ಬೆಂಗಳೂರು: ವಿಧಾನ ಮಂಡಲ ಮಳೆಗಾಲದ ಅಧಿವೇಶನ (Karnataka Assembly Live, Karnataka Assembly monsoon session) ಇಂದು ಇನ್ನಷ್ಟು ರಂಗೇರಲಿದೆ. ವಾಲ್ಮೀಕಿ ನಿಗಮದ ಅವ್ಯವಹಾರ (Valmiki corporation Scam) ಪ್ರಕರಣದ ಕುರಿತು ನಿನ್ನೆ ವಿಧಾನಸಭೆ ಕಲಾಪದಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ವಿಪಕ್ಷ ನಾಯಕ ಆರ್. ಆಶೋಕ್ (R Ashok) ಅವರು ಈ ಚರ್ಚೆಯನ್ನು ಮುನ್ನಡೆಸಿದ್ದರು. ಇಂದು ಅದು ಮುಂದುವರಿಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕೂಡ ಇದಕ್ಕೆ ಉತ್ತರ ನೀಡಲಿದ್ದಾರೆ.
ನಿನ್ನೆ ಮಾತನಾಡಿದ ಆರ್. ಅಶೋಕ್, ಸರ್ಕಾರದ ತಪ್ಪು ನಡೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ಹೈಕಮಾಂಡ್‌ಗೆ ಕಪ್ಪಕಾಣಿಕೆ ಸಲ್ಲಿಸಲು ನಿಗಮದ ಹಣವನ್ನು ದುರುಪಯೋಗ ಮಾಡಲಾಗಿದೆ ಎಂದಿದ್ದ ಅಶೋಕ್, 187 ಕೋಟಿ ರೂಪಾಯಿ ಅವ್ಯವಹಾರದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದರು. ಈ ಹಣ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಹೇಗೆ ವಿನಿಯೋಗವಾಗಬೇಕಿತ್ತು, ಹೇಗೆ ಅಕ್ರಮವಾಗಿದೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದರು. ಆ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.
ಇಂದು ಸಹ ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಂದ ಈ ಚರ್ಚೆ ಮುಂದುವರಿಯಲಿದೆ. ಬಿಜೆಪಿಯ ಸಿಟಿ ರವಿ, ಸುನೀಲ್ ಕುಮಾರ್, ಯತ್ನಾಳ್ ಮುಂತಾದವರು ಈ ಚರ್ಚೆಯನ್ನು ಮುನ್ನಡೆಸಲಿದ್ದಾರೆ. ಬಳಿಕ ಸಿಎಂ ಸಿದ್ದರಾಮಯ್ಯ ಅವರು ಉತ್ತರ ನೀಡುವ ನಿರೀಕ್ಷೆ ಇದೆ. ನಿನ್ನೆ ಆಶೋಕ್ ಮಾತನಾಡುವಾಗಲೇ ಈ ಬಗ್ಗೆ ಸಿದ್ದರಾಮಯ್ಯ ಸುಳಿವು ನೀಡಿದ್ದರು. ʼನಿಮ್ಮ ವಾದವನ್ನ ಸಮಾಧಾನವಾಗಿ ಕೇಳ್ತೀನಿ. ನಾನು ಉತ್ತರ ಕೊಡುವಾಗಲೂ ಅಷ್ಟೇ ಸಮಾಧಾನದಿಂದ ಕೇಳಬೇಕುʼ ಎಂದಿದ್ದರು.
ʼ187 ಕೋಟಿ ಅಲ್ಲ ಅದು ಬರೀ 87 ಕೋಟಿ ಮಾತ್ರ ವರ್ಗಾವಣೆ ಆಗಿರುವುದು. ಹಣ ಎಲ್ಲಿಯವರೆಗೂ ಸರ್ಕಾರದ ಸುಪರ್ದಿಯಲ್ಲಿರುತ್ತೆ, ಬಳಿಕ ಆ ಹಣ ಯಾರಿಗೆ ಹೋಗುತ್ತೆ ಈ ಬಗ್ಗೆ ಸಂಪೂರ್ಣ ಮಾಹಿತಿ ಕೊಡ್ತೀನಿ. ಇದರಲ್ಲಿ ಯಾರ ಪಾತ್ರ ಎಷ್ಟಿದೆ. ಈ ಹಿಂದೆ ಹೇಗೆ ವ್ಯವಹಾರ ನಡೆದಿದೆ ಅದೆಲ್ಲವನ್ನ ಸಂಪೂರ್ಣವಾಗಿ ಕೊಡ್ತೀನಿʼ ಎಂದು ಹೇಳಿದ್ದರು. ಎಂದರೆ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಪ್ರಕರಣಗಳನ್ನೂ ಸಿಎಂ ಪ್ರಸ್ತಾವಿಸುವುದು ಖಚಿತವಾಗಿದೆ.
ಇದರಿಂದ ಸದನದಲ್ಲಿ ಇಂದು ಏಟು ಎದಿರೇಟು ಖಚಿತವಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಆಡಳಿತ ಪಕ್ಷ ಸದದ್ಯರು ಸಾಥ್ ನೀಡಲಿದ್ದು, ವಿಪಕ್ಷ ಶಾಸಕರು ಕೆರಳಿ ಪ್ರತಿಭಟನೆ ನಡೆಸುವುದೂ ಬಹುತೇಕ ಖಚಿತವಾಗಿದೆ. ಸ್ಪೀಕರ್ ಯು.ಟಿ ಖಾದರ್ ಅವರು ಶಾಂತಚಿತ್ತರಾಗಿಯೇ ಸದನದ ಕಲಾಪವನ್ನು ನಿರ್ವಹಿಸುತ್ತಿದ್ದರೂ, ಹಲವು ಬಾರಿ ಶಾಸಕರ ವರ್ತನೆ ಅವರಿಗೂ ಸವಾಲಾಗುತ್ತಿದೆ.
ನಿನ್ನೆ ಅಧಿವೇಶನ ಆರಂಭಕ್ಕೂ ಮುನ್ನ ವಿಧಾನಸೌಧದ ನೂತನ ದ್ವಾರವನ್ನು ಸಿಎಂ ಉದ್ಘಾಟಿಸಿದ್ದರು. ವಿಧಾನಸಭೆಯ ಸಭಾಂಗಣವನ್ನು ಇನ್ನಷ್ಟು ಸುಂದರವಾಗಿ ವಿನ್ಯಾಸಗೊಳಿಸಲಾಗಿದ್ದು, ಇದಕ್ಕೆ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಲಾಪ ಆರಂಭದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಲಾಯಿತು. ನಂತರ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಮಂಡಿಸಲಾಯಿತು.
ಇದನ್ನೂ ಓದಿ: Assembly Session: ಅಧಿವೇಶನದಲ್ಲಿ ಹಗರಣಗಳ ಸದ್ದು; ಮೊದಲ ದಿನವೇ ಮುಗಿಬಿದ್ದ ವಿಪಕ್ಷ ನಾಯಕರು, ಹೆದರಲ್ಲ ಎಂದ ಸಿಎಂ!