ಬೆಂಗಳೂರು: ರಾಜಧಾನಿಯ ವಿದ್ಯಾರಣ್ಯಪುರದಲ್ಲಿ (Vidyaranyapura) ಜೈ ಶ್ರೀರಾಮ್ (Jai Shree Ram Slogan) ಎಂದವರಿಗೆ ಅಡ್ಡಿಪಡಿಸಿ ಹಲ್ಲೆ (Assault Case) ನಡೆಸಿದ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿ ಪ್ರಶ್ನಿಸಲಾಗಿದ್ದು, ಮದ್ಯದ ನಶೆಯಲ್ಲಿ ಇಬ್ಬರು ಅಪ್ರಾಪ್ತರು ಸೇರಿ ನಾಲ್ವರು ಯುವಕರು ಹಲ್ಲೆಗೆ ಇಳಿದದ್ದು ಗೊತ್ತಾಗಿದೆ. ಇಂದು ಪ್ರಕರಣ ವಿರೋಧಿಸಿ ವಿದ್ಯಾರಣ್ಯಪುರ ಪೊಲೀಸ್ ಸ್ಟೇಶನ್ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದು, ಸ್ಥಳದಲ್ಲಿ ಜಮಾಯಿಸುತ್ತಿದ್ದಾರೆ. ಬಿಗಿ ಭದ್ರತೆ ಹಾಕಲಾಗಿದೆ.
ಯುವಕರ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಬಂಧಿತರು ಯಾರೂ ಗಾಂಜಾ ಸೇವನೆ ಮಾಡಿಲ್ಲ, ಆದರೆ ಆಲ್ಕೋಹಾಲ್ ಸೇವಿಸಿರುವುದು ದೃಢಪಟ್ಟಿದೆ. ಟ್ರಾಫಿಕ್ ಜಾಂ ಆದ ಹಿನ್ನೆಲೆಯಲ್ಲಿ ಟ್ರಾಫಿಕ್ ಸಿಗ್ನಲ್‌ಗಾಗಿ ಆರೋಪಿಗಳು ಕಾಯುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಹಿಂದೂ ಯುವಕರು ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ʼಜೈ ಶ್ರೀರಾಂʼ ಘೋಷಣೆ ಕೂಗಿದ್ದರು. ಈ ವೇಳೆ ಕ್ಯಾತೆ ತೆಗೆದ ಆರೋಪಿಗಳು, ಜೈಶ್ರೀರಾಂ ಕೂಗಬೇಡಿ, ಅಲ್ಲಾಹು ಅಕ್ಬರ್ ಮಾತ್ರ ಎಂದು ಹಲ್ಲೆ ನಡೆಸಿದ್ದರು.
“ಹಲ್ಲೆ ಮಾಡೋದು ನಮ್ಮ ಉದ್ದೇಶ ಆಗಿರಲಿಲ್ಲ. ಜೊತೆಗೆ ಯಾವುದೇ ಪ್ರೀ ಪ್ಲಾನ್ ಕೂಡ ಇರಲಿಲ್ಲ. ನಿನ್ನೆ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ನಾಲ್ಕು ಜನರು ಎರಡು ಬೈಕ್‌ಗಳಲ್ಲಿ ಬರುತ್ತಿದ್ದೆವು. ಎಂಎಸ್ ಪಾಳ್ಯ ಮುಖ್ಯರಸ್ತೆಯಲ್ಲಿ ಬರುವಾಗ ಟ್ರಾಫಿಕ್ ಜಾಮ್ ಆಯ್ತು. ಈ ವೇಳೆ ಕಾರಿನಲ್ಲಿ ಮೂರು ನಾಲ್ಕು ಯುವಕರು ಬಂದು ನಮ್ಮ ಬೈಕ್ ಪಕ್ಕ ನಿಲ್ಲಿಸಿದ್ರು. ಕಾರಿನ ಗ್ಲಾಸ್ ಓಪನ್ ಮಾಡಿ ನಮ್ಮ ಕಡೆ ತಿರುಗಿ ಜೈ ಶ್ರೀರಾಮ್ ಅಂತ ಜೋರಾಗಿ ಕಿರುಚಿದರು. ಜೊತೆಗೆ ನಮಗೂ ಜೈ ಶ್ರೀರಾಮ್ ಅಂತ ಕೂಗಿ ಅಂದರು. ಅದಕ್ಕೆ ನಾವು, ನೀವೇ ಅಲ್ಲಾ ಹೋ ಅಕ್ಬರ್ ಅಂತ ಕೂಗಿ ಅಂತ ಹೇಳಿದೆವು. ಅದಕ್ಕೆ ನಾವು ಯಾಕೆ ಕೂಗಬೇಕು ಅಂತ ಮಾತಿಗೆ ಮಾತು ಬೆಳೆದು ಸ್ವಲ್ಪ ಹೊಡೆದಾಟ ಆಯ್ತು ಅಷ್ಟೇ. ಯಾವುದೇ ಬೇರೆ ಉದ್ದೇಶ ಇರಲಿಲ್ಲ” ಎಂದು ಆರೋಪಿಗಳು ಪೊಲೀಸ್ ವಿಚಾರಣೆ ವೇಳೆ ಹೇಳಿದ್ದಾರೆ.
ಆರೋಪಿಗಳ ಹಿನ್ನೆಲೆಯನ್ನೂ ಪೊಲೀಸರು ಆಮೂಲಾಗ್ರವಾಗಿ ವಿಚಾರಿಸಿದ್ದು, ಯಾವುದೇ ಹಳೇಯ ಕೇಸ್‌ನಲ್ಲಿ ಇರುವುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಮೆಡಿಕಲ್ ಟೆಸ್ಟ್ ಮಾಡಿಸಲಾಗಿದ್ದು, ಗಾಂಜಾ ಸೇವನೆ ಬಗ್ಗೆ ಯಾವುದೇ ಮಾಹಿತಿ ದೃಡಪಟ್ಟಿಲ್ಲ. ಬದಲಾಗಿ ಆಲ್ಕೋಹಾಲ್ ಸೇವಿಸಿರುವುದು ಬಯಲಾಗಿದೆ. ಸದ್ಯ ಆರೋಪಿಗಳ ವಿಚಾರಣೆ ಮುಂದುವರಿದಿದೆ.
ಪ್ರತಿಭಟನೆಗೆ ಕಾರ್ಯಕರ್ತರ ಜಮಾವಣೆ
ವಿದ್ಯಾರಣ್ಯಪುರ ಪೊಲೀಸ್ ಠಾಣೆ ಎದುರು ಇಂದು ಬೆಳಗ್ಗಿನಿಂದ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದು, 500ಕ್ಕೂ ಅಧಿಕ ಕಾರ್ಯಕರ್ತರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಬಿಜೆಪಿಯ ಕೆಲ ನಾಯಕರು ಭಾಗಿಯಾಗುವ ಸಾಧ್ಯತೆ ಇದೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ರಾಮ ಧ್ವಜ ಹಿಡಿದು ಪ್ರತಿಭಟನೆ ಕೂಗಿದ ಬಿಜೆಪಿ ಕಾರ್ಯಕರ್ತರು, ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದರು. ಮಾಜಿ ಕಾರ್ಪೋರೇಟರ್ ಮುನೇಂದ್ರ ಕುಮಾರ್ ಹಾಗೂ ಎ. ರವಿ ನೇತೃತ್ವದಲ್ಲಿ ಪ್ರತಿಭಟನೆ ಆರಂಭವಾಗಿದೆ.
ಇದನ್ನೂ ಓದಿ: Jai Shree Ram slogan: ಜೈ ಶ್ರೀರಾಮ್ ಎಂದು ಕೂಗಿದ್ದಕ್ಕೆ ಹಲ್ಲೆ; ಕಾರು ಅಡ್ಡಗಟ್ಟಿ ಮುಸ್ಲಿಂ ಯುವಕರ ಪುಂಡಾಟ!