Site icon Vistara News

Karnataka Assembly Live: ವಿಧಾನಸಭೆ ಕಲಾಪಕ್ಕೆ ಹಾಜರಾಗಿ ಸೇಫ್‌ ಆದ ಬಸವನಗೌಡ ದದ್ದಲ್‌! ವಿಧಾನ ಮಂಡಲ ಕಲಾಪ ಲೈವ್‌ ಇಲ್ಲಿದೆ

karnataka assembly Live basanagouda daddal

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿ ಅವ್ಯವಹಾರ (Valmiki Corporation Scam) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ತನಿಖೆಗಾಗಿ ಬೇಕಾಗಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್‌, ಇಂದು ವಿಧಾನಸಭೆ ಕಲಾಪಕ್ಕೆ (Karnataka Session Live) ಹಾಜರಾಗಿದ್ದಾರೆ. ‌ಆ ಮೂಲಕ, ಅಧಿವೇಶನ (Assembly Session) ಮುಗಿಯುವ ಹತ್ತು ದಿನಗಳ ಕಾಲ ಅವರು ಇಡಿ ಬಂಧನದಿಂದ ಸೇಫ್‌ ಆಗಿದ್ದಾರೆ.

ವಿಧಾನ ಮಂಡಲ ಕಲಾಪ ಆರಂಭ

ವಿಧಾನ ಮಂಡಲದ ಉಭಯ ಸದನಗಳ ಕಲಾಪ (Assembly Session) ಸೋಮವಾರ (ಜುಲೈ 15) ಆರಂಭವಾಗಿದ್ದು, ಒಂಬತ್ತು ದಿನ ನಡೆಯಲಿದೆ. ಆಡಳಿತ ಪಕ್ಷದ ವಿರುದ್ಧ ಸಮರ ಸಾರಲು ಪ್ರತಿಪಕ್ಷಗಳು ಸಜ್ಜಾಗಿವೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಮುಡಾ ಹಗರಣ (MUDA Scam), ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ (Valmiki Corporation Scam), ಬೆಲೆ ಏರಿಕೆ (Price Hike) ಸೇರಿದಂತೆ ವಿವಿಧ ವಿಚಾರಗಳನ್ನು ಪ್ರಸ್ತಾವಿಸಿ ಸರ್ಕಾರದ ವಿರುದ್ಧ ಮುಗಿಬೀಳಲಿದೆ. ಸಿದ್ದರಾಮಯ್ಯ (CM Siddaramaiah) ಸರ್ಕಾರ ಕೂಡ ನಿನ್ನೆ ಅಧಿಕಾರಿಗಳ ಸಭೆ ನಡೆಸಿ ಪ್ರತ್ಯುತ್ತರ ನೀಡಲು ಸೂಕ್ತ ಸಿದ್ಧತೆ ಮಾಡಿಕೊಂಡಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್‌ ಕಲಾಪಗಳ ಲೈವ್‌ (Karnataka Assembly Live) ವರದಿ ಇಲ್ಲಿದೆ.

ಪ್ರತ್ಯಕ್ಷವಾದ ಬಸವನಗೌಡ ದದ್ದಲ್

ಕಳೆದ ಮೂರು ದಿನಗಳಿಂದ ಬಸವನಗೌಡ ದದ್ದಲ್‌ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ನಾಲ್ಕು ದಿನಗಳ ಹಿಂದೆ ಇಡಿ ಅಧಿಕಾರಿಗಳು ಮಾಜಿ ಸಚಿವ ನಾಗೇಂದ್ರ ಹಾಗೂ ಶಾಸಕ ದದ್ದಲ್‌ ನಿವಾಸ ಹಾಗೂ ಕಚೇರಿಗಳಿಗೆ ದಾಳಿ ಮಾಡಿದ್ದರು. ನಾಗೇಂದ್ರ ಅವರನ್ನು ಪ್ರಶ್ನಿಸಿಮ ಬಳಿಕ ವಶಕ್ಕೆ ಪಡೆದು ಕೊಂಡೊಯ್ದಿದ್ದರು. ಇದರೊಂದಿಗೆ ದದ್ದಲ್‌ ಅವರಿಗೂ ಬಂಧನ ಭೀತಿ ಶುರುವಾಗಿತ್ತು. ಇಡಿ ಅಧಿಕಾರಿಗಳು ಹುಡುಕಾಡುತ್ತಿದ್ದಂತೆ ದದ್ದಲ್‌ ನಾಪತ್ತೆಯಾಗಿದ್ದರು.

ದದ್ದಲ್‌ ಅವರು ವಾಲ್ಮೀಕಿ ನಿಗಮದ ಅಧ್ಯಕ್ಷರೂ ಆಗಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ಅವರ ಹೆಸರೂ ಕೇಳಿಬಂದಿದೆ. ದದ್ದಲ್‌ ಅವರ ಪಿಎ ಸಾಕಷ್ಟು ಹಣದ ಡೀಲಿಂಗ್‌ ನಡೆಸಿರುವುದು ಪತ್ತೆಯಾಗಿದ್ದು, ಇದರಿಂದ ಆರೋಪದ ತೂಗುಗತ್ತಿ ದದ್ದಲ್‌ ಅವರ ಮೇಲೂ ತೂಗುತ್ತಿದೆ. ಮೊನ್ನೆ ಇಡಿ ಬಂಧನದಿಂದ ಪಾರಾಗಲು ದದ್ದಲ್‌ ಅವರು ಎಸ್‌ಐಟಿ ಮುಂದೆ ಹಾಜರಾಗಿ ಇಡೀ ದಿನ ಅಲ್ಲಿ ಕುಳಿತಿದ್ದರು. ಸಂಜೆ ಬಳಿಕ ಕಣ್ಮರೆಯಾಗಿದ್ದರು.

