Site icon Vistara News

ನನ್ನನ್ನು ತುಳಿಯಲು ವ್ಯವಸ್ಥಿತ ಷಡ್ಯಂತ್ರ, ನಡೆಸಿಕೊಂಡ ರೀತಿಯಿಂದ ನೊಂದು ಬಿಜೆಪಿ ತೊರೆಯುತ್ತಿದ್ದೇನೆ: ಜಗದೀಶ ಶೆಟ್ಟರ್‌

shettar1-2-1

ಬೆಂಗಳೂರು: ಬಿಜೆಪಿಯಲ್ಲಿ ನನ್ನನ್ನು ಗೌರವಯುತವಾಗಿ ನಡೆಸಿಕೊಂಡಿಲ್ಲ. ಹೀಗಾಗಿ ನೊಂದು ಪಕ್ಷವನ್ನು ತೊರೆಯುತ್ತಿದ್ದೇನೆ. ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಪಕ್ಷವನ್ನು ಸೇರುತ್ತಿದ್ದೇನೆ ಎಂದು ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು. ಆರು ತಿಂಗಳಿಂದ ನನ್ನನ್ನು ತುಳಿಯುವ ಪ್ರಯತ್ನ ವ್ಯವಸ್ಥಿತವಾಗಿ ನಡೆದಿತ್ತು. ಬಿಜೆಪಿಯಲ್ಲಿ ಯಡಿಯೂರಪ್ಪನವರ ನಂತರ ನಾನೇ ಹಿರಿಯ ನಾಯಕನಾಗಿದ್ದೆ. ಅವರು ನಿವೃತ್ತರಾಗಿದ್ದಾರೆ. ಈ ಸಲ ನಾನು ಗೆದ್ದು ಎಂಎಲ್‌ಎ ಆದರೆ ಇವನಿಗೇ ಅಧಿಕಾರ ಸಿಗಬಹುದು ಎಂಬ ಆತಂಕದಿಂದ ಕೆಲವರು ಪಕ್ಷದಿಂದ ವ್ಯವಸ್ಥಿತವಾಗಿ ನನ್ನನ್ನು ಹೊರಗೆ ಹಾಕಲು ಷಡ್ಯಂತ್ರ ರಚಿಸಿದ್ದಾರೆ. ಈ ಬೆಳವಣಿಗೆಗಳು ಬಿಜೆಪಿಯ ವರಿಷ್ಠರ ಗಮನಕ್ಕೆ ಬಂದಿಲ್ಲ ಎಂದು ಶೆಟ್ಟರ್‌ ಹೇಳಿದರು.

ನನ್ನನ್ನು ಗೌರವಯುತವಾಗಿ ಕಳಿಸಿಕೊಡಲೂ ಬಿಜೆಪಿಯ ರಾಜ್ಯ ನಾಯಕರು ಹಾಗೂ ಹೈಕಮಾಂಡ್‌ ಮುಂದಾಗಲಿಲ್ಲ. ನನಗೆ ಈ ಸಲ ಟಿಕೆಟ್‌ ಇಲ್ಲ ಎಂಬ ವಿಚಾರವನ್ನು ಒಂದು ವಾರ ಅಥವಾ ಹದಿನೈದು ದಿನ ಮೊದಲು ತಿಳಿಸಬಹುದಾಗಿತ್ತು. ಗೌರವಯುತವಾಗಿ ದಿಲ್ಲಿಗೆ ಕರೆದು, ವರಿಷ್ಠರು ಹೇಳಿ, ಬೇರೆ ಜವಾಬ್ದಾರಿಗಳನ್ನು ನನಗೆ ನೀಡಿದ್ದರೆ ನಾನು ಪಕ್ಷ ತೊರೆಯುವ ನಿರ್ಧಾರಕ್ಕೆ ಬರಬೇಕಿರಲಿಲ್ಲ. ಟಿಕೆಟ್‌ ಪ್ರಕಟಣೆ ದಿನ ಬೆಳಗ್ಗೆ ಫೋನ್‌ ಮಾಡಿ ನಿಮಗೆ ಟಿಕೆಟ್‌ ಇಲ್ಲ ಎಂದರು. ಒಬ್ಬ ಹಿರಿಯ ನಾಯಕನನ್ನು ನಡೆಸಿಕೊಳ್ಳುವ ರೀತಿ ಇದಲ್ಲ ಎಂದು ಶೆಟ್ಟರ್‌ ಕಿಡಿ ಕಾರಿದರು.

