Site icon Vistara News

ವಿಸ್ತಾರ ಸಂಪಾದಕೀಯ: ನನೆಗುದಿಗೆ ಬಿದ್ದ ಪಬ್ಲಿಕ್‌ ಪರೀಕ್ಷೆಗೆ ಮೋಕ್ಷ ಕೊಡಿ, ವಿದ್ಯಾರ್ಥಿಗಳ ಸಂಕಟ ತಪ್ಪಿಸಿ

exam

Karnataka Government Should Resolve The Board Exams Issue In State

ರಾಜ್ಯದಲ್ಲಿ‌ ಮಾರ್ಚ್‌ 11ರಂದು ಆರಂಭವಾಗಿದ್ದು ಮಧ್ಯದಲ್ಲೇ ತಡೆಹಿಡಿಯಲ್ಪಟ್ಟ 5, 8 ಮತ್ತು 9ನೇ ತರಗತಿ ಪಬ್ಲಿಕ್‌ ಪರೀಕ್ಷೆ (Public Exam) ಕುರಿತ ವಿವಾದ ಮತ್ತೆ ನನೆಗುದಿಗೆ ಬಿದ್ದಿದೆ. ಮಾರ್ಚ್‌ 13ರಂದು ಸುಪ್ರೀಂ ಕೋರ್ಟ್‌ (Supreme Court) ಈ ಪರೀಕ್ಷೆಗೆ ತಡೆಯಾಜ್ಞೆ ನೀಡಿ, ಹೈಕೋರ್ಟ್‌ನಲ್ಲಿ (Karnataka High Court) ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಸೂಚಿಸಿತ್ತು. ಆದರೆ, ಹೈಕೋರ್ಟ್‌ನಲ್ಲಿ ಇನ್ನೂ ವಿವಾದ ಇತ್ಯರ್ಥವಾಗಿಲ್ಲ. ಮೂರು ದಿನಗಳ ಕಾಲ ವಿಚಾರಣೆ ನಡೆಸಿದ ಹೈಕೋರ್ಟ್‌ ಈಗ ತೀರ್ಪನ್ನು ಕಾಯ್ದಿರಿಸಿದೆ. ಹೀಗಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಇನ್ನೂ ಗೊಂದಲದಲ್ಲೇ ಇರುವಂತಾಗಿದೆ. ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (Education Department) ನಡೆಸುತ್ತಿರುವ ಈ ಪರೀಕ್ಷೆ ಮಾರ್ಚ್‌ 11ರಂದು ಆರಂಭಗೊಂಡು ಮಾರ್ಚ್‌ 18ಕ್ಕೆ ಮುಗಿಯಬೇಕಾಗಿತ್ತು.

ಹೈಕೋರ್ಟ್‌ನಲ್ಲಿ ಕಳೆದ ಕೆಲವು ದಿನಗಳಿಂದ ವಿಚಾರಣೆ ನಡೆಯುತ್ತಿದೆ. ಶಿಕ್ಷಣ ಇಲಾಖೆಗೆ ಪಬ್ಲಿಕ್‌ ಪರೀಕ್ಷೆ ನಡೆಸುವ ಅಧಿಕಾರವಿಲ್ಲ ಮತ್ತು ಅದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ ಎಂಬ ವಾದವನ್ನು ಖಾಸಗಿ ಶಾಲೆಗಳ ಸಂಘಟನೆ ರುಪ್ಸಾ ವಾದ ಮಂಡಿಸುತ್ತಿದೆ. ರಾಜ್ಯ ಶಿಕ್ಷಣ ಇಲಾಖೆ 5, 8, 9 ಮತ್ತು 11ನೇ ತರಗತಿಗೆ ಈ ಬಾರಿ ಪಬ್ಲಿಕ್‌ ಪರೀಕ್ಷೆ ನಡೆಸಲು 2023ರ ಡಿಸೆಂಬರ್‌ನಲ್ಲೇ ಸುತ್ತೋಲೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಸಂಘಟನೆ ಕೋರ್ಟ್ ಮೆಟ್ಟಲೇರಿತ್ತು. ಹೈಕೋರ್ಟ್‌ನ ಏಕಸದಸ್ಯ ಪೀಠ ಮಾರ್ಚ್‌ 5ರಂದು ಸರ್ಕಾರದ ಸುತ್ತೋಲೆ ರದ್ದುಗೊಳಿಸಿತ್ತು. ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಸರ್ಕಾರ ಮೇಲ್ಮನವಿ ಸಲ್ಲಿಸಿದ ಬಳಿಕ, ಮಾರ್ಚ್‌ 7ರಂದು ವಿಭಾಗೀಯ ಪೀಠವು ತಡೆಯಾಜ್ಞೆಯನ್ನು ತೆರವುಗೊಳಿಸಿತು. ಹೀಗೆ 11ನೇ ತರಗತಿ ಪರೀಕ್ಷೆಗಳು ಆಗಲೇ ನಡೆದು ಮುಕ್ತಾಯವಾಗಿವೆ. 5, 8, 9ನೇ ತರಗತಿ ಪರೀಕ್ಷೆಗಳು ಮಾರ್ಚ್‌ 11ರಂದು ಆರಂಭವಾಗಿದ್ದವು. ನಂತರ ಖಾಸಗಿ ಶಿಕ್ಷಣ ಸಂಸ್ಥೆಗಳು ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ತಂದವು. ಹೀಗೆ ನಡೆಯುತ್ತಾ, ಪಬ್ಲಿಕ್‌ ಪರೀಕ್ಷೆಗಳು ನಡೆಯುತ್ತವೆ, ನಡೆಯುವುದಿಲ್ಲ ಎಂಬ ಕಣ್ಣಾಮುಚ್ಚಾಲೆ ಆಟವನ್ನು, ಗೊಂದಲವನ್ನು ಸೃಷ್ಟಿಸಲಾಗಿದೆ.

