Site icon Vistara News

Khalistan Terrorist: ಗುರುಪತ್‌ವಂತ್ ಸಿಂಗ್ ಪನ್ನುನ್‌ ಹತ್ಯೆ ಸಂಚಿಗೆ ಸಂಬಂಧಿಸಿ ‘ರಾ’ ಅಧಿಕಾರಿ ವಜಾ: ವರದಿ

Khalistani Separatist Gurpatwant Singh Pannun

ಹೊಸದಿಲ್ಲಿ: ಖಲಿಸ್ತಾನಿ ಭಯೋತ್ಪಾದಕ (Khalistan Terrorist) ಗುರುಪತ್‌ವಂತ್ ಸಿಂಗ್ ಪನ್ನುನ್‌ನನ್ನು (Gurpatwant Singh Pannun) ಕೊಲ್ಲಲು ಸಂಚು ರೂಪಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಗುಪ್ತಚರ ಸಂಸ್ಥೆ ʼರಾʼ (Research and Analysis Wing – RAW) ಅಧಿಕಾರಿಯೊಬ್ಬರನ್ನು ಉದ್ಯೋಗದಿಂದ ವಜಾ ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ಮೀಡಿಯಾವೊಂದು ವರದಿ ಮಾಡಿದೆ.

ಪನ್ನುನ್‌ ಹತ್ಯೆ ಸಂಚಿನ ಪ್ರಕರಣದಲ್ಲಿ ಅಮೆರಿಕದ ಪ್ರಾಸಿಕ್ಯೂಟರ್‌ಗಳು ಕಳೆದ ನವೆಂಬರ್‌ನಲ್ಲಿ ಮ್ಯಾನ್‌ಹ್ಯಾಟನ್ ನ್ಯಾಯಾಲಯದಲ್ಲಿ ಸಲ್ಲಿಸಿದ ದೋಷಾರೋಪಣೆಯಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಎಂಬಾತ ಅನಾಮಿಕ ಭಾರತೀಯ ಅಧಿಕಾರಿಯ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸಿದ್ದ ಎಂದು ಆರೋಪಿಸಿದ್ದರು.

ಈ ಬಗ್ಗೆ ಅಮೆರಿಕದ ಒದಗಿಸಿದ ಸಾಕ್ಷಿಗಳನ್ನು ಪರಿಶೀಲಿಸಲು ಹಾಗೂ ಆಂತರಿಕ ತನಿಖೆಯನ್ನು ನಡೆಸಲು ಭಾರತ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. ಇದರ ತನಿಖೆಯಲ್ಲಿ ಕಂಡುಬಂದಂತೆ ರಾ ಅಧಿಕಾರಿಯೊಬ್ಬ ಈ ಸಂಚಿನಲ್ಲಿ ಭಾಗಿಯಾಗಿದ್ದಾನೆ. ಇದು ಸರ್ಕಾರದಿಂದ ಅಧಿಕೃತಗೊಳಿಸದ ಕಾರ್ಯಾಚರಣೆಯಾಗಿದೆ ಎಂದಿದೆ. ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ನಲ್ಲಿದ್ದ ಈ ಅಧಿಕಾರಿ ಅರೆಸೈನಿಕ ಪಡೆಗಳಿಂದ ಏಜೆನ್ಸಿಗೆ ನೇಮಕಗೊಂಡಿದ್ದ ಮಧ್ಯಮ ಮಟ್ಟದ ಅಧಿಕಾರಿಯಾಗಿದ್ದಾನೆ.

ಕಳೆದ ನವೆಂಬರ್‌ನಲ್ಲಿ ಮ್ಯಾನ್‌ಹ್ಯಾಟನ್ ನ್ಯಾಯಾಲಯದಲ್ಲಿ ಯುಎಸ್ ಪ್ರಾಸಿಕ್ಯೂಟರ್‌ಗಳು ಸಲ್ಲಿಸಿದ ದೋಷಾರೋಪಣೆಯ ನಂತರ ಉನ್ನತ ಮಟ್ಟದ ಸಮಿತಿಯು ಮಾಡಿದ ಕೆಲಸದ ಬಗ್ಗೆ ಭಾರತದ ಕಡೆಯಿಂದ ಯಾವುದೇ ಮಾಹಿತಿ ದೊರೆತಿಲ್ಲ. ಕೊಲೆ ಸಂಚಿನಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಈಗಾಗಲೇ ಅಮೆರಿಕದ ಜೈಲಿನಲ್ಲಿದ್ದಾನೆ.

ಗುಪ್ತಾ ವಿರುದ್ಧ ಸಲ್ಲಿಸಲಾದ ಅಮೆರಿಕದ ದೋಷಾರೋಪಣೆಯಲ್ಲಿ, ಕೇವಲ “CC-1” ಎಂದು ಉಲ್ಲೇಖಿಸಲಾದ ಭಾರತೀಯ ಸರ್ಕಾರಿ ಅಧಿಕಾರಿಯನ್ನು ಅವರ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ತಿಳಿಯಲಾಗಿದೆ. CC-1 ಅನ್ನು ಭಾರತದ “ಭದ್ರತಾ ನಿರ್ವಹಣೆ” ಮತ್ತು “ಗುಪ್ತಚರ ನಿರ್ವಹಣೆ”ಯ “ಹಿರಿಯ ಕ್ಷೇತ್ರ ಅಧಿಕಾರಿ” ಎಂದು ಅದು ವಿವರಿಸಿದೆ.

