ಬೆಂಗಳೂರು: ಈ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಜಿಂದಾಲ್ ಗ್ರೂಪ್‌ನೊಂದಿಗೆ (Jindal Group) ರಾಜ್ಯ ಬಿಜೆಪಿ ಸರ್ಕಾರ (BJP Govt) ಮಾಡಿಕೊಂಡಿದ್ದ 3677 ಎಕರೆ ಜಮೀನು ಪರಭಾರೆ ಒಪ್ಪಂದವನ್ನು (Jindal Land Deal) ಕಾಂಗ್ರೆಸ್ (Congress) ವಿರೋಧಿಸಿತ್ತು. ಇದೀಗ ಸಿಂ ಸಿದ್ದರಾಮಯ್ಯ (CM Siddaramaiah) ಸರಕಾರ ಅದಕ್ಕೆ ಒಪ್ಪಿಗೆ ನೀಡಿದೆ. ಈ ಒಪ್ಪಿಗೆ ನೀಡಿದ್ದರ ಕುರಿತು ಸಂಪುಟದ ಹಲವು ಸಚಿವರು ಸಮರ್ಥನೆ ನೀಡಿದ್ದಾರೆ.
ಜಿಂದಾಲ್‌ಗೆ 3677 ಎಕರೆ ಜಮೀನು ಕರಾರು ಪತ್ರ ನೀಡಲು ಸಿದ್ದರಾಮಯ್ಯ ಸಂಪುಟ ಒಪ್ಪಿಗೆ ನೀಡಿದೆ. ವಿಪಕ್ಷದಲ್ಲಿ ಇದ್ದಾಗ ಅವರೇ ವಿರೋಧಿಸಿದ್ದರು. 2021ರಲ್ಲಿ ಜಮೀನಿನ ಕರಾರು ಪತ್ರ ಕೊಡಲು ಆಕ್ಷೇಪ ವ್ಯಕ್ತಪಡಿಸಿದ್ದರು. ಆಗಿನ ಸಿಎಂ ಯಡಿಯೂರಪ್ಪ ನಿರ್ಧಾರಕ್ಕೆ ಶಾಸಕ ಬೆಲ್ಲದ್ ಸ್ವತಃ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂದು ಸ್ವಪಕ್ಷ ವಿಪಕ್ಷ ಶಾಸಕರ ಒತ್ತಡಕ್ಕೆ ಮಣಿದು ಕ್ಯಾಬಿನೆಟ್ ನಿರ್ಧಾರವನ್ನು ಯಡಿಯೂರಪ್ಪ ವಾಪಸು ಪಡೆದಿದ್ದರು. ಇದೀಗ ಆಡಳಿತಕ್ಕೆ ಬಂದು ಒಂದು ವರ್ಷ ಕಳೆದ ಬೆನ್ನಲ್ಲೇ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಂದು ಆಕ್ಷೇಪ ವ್ಯಕ್ತಪಡಿಸಿದ್ದ ಎಚ್. ಕೆ ಪಾಟೀಲ್ ಅವರಿಂದಲೇ ಇದರ ಪ್ರಸ್ತಾಪ ಬಂದಿದೆ. ಸರ್ಕಾರದ ನಿರ್ಧಾರದ ಹಿಂದೆ ಕಿಕ್‌ಬ್ಯಾಕ್ ವಾಸನೆ ಇದೆ ಎಂದು ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಸ್ಪಷ್ಟನೆ ದೊರೆತಿದೆ: ಪರಮೇಶ್ವರ್
ಜಿಂದಾಲ್‌ಗೆ ಜಾಗ ಕೊಡುವ ವಿಚಾರದಲ್ಲಿ ಹಿಂದೆ ನಾವು ವಿರೋ಼ಧ ಮಾಡಿದ್ದು ನಿಜ. ಕೆಲವು ಪ್ರಶ್ನೆಗಳನ್ನ ನಾವು ಕೇಳಿದ್ದೆವು. ಅದಕ್ಕೆ ಕ್ಲಾರಿಫಿಕೇಷನ್ ಕೂಡ ಸಿಕ್ಕಿದೆ. ಕೋರ್ಟ್ ಕೂಡ ಆದೇಶ ಮಾಡಿದೆ. ಬೆಲೆಯಲ್ಲೂ ಕೂಡ ಒಂದಿಷ್ಟು ಕ್ಲಾರಿಟಿ ಸಿಕ್ಕಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ.
ನಾವು ಗ್ಲೋಬಲ್ ಇನ್ವೆಸ್ಟರ್ ಮೀಟ್ ಮಾಡ್ತೀವಿ. ಪ್ರಪಂಚದಾದ್ಯಂತ ಇದರಲ್ಲಿ ಭಾಗಿಯಾಗ್ತಾರೆ. ಒಂದಿಷ್ಟು ವಿನಾಯಿತಿಗಳನ್ನ ಅವರಿಗೆ ಕೊಡ್ತೀವಿ. ನೀರು, ಜಾಗ, ವಿದ್ಯುತ್ ಹೀಗೆ ಒಂದಿಷ್ಟು ವಿನಾಯಿತಿ ಇರುತ್ತದೆ. ಇರೋವ್ರನ್ನ ಉಳಿಸಿಕೊಂಡು ಹೊಸಬರನ್ನೂ ತರಬೇಕಾಗಿದೆ. ನಾವು ಒಂದಿಷ್ಟು ಬೆಂಬಲ ನೀಡಬೇಕು. ಇಲ್ಲದಿದ್ದರೆ ರಾಜ್ಯ ಬಿಟ್ಟು ಹೋಗ್ತಾರೆ. ತಮಿಳುನಾಡು ಆಂಧ್ರದಲ್ಲಿ ಉಚಿತ ಭೂಮಿ ಕೊಡ್ತಾರೆ. ನಾವು ಕೊಟ್ಟಿಲ್ಲ ಅಂದ್ರೆ ಅವ್ರು ಕರೀತಾರೆ. ಹಿಂದೆ ಒಂದಿಷ್ಟು ಘಟನೆ ನಡೆದಾಗ ಕಂಪನಿಗಳು ಬಿಟ್ಟು ಹೋಗ್ತೀವಿ ಅಂದ್ರು. ಹಾಗಾಗಿ ಎನ್ಕರೇಜ್ ಮಾಡ್ತಾ ಇದ್ದೀವಿ ಎಂದು ಪರಮೇಶ್ವರ ತಿಳಿಸಿದ್ದಾರೆ.
ಬಿಜೆಪಿಯವರಂತೆಯೇ ನೀಡಿದ್ದೇವೆ: ಡಿಕೆಶಿ
ರಾಜ್ಯದಲ್ಲಿ ಕೈಗಾರಿಕೆಗಳು ಬರಬೇಕು. ಕೈಗಾರಿಕೋದ್ಯಮಿಗಳಿಗೆ ಉತ್ತೇಜನ ಕೊಡಬೇಕು. ಪಾಲಿಸಿ ಪ್ರಕಾರ ನಾವು ಮಾಡಿದ್ದೇವೆ. ಹೊಸದಾಗಿ ನಾವು ಏನೂ ಕೊಟ್ಟಿಲ್ಲ. ಹಳೆಯ ಪದ್ಧತಿ ಪ್ರಕಾರವೇ ಬಿಜೆಪಿಯವರ ರೀತಿಯಲ್ಲಿಯೇ ನಾವು ಮಾಡಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಅತಿ ಹೆಚ್ಚು ಬಂಡವಾಳ: ಎಂಬಿ ಪಾಟೀಲ್
ರಾಜ್ಯದಲ್ಲಿ ಯಾವುದೇ ಇಂಡಸ್ಟ್ರಿಗೆ ಭೂಮಿ ಕೊಡಬೇಕಾದ್ರೆ ಸದ್ಯದ ಮಾರ್ಕೆಟ್ ವ್ಯಾಲ್ಯೂ ಫಿಕ್ಸ್ ಮಾಡುತ್ತೇವೆ. 1995ರಲ್ಲಿ ಧರ್ಮಸಿಂಗ್ ಸಿಎಂ ಆಗಿದ್ದಾಗ ಕ್ಯಾಬಿನೆಟ್‌ನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಅತಿಹೆಚ್ಚು ಜಿಂದಾಲ್ ಇನ್ವೆಸ್ಟ್ ಮಾಡಿದೆ. 