Site icon Vistara News

K Vasantha Bangera: ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

K Vasantha Bangera

ಮಂಗಳೂರು: ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ (79) ಅವರು (K Vasantha Bangera) ಬುಧವಾರ ಸಂಜೆ ನಿಧನರಾದರು. ದೀರ್ಘ ಕಾಲದ ಆನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ ನಾಯಕ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ವಸಂತ ಬಂಗೇರ ಅವರು, ಬೆಳ್ತಂಗಡಿ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿದ್ದರು.

ಇತ್ತೀಚೆಗೆ ಬಂಗೇರ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದರಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಕಳೆದ ಹಲವು ತಿಂಗಳಿನಿಂದ ನಿರಂತರ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಸುಜಿತಾ ವಿ. ಬಂಗೇರ ಹಾಗೂ ಇಬ್ಬರು ಪುತ್ರಿಯರು, ಬಂದು ವರ್ಗದವರನ್ನು ಅಗಲಿದ್ದಾರೆ. ಗುರುವಾರ ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದ್ದು, ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ, ಬೆಳ್ತಂಗಡಿ ಗುರುದೇವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ. ವಸಂತ ಬಂಗೇರ ಅವರು
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕುವೆಟ್ಟು ಗ್ರಾಮದಲ್ಲಿ ಕೇದೆ ಸುಬ್ಬ ಪೂಜಾರಿ ಹಾಗೂ ದೇವಕಿ ದಂಪತಿಯ ಪುತ್ರರಾಗಿ ವಸಂತ ಬಂಗೇರ ಅವರು 1946ರ ಜನವರಿ 15ರಂದು ಜನಿಸಿದ್ದರು. ಬೆಳ್ತಂಗಡಿಯ ಬೋರ್ಡ್ ಹೈಸ್ಕೂಲಿನಲ್ಲಿ ತಮ್ಮ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮುಗಿಸಿದ ಅವರು ಮುಲ್ಕಿ, ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು.

ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಚುನಾವಣೆಗೆ ನಿಂತು ಗೆಲವು ಸಾಧಿಸಿ ದಾಖಲೆ ಬರೆದಿದ್ದರು. 1983 ಮತ್ತು 1985ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಆ ನಂತರ 1989ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷೇತರರಾಗಿ ನಿಂತು ಸೋಲು ಕಂಡಿದ್ದರು. 1994ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ಗೆದ್ದಿದ್ದರು. ನಂತರ 1999 ಮತ್ತು 2004ರಲ್ಲಿ ಈ ಕ್ಷೇತ್ರ ಬಿಜೆಪಿ ಪಾಲಾಗಿತ್ತು. ಜೆಡಿಎಸ್‌ನಿಂದ ಸ್ಪರ್ಧಿಸಿದ ವಂಸತ ಬಂಗೇರ ಅವರನ್ನು ಅವರ ಸಹೋದರ ಪ್ರಭಾಕರ ಬಂಗೇರ ಸೋಲಿಸಿದ್ದರು. ಆ ನಂತರ 2008ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ವಸಂತ ಬಂಗೇರ ಸಹೋದರನನ್ನು ಸೋಲಿಸಿದರು. ಇನ್ನು 2013ರಲ್ಲಿ ವಸಂತ ಬಂಗೇರ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಬಿಜೆಪಿಯ ರಂಜನ್ ಗೌಡ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.

ಇದನ್ನೂ ಓದಿ | EVMs Damage: ಚುನಾವಣಾ ಸಿಬ್ಬಂದಿ ಇದ್ದ ಬಸ್‌ನಲ್ಲಿ ಬೆಂಕಿ ಅವಘಡ; ಮತಯಂತ್ರಗಳು ಡ್ಯಾಮೇಜ್‌

2013ರಲ್ಲಿ ಐದನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಂತ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಬೆಳ್ತಂಗಡಿ ಕ್ಷೇತ್ರದಲ್ಲಿ ಎಂಟು ಬಾರಿ ಸ್ಪರ್ಧಿಸಿ ಐದು ಬಾರಿ ಶಾಸಕರಾಗಿ, ಸರ್ಕಾರದ ಮುಖ್ಯ ಸಚೇತಕರಾಗಿ ಸೇವೆಸಲ್ಲಿಸಿದ್ದ ಬಂಗೇರರು, ಶ್ರೀ ಗುರುನಾರಾಯಣ ಸೇವಾ ಸಂಘದ ಗೌರವಾಧ್ಯಕ್ಷರಾಗಿ, ಗುರುದೇವ ಕಾಲೇಜಿನ ಅಧ್ಯಕ್ಷರಾಗಿ, ಗುರುದೇವ ಸಹಕಾರಿ ಸಂಘದ ಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ.

Exit mobile version