Site icon Vistara News

ವಿಸ್ತಾರ ಸಂಪಾದಕೀಯ: ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್ ಪಾಲ್ ಬೇಟೆ, ಮತ್ತಷ್ಟು ಕಠಿಣ ಕ್ರಮ ಅಗತ್ಯ

Khalistani separatist Amrit Pal Bate, further tough action is needed

ಸಿಖ್ ಪ್ರತ್ಯೇಕತಾವಾದಿ ನಾಯಕ ಅಮೃತ್ ಪಾಲ್ ಸಿಂಗ್‌ನನ್ನು (Amritpal Sinhg) ಬಂಧಿಸಲು ಪಂಜಾಬ್ ಪೊಲೀಸರು ಕೊನೆಗೂ ಮುಂದಾಗಿದ್ದಾರೆ. ತನಗಿರುವ ಬೆಂಬಲಿಗರ ಬಲದಿಂದ ಸೊಕ್ಕಿದ್ದ ಈತ, ತನ್ನನ್ನು ಬಂಧಿಸಿ ನೋಡಿ ಎಂದು ಸವಾಲೆಸೆದಿದ್ದ. ಈತನ ಬೆಂಬಲಿಗನೊಬ್ಬನನ್ನು ಕಾನೂನುಬಾಹಿರ ಕೃತ್ಯಕ್ಕಾಗಿ ಬಂಧಿಸಿದ್ದಕ್ಕೆ ಸಾವಿರಾರು ಅನುಯಾಯಿಗಳ ಜತೆಗೆ ಪೊಲೀಸ್‌ ಠಾಣೆಗೆ ನುಗ್ಗಿ ಅನಾಹುತ ಸೃಷ್ಟಿಸಿದ್ದ ಈತ ಪೊಲೀಸರೇ ಮಂಡಿಯೂರುವಂತೆ ಮಾಡಿದ್ದ. ಈಗಾಗಲೇ ಇವನು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐ ಜತೆ ಸೇರಿಕೊಂಡಿದ್ದಾನೆ ಎಂಬುದಕ್ಕೆ ಸಾಕ್ಷಿಗಳಿವೆ. ದೇಶವಿರೋಧಿ ಮಾತುಗಳನ್ನು ಆಡುತ್ತಿದ್ದ ಇವನು ಭಾರತದ ವಿರುದ್ಧ ಸಿಖ್ಖರನ್ನು ಎತ್ತಿಕಟ್ಟುತ್ತಿದ್ದ. ಇಂಥ ಈತ ಮುಂದಿನ ದಿನಗಳಲ್ಲಿ ಪಂಜಾಬ್‌ ರಾಜ್ಯಕ್ಕೆ, ಇಡೀ ದೇಶಕ್ಕೇ ತಲೆನೋವಾಗುವ ಎಲ್ಲ ಸಾಧ್ಯತೆಗಳೂ ಇವೆ. ಈಗಲೇ ಅವನನ್ನು ಮಟ್ಟಹಾಕಲು ಮುಂದಾಗಿರುವುದು ಶ್ಲಾಘನೀಯ.