ಇದು ನಿಜವಾಗಿಯೂ ಮಕ್ಕಳು, ಶಿಕ್ಷಕರು ಹಾಗೂ ಪೋಷಕರ ಮನಸ್ಥಿತಿಯ ಮೇಲೆ ಮಾಡಬಹುದಾದ ಗೊಂದಲ ಅಷ್ಟಿಷ್ಟಲ್ಲ. ಪಬ್ಲಿಕ್‌ ಪರೀಕ್ಷೆ ಎಂದರೆ ಮಕ್ಕಳು ಹೆಚ್ಚಿನ ಎಚ್ಚರದಿಂದ ಅಧ್ಯಯನ ನಡೆಸುತ್ತಾರೆ. ಹೆಚ್ಚಿನ ಮಟ್ಟದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಪಬ್ಲಿಕ್‌ ಪರೀಕ್ಷೆಗೆ ಸಿದ್ಧವಾಗುವ ಅವರ ಮಾನಸಿಕ ಸ್ಥಿತಿಯೂ ಬೇರೆಯೇ ಇರುತ್ತದೆ. ಅಂಥ ಒತ್ತಡವನ್ನು ಶಿಕ್ಷಕರು, ಹೆತ್ತವರು ಹಾಗೂ ಸಮಾಜ ಸೃಷ್ಟಿಸುತ್ತದೆ. ಇದ್ದಕ್ಕಿದ್ದಂತೆ ಈ ಪರೀಕ್ಷೆ ಇಲ್ಲವೆಂದಾದರೆ, ಅದು ಉಂಟುಮಾಡುವ ಗೊಂದಲ ಬೇರೆಯೇ ತೆರನಾದುದು. ಇದು ಕೆಲವರಲ್ಲಿ ನಿರಾಳತೆಯನ್ನು ತರಬಹುದಾದರೂ, ಅನಪೇಕ್ಷಿತ ಒತ್ತಡ ಸೃಷ್ಟಿಸಿಕೊಂಡೆವಲ್ಲ ಎಂಬ ಭಾವನೆ ಹಲವರಲ್ಲಿ ಮೂಡಬಹುದು. ನಂತರ ಅದೂ ಬದಲಾಗಿ, ಪಬ್ಲಿಕ್‌ ಪರೀಕ್ಷೆಯಿಲ್ಲ ಎಂದು ನಿರಾಳವಾಗಿದ್ದವರಿಗೆ, ಇದ್ದಕ್ಕಿದ್ದಂತೆ ಪಬ್ಲಿಕ್‌ ಪರೀಕ್ಷೆ ಖಚಿತ ಎಂದಾಗುವಾಗ ಮೂಡಬಹುದಾದ ದಿಡೀರ್‌ ಒತ್ತಡ ಹೇಗಿರಬಹುದು? ಅದು ಸೃಷ್ಟಿಸುವ ಆತಂಕವೇ ವಿದ್ಯಾರ್ಥಿಗಳನ್ನು ಹತಾಶರಾಗಿಸಬಹುದು.

