ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಪೆಗಳಪಲ್ಲಿಯಲ್ಲಿ ಶಾಲಾ ಮಕ್ಕಳ ಬಿಸಿಯೂಟದಲ್ಲಿ ಹುಳು ಬಿದ್ದ ಅಕ್ಕಿಯನ್ನು ಬಳಸಿದ್ದಕ್ಕೆ ಪೋಷಕರು ಶಾಲೆಯ ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದೃಷ್ಟವಶಾತ್, ಮಕ್ಕಳು ಅಸ್ವಸ್ಥರಾಗಿಲ್ಲ. ಇದೇನು ಇಂಥ ಮೊದಲ ಪ್ರಕರಣವೇನಲ್ಲ. ಮಂಡ್ಯದ ಬಸರಾಳಿನಲ್ಲೂ ಇತ್ತೀಚೆಗೆ ಇದೇ ಬಗೆಯ ಪ್ರಕರಣ ನಡೆದಿದೆ. ಕೆಲವು ದಿನಗಳ ಹಿಂದೆ ವಿಜಯನಗರದಲ್ಲಿ ನಡೆದ ಪ್ರಕರಣದಲ್ಲಿ, ಬಿಸಿಯೂಟದಲ್ಲಿ ಹುಳುಗಳು ಪತ್ತೆಯಾಗಿದ್ದುದಲ್ಲದೆ, ಮಕ್ಕಳು ಊಟದ ತಟ್ಟೆಯನ್ನು ಹಿಡಿದುಕೊಂಡೇ ಜನಪ್ರತಿನಿಧಿಗಳಲ್ಲಿಗೆ ಬಂದು ತಮ್ಮ ಅಳಲು ತೋಡಿಕೊಂಡಿದ್ದರು. ಇನ್ನು ಇದಕ್ಕಿಂತ ಗಂಭೀರ ಪ್ರಕರಣಗಳಾಗಿವೆ. ಇದೇ ವರ್ಷವೇ ಚಾಮರಾಜನಗರ, ರಾಯಚೂರು, ಕೋಲಾರ ಮುಂತಾದ ಕಡೆ ಬಿಸಿಯೂಟ ಉಂಡು ಪ್ರತಿಕಡೆಯೂ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು. ಆಗೆಲ್ಲಾ ಬಿಸಿಯೂಟದ ಗುಣಮಟ್ಟ, ಆಹಾರಧಾನ್ಯದ ಗುಣಮಟ್ಟ, ನಿರ್ವಹಣೆಗಳ ಬಗ್ಗೆ ಆಕ್ಷೇಪಗಳು ಕೇಳಿಬಂದಿದ್ದವು. ಪ್ರಸ್ತುತ ಕೋಲಾರದಲ್ಲಿ ಆಗಿರುವ ಪ್ರಕರಣದಲ್ಲಿ ತಪ್ಪು ತಮ್ಮದಲ್ಲ, ಇಲಾಖೆಯಿಂದ ಸರಬರಾಜಾಗುತ್ತಿರುವ ಅಕ್ಕಿಯನ್ನು ತಾವು ಬಳಸುತ್ತಿದ್ದೇವೆ ಎಂದು ಶಿಕ್ಷಕರು ಹೇಳಿದ್ದಾರೆ. ಹುಳು ಹಿಡಿದ ಕಳಪೆ ಅಕ್ಕಿಯನ್ನು ಸರಬರಾಜು ಮಾಡುತ್ತಿರುವ ಅಧಿಕಾರಿಗಳ ಬಗ್ಗೆ ಪೋಷಕರ ಆಕ್ರೋಶ ವ್ಯಕ್ತವಾಗಿದೆ. ಇದು ಸರ್ಕಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದ ಪರಮಾವಧಿ. ಇದನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷಿಸುವುದು ಅಗತ್ಯ.
