ಚಾಮರಾಜನಗರ: ಕೃಷ್ಣರಾಜಸಾಗರ ಅಣೆಕಟ್ಟು (KRS Dam) ಹಾಗು ಕಬಿನಿ ಜಲಾಶಯಗಳಿಂದ (Kabini Dam) ಅಧಿಕ ನೀರು ಬಿಡುಗಡೆ (Water release) ಮಾಡಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ (Flood Situation in Kaveri River) ಉಂಟಾಗಿದ್ದು, ಚಾಮರಾಜನಗರ (Chamarajanagar) ಜಿಲ್ಲೆ ಕೊಳ್ಳೇಗಾಲ ತಾಲೂಕಿನ 9 ಗ್ರಾಮಗಳು ಜಲಾವೃತವಾಗಿವೆ.
ದಾಸನಪುರ, ಹರಳೆ, ಅಗ್ರಹಾರ, ಹಳೆ ಹಂಪಾಪುರ, ಹೊಸ ಹಂಪಾಪುರ, ಮುಳ್ಳೂರು, ಹಳೆಅಣಗಳ್ಳಿ, ಯಡಕುರಿಯ, ಧನಗೆರೆ, ಸರಗೂರು ಗ್ರಾಮಗಳು ಜಲಾವೃತವಾಗಿವೆ. ಈ 9 ಗ್ರಾಮಗಳಿಗೆ ತೆರಳದಂತೆ ಬ್ಯಾರಿಕೇಡ್ ಅಳವಡಿಸಿ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ದಾಸನಪುರ, ಹಳೇ ಅಣಗಳ್ಳಿ ಗ್ರಾಮಸ್ಥರನ್ನು ಕೊಳ್ಳೇಗಾಲದ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಇಲ್ಲಿನ ಮನೆ, ಜಮೀನುಗಳಿಗೆ ನೀರು ನುಗ್ಗಿದೆ. 9 ಗ್ರಾಮಗಳಲ್ಲಿ ಇಂದು ಶಾಲಾಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹಾಗು ಇತರ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಗ್ರಾಮಸ್ಥರು ನೀರಿನ ಬಳಿ ಹೋಗದಂತೆ ಎಚ್ಚರಿಕೆ ವಹಿಸಲು ಸಿಬ್ಬಂದಿ ನಿಯೋಜಿಸಲಾಗಿದೆ. ಸಂಭವನೀಯ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದ್ದು, ದೋಣಿಗಳು ಸೇರಿದಂತೆ ರಕ್ಷಣಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಹೆಚ್ಚಿದ ಕಬಿನಿ ಜಲಾಶಯ ಒಳಹರಿವು
ಕೇರಳದ ವೈನಾಡಿನಲ್ಲಿ ಮಳೆ ಆರ್ಭಟ ಮುಂದುವರಿದ ಪರಿಣಾಮ ಕಬಿನಿ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಹೆಚ್‌ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಜಲಾಶಯದ ಒಳ ಹರಿವು ಹೆಚ್ಚಿದ್ದು, ಇದರಿಂದ ಹೊರ ಹರಿವಿನಲ್ಲೂ ಹೆಚ್ಚಳವಾಗಿದೆ. ಜಲಾಶಯದ ಗರಿಷ್ಟ ನೀರಿನ ಮಟ್ಟ 2284 ಅಡಿ ಹಾಗೂ ಇಂದಿನ ನೀರಿನ ಮಟ್ಟ 2281.59 ಅಡಿ. ಕಪಿಲಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಉಂಟಾಗಿದ್ದು, ನದಿ ಪಾತ್ರದ ಜನತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಕಬಿನಿ, ಕೆಆರ್‌ಎಸ್ ಜಲಾಶಯದಿಂದ ಭಾರಿ ಪ್ರಮಾಣದ ನೀರು ನದಿಗೆ ಬಿಟ್ಟ ಹಿನ್ನೆಲೆಯಲ್ಲಿ ತಲಕಾಡಿನ ಹೆಮ್ಮಿಗೆ ಸೇತುವೆ ಹಾಗೂ ಸುತ್ತೂರು ಸೇತುವೆಗಳು ಮುಳುಗಡೆಯಾಗಿವೆ. ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ತಾಲ್ಲೂಕಿನ ಹೆಮ್ಮಿಗೆ ಸೇತುವೆ ಮುಳುಗಡೆಯಿಂದ ತಿ. ನರಸೀಪುರ- ತಲಕಾಡು ಸಂಚಾರ ಬಂದ್ ಆಗಿದೆ. ಸೇತುವೆ ಮೇಲೆ ಎರಡು ಅಡಿಗಳಷ್ಟು ನೀರು ಹರಿಯುತ್ತಿದೆ. ಒಂದೇ ವಾರದ ಅಂತರದಲ್ಲಿ ಎರಡು ಬಾರಿ ಸೇತುವೆ ಮುಳುಗಡೆಯಾಗಿದೆ. ಸೇತುವೆಯ ಎರಡು ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಮೈಸೂರು ತಾಲ್ಲೂಕಿನ ವರುಣ ಕ್ಷೇತ್ರ ವ್ಯಾಪ್ತಿಯ ಸುತ್ತೂರು ಸೇತುವೆ ಮುಳುಗಡೆಯಿಂದ ಮೈಸೂರು ಸುತ್ತೂರು ಮಾರ್ಗದ ಸಂಚಾರ ಬಂದ್ ಆಗಿದೆ. ಸುತ್ತೂರು ಸೇರಿದಂತೆ ಅನೇಕ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಒಂದೇ ವಾರದಲ್ಲಿ ಎರಡು ಬಾರಿ ಸುತ್ತೂರು ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಅಕ್ಕ ಪಕ್ಕದ ತೆಂಗಿನ ತೋಟಕ್ಕೂ ನೀರು ನುಗ್ಗಿದೆ.
ಇದನ್ನೂ ಓದಿ: KRS Dam: ಸಂಪ್ರದಾಯಕ್ಕೆ ಎಳ್ಳು ನೀರು; ಕಾವೇರಿಗೆ ಬಾಗಿನ ಕಾರ್ಯಕ್ರಮದಲ್ಲಿ ಬಾಡೂಟ!