ಇದನ್ನೂ ಓದಿ: UPSC Prelims: ಚುನಾವಣೆ ಹಿನ್ನೆಲೆ ಯುಪಿಎಸ್‌ಸಿ ಪರೀಕ್ಷೆ ಮುಂದೂಡಿಕೆ; ಇಲ್ಲಿದೆ ಹೊಸ ದಿನಾಂಕ

ಪಬ್ಲಿಕ್‌ ಪರೀಕ್ಷೆ ಬೇಕೋ ಬೇಡವೋ ಎಂಬ ಬಗ್ಗೆಯೇ ಗಂಭೀರ ಚರ್ಚೆ ನಡೆಸುವುದು ಸಾಧ್ಯ. 5ನೇ ತರಗತಿಯಲ್ಲಿ ಪಬ್ಲಿಕ್‌ ಪರೀಕ್ಷೆಯ ಅಗತ್ಯವಿಲ್ಲ ಎಂದು ಶಿಕ್ಷಣ ತಜ್ಞರಲ್ಲದವರೂ ಹೇಳಬಹುದು. ಆದರೆ ಮೇಲಿನ ಹಂತಗಳಲ್ಲಿ, ಪಬ್ಲಿಕ್‌ ಪರೀಕ್ಷೆಗಳು ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಹಾಗೂ ಹೆಚ್ಚಿನ ಬೋಧನಾ ಕೌಶಲಗಳನ್ನು ಅಳವಡಿಸಲು ಇಲಾಖೆಗೆ ನೆರವಾಗುತ್ತವೆ ಎನ್ನಲಾಗುತ್ತದೆ. ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವನ್ನು ಪರಿಶೀಲಿಸಿ ಉತ್ತೀರ್ಣತೆ- ಅನುತ್ತೀರ್ಣತೆಯನ್ನೂ ಘೋಷಿಸಲಾಗುತ್ತದೆ. ಇದು ಕಲಿಕೆಯಲ್ಲಿ ಹೆಚ್ಚಿನ ಗಂಭೀರತೆಯನ್ನು ತರಬಹುದಾಗಿದೆ. ಇದುವರೆಗೆ 9ನೇ ತರಗತಿಯವರೆಗೂ ಯಾವುದೇ ಅನುತ್ತೀರ್ಣತೆಯ ಸಾಧ್ಯತೆ ಇಲ್ಲವಾಗಿದ್ದರಿಂದ, ಕಲಿಕೆಯ ಗಂಭೀರತೆಯನ್ನು ಪರಿಶೀಲಿಸುವ ಸಾಧ್ಯತೆಯೇ ಇರಲಿಲ್ಲ. ಶಿಕ್ಷಣ ಎಂದರೆ ಒಂದು ಮಟ್ಟದ ಮೌಲ್ಯಮಾಪನ ಇರುವುದು ಅಗತ್ಯವೇ ಎಂದು ಒಪ್ಪುವವರು ಹೆಚ್ಚು ಇದ್ದಾರೆ. ನೂತನ ಶಿಕ್ಷಣ ನೀತಿಯೂ ಮಹತ್ವಾಕಾಂಕ್ಷೆಯದ್ದು, ಅದೇ ರೀತಿ ಪಬ್ಲಿಕ್‌ ಪರೀಕ್ಷೆಗಳೂ ಮಹತ್ವಾಕಾಂಕ್ಷೆಯದ್ದು. ಅದೆಲ್ಲ ಸರಿ, ಆದರೆ ಕ್ಷಣಕ್ಕೊಂದು ನಿರ್ಧಾರದಿಂದ ಗೊಂದಲ ಮಾತ್ರ ಶತಸ್ಸಿದ್ಧ. ಇದು ಮಕ್ಕಳ ಮನಸ್ಸಿನ ಮೇಲೆ ಮಾಡಬಹುದಾದ ದುಷ್ಪರಿಣಾಮ ಊಹಾತೀತ. ಶೈಕ್ಷಣಿಕ ವರ್ಷ ಇದೀಗ ಮುಗಿದಿದೆ. ಎಲ್ಲರೂ ಈ ವಿಚಾರದಲ್ಲಿ ಶೀಘ್ರ ಯಾವುದಾದರೊಂದು ತೀರ್ಮಾನ ತೆಗೆದುಕೊಂಡು, ಒಟ್ಟಾರೆ ಶಿಕ್ಷಣ ವ್ಯವಸ್ಥೆಯಲ್ಲಿ ಮೂಡಿರುವ ಅವ್ಯವಸ್ಥೆಯನ್ನು ನಿವಾರಿಸಬೇಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version