ಸದ್ಯ ವಿಧಾನಸಭೆ ಕಲಾಪಕ್ಕೆ ಆಗಮಿಸುವ ಮೂಲಕ ಅವರು ಬಂಧನದಿಂದ ಬಚಾವ್ ಆಗಿದ್ದಾರೆ. ಇನ್ನೂ ಹತ್ತು ದಿನ ಶಾಸಕ ದದ್ದಲ್ ಬಂಧನ ಸಾಧ್ಯತೆ ಕಡಿಮೆ. ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದೆ. ಒಂದು ವೇಳೆ ಅಧಿವೇಶನ ಸಂದರ್ಭದಲ್ಲೆ ಶಾಸಕರ ತನಿಖೆ ನಡೆಸಬೇಕು, ಬಂಧನ ಮಾಡಬೇಕು ಎಂದರೆ ಸ್ಪೀಕರ್ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ. ಅತ್ತ ಇಡಿ ಅಥವಾ ಎಸ್ಐಟಿ ನೊಟೀಸ್ ನೀಡಿದರೂ ಸದನಕ್ಕೆ ಹಾಜರಾಗಬೇಕು ಎಂದು ಸಬೂಬು ನೀಡಬಹುದು. ಹೀಗಾಗಿ ಅಧಿವೇಶನ ಮುಗಿಯುವವರೆಗೂ ದದ್ದಲ್ ಬಂಧನ ಸಾಧ್ಯತೆ ಇಲ್ಲದಾಗಿದೆ.

ಪ್ರವೇಶದ್ವಾರ ಉದ್ಘಾಟನೆ

ವಿಧಾನಸಭಾ ಸಭಾಂಗಣದ ಪ್ರವೇಶದ್ವಾರಕ್ಕೆ ಹೊಸದಾಗಿ ವಿನ್ಯಾಸಗೊಳಿಸಿರುವ ದ್ವಾರವನ್ನು ಉದ್ಘಾಟನೆ ಮಾಡಲಾಯಿತು. ಬೀಟೆ ಮರದಲ್ಲಿ (rose wood) ಕಲಾತ್ಮಕವಾಗಿ ಕೆತ್ತನೆಯಿಂದ ವಿನ್ಯಾಸಗೊಳಿಸಿರುವ ದ್ವಾರವನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. ಸ್ಪೀಕರ್‌ ಯು.ಟಿ ಖಾದರ್‌, ಸಚಿವರು ಹಾಗೂ ಕಾಂಗ್ರೆಸ್‌ ಶಾಸಕರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಂವಿಧಾನದ ಪೀಠಿಕೆ ಬೋಧನೆ, ಸಂತಾಪ

ಕಲಾಪದ ಮೊದಲು ಸಂವಿಧಾನದ ಪೀಠಿಕೆಯನ್ನು ಸಭಾಪತಿ ಎಲ್ಲರಿಗೂ ಬೋಧಿಸಿದರು. ನಂತರ, ಈ ಹಿಂದಿನ ಅವಧಿಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಸಲ್ಲಿಸಲಾಯಿತು. ಸಾಹಿತಿ ಕಮಲಾ ಹಂಪನಾ, ನಟ ದ್ವಾರಕೀಶ್, ಅಪರ್ಣಾ, ಸರೋದ್‌ ವಾದಕ ರಾಜೀವ್‌ ತಾರಾನಾಥ್‌ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಸಲಾಯಿತು. ಮಾಜಿ ಸಚಿವೆ ನಾಗಮ್ಮ ಕೇಶವ ಮೂರ್ತಿ, ಮಾಜಿ‌ ಕೇಂದ್ರ ಸಚಿವ ಶ್ರೀನಿವಾಸ ಪ್ರಸಾದ್, ಮಾಜಿ ಸಂಸದ ಮೂಡಲಗಿರಿಯಪ್ಪ, ಮಾಜಿ ಸಚಿವ ಎಂ ಪಿ ಕೇಶವ ಮೂರ್ತಿ, ಮಾಜಿ ಶಾಸಕರಾದ ವಸಂತ ಬಂಗೇರಾ, ಬಸನಗೌಡ ಗುರನಗೌಡ ಪಾಟೀಲ್, ನಾಗರೆಡ್ಡಿ ಪಾಟೀಲ್, ರಮೇಶ್ ಕುಮಾರ ಪಾಂಡೆ, ಟಿ ಎಚ್ ಶಿವಶಂಕರಪ್ಪ, ವಾಸು, ಖ್ಯಾತ ಧರ್ಮಗುರು ಖಾಝಿ ಅಸ್ಸೈಯದ್ ಫಜಲ್ ಕೋಯಮಗಮ ತಂಙಳ್ ಅಲ್ ಬುಖಾರಿ ಅವರಿಗೂ ಸಂತಾಪ ಸಲ್ಲಿಸಲಾಯಿತು.

ಇದನ್ನೂ ಓದಿ: Assembly Session: ಸೋಮವಾರದಿಂದ ಮಳೆಗಾಲದ ಅಧಿವೇಶನ, ವಿಧಾನಸಭೆಗೆ ಹೊಸ ‌ʼಖದರ್ʼ ತಂದ ಸ್ಪೀಕರ್‌

Exit mobile version