ಪ್ರಮುಖ ಸುದ್ದಿ
ವಿಸ್ತಾರ ಸಂಪಾದಕೀಯ: ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್ ಪಾಲ್ ಬೇಟೆ, ಮತ್ತಷ್ಟು ಕಠಿಣ ಕ್ರಮ ಅಗತ್ಯ
ಭಿಂದ್ರನ್‌ವಾಲೆ ಎಂಬ ಖಲಿಸ್ತಾನಿ ಭಯೋತ್ಪಾದಕನನ್ನು ಆರಂಭದಲ್ಲಿ ಬೆಳೆಯಲು ಬಿಟ್ಟದ್ದು ನಮ್ಮ ಕೆಲವು ರಾಜಕಾರಣಿಗಳೇ. ಹೀಗಾಗಿ ಕೇಂದ್ರ ಮತ್ತು ಪಂಜಾಬ್ ಸರ್ಕಾರಗಳು ಆರಂಭದಲ್ಲೇ ಸಿಖ್ ಭಯೋತ್ಪಾದನೆಯನ್ನು ಚಿವುಟಿ ಹಾಕಬೇಕು.
ಸಿಖ್ ಪ್ರತ್ಯೇಕತಾವಾದಿ ನಾಯಕ ಅಮೃತ್ ಪಾಲ್ ಸಿಂಗ್‌ನನ್ನು (Amritpal Sinhg) ಬಂಧಿಸಲು ಪಂಜಾಬ್ ಪೊಲೀಸರು ಕೊನೆಗೂ ಮುಂದಾಗಿದ್ದಾರೆ. ತನಗಿರುವ ಬೆಂಬಲಿಗರ ಬಲದಿಂದ ಸೊಕ್ಕಿದ್ದ ಈತ, ತನ್ನನ್ನು ಬಂಧಿಸಿ ನೋಡಿ ಎಂದು ಸವಾಲೆಸೆದಿದ್ದ. ಈತನ ಬೆಂಬಲಿಗನೊಬ್ಬನನ್ನು ಕಾನೂನುಬಾಹಿರ ಕೃತ್ಯಕ್ಕಾಗಿ ಬಂಧಿಸಿದ್ದಕ್ಕೆ ಸಾವಿರಾರು ಅನುಯಾಯಿಗಳ ಜತೆಗೆ ಪೊಲೀಸ್ ಠಾಣೆಗೆ ನುಗ್ಗಿ ಅನಾಹುತ ಸೃಷ್ಟಿಸಿದ್ದ ಈತ ಪೊಲೀಸರೇ ಮಂಡಿಯೂರುವಂತೆ ಮಾಡಿದ್ದ. ಈಗಾಗಲೇ ಇವನು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐ ಜತೆ ಸೇರಿಕೊಂಡಿದ್ದಾನೆ ಎಂಬುದಕ್ಕೆ ಸಾಕ್ಷಿಗಳಿವೆ. ದೇಶವಿರೋಧಿ ಮಾತುಗಳನ್ನು ಆಡುತ್ತಿದ್ದ ಇವನು ಭಾರತದ ವಿರುದ್ಧ ಸಿಖ್ಖರನ್ನು ಎತ್ತಿಕಟ್ಟುತ್ತಿದ್ದ. ಇಂಥ ಈತ ಮುಂದಿನ ದಿನಗಳಲ್ಲಿ ಪಂಜಾಬ್ ರಾಜ್ಯಕ್ಕೆ, ಇಡೀ ದೇಶಕ್ಕೇ ತಲೆನೋವಾಗುವ ಎಲ್ಲ ಸಾಧ್ಯತೆಗಳೂ ಇವೆ. ಈಗಲೇ ಅವನನ್ನು ಮಟ್ಟಹಾಕಲು ಮುಂದಾಗಿರುವುದು ಶ್ಲಾಘನೀಯ.
ಇದಕ್ಕಾಗಿ ಪಂಜಾಬ್ ಪೊಲೀಸರು ಸಾಕಷ್ಟು ಸರ್ಕಸ್ ಮಾಡಬೇಕಾಗಿ ಬಂದಿದೆ. ಈತನ ಅನುಯಾಯಿಗಳ ಸಂಖ್ಯೆ ಸಾಕಷ್ಟಿದ್ದು, ಇವರು ರೊಚ್ಚಿಗೆದ್ದು ಪುಂಡಾಟಿಕೆಗೆ ಇಳಿಯದಂತೆ ಮಾಡಲು ರಾಜ್ಯಾದ್ಯಂತ ಇಂಟರ್‌ನೆಟ್ ಬಂದ್ ಮಾಡಲಾಗಿದೆ. ದುಬೈಯಲ್ಲಿ ಉದ್ಯೋಗಿಯಾಗಿದ್ದಾಗಲೇ ಖಲಿಸ್ತಾನ್ ಒಲವು ಹೊಂದಿದ್ದ ಈತ ಪಂಜಾಬ್‌ಗೆ ಮರಳಿ ಆರು ತಿಂಗಳ ಹಿಂದೆ ʼವಾರಿಸ್ ಪಂಜಾಬ್ ದೇʼ ಸಂಘಟನೆಯ ಮುಖ್ಯಸ್ಥನಾಗಿ ನಿಯುಕ್ತನಾಗಿದ್ದ. ಈ ಸಂಘಟನೆಯನ್ನು ಸ್ಥಾಪಿಸಿದ ನಟ, ಇನ್ನೊಬ್ಬ ಖಲಿಸ್ತಾನ್ ಪ್ರತಿಪಾದಕ ದೀಪ್ ಸಿಧು ಸಾವಿನ ಬಳಿಕ, ಅದನ್ನೇ ಬಂಡವಾಳ ಮಾಡಿಕೊಂಡು ಈತ ಬೆಳೆದಿದ್ದಾನೆ. ಒಂದು ಕಾಲದಲ್ಲಿ ಖಲಿಸ್ತಾನ್ ಚಳವಳಿಯ ಮಹಾನಾಯಕ, ಭಯೋತ್ಪಾದಕ ಮುಖಂಡನಾಗಿದ್ದ ಜರ್ನೈಲ್ ಸಿಂಗ್ ಭಿಂದ್ರಾನ್‌ವಾಲೆಯಂತೆಯೇ ದಿರಸು ಧರಿಸಿಕೊಳ್ಳುವ ಇವನನ್ನು ಈಗಾಗಲೇ ʼಎರಡನೇ ಭಿಂದ್ರಾನ್‌ವಾಲೆʼ ಎಂದು ಹಲವರು ಕರೆಯಲಾರಂಭಿಸಿದ್ದಾರೆ. ಹಲವು ಸಮಯದಿಂದ ಆತ ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಖಲಿಸ್ತಾನ್ ಪರ ಪೋಸ್ಟ್‌ಗಳನ್ನು ಹಾಕುತ್ತಿದ್ದಾನೆ. ಮಾತುಮಾತಿಗೂ ಬೆಂಕಿ ಕಾರುವ ಇವನ ಸುತ್ತಮುತ್ತ ಬಂದೂಕುಧಾರಿಗಳು ಕಾವಲಿರುತ್ತಾರೆ. ಈತ ಮತ್ತೊಬ್ಬ ಭಿಂದ್ರಾನ್‌ವಾಲೆ ಆಗುವುದನ್ನು ಕೇಂದ್ರ ಮತ್ತು ಪಂಜಾಬ್ ಸರ್ಕಾರಗಳು ತಡೆಯಬೇಕು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಅತಿ ಹೆಚ್ಚು ಭಯೋತ್ಪಾದನೆ ಸಾವು, ಪಾಪದ ಫಲ ಉಣ್ಣುತ್ತಿರುವ ಪಾಕ್
ಸಿಕ್ಖರಲ್ಲಿರುವ ರಾಜಕೀಯ ನಾಯಕತ್ವದ ಕೊರತೆಯನ್ನೇ ಬಂಡವಾಳವಾಗಿಸಿಕೊಂಡು ಖಲಿಸ್ತಾನ ಚಳವಳಿ ಮತ್ತೆ ಬೆಳೆಯುತ್ತಿದೆ. ಕೆನಡಾ, ಆಸ್ಟ್ರೇಲಿಯಾಗಳಲ್ಲೂ ಇತ್ತೀಚೆಗೆ ಹಿಂದೂ ದೇವಾಲಯಗಳ ಮೇಲೆ ಖಲಿಸ್ತಾನ್ ಪ್ರತ್ಯೇಕತಾವಾದಿಗಳು ದಾಳಿ ನಡೆಸುತ್ತಿದ್ದಾರೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಾದ ಜೈಷೆ ಮೊಹಮ್ಮದ್, ಲಷ್ಕರೆ ತಯ್ಯಬಾ ಮತ್ತು ಖಲಿಸ್ತಾನ್ ಲಿಬರೇಷನ್ ಫೋರ್ಸ್ ನಡುವೆ ಸಂಪರ್ಕ ಏರ್ಪಟ್ಟಿದೆ. ಡ್ರೋನ್‌ಗಳ ಮೂಲಕ ಪಂಜಾಬ್‌ನೊಳಗೇ ಮಾದಕ ದ್ರವ್ಯ ಪೂರೈಕೆ ಮಾಡುವ ಜಾಲ ಸಕ್ರಿಯವಾಗಿದೆ. ಒಂದು ಕಾಲದಲ್ಲಿ ಅಬ್ಬರಿಸಿ ತಣ್ಣಗಾಗಿದ್ದ ಸಿಖ್ ಪ್ರತ್ಯೇಕತಾವಾದ ಮತ್ತೆ ತಲೆ ಎತ್ತುತ್ತಿರುವುದರ ಸೂಚನೆ ಇದು. 1980-90ರ ದಶಕದಲ್ಲಿ ಒಂದು ಚಳವಳಿಯಾಗಿ ಹುಟ್ಟಿಕೊಂಡ ಖಲಿಸ್ತಾನಿ ಬೇಡಿಕೆ ಮುಂದೆ ಭಾರತದೊಳಗೇ ರಣಗಾಯವಾದದ್ದು ನಮಗೆ ಗೊತ್ತಿದೆ. ಸುಮಾರು 12,000 ನಾಗರಿಕರು, 10,000 ಉಗ್ರರು ಆಗ ಬಲಿಯಾಗಿದ್ದರು. ಪ್ರಧಾನಮಂತ್ರಿಯ ಕಗ್ಗೊಲೆ ನಡೆಸುವ ಮಟ್ಟಕ್ಕೂ ಆ ಭಯೋತ್ಪಾದಕರು ಹೋಗಿದ್ದರು. ಈಗ ಮತ್ತೆ ಖಲಿಸ್ತಾನಿಗಳು ಬಾಲ ಬಿಚ್ಚುತ್ತಿದ್ದಾರೆ. ಇನ್ನೊಂದೆಡೆ ಬಹು ಸಂಖ್ಯೆಯಲ್ಲಿರುವ ಸಿಕ್ಖರನ್ನು ಓಲೈಸಲು ಕೆನಡಾದ ರಾಜಕೀಯ ಪಕ್ಷಗಳೂ ಖಲಿಸ್ತಾನಿಗಳಿಗೆ ಅಶ್ರಯ ನೀಡಿ ಪ್ರೋತ್ಸಾಹಿಸುತ್ತಿವೆ. ಇದೆಲ್ಲವನ್ನು ಗಂಭಿರವಾಗಿ ತೆಗೆದುಕೊಳ್ಳಬೇಕಾದ ಸನ್ನಿವೇಶ ಒದಗಿಬಂದಿದೆ.
