Site icon Vistara News

PM Narendra Modi: “ಒಕ್ಕೂಟ ವ್ಯವಸ್ಥೆಯ ಆಶಯ…” ಪ್ರಧಾನಿ ಮೋದಿಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ

PM Narendra Modi and Siddaramaiah

ಬೆಂಗಳೂರು: ಪ್ರಧಾನ ಮಂತ್ರಿಯಾಗಿ (Prime minister) ಮೂರನೇ ಬಾರಿಗೆ ಪ್ರಮಾಣ ವಚನ (Oath) ಸ್ವೀಕರಿಸಿದ ನರೇಂದ್ರ ಮೋದಿ (Narendra Modi) ಅವರಿಗೆ ಕರ್ನಾಟಕ (Karnataka) ಸಿಎಂ ಸಿದ್ದರಾಮಯ್ಯ (CM Siddaramaiah) ಸಾಮಾಜಿಕ ಜಾಲತಾಣ X ಖಾತೆ ಮೂಲಕ ಶುಭ ಕೋರಿದ್ದಾರೆ.

“3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ @narendramodi ಅವರಿಗೆ ಅಭಿನಂದನೆಗಳು. ಕರುನಾಡಿನ ಅಭಿವೃದ್ಧಿಯ ನಮ್ಮ ಸಂಕಲ್ಪಕ್ಕೆ ನಿಮ್ಮ ಸಹಕಾರ ಇರಲಿದೆ, ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ಎತ್ತಿಹಿಡಿಯುತ್ತಾ ರಾಜ್ಯಗಳ ಹಿತಾಸಕ್ತಿಯನ್ನು ನೀವು ಗೌರವಿಸುತ್ತೀರೆಂದು ಭಾವಿಸಿದ್ದೇನೆ. ಸಂಪದ್ಭರಿತ ಕರ್ನಾಟಕದ ಮೂಲಕ ಸದೃಢ ಭಾರತ ನಿರ್ಮಾಣಕ್ಕಾಗಿ ನಿಮ್ಮ ಜೊತೆಯಾಗಿ ಶ್ರಮಿಸುವ ದಿನಗಳನ್ನು ಎದುರು ನೋಡುತ್ತಿದ್ದೇನೆ” ಎಂದು ಸಿದ್ದರಾಮಯ್ಯ ಹಾರೈಸಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅಭಿನಂದನೆ

ಬೆಂಗಳೂರು: ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ(NDA) ಅಧಿಕಾರಕ್ಕೆ ಬಂದಿದೆ. ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ (Narendra Modi) ಇಂದು (ಜೂನ್‌ 9) ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದು, ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇದಕ್ಕಾಗಿ ಸಿದ್ಧತೆ ಪೂರ್ಣಗೊಂಡಿದೆ. ಈ ಬಾರಿ ಬಿಜೆಪಿಗೆ ಜೆಡಿಎಸ್‌ ಕೂಡ ಬೆಂಬಲ ಸೂಚಿಸಿದ್ದು, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಚಿವರಾಗಿ ಆಯ್ಕೆಯಾಗಿದ್ದಾರೆ. ಆದರೆ ಅನಾರೋಗ್ಯ ಕಾರಣದಿಂದ ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ.ದೇವೇಗೌಡ (HD Deve Gowda) ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಭಿನಂದನೆ ತಿಳಿಸಿದ್ದಾರೆ.

ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ದೇವೇಗೌಡ ಅವರು ಅದನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ʼʼನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾನ ವಚನ ಸ್ವೀಕರಿಸುತ್ತಿದ್ದಾರೆ. ಈ ಐತಿಹಾಸಿಕ ಸಂದರ್ಭದಲ್ಲಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ. ಅನಾರೋಗ್ಯದ ಕಾರಣದಿಂದ ನನಗೆ ಈ ಕಾರ್ಯಕ್ರಮದಲ್ಲಿ ಭಾವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಖಂಡಿತವಾಗಿಯೂ ನಾನು ಟಿವಿಯಲ್ಲಿ ಲೈವ್‌ನಲ್ಲೇ ಕಾರ್ಯಕ್ರಮವನ್ನು ವೀಕ್ಷಿಸುತ್ತೇನೆ. ಕಾಂಗ್ರೆಸ್ ಏನೇ ಹೇಳಲಿ, ಭಾರತೀಯ ಪ್ರಜಾಪ್ರಭುತ್ವವು ದೃಢವಾಗಿದೆʼʼ ಎಂದು ದೇವೇಗೌಡ ಅವರು ಬರೆದುಕೊಂಡಿದ್ದಾರೆ.

