Site icon Vistara News

Kamala Harris: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ ಕಮಲಾ ಹ್ಯಾರಿಸ್‌ ಹೆಸರು ಸೂಚಿಸಿದ ಜೋ ಬೈಡೆನ್!

Kamala Harris

Kamala Harris Is US Presidential Candidate From Democratic Party; Says Joe Biden After Drop Out

ವಾಷಿಂಗ್ಟನ್:‌ ನವೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ (US Presidential Election 2024) ದಿನಾಂಕ ನಿಗದಿಯಾಗಿರುವ ಬೆನ್ನಲ್ಲೇ ಹಾಲಿ ಅಧ್ಯಕ್ಷ, ಡೆಮಾಕ್ರಟಿಕ್‌ ಪಕ್ಷದ ಜೋ ಬೈಡೆನ್‌ (Joe Biden) ಅವರು ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ದೇಶ ಹಾಗೂ ಪಕ್ಷದ ಹಿತಕ್ಕಾಗಿ ಅವರು ಚುನಾವಣೆಯಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, “ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ (Kamala Harris) ಅವರು ಉತ್ತಮ ಆಯ್ಕೆ” ಎಂದು ಕೂಡ ಹೇಳಿದ್ದಾರೆ. ಆ ಮೂಲಕ ಎಲ್ಲವೂ ಅಂದುಕೊಂಡಂತೆ ಆದರೆ, ಅಮೆರಿಕಕ್ಕೆ ಭಾರತ ಮೂಲದ ಕಮಲಾ ಹ್ಯಾರಿಸ್‌ ಅವರು ಅಧ್ಯಕ್ಷೆಯಾಗಲಿದ್ದಾರೆ.

“ಡೆಮಾಕ್ರಟಿಕ್‌ ಪಕ್ಷದ ಸದಸ್ಯರು, ನಾಯಕರೇ, ನಾನು ಈಗಿನ ಅವಧಿಗೆ ಮಾತ್ರ ಅಧ್ಯಕ್ಷನಾಗಿ ಇರುತ್ತೇನೆ. ಚುನಾವಣೆ ಮರು ಸ್ಪರ್ಧೆಯಿಂದ ನಾನು ಹಿಂದೆ ಸರಿದಿದ್ದೇನೆ. ನಾನು 2020ರಲ್ಲಿ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದಾಗ, ಉಪಾಧ್ಯಕ್ಷರ ಸ್ಥಾನಕ್ಕೆ ಕಮಲಾ ಹ್ಯಾರಿಸ್‌ ಅವರನ್ನು ಆಯ್ಕೆ ಮಾಡಿಕೊಂಡಿದ್ದು ನನ್ನ ಮೊದಲ ಹಾಗೂ ಉತ್ತಮ ನಿರ್ಧಾರವಾಗಿತ್ತು. ಈಗಲೂ ಅಷ್ಟೇ, ಡೆಮಾಕ್ರಟಿಕ್‌ ಪಕ್ಷದಿಂದ ಕಮಲಾ ಹ್ಯಾರಿಸ್‌ ಅವರೇ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಎಂಬುದು ನನ್ನ ಅಭಿಲಾಷೆ ಹಾಗೂ ಆಯ್ಕೆಯಾಗಿದೆ” ಎಂದು ಜೋ ಬೈಡೆನ್‌ ಪೋಸ್ಟ್‌ ಮಾಡಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವ ಕುರಿತು ಜೋ ಬೈಡೆನ್‌ ಅವರೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರದ ಮೂಲಕ ಘೋಷಿಸಿದ್ದಾರೆ. “ನಾನು ಕಳೆದ ಮೂರುವರೆ ವರ್ಷಗಳಿಂದ ಅಮೆರಿಕ ಅಧ್ಯಕ್ಷನಾಗಿ, ದೇಶದ ಏಳಿಗೆಗೆ ದುಡಿದಿದ್ದೇನೆ. ನಿಮ್ಮೆಲ್ಲರ ಅಧ್ಯಕ್ಷನಾಗಿ ಸೇವೆ ಮಾಡಿದ್ದು ನನಗೆ ಖುಷಿಯಾಗಿದೆ. ಎರಡನೇ ಬಾರಿ ಆಯ್ಕೆಗೂ ನಾನು ಮನಸ್ಸು ಮಾಡಿದ್ದೆ. ಆದರೆ, ದೇಶ ಹಾಗೂ ಪಕ್ಷದ ಹಿತದೃಷ್ಟಿಯಿಂದಾಗಿ ನಾನು ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ” ಎಂದು ಅವರು ಹೇಳಿದ್ದಾರೆ.

ಜೋ ಬೈಡೆನ್‌ ಅವರಿಗೆ ಇತ್ತೀಚೆಗೆ ಮರೆವು ಜಾಸ್ತಿಯಾಗಿದೆ. ಅಲ್ಲದೆ, 81 ವರ್ಷದ ಜೋ ಬೈಡೆನ್‌ ಅವರ ಮರು ಸ್ಪರ್ಧೆಗೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿತ್ತು. ಜಾಗತಿಕ ವೇದಿಕೆಗಳಲ್ಲಿ ಜೋ ಬೈಡೆನ್‌ ಅವರು ಮುಜುಗರ ಅನುಭವಿಸಿದ್ದರು. ಹಾಗಾಗಿ, ಅವರೇ ಸ್ಪರ್ಧೆಯಿಂದ ಹಿಂದೆ ಸರಿಯುವ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನು, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರೇ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಲಿದ್ದಾರೆ ಎಂದು ಮೊದಲಿನಿಂದಲೂ ಹೇಳಲಾಗುತ್ತಿತ್ತು. ಈಗ ಪಕ್ಷದ ಎಲ್ಲರೂ ಸಹಮತದಿಂದ ಒಪ್ಪಿದರೆ, ಚುನಾವಣೆಯಲ್ಲಿ ಗೆದ್ದರೆ, ಭಾರತ ಮೂಲದವರು ಅಮೆರಿಕ ಅಧ್ಯಕ್ಷರಾಗಲಿದ್ದಾರೆ. ಭಾರತ ಮೂಲದ ರಿಷಿ ಸುನಕ್‌ ಅವರು ಬ್ರಿಟನ್‌ ಪ್ರಧಾನಿಯಾಗಿದ್ದರು.

ಇದನ್ನೂ ಓದಿ: Joe Biden: ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ಜೋ ಬೈಡೆನ್

Exit mobile version