Site icon Vistara News

Kannada- Marathi Row: ಮಹಾರಾಷ್ಟ್ರ ಸದನದಲ್ಲಿ ಕನ್ನಡ ಪರ ದನಿ, ಗಡಿಯಲ್ಲಿ ಮರಾಠಿ ದಬ್ಬಾಳಿಕೆಗೆ ಪ್ರತಿಭಟನೆ

kannada marathi row

ಬೆಳಗಾವಿ: ಮಹಾರಾಷ್ಟ್ರದಲ್ಲಿ (Maharashtra) ಬೆಳಗಾವಿ ಗಡಿ (Belagavi news) ಕನ್ನಡಿಗರ ಹೋರಾಟ (Kannada- Marathi Row) ಜೋರಾಗಿದ್ದು, ಮಹಾರಾಷ್ಟ್ರ ಸರ್ಕಾರದ ದಬ್ಬಾಳಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಸರ್ಕಾರಿ ಕನ್ನಡ ಶಾಲೆಗಳಿಗೆ (Govt kannada schools) ಮರಾಠಿ ಶಿಕ್ಷಕರ (Teachers) ನೇಮಕಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಮಹಾರಾಷ್ಟ್ರದ ಜತ್ ತಾಲೂಕಿನ ಸಂಖ್ ಉಪತಹಶೀಲ್ದಾರ್ ಕಚೇರಿ ಮುಂದೆ ಗಡಿ ಕನ್ನಡಿಗರು ಪ್ರತಿಭಟನೆ ನಡೆಸಿದರು. ಜತ್ ತಾಲೂಕಿನ ಗಡಿ ನಾಡು ಕನ್ನಡ ಸಂಘದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಟಿಇಟಿ ಪರೀಕ್ಷೆಯನ್ನು ಸಹ ಮರಾಠಿ ಮಾಧ್ಯಮದಲ್ಲೆ ಮಹಾರಾಷ್ಟ್ರ ಶಿಕ್ಷಣ ಇಲಾಖೆ ನಡೆಸುತ್ತಿದ್ದು, 500 ಪ್ರಶಿಕ್ಷಣಾರ್ಥಿಗಳ ಪೈಕಿ ಕೇವಲ ಒಬ್ಬಿಬ್ಬರು ಮಾತ್ರ ಪಾಸ್ ಆಗುತ್ತಿದ್ದಾರೆ. ಟಿಇಟಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮಕ್ಕೂ ಅವಕಾಶ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಜತ್ತ, ಅಕ್ಕಲಕೋಟ ತಾಲ್ಲೂಕಿನಲ್ಲಿ ಅತಿ ಹೆಚ್ಚು ಕನ್ನಡಿಗರು ಇದ್ದಾರೆ. ಹೀಗಾಗಿ ಗಡಿ ಕನ್ನಡಿಗರ ಹಿತ ಕಾಪಾಡಿ ಎಂದು ಒತ್ತಾಯಿಸಲಾಯಿತು.

ಸದನದಲ್ಲಿ ವಿಕ್ರಮ್‌ ಸಾವಂತ ಪ್ರಸ್ತಾಪ

ಈ ನಡುವೆ, ಮಹಾರಾಷ್ಟ್ರದ ಸದನದಲ್ಲಿಯೂ ಗಡಿ ಕನ್ನಡಿಗರ ಸಮಸ್ಯೆ ಪ್ರಸ್ತಾಪವಾಗಿದೆ. ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕದ ವಿಚಾರವನ್ನು ಜತ್ ತಾಲೂಕಿನ ಶಾಸಕ ವಿಕ್ರಮ್ ಸಾವಂತ ಸದನದಲ್ಲಿ ಪ್ರಸ್ತಾಪಿಸಿದರು.

ಕರ್ನಾಟಕದ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಇರುವ ಹಾಗೇ ಮಹಾರಾಷ್ಟ್ರ ಗಡಿ ಭಾಗದಲ್ಲಿ ಕನ್ನಡ ಭಾಷಿಕರು ಇದ್ದಾರೆ. ಜತ್, ಅಕ್ಕಲಕೋಟ ತಾಲ್ಲೂಕಿನಲ್ಲಿ ಹೆಚ್ಚು ಕನ್ನಡ ಭಾಷಿಕರು ಇದ್ದಾರೆ. ಇಲ್ಲಿನ‌ ಸರ್ಕಾರಿ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಇದು ಗಡಿ ಭಾಗದ ಕನ್ನಡಿಗರಲ್ಲಿ ಮಹಾರಾಷ್ಟ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂಬ ಭಾವನೆ ಮೂಡಿಸಿದೆ. ಸರ್ಕಾರ ತಕ್ಷಣವೇ ಗಡಿ ಭಾಗದ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸರ್ಕಾರಿ ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಶಾಸಕ ವಿಕ್ರಮ ಸಾವಂತ ಸದನದಲ್ಲಿ ಆಗ್ರಹಿಸಿದರು.