2002ರಿಂದಲೇ ಈ ಯೋಜನೆ ಜಾರಿಯಲ್ಲಿದೆ. ಮೊದಲು ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಅಕ್ಕಿ ಕೊಡಲಾಗುತ್ತಿತ್ತು. ನಂತರ ಬಿಸಿಯೂಟ ಆರಂಭಿಸಲಾಯಿತು. ಇದೀಗ ಬಹುತೇಕ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲೂ ಈ ಯೋಜನೆ ನಡೆಯುತ್ತಿದೆ. ಶಾಲಾ ಮಕ್ಕಳ ದಾಖಲಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸುವುದು, ಶೈಕ್ಷಣಿಕ ವರ್ಷದಲ್ಲಿ ಮಧ್ಯೆ ಮಧ್ಯೆ ಶಾಲೆಯನ್ನು ತೊರೆಯದಂತೆ ತಡೆಯುವುದು, ಪೌಷ್ಟಿಕಾಂಶ ಹೆಚ್ಚಿಸುವುದರ ಮೂಲಕ ಶಾಲಾ ಮಕ್ಕಳ ಆರೋಗ್ಯವನ್ನು ಉತ್ತಮಪಡಿಸುವುದು, ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು, ಸಾಮಾಜಿಕ ಅಸಮಾನತೆಯನ್ನು ತೊಲಗಿಸಿ ರಾಷ್ಟ್ರೀಯ ಅಭಿವೃದ್ಧಿಗೆ ಶಕ್ತಿ ತುಂಬುವುದು ಇತ್ಯಾದಿಗಳು ಈ ಯೋಜನೆಯ ಉದ್ದೇಶಗಳು. ಬಿಸಿಯೂಟದ ರೇಷನ್ ಪೂರೈಕೆ, ಬಿಸಿಯೂಟ ಸಿಬ್ಬಂದಿಯ ವೇತನ ಇತ್ಯಾದಿಗಳಿಗಾಗಿ ಸರ್ಕಾರ ಪ್ರತಿವರ್ಷ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ. ಈ ಯೋಜನೆಯಲ್ಲಿ ಸಾಮಾಜಿಕ ನ್ಯಾಯ ಒಂದು ಮೌಲ್ಯವೂ ಇದೆ. ಇಂದು ಹೆಚ್ಚಾಗಿ ಸರ್ಕಾರಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಕೆಳಮಧ್ಯಮ, ಕೆಳವರ್ಗ ಮಕ್ಕಳಾಗಿದ್ದಾರೆ. ಬಿಸಿಯೂಟ ಯೋಜನೆಯಿಲ್ಲದೇ ಹೋದರೆ ಈ ಮಕ್ಕಳು ಹಸಿವಿನಿಂದ ಬಳಲಿ ಕಲಿಕೆಯತ್ತ ಗಮನ ಕೊಡದಂತಾಗುತ್ತದೆ. ಬಿಸಿಯೂಟದಿಂದಾಗಿ ಲಕ್ಷಾಂತರ ಗ್ರಾಮೀಣ- ಬಡ ಮಕ್ಕಳು ಶಾಲೆಗೆ ಆಗಮಿಸುವಂತಾಗಿದೆ. ಬಾಲ ಕಾರ್ಮಿಕತನ ತಪ್ಪಿದೆ. ಪೋಷಕರ ಹೊರೆ ಇಳಿದಿದೆ. ಹೊಟ್ಟೆಯ ಚಿಂತೆ ಇಲ್ಲದಿರುವುದರಿಂದ ಕಲಿಕೆ ಹೆಚ್ಚಾಗಿದೆ, ಇವೆಲ್ಲವೂ ಬಿಸಿಯೂಟದ ಧನಾತ್ಮಕ ಪರಿಣಾಮಗಳು. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ಬಿಸಿಯೂಟ ಯೋಜನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದೆ.