ಇದಕ್ಕಾಗಿ ಪಂಜಾಬ್‌ ಪೊಲೀಸರು ಸಾಕಷ್ಟು ಸರ್ಕಸ್‌ ಮಾಡಬೇಕಾಗಿ ಬಂದಿದೆ. ಈತನ ಅನುಯಾಯಿಗಳ ಸಂಖ್ಯೆ ಸಾಕಷ್ಟಿದ್ದು, ಇವರು ರೊಚ್ಚಿಗೆದ್ದು ಪುಂಡಾಟಿಕೆಗೆ ಇಳಿಯದಂತೆ ಮಾಡಲು ರಾಜ್ಯಾದ್ಯಂತ ಇಂಟರ್‌ನೆಟ್‌ ಬಂದ್‌ ಮಾಡಲಾಗಿದೆ. ದುಬೈಯಲ್ಲಿ ಉದ್ಯೋಗಿಯಾಗಿದ್ದಾಗಲೇ ಖಲಿಸ್ತಾನ್‌ ಒಲವು ಹೊಂದಿದ್ದ ಈತ ಪಂಜಾಬ್‌ಗೆ ಮರಳಿ ಆರು ತಿಂಗಳ ಹಿಂದೆ ʼವಾರಿಸ್‌ ಪಂಜಾಬ್‌ ದೇʼ ಸಂಘಟನೆಯ ಮುಖ್ಯಸ್ಥನಾಗಿ ನಿಯುಕ್ತನಾಗಿದ್ದ. ಈ ಸಂಘಟನೆಯನ್ನು ಸ್ಥಾಪಿಸಿದ ನಟ, ಇನ್ನೊಬ್ಬ ಖಲಿಸ್ತಾನ್‌ ಪ್ರತಿಪಾದಕ ದೀಪ್‌ ಸಿಧು ಸಾವಿನ ಬಳಿಕ, ಅದನ್ನೇ ಬಂಡವಾಳ ಮಾಡಿಕೊಂಡು ಈತ ಬೆಳೆದಿದ್ದಾನೆ. ಒಂದು ಕಾಲದಲ್ಲಿ ಖಲಿಸ್ತಾನ್‌ ಚಳವಳಿಯ ಮಹಾನಾಯಕ, ಭಯೋತ್ಪಾದಕ ಮುಖಂಡನಾಗಿದ್ದ ಜರ್ನೈಲ್‌ ಸಿಂಗ್‌ ಭಿಂದ್ರಾನ್‌ವಾಲೆಯಂತೆಯೇ ದಿರಸು ಧರಿಸಿಕೊಳ್ಳುವ ಇವನನ್ನು ಈಗಾಗಲೇ ʼಎರಡನೇ ಭಿಂದ್ರಾನ್‌ವಾಲೆʼ ಎಂದು ಹಲವರು ಕರೆಯಲಾರಂಭಿಸಿದ್ದಾರೆ. ಹಲವು ಸಮಯದಿಂದ ಆತ ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಖಲಿಸ್ತಾನ್ ಪರ ಪೋಸ್ಟ್‌ಗಳನ್ನು ಹಾಕುತ್ತಿದ್ದಾನೆ. ಮಾತುಮಾತಿಗೂ ಬೆಂಕಿ ಕಾರುವ ಇವನ ಸುತ್ತಮುತ್ತ ಬಂದೂಕುಧಾರಿಗಳು ಕಾವಲಿರುತ್ತಾರೆ. ಈತ ಮತ್ತೊಬ್ಬ ಭಿಂದ್ರಾನ್‌ವಾಲೆ ಆಗುವುದನ್ನು ಕೇಂದ್ರ ಮತ್ತು ಪಂಜಾಬ್ ಸರ್ಕಾರಗಳು ತಡೆಯಬೇಕು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಅತಿ ಹೆಚ್ಚು ಭಯೋತ್ಪಾದನೆ ಸಾವು, ಪಾಪದ ಫಲ ಉಣ್ಣುತ್ತಿರುವ ಪಾಕ್