ಭಿಂದ್ರಾನ್‌ವಾಲೆ ಎಂಬ ಖಲಿಸ್ತಾನಿ ಭಯೋತ್ಪಾದಕನನ್ನು ಆರಂಭದಲ್ಲಿ ಬೆಳೆಯಲು ಬಿಟ್ಟದ್ದು ನಮ್ಮ ಕೆಲವು ರಾಜಕಾರಣಿಗಳೇ. ಮುಂದೆ ಅವನೇ ದೇಶದ ಭದ್ರತೆಗೆ ಸವಾಲೆನಿಸಿದ. ಚಿಗುರಿನಲ್ಲಿ ಚಿವುಟದೇ ಬಿಟ್ಟ ಉಗ್ರಗಾಮಿ ಚಟುವಟಿಕೆಯಿಂದ ಮುಂದೆ ಎಂಥ ಭಾರಿ ಅನಾಹುತವಾಯಿತೆಂಬುದು ನಮಗೆ ಗೊತ್ತಿದೆ. ಹೀಗಾಗಿ ಕೇಂದ್ರ ಮತ್ತು ಪಂಜಾಬ್ ಸರಕಾರಗಳು ಆರಂಭದಲ್ಲೇ ಸಿಖ್ ಭಯೋತ್ಪಾದನೆಯನ್ನು ಚಿವುಟಿ ಹಾಕಬೇಕು. ಅದರ ಚಾಲಕಶಕ್ತಿಗಳಲ್ಲಿ ಒಬ್ಬನಾದ ಅಮೃತ್ ಪಾಲ್ ಸಿಂಗ್‌ನನ್ನು ಮಟ್ಟ ಹಾಕುವುದು ಇದರಲ್ಲಿ ಒಂದು ಭಾಗ ಅಷ್ಟೇ.
ಕರ್ನಾಟಕ
ChatGPT Subscription: ದಕ್ಷತೆ ಹೆಚ್ಚಳ; ನೌಕರರಿಗೆ ಚಾಟ್‌ಜಿಪಿಟಿ ಉಚಿತ ಸಬ್‌ಸ್ಕ್ರಿಪ್ಶನ್ ನೀಡಿದ ಬೆಂಗಳೂರು ಕಂಪನಿ
ChatGPT Subscription: ಚಾಟ್‌ಜಿಪಿಟಿಯು ಬಹುತೇಕ ಕ್ಷೇತ್ರಗಳನ್ನು ಆವರಿಸುತ್ತಿದೆ. ಬೆಂಗಳೂರಿನ ಕ್ಯಾಪಿಟಲ್ ಮೈಂಡ್ ಎಂಬ ಕಂಪನಿಯು ಚಾಟ್‌ಜಿಪಿಟಿಯ ಮಹತ್ವವನ್ನು ಅರಿತು, ಅದರ ನೋಂದಣಿಯನ್ನು ಉದ್ಯೋಗಿಗಳಿಗೆ ಉಚಿತವಾಗಿ ನೀಡಲು ತೀರ್ಮಾನಿಸಿದೆ.
ಬೆಂಗಳೂರು: ಚಾಟ್‌ಜಿಪಿಟಿ ಚಾಟ್‌ಬಾಟ್ ಬಗ್ಗೆಯೇ ಈಗ ಎಲ್ಲಡೆ ಮಾತು ಕೇಳಿಬರುತ್ತಿವೆ. ಅದರಲ್ಲೂ, ಕೃತಕ ಬುದ್ಧಿಮತ್ತೆಯಿಂದ (Artificial Intelligence) ಇದು ಕಾರ್ಯನಿರ್ವಹಿಸುತ್ತಿರುವ ಕಾರಣ ಚಾಟ್‌ಜಿಪಿಟಿ ತಂತ್ರಜ್ಞಾನವನ್ನು ಬಹುತೇಕರು ಬಳಸುತ್ತಿದ್ದಾರೆ. ಹಾಗೆಯೇ, ಇದು ಯಾವುದೇ ವಿಷಯದ ಬಗ್ಗೆ ಲೇಖನ ಬರೆಯುವುದರಿಂದ ಹಿಡಿದು, ಕೋಡಿಂಗ್‌ವರೆಗೆ ಎಲ್ಲ ಕೆಲಸ ಮಾಡುತ್ತಿರುವ ಕಾರಣ ಮುಂದೊಂದು ದಿನ ಚಾಟ್‌ಜಿಪಿಟಿಯು ಉದ್ಯೋಗ ಕಸಿಯಲಿದೆ ಎಂಬ ಚರ್ಚೆಗಳು ಕೇಳಿಬರುತ್ತಿವೆ. ಹೀಗಿರುವ ಮಧ್ಯೆಯೇ, ಬೆಂಗಳೂರಿನ ಕಂಪನಿಯು ತನ್ನ ಉದ್ಯೋಗಿಗಳಿಗೆ ಚಾಟ್‌ಜಿಪಿಟಿಯ ಸಬ್‌ಸ್ಕ್ರಿಪ್ಶನ್‌ಅನ್ನು (ChatGPT Subscription) ಉಡುಗೊರೆಯಾಗಿದೆ ನೀಡಿದೆ.