“ಹತ್ಯೆಯ ಪ್ರಯತ್ನದಲ್ಲಿ ಭಾಗಿಯಾಗಿರುವ ಅಧಿಕಾರಿ ಈಗ ಕೆಲಸ ಮಾಡುತ್ತಿಲ್ಲ” ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದ್ದು, “ಭಾರತವು ಅವನ ವಿರುದ್ಧ ಯಾವುದೇ ಕ್ರಿಮಿನಲ್ ಕ್ರಮವನ್ನು ಪ್ರಾರಂಭಿಸಿಲ್ಲ” ಎಂದು ಹೇಳಿದೆ. ಉನ್ನತ ಮಟ್ಟದ ಸಮಿತಿಯ ಸಂಶೋಧನೆಗಳ ಬಗ್ಗೆ ಭಾರತವು ಯುಎಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದೆ.

ಸಂಚಿನಲ್ಲಿ ಭಾಗಿಯಾದವರನ್ನು ವಿಚಾರಣೆಗೆ ಒಳಪಡಿಸುವಂತೆ ಭಾರತವನ್ನು ಅಮೆರಿಕ ಒತ್ತಾಯಿಸಿದೆ. ದಕ್ಷಿಣ ಮತ್ತು ಮಧ್ಯ ಏಷ್ಯಾದ ವ್ಯವಹಾರಗಳ ಸಹಾಯಕ ರಾಜ್ಯ ಕಾರ್ಯದರ್ಶಿ ಡೊನಾಲ್ಡ್ ಲು ಅವರು ಜನವರಿಯಲ್ಲಿ ನವದೆಹಲಿಗೆ ಭೇಟಿ ನೀಡಿದಾಗ ಭಾರತೀಯ ಅಧಿಕಾರಿಗಳಿಗೆ ಈ ಸಂದೇಶ ರವಾನಿಸಿದ್ದರು. ಬುಧವಾರ ವಾಷಿಂಗ್ಟನ್‌ನಲ್ಲಿ ನಡೆದ ಯುಎಸ್ ವಿದೇಶಾಂಗ ವ್ಯವಹಾರಗಳ ಸಮಿತಿಯ ವಿಚಾರಣೆಯಲ್ಲಿ ಭಾಗವಹಿಸಿದ ಲು, “ಇದು ಯುಎಸ್ ಮತ್ತು ಭಾರತದ ನಡುವಿನ ಗಂಭೀರ ಸಮಸ್ಯೆ” ಎಂದಿದ್ದಾರೆ.

US ಪ್ರಾಸಿಕ್ಯೂಟರ್‌ಗಳ ದೋಷಾರೋಪಣೆಯ ಪ್ರಕಾರ, ಪನ್ನುನ್‌ನನ್ನು ಕೊಲ್ಲಲು ಸುಪಾರಿ ಕೊಲೆಗಾರರನ್ನು ಗುಪ್ತಾ ಸಂಪರ್ಕಿಸಿದ್ದ. ಆದರೆ ಗುಪ್ತಾ ಸಂಪರ್ಕಿಸಿದ್ದ ವ್ಯಕ್ತಿಯು ಅಮೆರಿಕದ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದವನಾಗಿದ್ದ. ಗುಪ್ತಾ ಪ್ರಸ್ತುತ ಜೆಕ್ ರಿಪಬ್ಲಿಕ್‌ನಲ್ಲಿ ಜೈಲಿನಲ್ಲಿದ್ದಾನೆ. ಅಲ್ಲಿನ ನ್ಯಾಯಾಂಗ ಇಲಾಖೆ ಆತನನ್ನು ಅಮೆರಿಕಕ್ಕೆ ಹಸ್ತಾಂತರಿಸುವ ನ್ಯಾಯಾಲಯದ ತೀರ್ಪನ್ನು ಪರಿಶೀಲಿಸುತ್ತಿದೆ.

ಯುಎಸ್ ಪೌರತ್ವವನ್ನು ಹೊಂದಿರುವ ಮತ್ತು ಸಿಖ್ಸ್ ಫಾರ್ ಜಸ್ಟಿಸ್ (SFJ) ನ ಹಿರಿಯ ಮುಖಂಡನಾಗಿರುವ ಪನ್ನುನ್‌ನನ್ನು ಈಗಾಗಲೇ ಭಾರತವು ಭಯೋತ್ಪಾದಕ ಎಂದು ಘೋಷಿಸಿದೆ. ಅಮೆರಿಕದ ಆರೋಪಕ್ಕೂ ಸುಮಾರು ಎರಡು ತಿಂಗಳ ಮೊದಲು, ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ಜೂನ್ 2023ರಲ್ಲಿ ಸರ್ರೆ ಪಟ್ಟಣದಲ್ಲಿ ನಡೆದ ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಸರ್ಕಾರಿ ಏಜೆಂಟರ ಕೈವಾಡ ಇದೆ ಎಂದು ಆರೋಪಿಸಿದ್ದರು. ಟ್ರುಡೊ ಆರೋಪವನ್ನು ಭಾರತವು ಅಸಂಬದ್ಧವೆಂದು ತಳ್ಳಿಹಾಕಿತ್ತು. ಕೆನಡಾ ಆರೋಪಗಳನ್ನು ಬೆಂಬಲಿಸಲು ಯಾವುದೇ ಪುರಾವೆ ಒದಗಿಸಿಲ್ಲ ಎಂದು ಹೇಳಿತ್ತು.

ಇದನ್ನೂ ಓದಿ: Khalistan terrorist: ʼನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿಲ್ಲʼ ಎಂದ ನ್ಯೂಜಿಲ್ಯಾಂಡ್‌ ಉಪಪ್ರಧಾನಿಗೇ ಬೆದರಿಕೆ ಹಾಕಿದ ಪನ್ನುನ್!‌

Exit mobile version