Site icon Vistara News

Karnataka Assembly Live: ವಾಲ್ಮೀಕಿ ಹಗರಣದ ಆರೋಪಗಳಿಗೆ ಇಂದು ಸಿಎಂ ಉತ್ತರ; ವಿಧಾನಮಂಡಲ ಕಲಾಪ ಲೈವ್‌ ಇಲ್ಲಿದೆ

vidhana sabha karnataka assembly live

ಬೆಂಗಳೂರು: ಸೋಮವಾರ ಆರಂಭವಾಗಿದ್ದ ವಿಧಾನಮಂಡಲ ಅಧಿವೇಶನ (Karnataka Assembly Live) ಇಂದು ಮತ್ತೆ ಮುಂದುವರಿಯಲಿದೆ. ಬುಧವಾರ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್‌ ಕಲಾಪಗಳಿಗೆ (Assembly Session) ವಿರಾಮ ನೀಡಲಾಗಿತ್ತು. ಇಂದು ಬೆಳಗ್ಗೆ ಅಧಿವೇಶನ ಮತ್ತೆ ಆರಂಭವಾಗಲಿದ್ದು, ವಾಲ್ಮೀಕಿ ನಿಗಮ ಹಗರಣ (Valmiki Corporation Live) ಕುರಿತು ಪ್ರತಿಪಕ್ಷದ ಆರೋಪಗಳಿಗೆ ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ಉತ್ತರ ನೀಡಲಿದ್ದಾರೆ. ಇದರ ಜೊತೆಗೆ, ಕನ್ನಡಿಗರಿಗೆ ಖಾಸಗಿ ಉದ್ಯಮದಲ್ಲಿ ಮೀಸಲು ವಿಧೇಯಕದ (Karnataka jobs reservation) ಕುರಿತು ಸರ್ಕಾರ ನಿಲುವು ಹಾಗೂ ನಡೆ ಚರ್ಚೆಗೆ ಗ್ರಾಸವಾಗಲಿದೆ.

ಸೋಮವಾರ ಸಂವಿಧಾನದ ಪೀಠಿಕೆ ಓದು ಹಾಗೂ ಈ ನಡುವೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆಯೊಂದಿಗೆ ಕಲಾಪ ಆರಂಭವಾಗಿತ್ತು. ನಂತರ ಪ್ರತಿಪಕ್ಷಗಳ ಬೇಡಿಕೆಯಂತೆ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಕುರಿತು ಚರ್ಚೆಗೆ ಸ್ಪೀಕರ್‌ ಅವಕಾಶ ನೀಡಿದ್ದರು. ಇದರ ನಂತರ ಸೋಮವಾರ ಹಾಗೂ ಮಂಗಳವಾರ ವಿಧಾನಸಭೆ ಕಲಾಪ ಗದ್ದಲದ ಗೂಡಾಗಿತ್ತು. ವಿಪಕ್ಷ ನಾಯಕ ಆರ್.‌ ಅಶೋಕ್‌ ಅವರು ಈ ಬಗ್ಗೆ ಸುದೀರ್ಘವಾಗಿ ಮಾತನಾಡಿ ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಈ ಸಂದರ್ಭದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಸದಸ್ಯರ ನಡುವೆ ಜೋರಾದ ಮಾತಿನ ಚಕಮಕಿ ನಡೆದಿತ್ತು. ಸ್ಪೀಕರ್‌ ಹಲವು ಬಾರಿ ಕಲಾಪವನ್ನು ಮುಂದೂಡಿದ್ದರು. ʼಮುಖ್ಯಮಂತ್ರಿಗಳು ನೈತಿಕ ಹೊನೆ ಹೊತ್ತು ರಾಜೀನಾಮೆ ನೀಡಬೇಕುʼ ಎಂದು ಅಶೋಕ್‌ ಆಗ್ರಹಿಸಿದ್ದರು. ಡಿಸಿಎಂ ಡಿಕೆ ಶಿವಕುಮಾರ್‌, ಎಂಬಿ ಪಾಟೀಲ್‌ ಮುಂತಾದವರು ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್‌ ಮಾಡಿದ್ದರು. ಅಶೋಕ್‌ ಅವರ ಮಾತು ಹಾಗೂ ಚಕಮಕಿಯ ಬಳಿಕ ಕಲಾಪದ ಅವಧಿ ಮುಗಿದದ್ದರಿಂದ ಸಿಎಂ ಇಂದು ಸದನದಲ್ಲಿ ಉತ್ತರ ನೀಡಬೇಕಾಗಿದೆ.