ಬೆಂಗಳೂರು ಮೂಲದ ಕ್ಯಾಪಿಟಲ್ ಮೈಂಡ್ (Capital Mind) ಎಂಬ ಕಂಪನಿಯು ಉದ್ಯೋಗಿಗಳಿಗೆ ಉಚಿತವಾಗಿ ಚಾಟ್‌ಜಿಪಿಟಿ ಸಬ್‌ಸ್ಕ್ರಿಪ್ಶನ್ ನೀಡಿದೆ. ಇತ್ತೀಚೆಗೆ ಚಾಟ್‌ಜಿಪಿಟಿ ಬಳಕೆಯಿಂದ ಕಂಪನಿಯ ನೌಕರರ ಕಾರ್ಯದಕ್ಷತೆ ಹಾಗೂ ಉತ್ಪಾದಕೆಯು ಜಾಸ್ತಿಯಾದ ಕಾರಣ ಚಾಟ್‌ಜಿಪಿಟಿಯ ನೋಂದಣಿಯ ಶುಲ್ಕವನ್ನು ಕಂಪನಿಯೇ ಭರಿಸಲಿದೆ ಎಂದು ಘೋಷಿಸಲಾಗಿದೆ. ಚಾಟ್‌ಜಿಪಿಟಿಯ ನೋಂದಣಿ ಶುಲ್ಕವು ಮಾಸಿಕ 1,640 ರೂ. (20 ಡಾಲರ್) ಆಗಲಿದೆ. ಇಷ್ಟನ್ನೂ ಕಂಪನಿಯೇ ನೀಡಲಿದೆ.
ಕಂಪನಿ ಸಿಇಒ ಟ್ವೀಟ್
“ಚಾಟ್‌ಜಿಪಿಟಿಯಿಂದ ನೌಕರರ ಉತ್ಪಾದಕತೆ ಹೆಚ್ಚಾಗಿದೆ. ಅದರಲ್ಲೂ, ಕಿರಿಯ ಉದ್ಯೋಗಿಗಳ ಉತ್ಪಾದಕತೆಯು 5 ಪಟ್ಟು ಜಾಸ್ತಿಯಾಗಿದೆ. ಕೋಡಿಂಗ್ ರಚನೆ ಸೇರಿ ಹಲವು ವಿಧಗಳಲ್ಲಿ ನೌಕರರಿಗೆ ಚಾಟ್‌ಜಿಪಿಟಿಯು ಅನುಕೂಲವಾಗಿದೆ. ಬೇರೆ ವ್ಯಕ್ತಿಯ ನೆರವಿಲ್ಲದೆ, ಚಾಟ್‌ಜಿಟಿಪಿಯ ಸಹಾಯದಿಂದಲೇ ನೌಕರರು ಹಲವು ವಿಷಯಗಳನ್ನು ಕಲಿಯುತ್ತಿದ್ದಾರೆ. ಇದರಿಂದ ಕಂಪನಿಯ ಉತ್ಪಾದಕತೆಯು ಹೆಚ್ಚಾಗಿದೆ. ಎಲ್ಲ ಕೆಲಸವೂ ಈಗ ಉತ್ಕೃಷ್ಟ ಮಟ್ಟದಲ್ಲಿ ಸಾಗುತ್ತಿದೆ. ಹಾಗಾಗಿ, ನೌಕರರಿಗೆ ಉಚಿತವಾಗಿ ಚಾಟ್‌ಜಿಪಿಟಿ ನೋಂದಣಿ ನೀಡಲಾಗುತ್ತಿದೆ” ಎಂದು ಕಂಪನಿಯ ಸಿಇಒ ವಶಿಷ್ಠ ಅಯ್ಯರ್ ಮಾಹಿತಿ ನೀಡಿದ್ದಾರೆ.
ಉದ್ಯೋಗ/ಉದ್ಯಮ ವಲಯವನ್ನು ಚಾಟ್ ಜಿಪಿಟಿ ಕಬಳಿಸುತ್ತಿದೆ, ಮನುಷ್ಯರು ಮಾಡುವ ಹಲವು ಸೃಜನಾತ್ಮಕ ಕೆಲಸಗಳನ್ನು ಇದು ಮಾಡುತ್ತಿರುವ ಕಾರಣ, ಅನೇಕರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂಬ ಆತಂಕವೂ ಮನೆಮಾಡಿದೆ. ಚಾಟ್‌ಜಿಪಿಟಿ ಬಳಕೆ ಮಾಡುತ್ತಿರುವ ಅನೇಕರು ಒಂದಲ್ಲ ಒಂದು ಕಾರಣಕ್ಕೆ ಇದನ್ನು ಹೊಗಳುತ್ತಿದ್ದಾರೆ. ಲೇಖಕರು, ಕಂಟೆಂಟ್ ರೈಟರ್‌ಗಳು, ಕೋಡಿಂಗ್ ಕ್ಷೇತ್ರದಲ್ಲಿರುವವರಿಗೆ ಚಾಟ್‌ಜಿಪಿಟಿಯು ಮಾರಕ ಎಂಬ ವರದಿಗಳು ಕೂಡ ಲಭ್ಯವಾಗಿವೆ.