ಆದರೆ ವಿಷಯುಕ್ತ ಬಿಸಿಯೂಟ, ಅಕ್ಕಿಯಲ್ಲಿ ಹುಳದಂಥ ಪ್ರಕರಣಗಳು ಯೋಜನೆಗೇ ಹುಳ ಹಿಡಿದಂತೆ, ಹೊಳೆಯಲ್ಲಿ ಹುಣಸೆಹಣ್ಣು ಹಿಂಡಿದಂತಾಗುತ್ತದೆ. ಯೋಜನೆಯನ್ನು ಗುಣಾತ್ಮಕವಾಗಿ ಮುಂದುವರಿಯಗೊಡಬೇಕಿದ್ದರೆ ಯೋಜನೆಗೆ ಆರೋಗ್ಯಪೂರ್ಣ ಆಹಾರಧಾನ್ಯಗಳ ಪೂರೈಕೆ, ವಿತರಿಸಲಾಗುತ್ತಿರುವ ಅಕ್ಕಿಯ ಗುಣಮಟ್ಟದ ಮೇಲೆ ಕಟ್ಟುನಿಟ್ಟಿನ ನಿಗಾ, ಅಕ್ಕಿ ಕೆಡದಂತೆ ಕಾಪಾಡಿಕೊಳ್ಳಲು ಸುರಕ್ಷಿತ ಸಂಗ್ರಹಾಗಾರ ವ್ಯವಸ್ಥೆ, ಬಿಸಿಯೂಟಕ್ಕಾಗಿ ಪ್ರತ್ಯೇಕ ಸಿಬ್ಬಂದಿ, ಅವರಿಗೆ ಸಕಾಲಿಕ ಅನುದಾನ ಹಾಗೂ ವೇತನ ವ್ಯವಸ್ಥೆ- ಇವೆಲ್ಲವೂ ಇರಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾದುದು ಆಹಾರದ ಗುಣಮಟ್ಟ. ಬೆಳೆಯುವ ಮಕ್ಕಳ ದೇಹಕ್ಕೆ ಸೂಕ್ತ ಪೋಷಕಾಂಶ ದೊರೆತರೆ ಮಾತ್ರವೇ ಅವರು ಆರೋಗ್ಯಯುತರಾಗಿರಲು, ಅವರ ಕಲಿಕೆ ಚೆನ್ನಾಗಿರಲು ಸಾಧ್ಯ. ಇಲ್ಲವಾದರೆ ಎಲ್ಲ ಪ್ರಯತ್ನಗಳೂ ವ್ಯರ್ಥವಾಗುತ್ತದೆ. ಬಿಸಿಯೂಟದ ಅಕ್ಕಿಯ ಗುಣಮಟ್ಟ ಸರಿಯಾಗಿದೆಯೇ, ಅದು ಸೂಕ್ತ ಕಾಲದಲ್ಲಿ ಸರಬರಾಜಾಗಿದೆಯೇ, ಅದನ್ನು ಶಾಲೆಗಳಲ್ಲಿ ಸರಿಯಾಗಿ ಬಳಸಿಕೊಳ್ಳಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಒಂದು ಕಟ್ಟುನಿಟ್ಟಿನ ನಿಗಾ ವ್ಯವಸ್ಥೆ ಅತ್ಯಗತ್ಯ. ಉಚಿತವಾಗಿ ಊಟ ನೀಡುತ್ತೇವೆ ಎಂದು ಹಳಸಲು ಊಟ ನೀಡುವುದು ಅಮಾನವೀಯ. ಪೋಷಕರು ಸರ್ಕಾರದ ಮೇಲೆ ವಿಶ್ವಾಸವಿಟ್ಟು ಮಕ್ಕಳನ್ನು ಶಾಲೆಗೆ ಕಳಿಸುತ್ತಾರೆ. ಅಲ್ಲಿ ಕಲಿಯುವುದು ಒತ್ತಟ್ಟಿಗಿರಲಿ, ಕಳಪೆ ಊಟ ಉಂಡು ಮಕ್ಕಳು ಅಸ್ವಸ್ಥರಾಗಬಹುದು ಎಂಬ ಭೀತಿಯೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬಹುದು. ಹೀಗಾಗದಂತೆ ನೋಡಿಕೊಳ್ಳುವುದು ಶಾಲಾಡಳಿತ, ಶಿಕ್ಷಣ ಇಲಾಖೆ, ಅಧಿಕಾರಿಗಳ ಹೊಣೆ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಡಿಜಿಟಲ್ ಮೀಡಿಯಾ ಮಾನ್ಯತೆ ಶೀಘ್ರ ಸಾಕಾರಗೊಳ್ಳಲಿ