ವಿರೋಧ ಪಕ್ಷದವರ ಎಂಟತ್ತು ಗಂಟೆಗಳ ಆರೋಪ, ದಾಳಿ, ಆಕ್ರೋಶದ ನುಡಿಗಳನ್ನು ಬಹುತೇಕ ಎಲ್ಲವನ್ನೂ ಅಡ್ಡಿ ಪಡಿಸದೆ ಮುಖ್ಯಮಂತ್ರಿಗಳು ಮತ್ತು ಆಡಳಿತ ಪಕ್ಷದ ಸದಸ್ಯರು ಆಲಿಸಿದರು. ವಾಲ್ಮೀಕಿ ನಿಗಮ ಪ್ರಕರಣದ ವಿರೋಧ ಪಕ್ಷದವರ ಎಲ್ಲಾ ಆರೋಪ ಮತ್ತು ಮಾತುಗಳಿಗೆ ಮುಖ್ಯಮಂತ್ರಿಗಳು ಗುರುವಾರ ಉತ್ತರ ನೀಡಲಿದ್ದಾರೆ.

ಈ ನಡುವೆ, ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲು ಒಸಗಿಸುವ ಬಗ್ಗೆ ವಿಧೇಯಕ ರೂಪಿಸಲು ಸರ್ಕಾರ ಮುಂದಾಗಿತ್ತು. ಶೇ. 100 ಉದ್ಯೋಗ ಮೀಸಲು ಇಡಬೇಕು ಎಂದು ಕ್ಯಾಬಿನೆಟ್‌ನಲ್ಲಿ ನಿರ್ಣಯವಾಗಿದೆ ಎಂದು ಸಿಎಂ ಟ್ವೀಟ್‌ ಮಾಡಿದ್ದರು. ಇದಕ್ಕೆ ಖಾಸಗಿ ಉದ್ಯಮಿಗಳಿಂದ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು. ನಂತರ ಟ್ವೀಟ್‌ ಡಿಲೀಟ್‌ ಮಾಡಿದ್ದ ಸಿಎಂ, ಬಳಿಕ ʼಶೇ.75 ಉದ್ಯೋಗ ಮೀಸಲುʼ ಎಂದಿದ್ದರು. ಇದಕ್ಕೂ ವಿರೋಧ ಬಂದಿತ್ತು. ಇದಾದ ಬಳಿಕ ʼಸದ್ಯ ಈ ವಿಧೇಯಕವನ್ನು ತಡೆಹಿಡಿಯಲಾಗಿದೆʼ ಎಂದು ಸರಕಾರ ಹೇಳಿದೆ.

ಸರಕಾರದ ಈ ಯುಟರ್ನ್‌ ಅನ್ನು ವಿಪಕ್ಷ ತನ್ನ ಅನುಕೂಲಕ್ಕೆ ಬಳಸಿಕೊಳ್ಳಲಿದೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಈ ಬಗ್ಗೆ ಟ್ವೀಟ್‌ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ʼವಾಲ್ಮೀಕಿ ಹಗರಣ ವಿಚಾರದಲ್ಲಿ ಸರಕಾರಕ್ಕೆ ಆಗುತ್ತಿರುವ ಮುಖಭಂಗ ತಪ್ಪಿಸಲು, ಗಮನವನ್ನು ಬೇರೆಡೆಗೆ ಸೆಳೆಯಲು ಇದನ್ನು ಮಾಡಲಾಗಿದೆ. ಆದರೆ ಸಿಎಂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲʼ ಎಂದು ವಿಪಕ್ಷ ನಾಯಕ ಅಶೋಕ್‌ ಗುಡುಗಿದ್ದಾರೆ. ಹೀಗಾಗಿ, ಕಲಾಪದಲ್ಲಿ ಈ ವಿಚಾರವನ್ನು ಬಿಜೆಪಿ ಎತ್ತಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆಯಾ ಎಂಬ ಪ್ರಶ್ನೆಯೂ ಮೂಡಿದೆ.

ಇದನ್ನೂ ಓದಿ: Karnataka Assembly Live: ವಾಲ್ಮೀಕಿ ಹಗರಣ ಚರ್ಚೆಯ ನಡುವೆ ಗದ್ದಲ ಸೃಷ್ಟಿಸಿದ ರೇವಣ್ಣ ಪ್ರಕರಣ; ರೊಚ್ಚಿಗೆದ್ದ ರೇವಣ್ಣ

Exit mobile version