ಅಷ್ಟೇ ಅಲ್ಲ, ಇತ್ತೀಚೆಗಷ್ಟೇ ಚಾಟ್ ಜಿಪಿಟಿಯಿಂದ ನನ್ನ ನಾಯಿ ಬದುಕುಳಿಯಿತು ಎಂದು ವ್ಯಕ್ತಿಯೊಬ್ಬರು ಟ್ವಿಟರ್‌ನಲ್ಲಿ ತಿಳಿಸಿದ್ದರು. ಟ್ವಿಟರ್ ಬಳಕೆದಾರರೊಬ್ಬರು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಚಾಟ್‌ಬಾಟ್ ಚಾಟ್‌ಜಿಪಿಟಿಯಿಂದ ತಮಗೆ ಆದ ಸಹಾಯವನ್ನು ಬರೆದುಕೊಂಡಿದ್ದಾರೆ. ‘ನನ್ನ ಪ್ರೀತಿಯ ನಾಯಿಯ ಜೀವನನ್ನು ಉಳಿಸಿದ್ದು ಚಾಟ್‌ಜಿಪಿಟಿ’ ಎಂದು ಬರೆದುಕೊಂಡಿದ್ದು, ಅದು ಹೇಗೆ ಎಂಬುದನ್ನೂ ವಿವರಿಸಿದ್ದರು. @peakcooper ಎಂಬ ಟ್ವಿಟರ್ ಅಕೌಂಟ್ನಲ್ಲಿ ಈ ಸ್ಟೋರಿ ಹಂಚಿಕೊಳ್ಳಲಾಗಿದೆ. ಅನಾರೋಗ್ಯಕ್ಕೀಡಾದ ನನ್ನ ನಾಯಿ ಸ್ಯಾಸಿಗೆ ಏನಾಗಿದೆ ಎಂದು ಕಂಡು ಹಿಡಿಯಲು ಪಶುವೈದ್ಯರಿಗೂ ಸಾಧ್ಯವಾಗಲಿಲ್ಲ. ಆದರೆ ಚಾಟ್‌ಬಾಟ್ ಚಾಟ್‌ಜಿಪಿಟಿ ನನ್ನ ನಾಯಿಯ ರೋಗ ಪತ್ತೆ ಮಾಡಿ, ಅದನ್ನು ಉಳಿಸಿಕೊಟ್ಟಿತು’ ಎಂದಿದ್ದರು.
ಇದನ್ನೂ ಓದಿ: ChatGpt: ನಾಯಿಯ ಜೀವ ಉಳಿಸಿದ ಚಾಟ್‌ಜಿಪಿಟಿ; ಪಶುವೈದ್ಯರಿಗೂ ಗೊತ್ತಾಗಲಿಲ್ಲ ಎಂದ ಶ್ವಾನದ ಮಾಲೀಕ
ಪ್ರಮುಖ ಸುದ್ದಿ
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
ಭಾರತವು ವಿವಿಧತೆಯಲ್ಲಿ ಏಕತೆಗೆ ಜಗತ್ತಿನಲ್ಲೆ ಖ್ಯಾತಿ ಪಡೆದಿದೆ. ಹಾಗಾಗಿ ಭಾಷೆ ವಿಚಾರದಲ್ಲಿ ಭಾರತೀಯರು ಕಚ್ಚಾಡುವಂಥ ಸನ್ನಿವೇಶವನ್ನು ನಿರ್ಮಾಣ ಮಾಡಬಾರದು.
ನಮ್ಮ ಕರ್ನಾಟಕದ ಹೆಮ್ಮೆಯ ಉತ್ಪನ್ನ, ಕೆಎಂಎಫ್‌ನ ಮೊಸರಿನ ಪ್ಯಾಕೆಟ್ ಮೇಲೆ ದಹಿ ಎಂದು ಹಿಂದಿ ಭಾಷೆಯಲ್ಲಿ ಕಡ್ಡಾಯವಾಗಿ ಮುದ್ರಿಸಬೇಕು ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಆದೇಶ ಹೊರಡಿಸಿತ್ತು. ತಮಿಳುನಾಡಿನ ಮೊಸರು ಉತ್ಪನ್ನದ ಮೇಲೂ ಹಾಗೆಯೇ ಮುದ್ರಿಸುವಂತೆ ಆದೇಶಿಸಲಾಗಿತ್ತು. ಈ ಆದೇಶದ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೊನೆಗೂ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ವಿವಾದಾತ್ಮಕ ಆದೇಶವನ್ನು ಪಂಪಡೆದುಕೊಂಡಿದೆ. ಮೊಸರಿನ ಪ್ಯಾಕೆಟ್ ಮೇಲೆ ದಹಿ ಎಂದು ಹಿಂದಿಯಲ್ಲಿ ಬರೆಯಬೇಕಿಲ್ಲ. Curd ಎಂದು ಇಂಗ್ಲಿಷ್‌ನಲ್ಲಿ ಬರೆದು, ಬ್ರಾಕೆಟ್‌ನಲ್ಲಿ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಮೊಸರು ಎಂದು ಬರೆಯಬಹುದು ಎಂದು ಸ್ಪಷ್ಟನೆ ನೀಡಲಾಗಿದೆ. ಇಂಥದೊಂದು ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತಿತರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಇದೊಂದು ಅನಗತ್ಯವಾಗಿದ್ದ ವಿವಾದ. ಕನ್ನಡಿಗರು ಹಾಗೂ ತಮಿಳರ ಮೇಲೆ ʼದಹಿʼಯನ್ನು ಹೇರಬೇಕು ಎಂದು ಕೇಂದ್ರದ ಪ್ರಾಧಿಕಾರಕ್ಕೆ ಯಾಕೆ ಅನಿಸಿತೋ ಗೊತ್ತಿಲ್ಲ. ಕನ್ನಡದ ಮೊಸರಿನ ಬದಲು ಹಿಂದಿಯ ದಹಿ ಬಂದು ಕೂತರೆ ಉತ್ಪನ್ನದ ಗುಣಮಟ್ಟ ಏನಾದರೂ ಹೆಚ್ಚಾಗುತ್ತದೆಯೇ? ದಹಿಯ ಬದಲು ಮೊಸರು ಇದ್ದರೆ ಗುಣಮಟ್ಟ ಕಡಿಮೆಯಾಗುತ್ತದೆಯೇ? ಅಥವಾ ಕರ್ನಾಟಕದಾಚೆಗೆ ಇಲ್ಲಿನ ಹಾಲಿನ ಉತ್ಪನ್ನಗಳನ್ನು ಪರಿಚಯಿಸಬೇಕು, ಜನಪ್ರಿಯಗೊಳಿಸಬೇಕು ಎಂಬ ಇರಾದೆ ಕೇಂದ್ರಕ್ಕೆ ಇದ್ದರೆ, ಅದಕ್ಕೆ ತಕ್ಕ ಮೂಲಸೌಕರ್ಯಕ್ಕೆ ನೆರವಾಗಬೇಕೇ ಹೊರತು ಹೀಗೆ ಹೆಸರು ಬದಲಾಯಿಸುವುದರಿಂದ ಅಲ್ಲ. ಗುಜರಾತ್ ಮೂಲದ ಅಮುಲ್ ಉತ್ಪನ್ನಗಳು ಗುಜರಾತ್‌ನ ಆಚೆಗೂ ವ್ಯಾಪಿಸಿವೆ. ಕರ್ನಾಟಕದಲ್ಲೂ ಲಭ್ಯವಿವೆ. ಆದರೆ ಇವುಗಳ ಮೇಲೆ ಕನ್ನಡದಲ್ಲಿ ಹಾಲು- ಮೊಸರು ಎಂದು ಮುದ್ರಿಸಿಲ್ಲ. ಅಂದ ಮೇಲೆ ನಂದಿನಿ ಪ್ಯಾಕೆಟ್‌ಗಳ ಮೇಲೆ ಹಿಂದಿಯಲ್ಲಿ ಮುದ್ರಿಸುವುದನ್ನು ಕಡ್ಡಾಯಗೊಳಿಸುವುದರ ಹಿಂದೆ ಯಾವುದೇ ತರ್ಕ, ವೈಜ್ಞಾನಿಕತೆ ಇಲ್ಲ.
ಹಿಂದಿ ಹೇರಿಕೆ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳಲ್ಲಿ ಆಗಾಗ ಆಕ್ರೋಶ ವ್ಯಕ್ತವಾಗುತ್ತಲೇ ಇರುತ್ತದೆ. ಹಿಂದೆ ಅನೇಕ ಬಾರಿ ಹಿಂದಿಯನ್ನು ಬಳಸಲು ಹೋಗಿ ಕೇಂದ್ರ ಸರ್ಕಾರಗಳು ತಮಿಳುನಾಡಿನಲ್ಲಿ ಮುಖಭಂಗಕ್ಕೆ ಒಳಗಾಗಿವೆ. ಹಿಂದಿ ವಿರೋಧಿ ಚಳವಳಿಯ ಮೂಲವೇ ತಮಿಳುನಾಡು. ಇತ್ತೀಚೆಗೆ ತಮಿಳಿಗರಿಂದ ಸ್ವಲ್ಪ ಪಾಠ ಕಲಿತಿರುವ ಕನ್ನಡಿಗರು ತಮ್ಮ ಭಾಷೆಯ ಮೇಲೆ ಆಗುವ ಅನ್ಯಾಕ್ರಮಣವನ್ನು ಪ್ರಶ್ನಿಸಲು ತೊಡಗಿದ್ದಾರೆ. ಕನ್ನಡಿಗರು ಪ್ರೀತಿಯಿಂದ ಎಲ್ಲ ಭಾಷೆಯನ್ನೂ ಕಲಿಯುತ್ತಾರೆ. ಆದರೆ ತಮ್ಮ ಮೇಲೆ ಹೇರಿಕೆಯನ್ನು ಸಹಿಸುವುದಿಲ್ಲ. ಎಲ್ಲ ಭಾರತೀಯ ಭಾಷೆಗಳಂತೆ ಹಿಂದಿಯೂ ಒಂದು ಭಾಷೆ. ಹಿಂದಿ ಭಾಷೆಗೆ ಇರುವ ಘನತೆ ಕನ್ನಡ ಭಾಷೆಗೂ ಇದೆ. ಬ್ಯಾಂಕಿಂಗ್, ರೈಲ್ವೇ ಮುಂತಾದ ವಲಯಗಳಲ್ಲಿ ಹಿಂದಿ ಭಾಷಿಕರು ಬಂದು