ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದಿರುವುದರಿಂದ ಸಿಡಿದೆದ್ದಿರುವ ಬಿಜೆಪಿಯ ಹಿರಿಯ ನಾಯಕ ಜಗದೀಶ್ ಶೆಟ್ಟರ್ (Jagadish shettar) ಅವರು ಇಂದು ಸ್ಪೀಕರ್ ವಿಶ್ವೇಶ್ವರ ಕಾಗೇರಿ ಅವರ ನಿವಾಸಕ್ಕೆ ಭೇಟಿ ನೀಡಿ ರಾಜೀನಾಮೆ ನೀಡಲಿದ್ದಾರೆ. ಪಕ್ಷದೊಳಗೆ ನನ್ನನ್ನು ಹಾಗೂ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಲು ಷಡ್ಯಂತ್ರ ನಡೆಯುತ್ತಿದ್ದು, ಎಲ್ಲವನ್ನೂ ಒಂದೊಂದಾಗಿ ಬಿಚ್ಚಿಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಈ ಕುರಿತು ಹೇಳಿಕೆ ನೀಡಿದ್ದಾರೆ. ಪಕ್ಷದೊಳಗೆ ನನ್ನನ್ನು ಹಾಗೂ ಹಿರಿಯ ನಾಯಕರನ್ನು ಮುಗಿಸಲು ಏನೋ ಒಂದು ಷಡ್ಯಂತ್ರ ನಡೆಯುತ್ತಿದೆ. ಯಡಿಯೂರಪ್ಪ ಚುನಾವಣಾ ರಾಜಕೀಯ ಬಿಟ್ಟರು. ಈಶ್ವರಪ್ಪ ಇತ್ತೀಚೆಗೆ ನಿವೃತ್ತಿ ಘೋಷಿಸಿದರು. ಈಗ ನಾನೇ ಸೀನಿಯರ್ ಆಗಿದ್ದು, ಹೀಗಾಗಿ ನನ್ನನ್ನು ಮೂಲೆಗುಂಪು ಮಾಡಲು ಯತ್ನ ನಡೆಯುತ್ತಿದೆ. ಎಲ್ಲಾ ಇವತ್ತೇ ಮುಗಿಸುವುದಿಲ್ಲ, ಕಾಯ್ದು ನೋಡಿ. ಯಾರ್ಯಾರು ತೊಂದರೆ ಕೊಟ್ಟರು ಎಂಬುದನ್ನು ಒಂದೊಂದಾಗಿ ಹೇಳುತ್ತೇನೆ. ತೆರೆ ಮೇಲೆ ಒಂದೊಂದಾಗಿ ಬರುತ್ತೆ ಕಾಯಿರಿ ಎಂದು ಶೆಟ್ಟರ್ ಹೇಳಿದ್ದಾರೆ.
ಮೋದಿಯವರ ನಾಯಕತ್ವದಲ್ಲಿ ದೇಶ ಬಲಾಢ್ಯವಾಗುತ್ತಿದೆ. ಆದರೆ ಅವರ ಗಮನಕ್ಕೆ ಬರದೆ ಪಕ್ಷದೊಳಗೆ ಕೆಲವು ಕೆಲಸ ಕಾರ್ಯ ನಡೆಯುತ್ತಿವೆ ಅಂತ ಬೇಸರ ಆಗುತ್ತಿದೆ. ಬಹಳ ನೊಂದು ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುತ್ತಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ, ಮುಂದಿನ ತೀರ್ಮಾನ ನಂತರ ತೆಗೆದುಕೊಳ್ಳುತ್ತೇನೆ. ಬಿಜೆಪಿ ಸದಸ್ಯ ಸ್ಥಾನಕ್ಕೆ ರಾಜಿನಾಮೆ ಕೊಡುತ್ತೇನೆ ಎಂದಿದ್ದಾರೆ.
ನಾಳೆಯಿಂದ ಎಲ್ಲ ಅತೃಪ್ತರ ಜೊತೆ ಮಾತಾಡ್ತೇನೆ. ಕಿವಿ ತುಂಬುವವರಿಂದಾಗಿ ಕಳೆದ ಮೂರು ತಿಂಗಳಿಂದ ತೊಂದರೆ ಆಗಿದೆ. ಕೆಲವೇ ಕೆಲವು ವ್ಯಕ್ತಿಗಳಿಂದ ಪಾರ್ಟಿ ಹಾಳು ಮಾಡುವ ಕೆಲಸ ಆಗುತ್ತಿದೆ. ಕಟ್ಟಿದ ಮನೆ ಬಿಟ್ಟು ಹೋಗುವ ಪರಿಸ್ಥಿತಿ ಬಂದಿದೆ. ಯಾರೆಲ್ಲಾ ಷಡ್ಯಂತ್ರ ಮಾಡಿದರು ಎಂಬುದನ್ನು ನಾಳೆಯಿಂದ ಹೇಳುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: Karnataka Election 2023: ಬಿಜೆಪಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗುಡ್‌ಬೈ
ಬೆಳಗ್ಗೆ 10:30ಕ್ಕೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ಶೆಟ್ಟರ್ ನಿರ್ಧರಿಸಿದ್ದು, ಹುಬ್ಬಳ್ಳಿ ನಿವಾಸದಿಂದ 8:30ಕ್ಕೆ ಶಿರಸಿಗೆ ತೆರಳಿ ಸ್ಪೀಕರ್ ಕಾಗೇರಿ ಅವರಿಗೆ ರಾಜಿನಾಮೆ ಪತ್ರ ನೀಡಲಿದ್ದಾರೆ. ನಂತರ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ, ಬೆಂಬಲಿಗರ ಜೊತೆ ಚರ್ಚಿಸಿ ಮುಂದಿನ ನಡೆಯ ಬಗ್ಗೆ ತೀರ್ಮಾನಿಸಲಿದ್ದಾರೆ.
ಕಾಂಗ್ರೆಸ್ ಸೇರ್ತಾರಾ?
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರುವ ಸಾಧ್ಯತೆಯೂ ಇದೆ. ಕಾಂಗ್ರೆಸ್‌ನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ಬೀಗರಾಗಿರುವ ಶೆಟ್ಟರ್ ಅವರು ಕಾಂಗ್ರೆಸ್ ಸೇರಲು ಮನ ಮಾಡಿದರೆ ಶಾಮನೂರು ಮೂಲಕ ಅದು ಸಾಧ್ಯವಾಗಬಹುದು. ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಲಿಂಗಾಯತ ಮತ ಬ್ಯಾಂಕ್ ಹೊಂದಿರುವ ಶೆಟ್ಟರ್ ಅವರ ಬೆಂಬಲಿಗರು ಕೂಡ ಕಾಂಗ್ರೆಸ್ ಸೇರಿಕೊಂಡರೆ ಬಿಜೆಪಿಗೆ ಇಲ್ಲಿ ದೊಡ್ಡ ಶಾಕ್ ಕಾದಿದೆ. ಹುಬ್ಬಳ್ಳಿ- ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಿಂದಲೇ ಮತ್ತೊಮ್ಮೆ ಕಣಕ್ಕೆ ಇಳಿಯುವುದು ಶೆಟ್ಟರ್ ಹಠವಾಗಿದೆ.
ಇದನ್ನೂ ಓದಿ: Karnataka Elections 2023: ಜಗದೀಶ್ ಶೆಟ್ಟರ್‌ಗೆ ಟಿಕೆಟ್ ತಪ್ಪಲು ನಾನು ಕಾರಣ ಅಲ್ಲ; ಸಿಎಂ ಬಸವರಾಜ ಬೊಮ್ಮಾಯಿ