ಕನಿಷ್ಠ ಪಕ್ಷ ಈ ಬಾರಿ ಚುನಾವಣೆಗೆ ನಿಂತು ಆರು ತಿಂಗಳು ಎಂಎಲ್‌ಎ ಆಗಿ ಬಳಿಕ ತ್ಯಜಿಸುತ್ತೇನೆ, ಆಗ ಗೌರವಯುತ ನಿರ್ಗಮನವಾಗುತ್ತದೆ ಎಂದರೂ ಒಪ್ಪಲಿಲ್ಲ. ಇದು ನನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ನಾನೇ ಕಟ್ಟಿ ಬೆಳೆಸಿದ ಪಕ್ಷದಿಂದ ಹೊರಹಾಕಿದ್ದಕ್ಕೆ ಈಗ ಹೊರಬಂದಿದ್ದೇನೆ. ಕಾಂಗ್ರೆಸ್‌ ತತ್ವ ಸಿದ್ಧಾಂತವನ್ನು ಒಪ್ಪಿ ಬಂದಿದ್ದೇನೆ. ಬಿಜೆಪಿ ಇಂದು ವ್ಯಕ್ತಿಕೇಂದ್ರಿತವಾಗುತ್ತಿದೆ. ನಾನು ಮೋದಿಯವರನ್ನು, ಅಮಿತ್‌ ಶಾ ಅವರನ್ನು, ನಡ್ಡಾ ಅವರನ್ನು ಟೀಕೆ ಮಾಡುವುದಿಲ್ಲ. ರಾಜ್ಯದ ಬೆಳವಣಿಗೆಗಳು ಅವರ ಗಮನಕ್ಕೆ ಬಂದಿಲ್ಲ. ಕೆಲವು ವ್ಯಕ್ತಿಗಳು ತಮ್ಮ ಹಿತಾಸಕ್ತಿಗಾಗಿ ಪಕ್ಷದ ಬೆಳವಣಿಗೆಗೆ ಕುಂದು ತರುತ್ತಿದ್ದಾರೆ ಎಂದರು.

ನಾನು ಅಧಿಕಾರ ಲಾಲಸೆಯಿಂದ ಬಂದವನಲ್ಲ. ಜನಸಂಘಧ ಕಾಲದಿಂದಲೂ ನನ್ನ ಕುಟುಂಬ ಇಲ್ಲಿದೆ. 67ನೇ ಇಸವಿಯಿಂದ ಇಲ್ಲಿದ್ದೇನೆ. ನನ್ನ ತಂದೆ 5 ಸಾರಿ ಹುಬ್ಬಳ್ಳಿ ಕೌನ್ಸಿಲರ್‌ ಆಗಿದ್ದರು. ನಾನು ಸಂಘ ಪರಿವಾರದಲ್ಲೂ ಅಭಾವಿಪದಲ್ಲೂ ಕ್ರಿಯಾಶೀಲನಾಗಿದ್ದೆ. ನನ್ನ ಈ ಹಿನ್ನೆಲೆಯನ್ನೂ ಕಡೆಗಣನೆ ಮಾಡಲಾಗಿದೆ. ಆರು ತಿಂಗಳಿನಿಂದ ವೇದನೆ ಅನುಭವಿಸುತ್ತಿದ್ದೇನೆ. ನನಗೆ ಅಧಿಕಾರ ಬೇಕಾಗಿಲ್ಲ. ಆದರೆ ಗೌರವ ಬೇಕಿದೆ. ಇದು ಹಿರಿಯ ನಾಯಕರನ್ನು ನಡೆಸಿಕೊಳ್ಳುವ ರೀತಿಯಲ್ಲ ಎಂದರು.

ನನಗಾದ ಅವಮಾನವನ್ನು ಕಂಡ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌, ಎಂಬಿ ಪಾಟೀಲ ಹಾಗೂ ರಣದೀಪ್‌ ಸುರ್ಜೇವಾಲ ನನ್ನನ್ನು ಸಂಪರ್ಕಿಸಿ ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ, ನಮ್ಮಲ್ಲಿಗೆ ಬಂದುಬಿಡಿ ಎಂದರು. ಬೇರೆ ದಾರಿಯಿಲ್ಲ ಎಂದು ನಾನೂ ಬಂದಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖಂಡರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಇದ್ದರು.

Exit mobile version