ತುಂಬಿಕೊಂಡಿರುವುದರಿಂದ ಕನ್ನಡಿಗರಿಗೆ ಹಿಂದಿಯ ಮೇಲೆ ಸ್ವಲ್ಪ ಅಸಹನೆಯೂ ಇದೆ. ಇಂಥ ಹೊತ್ತಿನಲ್ಲಿ ಕೇಂದ್ರ ಸರ್ಕಾರ ಭಾಷೆಯ ವಿಚಾರದಲ್ಲಿ ಸರಸವಾಡುವುದು ಬೆಂಕಿಯ ಜತೆ ಆಡಿದಂತೆ. ಕೇಂದ್ರ ಆಡಳಿತದ ಅಧಿಕಾರಿಗಳು ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳಬೇಕು. ಅನಗತ್ಯವಾಗಿ ಅನ್ಯ ಭಾಷಿಕರನ್ನು ಕೆರಳಿಸುವಂಥ ಸುತ್ತೋಲೆಗಳನ್ನು ಹೊರಡಿಸಬಾರದು. ಕೇಂದ್ರ ಸರ್ಕಾರದ ನಾನಾ ಇಲಾಖೆ, ಬ್ಯಾಂಕ್ ಹುದ್ದೆಗಳ ಆಯ್ಕೆ ವೇಳೆಯೂ ಇಂಗ್ಲಿಷ್, ಹಿಂದಿಯಂತೆ ಸ್ಥಳೀಯ ಭಾಷೆಗಳಿಗೂ ಅದ್ಯತೆ ನೀಡಬೇಕು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಮತ ಪ್ರಮಾಣ ಹೆಚ್ಚಿಸುವ ಆಯೋಗದ ಕ್ರಮವನ್ನು ಬೆಂಬಲಿಸೋಣ
ಹಾಗಂತ ನಾವೂ ಹಿಂದಿ ಭಾಷೆಯ ಬಗ್ಗೆ ಪೂರ್ವಗ್ರಹ ಪೀಡಿತರಾಗಿ ಏಕಪಕ್ಷೀಯವಾಗಿ ದ್ವೇಷ ಕಾರಬೇಕಿಲ್ಲ. ಹಿಂದಿ ಇಂದಿಗೂ ದಕ್ಷಿಣ ಭಾರತೀಯರ ಭಾವನಾತ್ಮಕ ವಲಯವನ್ನು ಪ್ರವೇಶಿಸಲು ಇನ್ನೂ ಶಕ್ತವಾಗಿಲ್ಲವಾದರೂ, ನಮ್ಮ ಸಂವಿಧಾನವೇನೋ ಹಿಂದಿಯನ್ನು ದೇಶದ ಅಧಿಕೃತ ಭಾಷೆಯಾಗಿ ಬಳಸಬಹುದು (ಆರ್ಟಿಕಲ್ 343 (1) ಎಂದಿದೆ. ದೇಶವನ್ನು ಸಮಗ್ರವಾಗಿ ಸಂಪರ್ಕಿಸುವ ಒಂದು ಭಾಷೆ ಇರಲಿ ಎಂಬ ದೂರದೃಷ್ಟಿ ನಮ್ಮ ಹಿರಿಯರಿಗೆ ಇದ್ದಿದ್ದರೆ ಅದು ಸಹಜ. ಇಂದು ಇಂಗ್ಲಿಷೇ ಆ ಕಾರ್ಯವನ್ನು ನಿರ್ವಹಿಸುತ್ತಿದೆ. ಆದರೆ ಹಿಂದಿ ನಮ್ಮದೇ ನೆಲದ ಭಾಷೆ. ಅದರಲ್ಲಿ ವಿಪುಲವಾದ ಸಾಂಸ್ಕೃತಿಕ ಸಂಪತ್ತು ಕೂಡ ಇದೆ. ಆದದ್ದರಿಂದ ನಮಗದು ತ್ಯಾಜ್ಯವಲ್ಲ. ಭಾರತವು ವಿವಿಧತೆಯಲ್ಲಿ ಏಕತೆಗೆ ಜಗತ್ತಿನಲ್ಲೆ ಖ್ಯಾತಿ ಪಡೆದಿದೆ. ಹಾಗಾಗಿ ಭಾಷೆ ವಿಚಾರದಲ್ಲಿ ಭಾರತೀಯರು ಕಚ್ಚಾಡುವಂಥ ಸನ್ನಿವೇಶ ನಿರ್ಮಾಣ ಆಗಬಾರದು.
ದೇಶ
Google Layoffs: ಗೂಗಲ್‌ನಿಂದ ವಜಾಗೊಂಡ ನೌಕರರಿಗೆ ಸಿಗಲಿದೆ 2.6 ಕೋಟಿ ರೂ., ಇವರಿಗೆ ಬೇರೆ ನೌಕರಿಯೇ ಬೇಕಿಲ್ಲ
Google Layoffs: ಐರ್ಲೆಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲ ನೌಕರರಿಗೆ ಮಾತ್ರ ಕೋಟ್ಯಂತರ ರೂಪಾಯಿ Severance Pay ಸಿಗಲಿದೆ. ಆದರೂ, ಗೂಗಲ್‌ನಿಂದ ವಜಾಗೊಂಡ ಯಾವ ನೌಕರನಿಗೂ ಕಂಪನಿಯು ಕಡಿಮೆ ಮೊತ್ತ ನೀಡಿ ಕಳುಹಿಸುತ್ತಿಲ್ಲ ಎಂಬುದು ಗಮನಾರ್ಹ.