ಸಿಕ್ಖರಲ್ಲಿರುವ ರಾಜಕೀಯ ನಾಯಕತ್ವದ ಕೊರತೆಯನ್ನೇ ಬಂಡವಾಳವಾಗಿಸಿಕೊಂಡು ಖಲಿಸ್ತಾನ ಚಳವಳಿ ಮತ್ತೆ ಬೆಳೆಯುತ್ತಿದೆ. ಕೆನಡಾ, ಆಸ್ಟ್ರೇಲಿಯಾಗಳಲ್ಲೂ ಇತ್ತೀಚೆಗೆ ಹಿಂದೂ ದೇವಾಲಯಗಳ ಮೇಲೆ ಖಲಿಸ್ತಾನ್ ಪ್ರತ್ಯೇಕತಾವಾದಿಗಳು ದಾಳಿ ನಡೆಸುತ್ತಿದ್ದಾರೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಾದ ಜೈಷೆ ಮೊಹಮ್ಮದ್, ಲಷ್ಕರೆ ತಯ್ಯಬಾ ಮತ್ತು ಖಲಿಸ್ತಾನ್ ಲಿಬರೇಷನ್ ಫೋರ್ಸ್ ನಡುವೆ ಸಂಪರ್ಕ ಏರ್ಪಟ್ಟಿದೆ. ಡ್ರೋನ್‌ಗಳ ಮೂಲಕ ಪಂಜಾಬ್‌ನೊಳಗೇ ಮಾದಕ ದ್ರವ್ಯ ಪೂರೈಕೆ ಮಾಡುವ ಜಾಲ ಸಕ್ರಿಯವಾಗಿದೆ. ಒಂದು ಕಾಲದಲ್ಲಿ ಅಬ್ಬರಿಸಿ ತಣ್ಣಗಾಗಿದ್ದ ಸಿಖ್ ಪ್ರತ್ಯೇಕತಾವಾದ ಮತ್ತೆ ತಲೆ ಎತ್ತುತ್ತಿರುವುದರ ಸೂಚನೆ ಇದು. 1980-90ರ ದಶಕದಲ್ಲಿ ಒಂದು ಚಳವಳಿಯಾಗಿ ಹುಟ್ಟಿಕೊಂಡ ಖಲಿಸ್ತಾನಿ ಬೇಡಿಕೆ ಮುಂದೆ ಭಾರತದೊಳಗೇ ರಣಗಾಯವಾದದ್ದು ನಮಗೆ ಗೊತ್ತಿದೆ. ಸುಮಾರು 12,000 ನಾಗರಿಕರು, 10,000 ಉಗ್ರರು ಆಗ ಬಲಿಯಾಗಿದ್ದರು. ಪ್ರಧಾನಮಂತ್ರಿಯ ಕಗ್ಗೊಲೆ ನಡೆಸುವ ಮಟ್ಟಕ್ಕೂ ಆ ಭಯೋತ್ಪಾದಕರು ಹೋಗಿದ್ದರು. ಈಗ ಮತ್ತೆ ಖಲಿಸ್ತಾನಿಗಳು ಬಾಲ ಬಿಚ್ಚುತ್ತಿದ್ದಾರೆ. ಇನ್ನೊಂದೆಡೆ ಬಹು ಸಂಖ್ಯೆಯಲ್ಲಿರುವ ಸಿಕ್ಖರನ್ನು ಓಲೈಸಲು ಕೆನಡಾದ ರಾಜಕೀಯ ಪಕ್ಷಗಳೂ ಖಲಿಸ್ತಾನಿಗಳಿಗೆ ಅಶ್ರಯ ನೀಡಿ ಪ್ರೋತ್ಸಾಹಿಸುತ್ತಿವೆ. ಇದೆಲ್ಲವನ್ನು ಗಂಭಿರವಾಗಿ ತೆಗೆದುಕೊಳ್ಳಬೇಕಾದ ಸನ್ನಿವೇಶ ಒದಗಿಬಂದಿದೆ.

ಭಿಂದ್ರಾನ್‌ವಾಲೆ ಎಂಬ ಖಲಿಸ್ತಾನಿ ಭಯೋತ್ಪಾದಕನನ್ನು ಆರಂಭದಲ್ಲಿ ಬೆಳೆಯಲು ಬಿಟ್ಟದ್ದು ನಮ್ಮ ಕೆಲವು ರಾಜಕಾರಣಿಗಳೇ. ಮುಂದೆ ಅವನೇ ದೇಶದ ಭದ್ರತೆಗೆ ಸವಾಲೆನಿಸಿದ. ಚಿಗುರಿನಲ್ಲಿ ಚಿವುಟದೇ ಬಿಟ್ಟ ಉಗ್ರಗಾಮಿ ಚಟುವಟಿಕೆಯಿಂದ ಮುಂದೆ ಎಂಥ ಭಾರಿ ಅನಾಹುತವಾಯಿತೆಂಬುದು ನಮಗೆ ಗೊತ್ತಿದೆ. ಹೀಗಾಗಿ ಕೇಂದ್ರ ಮತ್ತು ಪಂಜಾಬ್ ಸರಕಾರಗಳು ಆರಂಭದಲ್ಲೇ ಸಿಖ್ ಭಯೋತ್ಪಾದನೆಯನ್ನು ಚಿವುಟಿ ಹಾಕಬೇಕು. ಅದರ ಚಾಲಕಶಕ್ತಿಗಳಲ್ಲಿ ಒಬ್ಬನಾದ ಅಮೃತ್‌ ಪಾಲ್‌ ಸಿಂಗ್‌ನನ್ನು ಮಟ್ಟ ಹಾಕುವುದು ಇದರಲ್ಲಿ ಒಂದು ಭಾಗ ಅಷ್ಟೇ.

Exit mobile version