Site icon Vistara News

Karnataka Media Academy: ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆಯಾಗಿ ಹಿರಿಯ ಪತ್ರಕರ್ತೆ ಆಯೇಷಾ ಖಾನಂ ನೇಮಕ

Karnataka Media Academy

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಹಿರಿಯ ಪತ್ರಕರ್ತೆ ಆಯೇಷಾ ಖಾನಂ (Ayesha Khanum) ಅವರನ್ನು ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ. ಅಕಾಡೆಮಿ ಸದಸ್ಯರಾಗಿ ಹಿರಿಯ ಪತ್ರಕರ್ತರಾದ ಎಂ.ಎನ್‌. ಅಹೋಬಲಪತಿ, ಕೆ.ನಿಂಗಪ್ಪ, ಛಾಯಾಗ್ರಾಹಕ ಕೆ.ವೆಂಕಟೇಶ್ ಅವರು ನೇಮಕವಾಗಿದ್ದಾರೆ. ಅಧ್ಯಕ್ಷರು, ಸದಸ್ಯರ ನೇಮಕದಲ್ಲಿ ಸಾಮಾಜಿಕ ನ್ಯಾಯದ ಜತೆಗೆ ಸೇವಾ ಹಿರಿತನ, ಅರ್ಹತೆ, ಸಾಮರ್ಥ್ಯಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡಿದ್ದು, ಪತ್ರಿಕಾ ಛಾಯಾಗ್ರಾಹಕರನ್ನೂ ಮಾಧ್ಯಮ‌ ಅಕಾಡೆಮಿ ಸದಸ್ಯ ಸ್ಥಾನಕ್ಕೆ ಪರಿಗಣಿಸಿರುವುದೂ ಕೂಡ ಇದೇ ಮೊದಲಾಗಿದೆ.

ಈವರೆಗೂ ಮಾಧ್ಯಮ ಅಕಾಡೆಮಿಗೆ ಅಲ್ಪಸಂಖ್ಯಾತ ಸಮುದಾಯದವರು ಮತ್ತು ಮಹಿಳೆಯನ್ನು ಯಾವ ಮುಖ್ಯಮಂತ್ರಿಗಳೂ ನೇಮಿಸಿರಲಿಲ್ಲ. ಈ ಕೊರತೆಯನ್ನು ಸಿಎಂ ಸಿದ್ದರಾಮಯ್ಯ ನೀಗಿಸಿದಂತಾಗಿದೆ. ಜತೆಗೆ ಆಯೇಷಾ ಅವರು ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯವರಾಗಿರುವುದರಿಂದ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಲಿಂಗ ಸಮಾನತೆಗೂ ಮಾನ್ಯತೆ ಕೊಟ್ಟಂತಾಗಿದೆ.

ಹಾಗೆಯೇ ಜನಪರ ಹೋರಾಟದಿಂದಲೇ ಪತ್ರಿಕೋದ್ಯಮಕ್ಕೆ ಪ್ರವೇಶಿಸಿ ಸಾಮಾಜಿಕ ಕಾಳಜಿಗಳನ್ನಿಟ್ಟುಕೊಂಡು ವೃತ್ತಿಯಲ್ಲಿ ತೊಡಗಿರುವ ಚಿತ್ರದುರ್ಗದ ಅಹೋಬಲಪತಿ ಅವರ ಜೊತೆಗೆ ಬೆಂಗಳೂರಿನ ಪತ್ರಿಕಾ ಛಾಯಾಗ್ರಾಹಕರಾದ ಕೆ.ವೆಂಕಟೇಶ್ ಮತ್ತು ಕೊಪ್ಪಳದ ಹಿರಿಯ ಪತ್ರಕರ್ತರಾದ ಕೆ.ನಿಂಗಜ್ಜ ಅವರನ್ನು ಅಕಾಡೆಮಿ ಸದಸ್ಯರನ್ನಾಗಿ ನೇಮಿಸಲಾಗಿದ್ದು. ಇಲ್ಲೂ ಕೂಡ ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯಕ್ಕೆ ಮನ್ನಣೆ ನೀಡಲಾಗಿದೆ.

ಈ ಬಾರಿ ಯಾರನ್ನು ನೇಮಿಸಬೇಕು ಎನ್ನುವ ಚರ್ಚೆ ಬಂದಾಗ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಆಯೇಷಾ ಖಾನಂ ಅವರ ಹೆಸರನ್ನು ಸೂಚಿಸಿ ಇವರನ್ನೇ ಮಾಡುವುದು ಸೂಕ್ತ ಎನ್ನುವ ಅಭಿಪ್ರಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದರು. ಈ ಅಭಿಪ್ರಾಯಕ್ಕೆ ಸಂಪೂರ್ಣ ಮನ್ನಣೆ ನೀಡಿದ ಮುಖ್ಯಮಂತ್ರಿಗಳು ಇತರೆ ಹಲವು ಅರ್ಹರ ಹೆಸರುಗಳ ನಡುವೆ ಆಯೇಷಾ ಅವರ ಹೆಸರನ್ನು ಅಂತಿಮ ಮಾಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ | Pension Under NPS:‌ ಎನ್‌ಪಿಎಸ್‌ ಅಡಿಯಲ್ಲಿ ಕೇಂದ್ರ ನೌಕರರಿಗೆ ವೇತನದ ಅರ್ಧದಷ್ಟು ಪಿಂಚಣಿ; ಶೀಘ್ರವೇ ಆದೇಶ?

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಆಯೇಷಾ ಖಾನಂ ಅವರು 26 ವರ್ಷ ಸೇವೆ ಸಲ್ಲಿಸಿದ್ದು, ಈ ಹಿಂದೆ ಏಷ್ಯನ್ ಏಜ್, ಆಜ್‌ತಕ್‌, ಸ್ಟಾರ್ ನ್ಯೂಸ್‌ನಲ್ಲಿ ಕೆಲಸ ಮಾಡಿದ್ದಾರೆ. ಇವರು ಡಿಡಿ ನ್ಯೂಸ್ ದಕ್ಷಿಣ ಭಾರತದ ಮುಖ್ಯ ವರದಿಗಾರ್ತಿ, ಸ್ಟಾರ್ ನ್ಯೂಸ್ ಪ್ರಾದೇಶಿಕ ಸುದ್ದಿ ವರದಿಗಾರ್ತಿ (ದಕ್ಷಿಣ), ಆಜ್ ತಕ್ ಪ್ರಧಾನ ವರದಿಗಾರ್ತಿ, ಏಷ್ಯನ್ ಏಜ್ ಶಿಕ್ಷಣ ವರದಿಗಾರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.

ಇವರ ಸೇವೆಗೆ ಹಲವು ಪ್ರಶಸ್ತಿಗಳು ಸಂದಿದ್ದು, ನಿಷ್ಪಕ್ಷಪಾತ ವರದಿಗಾಗಿ ಟಿಪ್ಪು ಸುಲ್ತಾನ್ ಪ್ರಶಸ್ತಿ, ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ವರ್ಷದ ಅತ್ಯುತ್ತಮ ವರದಿಗಾರ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ. ಹಿರಿಯ ಪತ್ರಕರ್ತೆ ಮತ್ತು ಸುದ್ದಿ ನಿರೂಪಕಿಯಾಗಿರುವ ಆಯೇಷಾ ಖಾನಂ ಅವರು ದೂರದರ್ಶನ ದಕ್ಷಿಣ ಭಾರತದ ಮುಖ್ಯ ವರದಿಗಾರರಾಗಿದ್ದರು. ಜು.9ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Exit mobile version