ಶಿವಮೊಗ್ಗ: ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಇದನ್ನು ಬಹಿರಂಗಪಡಿಸಿದರು.
ಎಂಎಲ್‌ಸಿ ಸ್ಥಾನಕ್ಕೂ, ಬಿಜೆಪಿಗೂ ರಾಜೀನಾಮೆ ನೀಡುತ್ತಿದ್ದೇನೆ. ಇದು ಟಿಕೆಟ್‌ಗೋಸ್ಕರ ನೀಡುತ್ತಿರುವ ರಾಜೀನಾಮೆ ಅಲ್ಲ. ನಾನು ಹುಟ್ಟಿ ಬೆಳೆದ ಶಿವಮೊಗ್ಗ ನಗರದ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ಪಕ್ಷದಲ್ಲಿ ಅವಕಾಶ ಸಿಗದಿದ್ದಾಗ, ಅವಕಾಶಕ್ಕಾಗಿ ಇನ್ನೊಂದು ದ್ವಾರ ತೆರೆಯುತ್ತಿದ್ದೇನೆ. ಯಾವ ಪಕ್ಷದಿಂದ ಸ್ಪರ್ಧೆ ಎಂದು ಸಂಜೆ ತಿಳಿಸಲಿದ್ದೇನೆ ಎಂದು ಅವರು ಹೇಳಿದ್ದಾರೆ.
ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದೆ. ಅದರಂತೆ ಇವತ್ತು ರಾಜೀನಾಮೆ ಸಲ್ಲಿಸುತ್ತೇನೆ. ಸಭಾಪತಿಯವರಲ್ಲಿ ಸಮಯ ನಿಗದಿ ಮಾಡಿದ್ದೇನೆ. ಮಧ್ಯಾಹ್ನ ಸಮಯ ಸಭಾಪತಿ ನಿಗದಿಪಡಿಸಿದ್ದಾರೆ. ಪದವೀಧರ ಕ್ಷೇತ್ರದ ಮತದಾರರ ಪರವಾಗಿ ಶಕ್ತಿ ಮೀರಿ ಮೇಲ್ಮನೆಯಲ್ಲಿ ಪ್ರಸ್ತಾಪ ಮಾಡಿದ್ದೇನೆ. ನಿಗದಿತ ಫಲಿತಾಂಶ ಸಿಗದಿದ್ದಕ್ಕೆ ವಿಧಾನಸಭೆ ಪ್ರವೇಶ ಬಯಸಿದ್ದೇನೆ. ವಿಧಾನಸಭೆಯಲ್ಲಿ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಲು ಸಾಧ್ಯವಿದೆ. ದುಡಿಯುವ ವರ್ಗದ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಆಗುತ್ತಿಲ್ಲ. ಅವರ ಧ್ವನಿಯಾಗಿ ವಿಧಾನಸಭೆ ಪ್ರವೇಶ ಬಯಸಿದ್ದೇನೆ. ಆ ಹಿನ್ನೆಲೆಯಲ್ಲಿ ನಾಳೆ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ಆಯನೂರು ಹೇಳಿದರು.
ಶಿವಮೊಗ್ಗದಲ್ಲಿ ಅಶಾಂತಿ ಮನೆ ಮಾಡಿದೆ. ಹೆಚ್ಚುತ್ತಿರುವ ವೈಷಮ್ಯ ತಿಳಿಗೊಳಿಸಲು ಘೋಷಣೆ ಮಾಡಿದ್ದೆ. ಆ ನಂತರ ಕೆಲವರ ನಾಲಿಗೆ ನಿಯಂತ್ರಣ ಬಂದಿದೆ. ನನ್ನ ನಡೆಗೆ ಶಿವಮೊಗ್ಗ ಜನತೆಯ ಬೆಂಬಲ ಸಿಕ್ಕಿದೆ. ಶಿವಮೊಗ್ಗದಲ್ಲಿ ಅಭಿವೃದ್ಧಿ ಆಗಿದ್ದರೂ ಕೈಗಾರಿಕೆ ಬಂದಿಲ್ಲ. ಶಿವಮೊಗ್ಗದ ಘನತೆಗೆ ಕಪ್ಪು ಚುಕ್ಕೆ ಬಂದಿದ್ದು ಅಶಾಂತಿ ಮನೆ ಮಾಡಿದೆ. ನಮ್ಮೂರಿನ ಯುವಕರು ಹೊಟ್ಟೆಪಾಡಿಗೆ ಬೇರೆ ಕಡೆ ಹೋಗಬೇಕಾಗಿದೆ. ಗಲಭೆ ನಿಯಂತ್ರಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಆ ಹಿನ್ನೆಲೆಯಲ್ಲಿ ಸ್ಪರ್ಧೆ ನಿರ್ಧಾರ ಮಾಡಿದ್ದೇನೆ ಎಂದರು.
