ಕಲಬುರಗಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ತೀವ್ರ ಚರ್ಚೆಗಳು (Karnataka CM Row) ನಡೆಯುತ್ತಿದ್ದು, ಆಯಾ ಸಮುದಾಯಗಳ ಸ್ವಾಮೀಜಿಗಳು ಒಂದೊಂದು ಹೆಸರನ್ನು ಸೂಚಿಸುತ್ತಿದ್ದಾರೆ. ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ (DK Shivakumar) ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ, ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸಿಎಂ ಸ್ಥಾನ ನೀಡಬೇಕು ಎಂದು ಬಾಳೆಹೊನ್ನೂರುಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಆಗ್ರಹಿಸಿದ್ದಾರೆ. ಇದು ಈಗ ಸಿಎಂ ಬದಲಾವಣೆ ಚರ್ಚೆಗೆ ಹೊಸ ತಿರುವು ನೀಡಿದಂತಾಗಿದೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿವೆ. ಹಾಗಾಗಿ, ವೀರಶೈವ ಲಿಂಗಾಯತ ಸಮುದಾಯದ ನಾಯಕರಿಗೆ ಸಿಎಂ ಸ್ಥಾನ ಕೊಟ್ಟರೂ ತಪ್ಪಿಲ್ಲ. ಬಹುಸಂಖ್ಯಾತ ವೀರಶೈವ ಲಿಂಗಾಯತ ಸಮುದಾಯವು ಕಾಂಗ್ರೆಸ್‌ಗೆ ಬೆಂಬಲ ಕೊಟ್ಟಿದೆ. ಇದರಿಂದಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಲಿಂಗಾಯತ ಸಮುದಾಯಕ್ಕೆ ಸಿಎಂ ಸ್ಥಾನ ಕೊಟ್ಟರೆ ರಾಜ್ಯದಲ್ಲಿ ಒಳ್ಳೆಯ ಅಭಿವೃದ್ಧಿಯಾಗುತ್ತದೆ. ಸಿಎಂ ಸ್ಥಾನ ಅಲ್ಲದಿದ್ದರೂ ಡಿಸಿಎಂ ಸ್ಥಾನವನ್ನಾದರೂ ಕೊಡಬೇಕು” ಎಂದು ಹೇಳಿದರು.
“ರಾಜ್ಯದಲ್ಲಿ ವೀರೇಂದ್ರ ಪಾಟೀಲ್ ಅವರಿಗೆ ಬಿಟ್ಟರೆ ಬೇರೆಯವರು ಸಿಎಂ ಆಗಿಲ್ಲ. ಹಾಗಾಗಿ, ಈಗ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರಿಗೆ ಸಿಎಂ ಸ್ಥಾನ ಕೊಡಿ. ಶಾಮನೂರು ಶಿವಶಂಕರಪ್ಪ, ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ ಅವರು ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಇವರಲ್ಲಿ ಯಾರಿಗಾದರೂ ಮುಖ್ಯಮಂತ್ರಿ ಹುದ್ದೆ ನೀಡಿದರೆ ರಾಜ್ಯದಲ್ಲಿ ಇನ್ನಷ್ಟು ಒಳ್ಳೆಯ ಆಡಳಿತ ಸಿಕ್ಕು ರಾಜ್ಯವು ಅಭಿವೃದ್ಧಿಯಾಗುತ್ತದೆ” ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ.
ಚಂದ್ರಶೇಖರ ಸ್ವಾಮೀಜಿ ಹೇಳಿದ್ದೇನು?
ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಅವರು ಕೆಲ ದಿನಗಳ ಹಿಂದೆ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇದಿಕೆ ಮೇಲೆಯೇ ಡಿ.ಕೆ.ಶಿವಕುಮಾರ್ ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದರು. “ಎಲ್ಲರೂ ಮುಖ್ಯಮಂತ್ರಿಗಳಾಗಿ ತಮ್ಮ ತಮ್ಮ ಅಧಿಕಾರ ಅನುಭವಿಸಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಒಬ್ಬರು ಮುಖ್ಯಮಂತ್ರಿ ಆಗಿಲ್ಲ. ಸಿದ್ದರಾಮಯ್ಯ ಅವರು ಈಗಾಗಲೇ ಸಿಎಂ ಸ್ಥಾನ ಅನುಭವಿಸಿದ್ದಾರೆ. ಆ ಕಾರಣಕ್ಕಾಗಿ ಇನ್ನು ಮುಂದೆ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಬೇಕು” ಹೇಳಿದ್ದರು.
ಚರ್ಚೆಯೇ ಬೇಡ ಎಂದ ಡಿಕೆಶಿ
ಸಿಎಂ, ಡಿಸಿಎಂ ಕುರಿತು ಕಾಂಗ್ರೆಸ್‌ನ ಯಾವ ಎಂಎಲ್‌ಎ ಕೂಡ ಚರ್ಚಿಸಬಾರದು ಎಂಬುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. “ಪಕ್ಷವನ್ನು ಕಟ್ಟಲು ಬಹಳ ಕಷ್ಟಪಟ್ಟಿದ್ದೇವೆ. ಪಕ್ಷವನ್ನು ಅಧಿಕಾರಕ್ಕೆ ತರಲು ಎಷ್ಟು ಕಷ್ಟ ಪಟ್ಟಿದ್ದೇವೆ ಎಂಬುದು ನಮಗೆ ಗೊತ್ತಿದೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ನಿಮ್ಮ ಬಾಯಿಗೆ ಬೀಗ ಹಾಕಿಕೊಂಡು ಇದ್ದರೆ ಒಳ್ಳೆಯದಾಗುತ್ತದೆ. ಚಂದ್ರಶೇಖರ ಸ್ವಾಮೀಜಿ ಅವರು ನನ್ನ ಮೇಲಿನ ಅಭಿಮಾನಕ್ಕಾಗಿ ಹಾಗೆ ಮಾತನಾಡಿದ್ದಾರೆ. ಬೇರೆ ಯಾವ ಸ್ವಾಮೀಜಿಗಳೂ ಮಾತನಾಡಿಲ್ಲ. ಎಲ್ಲರಿಗೂ ಕೈ ಮುಗಿಯುತ್ತೇನೆ. ನಮ್ಮ ರಾಜಕಾರಣದ ಸುದ್ದಿಗೆ ನೀವು ಬರಬೇಡಿ” ಎಂದಿದ್ದಾರೆ.
ಇದನ್ನೂ ಓದಿ: DK Shivakumar: ಸಿಎಂ, ಡಿಸಿಎಂ ಚರ್ಚೆ ಇಲ್ಲ, ಬಾಯಿಗೆ ಬೀಗ ಹಾಕಿಕೊಂಡಿರಿ; ಡಿಕೆಶಿ ಖಡಕ್ ಎಚ್ಚರಿಕೆ