ಬಿಜೆಪಿ ಗೆದ್ದಿದ್ದಕ್ಕೆ ತನ್ನ ಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ ಮೋದಿ ‘ಭಕ್ತ’!

ರಾಯ್‌ಪುರ: ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ, ಆರಾಧಿಸುವ, ಅವರ ಪರವಾಗಿ ವಾದ ಮಾಡುವ, ಸಮಯ ಬಂದರೆ ಜಗಳಕ್ಕೂ ನಿಲ್ಲುವ ‘ಭಕ್ತರು’ ಇದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಛತ್ತೀಸ್‌ಗಢದಲ್ಲಿ (Chhattisgarh) ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ದೇವರಿಗೆ ತನ್ನ ಬೆರಳನ್ನೇ ಅರ್ಪಿಸಿದ್ದಾನೆ. ಆ ಮೂಲಕ ಆತ ಅಭಿಮಾನ ಮೆರೆದಿದ್ದಾನೆ.

ಹೌದು, ಛತ್ತೀಸ್‌ಗಢದ ಬಲರಾಮ್‌ಪುರದಲ್ಲಿ ದುರ್ಗೇಶ್‌ ಪಾಂಡೆ ಎಂಬ 30 ವರ್ಷದ ವ್ಯಕ್ತಿಯು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಬಹುಮತ ಪಡೆದ ಹಿನ್ನೆಲೆಯಲ್ಲಿ ದೇವಾಲಯ ತೆರಳಿ, ಕಾಳಿ ದೇವಿಗೆ ತನ್ನ ಬೆರಳನ್ನೇ ಅರ್ಪಿಸಿದ್ದಾನೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಜೂನ್‌ 4ರಂದೇ ಆತನು ಕಾಳಿ ದೇವಸ್ಥಾನಕ್ಕೆ ತೆರಳಿ, ತನ್ನ ಎಡಗೈ ಬೆರಳನ್ನು ಕತ್ತರಿಸಿ ದೇವತೆಗೆ ಅರ್ಪಿಸಿದ್ದಾನೆ. ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 290 ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದರ ಖುಷಿ ತಾಳದೆ ಆತ ಬೆರಳು ಕತ್ತರಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಾನೆ ಎಂದು ತಿಳಿದುಬಂದಿದೆ.

ದೇವಸ್ಥಾನದಲ್ಲಿ ಬೆರಳು ಕತ್ತರಿಸಿಕೊಂಡ ಬಳಿಕ ವಿಪರೀತ ರಕ್ತಸ್ರಾವ ಉಂಟಾಗಿದೆ. ಇದರಿಂದ ಆತಂಕಕ್ಕೀಡಾದ ಕುಟುಂಬಸ್ಥರು ವ್ಯಕ್ತಿಯನ್ನು ಸಮಾರಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಕೂಡಲೇ ಅಂಬಿಕಾಪುರ ಮೆಡಿಕಲ್‌ ಕಾಲೇಜಿಗೆ ಹೋಗಿ ಎಂದು ಸೂಚಿಸಿದ್ದಾರೆ. ಅದರಂತೆ, ದುರ್ಗೇಶ್‌ ಪಾಂಡೆ ಅವರನ್ನು ಅಂಬಿಕಾಪುರ ಮೆಡಿಕಲ್‌ ಕಾಲೇಜಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ, ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ರಕ್ತಸ್ರಾವವನ್ನು ನಿಲ್ಲಿಸಿದ್ದಾರೆ. ಸದ್ಯ, ದುರ್ಗೇಶ್‌ ಪಾಂಡೆ ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Mamata Banerjee: 15 ದಿನಗಳಲ್ಲೇ ಮೋದಿ ಸರ್ಕಾರ ಪತನ; ಸ್ಫೋಟಕ ಭವಿಷ್ಯ ನುಡಿದ ಮಮತಾ ಬ್ಯಾನರ್ಜಿ!

Exit mobile version