ನಾನು ಕುಬೇರರ, ಲಕ್ಷ್ಮಿ ಪುತ್ರರ ಎದುರಿಗೆ ಸ್ಪರ್ಧೆ ಮಾಡುತ್ತಿದ್ದೇನೆ ಎಂಬ ಅರಿವು ನನಗಿದೆ. ಆದರೆ ಶಿವಮೊಗ್ಗದ ಬಡ ಜನರ ಮೇಲೆ ನನಗೆ ನಂಬಿಕೆ ಇದೆ. ಗೆಲ್ಲಿಸುವ ಜವಾಬ್ದಾರಿ ಜನರದ್ದು. ಯಾವುದೇ ಹಣದ ಸಹಾಯವಿಲ್ಲದೆ, ಜಾತಿರಹಿತ ಸ್ಪರ್ಧೆ ಮಾಡುತ್ತೇನೆ. ಪದವೀಧರ ಕ್ಷೇತ್ರದ ಎಲ್ಲ ಪ್ರತಿಭಾವಂತರಿಗೆ ನಮನ ಸಲ್ಲಿಸುತ್ತೇನೆ. ನಾನು ಪಕ್ಷೇತರನಾಗಿ ಅಲ್ಲ, ಪಕ್ಷದಿಂದಲೇ ಸ್ಪರ್ಧಿಸುತ್ತೇನೆ. ತೆನೆ ಹೊರುತ್ತೇನೋ, ಶಿವಮೊಗ್ಗ ಜನತೆಯ ಜವಾಬ್ದಾರಿ ಹೊರುತ್ತೇನೋ ಸಂಜೆ ಗೊತ್ತಾಗುತ್ತದೆ. ಅದರ ನಿರ್ಧಾರ ಮಧ್ಯಾಹ್ನ ಆಗುತ್ತದೆ. ಸಂಬಂಧಪಟ್ಟ ನಾಯಕರೊಂದಿಗೆ ಚರ್ಚಿಸಿ ಹೇಳುತ್ತೇನೆ ಎಂದು ಅವರು ಹೇಳಿದರು.
ನಾನು ಹುಬ್ಬಳ್ಳಿಯಿಂದ ಪ್ರಯಾಣ ಬೆಳೆಸುವಾಗ ಸಂಬಂಧಿಸಿದ ನಾಯಕರೊಂದಿಗೆ ಮಾತನಾಡಲಿದ್ದೇನೆ. ಈಗಾಗಲೇ ನನ್ನ ಟಿಕೆಟ್ ಘೋಷಣೆ ಆಗಬೇಕಿತ್ತು. ರಾಜೀನಾಮೆ ಸ್ವೀಕೃತ ನಂತರವೇ ಬೇರೆ ಚಿಹ್ನೆಯಡಿ ನಾಮಪತ್ರ ಸಲ್ಲಿಸಬೇಕಾಗುತ್ತದೆ. ಪಕ್ಷಾಂತರ ಕಾಯಿದೆ ತೊಡಕಾಗಬಾರದೆಂದು ಇವತ್ತು ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದರು.