ಸಿಎಂ ಸಿದ್ದರಾಮಯ್ಯನವರಿಗೂ ಗಮನ ಹರಿಸಲು ಆಗ್ರಹ

ಬೆಳಗಾವಿ: ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿಯ ಕನ್ನಡ ಶಾಲೆಗಳಿಗೆ (Kannada Schools) ಮರಾಠಿ ಶಿಕ್ಷಕರನ್ನು ನೇಮಿಸುವ ಮೂಲಕ ಕನ್ನಡಿಗರ ಸಂಸ್ಕೃತಿ ಮತ್ತು ಪರಂಪರೆಯ ಹಾಳು ಮಾಡುತ್ತಿರುವ ಮಹಾರಾಷ್ಟ್ರ ಸರ್ಕಾರದ (Maharashtra Government) ಕನ್ನಡ ವಿರೋಧಿ ನೀತಿಯನ್ನು ಪ್ರತಿಭಟಿಸುವ ಕುರಿತು ಈಗ ಕನ್ನಡಿಗರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ (Belagavi News) ಬರೆದಿದ್ದಾರೆ.

ಈ ಬಗ್ಗೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹಾಗೂ ಇತರರು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಈ ಕುರಿತು ಗಮನ ಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕ ಸರ್ಕಾರವು ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಎಲ್ಲ ಮರಾಠಿ ಶಾಲೆಗಳಿಗೆ ಸರ್ವ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದೆ. ರಾಜ್ಯದಲ್ಲಿ ಭಾಷಾ ಅಲ್ಪಸಂಖ್ಯಾತರ ಹಿತವನ್ನು ಗಮನದಲ್ಲಿಟ್ಟುಕೊಂಡು ಮರಾಠಿ ಭಾಷಿಕರ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನೇ ನೇಮಿಸುತ್ತ ಬಂದಿದೆ. ಇದಕ್ಕೆ ತದ್ವಿರುದ್ಧವಾಗಿ ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಿಸುವ ಮೂಲಕ ಅಲ್ಲಿಯ ಕನ್ನಡಿಗರ ಹಿತಕ್ಕೆ ಧಕ್ಕೆ ತರುವಂಥ ಕನ್ನಡಿಗರ ಹಾಗೂ ಕನ್ನಡ ವಿರೋಧಿ ನಿಲುವನ್ನು ಮಹಾರಾಷ್ಟ್ರ ಸರ್ಕಾರ ತಳೆಯುತ್ತಿದೆ ಎಂದು ಹೇಳಿದ್ದಾರೆ.

ಸಾಂಗ್ಲಿ ಜಿಲ್ಲಾ ಪಂಚಾಯಿತಿಯು ಇತ್ತೀಚೆಗೆ ಕನ್ನಡ ಶಾಲೆಗಳಿಗಾಗಿ ನೇಮಕ ಮಾಡಿದ 24 ಶಿಕ್ಷಕರ ಪೈಕಿ ಕೇವಲ ನಾಲ್ವರು ಮಾತ್ರ ಕನ್ನಡಿಗರಾಗಿದ್ದಾರೆ. ಕನ್ನಡ ಡಿ.ಎಡ್. ಪದವಿ ಪಡೆದ ನೂರಾರು ಶಿಕ್ಷಕರು ಕನ್ನಡ ಪ್ರದೇಶಗಳಲಿದ್ದು ಅವರನ್ನು ಕನ್ನಡ ಶಾಲೆಗಳಿಗೆ ನೇಮಕ ಮಾಡದೇ ಮರಾಠಿ ಶಿಕ್ಷಕರನ್ನು ನೇಮಕ ಮಾಡುತ್ತಿರುವ ಅಲ್ಲಿಯ ಸರ್ಕಾರದ ಕ್ರಮವು ದುರದ್ದೇಶಪೂರಿತವಾಗಿದೆ. ಈ ಕ್ರಮದ ವಿರುದ್ಧ ಅಲ್ಲಿಯ ಕನ್ನಡಿಗರು, ಕನ್ನಡ ಸಂಘಟನೆಗಳು ತೀವ್ರ ಆಕ್ರೋಶ, ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಅವರ ಬೆನ್ನಿಗೆ ಕರ್ನಾಟಕ ಸರ್ಕಾರ ಗಟ್ಟಿಯಾಗಿ ನಿಲ್ಲಬೇಕಾಗಿದೆ ಎಂದಿದ್ದಾರೆ.

ಇದನ್ನೂ ಓದಿ: Job Recruitment: ಬ್ಯಾಂಕ್ ಆಫ್ ಬರೋಡಾದಲ್ಲಿ 627 ಹುದ್ದೆಗಳಿಗೆ ಅರ್ಜಿ ಆಹ್ವಾನ; 55 ಲಕ್ಷದವರೆಗೆ ಸಂಬಳ!

Exit mobile version