50 ಸಾವಿರಕ್ಕೂ ಹೆಚ್ಚು ಉದ್ಯೋಗ ನೀಡಿದೆ. ನಮ್ಮ ಇಂಡಸ್ಟ್ರಿಯಲ್ ಪಾಲಿಸಿ ಪ್ರಕಾರ ಜಿಂದಾಲ್ ಅಷ್ಟೇ ಅಲ್ಲ, ಒಂದು ಲಕ್ಷ ಇಂಡಸ್ಟ್ರಿ ಇದ್ದಾವೆ. ಅವೆಲ್ಲಕ್ಕೂ ಭೂಮಿ ನೀಡಲು ನಿಯಮಾವಳಿ ಇದೆ. ಅದೇ ರೀತಿ ಅವತ್ತಿನ ಮಾರ್ಕೆಟ್ ದರದಲ್ಲಿ ಭೂಮಿ ನೀಡಲಾಗಿದೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
ಭೂಮಿಗೆ ನೀಡಿರುವ ದರದಲ್ಲಿ ವ್ಯತ್ಯಾಸ ಆದರೆ ಅದನ್ನು ಅವರೇ ಭರಸಬೇಕಾಗುತ್ತದೆ. ಆ ಕಂಡಿಷನ್‌ನಂತೆ ಜಿಂದಾಲ್ ಹಣ ಕಟ್ಟಬೇಕಿತ್ತು. ಅದರ ಬಗ್ಗೆ ಹಲವು ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಚರ್ಚೆ ಆಗಿದೆ. ಎಲ್ಲರೊಂದಿಗೆ ಏನು ತೀರ್ಮಾನ ಮಾಡಬೇಕಿದೆಯೋ ಅದನ್ನು ಮಾಡಿದ್ದೇವೆ. ಹಳೆಯ ಮಾರ್ಕೆಟ್ ದರ ಕೊಡಲು ಆಗುವುದಿಲ್ಲ. ಅವರಿಗೆ ಯಾವುದೇ ರಿಯಾಯತಿ ಕೊಟ್ಟಿಲ್ಲ. ಹೈಕೋರ್ಟ್ ನಿರ್ದೇಶನ ನೀಡಿದೆ. ಕ್ಯಾಬಿನೆಟ್ ನಿರ್ಧಾರದಂತೆ ತಾರ್ಕಿಕ ಅಂತ್ಯಗೊಳಿಸಿದ್ದೇವೆ. ಇಂಡಸ್ಟ್ರೀಸ್ ಪಾಲಿಸಿ ಮೂಲಕ ನಾವು ಆದೇಶ ಮಾಡಿದ್ದೇವೆ ಎಂದಿದ್ದಾರೆ.
ಜಿಂದಾಲ್‌ಗೆ ನಾವು ವಿರೋಧ ಮಾಡಿದ್ದು ಬೇರೆ ವಿಷಯ. ಇದರಲ್ಲಿ ಮೈನಿಂಗ್ ಬರುವುದಿಲ್ಲ. ಪ್ರತಿಭಟನೆ ಮಾಡಿದ್ದು ಜನಾರ್ದನ ರೆಡ್ಡಿ ವಿರುದ್ಧ. ಇದರ ವಿರುದ್ಧ ಪ್ರತಿಭಟನೆ ಮಾಡಿಲ್ಲ. ಒಂಬತ್ತು ವರ್ಷದ ಸಮಸ್ಯೆ ಇತ್ತು, ಎಷ್ಟೋ ರಾಜ್ಯಗಳು ಫ್ರೀ ಲ್ಯಾಂಡ್ ಕೊಡುತ್ತಿವೆ. ಆ ರಾಜ್ಯಗಳ ಜೊತೆಗೆ ನಾವು ಪೈಪೋಟಿ ಮಾಡುತ್ತಿದ್ದೇವೆ. ಹೀಗಾಗಿ ಈ ತೀರ್ಮಾನ ಮಾಡಿದ್ದರಲ್ಲಿ ತಪ್ಪಿಲ್ಲ ಎಂದಿದ್ದಾರೆ.
ಇದನ್ನೂ ಓದಿ: DK Shivakumar: ಡಿಕೆ ಶಿವಕುಮಾರ್‌ಗೆ ಇಂದು ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ನೋಟೀಸ್