ಅಮಾವಾಸ್ಯೆಯನ್ನು ನಾನು ಬಹಳ ಪ್ರೀತಿಸ್ತೇನೆ. ಯಾಕಂದರೆ ನಾನು ಹುಟ್ಟಿದ್ದೇ ದೀಪಾವಳಿಯ ಅಮವಾಸ್ಯೆ ದಿನ. ಅಮಾವಾಸ್ಯೆ ಮುಗಿತಾ ಹೋದಂತೆ ಚಂದ್ರ ಬೆಳಗುತ್ತ ಹೋದಂತೆ ನನ್ನ ಜೀವನದಲ್ಲೂ ಬೆಳವಣಿಗೆ ಆಗಿದೆ. ನಾನು ಹುಟ್ಟಿದ್ದು ಅಮಾವಾಸ್ಯೆ ದಿನ, ಆದರೆ ಬೇರೆಯವರಿಗೆ ಅಮಾವಾಸ್ಯೆ ಕಾಡಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ವರ್ಷಾಂತಿಕ ದಿನವೇ ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಿದರು. ಈಶ್ವರಪ್ಪ ಅವರಿಗೆ ಆ ನೋವು ಕಾಡುತ್ತಿತ್ತಾ? ಎಂದು ಅವರು ಪ್ರಶ್ನಿಸಿದರು. ಈಶ್ವರಪ್ಪ ನನ್ನನ್ನು ಯಾವ ಲೆಕ್ಕ ಅಂದಿದ್ದಕ್ಕೆ ಪಂಥಾಹ್ವಾನ ನೀಡಿದ್ದೇನೆ. ಅವರು ಸ್ಪರ್ಧೆಗೆ ನಿಂತರೆ ಒಳ್ಳೆಯದು. ಅವರಿಗೆ ಲೆಕ್ಕ ಕೊಡುವುದು ಬಹಳ ಇದೆ ಎಂದರು.
ವಿಜಯೇಂದ್ರ ಅವರು ನಾಮಿನೇಷನ್‌ಗೆ ಫೋನ್ ಮಾಡಿ ಹೇಳಿದರು. ಆದರೆ ಬರಲು ಸಾಧ್ಯವಾಗುತ್ತಿಲ್ಲ ಎಂದಿದ್ದೇನೆ. ಅವರಿಗೆ ಹಾರೈಸಲು ನಾನು ದೊಡ್ಡ ವ್ಯಕ್ತಿಯೂ ಅಲ್ಲ, ಸನ್ಯಾಸಿಯೂ ಅಲ್ಲ. ನಾನು ಸಂಸದನಾಗಿದ್ದಾಗ ಜೆ ಪಿ ನಡ್ಡಾ ಆರೋಗ್ಯ ಸಚಿವರಾಗಿದ್ದರು. ಅವರ ಪರಿಚಯ ಚೆನ್ನಾಗಿದೆ. ಆದ್ರೆ ನನ್ನನ್ನು ಅವರು ಸಂಪರ್ಕಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದರು ಎಂದು ನುಡಿದರು.
ಬಿಜೆಪಿ ಪಕ್ಷದ ಋಣ ನನ್ನ ಮೇಲಿದೆ. ನನ್ನನ್ನು ಬೆಳೆಸಿದ ಯಡಿಯೂರಪ್ಪ ಅವರ ಸಂಕಷ್ಟ ಕಾಲದಲ್ಲಿ ಅವರಿಗೆ ಬೆಂಬಲ ನೀಡಿದ ಏಕೈಕ ವ್ಯಕ್ತಿ ನಾನು. ಪಕ್ಷದ ವಿರುದ್ಧವಾಗಿ ನಾನು ಎಂದೂ ನಡೆದುಕೊಂಡಿಲ್ಲ. ನನಗೆ ಯಾವುದೇ ಪತ್ರ ಬಿಜೆಪಿಯಿಂದ ಬಂದಿಲ್ಲ. ಶೋಕಾಸ್ ನೋಟಿಸ್‌ಗೆ ಚಂದವಾಗಿ ಉತ್ತರ ನೀಡುವ ಕಾರ್ಮಿಕ ನಾಯಕ ನಾನು. ನಾನು ಯಾವ ಘೋರ ತಪ್ಪು ಮಾಡಿದ್ದೇನೆ? ನನ್ನ ಹೆಸರಿಗೆ ಪತ್ರ ಬರೆದು ಯಾರಾದರೂ ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಶೋಕಾಸ್ ನೋಟಿಸ್ ಕೊಟ್ಟರೆ ಅವರಿಗೆ ಪ್ರತಿ ಶೋಕಾಸ್ ನೋಟಿಸ್ ಕೊಡ್ತೇನೆ. ಬಿಜೆಪಿ ನಾಯಕರು ಒಪ್ಪುವಂತಹ ಉತ್ತರ ಕೊಡುತ್ತೇನೆ ಎಂದರು.
ಇದನ್ನೂ ಓದಿ: Karnataka Elections 2023 : ಶೆಟ್ಟರೇ ಧ್ವಜ ಬದಲಿಸಿದ ಕೂಡಲೇ ನಿಮ್ಮ ವಿಚಾರಧಾರೆಯೂ ಬದಲಾಗುತ್ತಾ?; ಶೋಭಾ ಕರಂದ್ಲಾಜೆ ಪ್ರಶ್ನೆ