ತಮ್ಮ ನಾಗರಿಕರಿಗೆ ಈ ಪ್ರದೇಶಕ್ಕೆ ಪ್ರಯಾಣಿಸದಂತೆ ಎಚ್ಚರಿಕೆ ನೀಡಿವೆ. ಈಗಾಗಲೇ ಗಾಜಾ ಏಳು ತಿಂಗಳಿನಿಂದ ಯುದ್ಧಗ್ರಸ್ತವಾಗಿದೆ.
1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಟೆಹ್ರಾನ್‌ನೊಂದಿಗೆ ಅಮೆರಿಕ ಯಾವುದೇ ರಾಜತಾಂತ್ರಿಕ ಸಂಬಂಧವನ್ನು ಹೊಂದಿಲ್ಲ. ಆದರೆ ಇರಾನ್ ಸಂಯಮದಿಂದ ವರ್ತಿಸುವಂತೆ ತಮ್ಮ ಪ್ರಭಾವವನ್ನು ಬಳಸಲು ಅದರ ಮಿತ್ರರಾಷ್ಟ್ರಗಳನ್ನು ಕೇಳಿಕೊಂಡಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು, “ಇಸ್ರೇಲ್ ಶಿಕ್ಷೆಗೆ ಗುರಿಯಾಗಬೇಕು” ಎಂದು ಎಚ್ಚರಿಸಿದ್ದರು. “ಇಸ್ರೇಲಿ ರಾಯಭಾರ ಕಚೇರಿಗಳು ಇನ್ನು ಮುಂದೆ ಸುರಕ್ಷಿತವಾಗಿರುವುದಿಲ್ಲ” ಎಂದು ಅವರ ಸಲಹೆಗಾರರೊಬ್ಬರು ಹೇಳಿದ್ದಾರೆ.
ಇಸ್ರೇಲ್ ಅನ್ನು ನೇರವಾಗಿ ತಲುಪುವ ಸಾಮರ್ಥ್ಯವಿರುವ ಕ್ಷಿಪಣಿಗಳನ್ನು ಇರಾನ್ ಹೊಂದಿದೆ. ಇತ್ತೀಚಿನ ವಾರಗಳಲ್ಲಿ ಇಸ್ರೇಲ್ ತನ್ನ ವಾಯು ರಕ್ಷಣೆಯನ್ನು ಬಲಪಡಿಸಿದೆ. ಇದು ಗಾಜಾದಿಂದ ಹಮಾಸ್ ಮತ್ತು ಲೆಬನಾನ್‌ನಿಂದ ಹಿಜ್ಬುಲ್ಲಾ ಹಾರಿಸಿದ ಸಾವಿರಾರು ರಾಕೆಟ್‌ಗಳನ್ನು ತಡೆಹಿಡಿದಿದೆ.
ಇದನ್ನೂ ಓದಿ: Iran- Israel war : ಇಸ್ರೆಲ್, ಇರಾನ್‌ಗೆ ಹೋಗದಂತೆ ವಿಶೇಷ ಸೂಚನೆ ನೀಡಿದ ಭಾರತ ಸರ್ಕಾರ; ಯಾಕೆ ಗೊತ್ತೇ?