ನವದೆಹಲಿ: ಟ್ವಿಟರ್, ಮೆಟಾ, ಮೈಕ್ರೋಸಾಫ್ಟ್, ಅಮೆಜಾನ್, ಆಕ್ಷೆಂಚರ್, ಫೋರ್ಡ್ ಸೇರಿ ಜಗತ್ತಿನ ಅಗ್ರ, ಬಹುರಾಷ್ಟ್ರೀಯ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ. ಜಾಗತಿಕ ಆರ್ಥಿಕ ಹಿಂಜರಿತದ ಭೀತಿ, ಕೊರೊನಾ ಸಮಯದಲ್ಲಿ ಉಂಟಾದ ನಷ್ಟ ತೂಗಿಸುವಿಕೆ ಸೇರಿ ಹಲವು ಕಾರಣಗಳಿಂದಾಗಿ ಸಾಲು ಸಾಲಾಗಿ ಕಂಪನಿಗಳು ನೌಕರರನ್ನು ವಜಾಗೊಳಿಸುತ್ತಿವೆ. ಇದರಿಂದಾಗಿ ಜಾಗತಿಕ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರೂ ಭೀತಿಯಲ್ಲಿಯೇ ಕಾರ್ಯನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ. ಆದರೆ, ಗೂಗಲ್ ಕಂಪನಿಯಿಂದ (Google Layoffs) ವಜಾಗೊಂಡವರು ಮಾತ್ರ ಹೆಚ್ಚು ಯೋಚನೆ ಮಾಡಬೇಕಿಲ್ಲ. ಏಕೆಂದರೆ, ಅವರಿಗೆ ಸಿಗುವ ಬೇರ್ಪಡಿಸುವಿಕೆ ಮೊತ್ತ ಅಥವಾ ಕಂಪನಿಯು ಉದ್ಯೋಗಿಯನ್ನು ವಜಾಗೊಳಿಸಿದ ಬಳಿಕ ನೀಡುವ ಹಣಕಾಸು ಪರಿಹಾರದ ಪ್ಯಾಕೇಜ್ (Severance Pay) ಅಷ್ಟರಮಟ್ಟಿಗೆ ಇದೆ.
ಹೌದು, ಗೂಗಲ್ ಇತ್ತೀಚೆಗೆ ಜಾಗತಿಕವಾಗಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಇವರಲ್ಲಿ ಐರ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದ 240 ಉದ್ಯೋಗಿಗಳು ಕೂಡ ಇದ್ದು, ಅವರಿಗೆ ವಜಾಗೊಳಿಸುವ ಕುರಿತು ಮಾಹಿತಿ ನೀಡಲಾಗಿದೆ. ಸೇಲ್ಸ್ ವಿಭಾಗದ 85, ಟೆಕ್ನಾಲಜಿ ವಿಭಾಗದ 80 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಆದರೆ, ಇವರಲ್ಲಿಯೇ ಕೆಲವು ಮಂದಿಗೆ ಹಣಕಾಸು ಪರಿಹಾರದ ಪ್ಯಾಕೇಜ್ 2.6 ಕೋಟಿ ರೂಪಾಯಿವರೆಗೆ ಸಿಗಲಿದೆ. ಹಾಗಾಗಿ, ವಜಾಗೊಂಡಿರುವ ನೌಕರರಿಗೆ ಸಿಗುವ ಮೊತ್ತವನ್ನು ನೋಡಿದರೆ ಅವರು ಬೇರೆ ಕೆಲಸ ಹುಡುಕುವ ಪ್ರಮೇಯವೇ ಬರುವುದಿಲ್ಲ ಎಂಬುದಾಗಿ ಅಭಿಪ್ರಾಯ ವ್ಯಕ್ತವಾಗಿದೆ.
ವಜಾಗೊಳ್ಳುತ್ತಿರುವ ನೌಕರರಿಗೆ ಕಂಪನಿಯು Severance Pay ನೀಡುವುದಾಗಿ ಭರವಸೆ ನೀಡಿದೆ. ಐರ್ಲೆಂಡ್‌ನಲ್ಲಿ 2003ರಲ್ಲಿ ಕಚೇರಿಯನ್ನು ತೆರೆದಿದ್ದು, ಕಚೇರಿ ಆರಂಭವಾದಾಗಿನಿಂದ ಇದುವರೆಗೆ ಕಾರ್ಯನಿರ್ವಹಿಸಿದ ನೌಕರರಿಗೆ ಇಷ್ಟು ಮೊತ್ತದ ಪ್ಯಾಕೇಜ್ ಸಿಗಲಿದೆ. ಹೀಗೆ, ಸುದೀರ್ಘ ಅವಧಿಗೆ ಕಾರ್ಯನಿರ್ವಹಿಸಿದ ನೌಕರರಿಗೆ ಪ್ರತಿವರ್ಷದಂತೆ ಲೆಕ್ಕ ಹಾಕಿ ಆರು ವಾರಗಳ ಹೆಚ್ಚುವಳಿ ಸಂಬಳ, 30 ದಿನಗಳ ಗಳಿಕೆ ರಜೆ ಸೇರಿ ಅವರ ಫೈನಲ್ ಸೆಟಲ್‌ಮೆಂಟ್ ಮೊತ್ತವು 2.6 ಕೋಟಿ ಆಗಲಿದೆ ಎಂದು ತಿಳಿದುಬಂದಿದೆ.
ಅಮೆರಿಕದ ನೌಕರರಿಗೂ ಸಿಗಲಿದೆ ಹೆಚ್ಚಿನ ಮೊತ್ತ
ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೂಗಲ್ ಉದ್ಯೋಗಿಗಳಿಗೂ ಹೆಚ್ಚಿನ ಪ್ರಮಾಣದ Severance Pay ಪ್ಯಾಕೇಜ್ ಸಿಗಲಿದೆ. ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರಿಗೆ 16 ವಾರಗಳ ಸಂಬಳ, 16 ವಾರದ ಜಿಎಸ್‌ಯು ವೆಸ್ಟಿಂಗ್, 2022ರ ಬೋನಸ್, ಆರು ತಿಂಗಳವರೆಗೆ ವಿಮೆ ವಿಸ್ತರಣೆ, ವಲಸೆ ಬಂದವರು ಬೇರೆ ದೇಶಗಳಿಗೆ ತೆರಳಲು ಅಥವಾ ತಮ್ಮ ದೇಶಗಳಿಗೆ ಮರಳಲು ನೆರವು ಒದಗಿಸುವುದು ಸೇರಿ ಹತ್ತಾರು ಸೌಲಭ್ಯ ನೀಡಿದೆ. ಆದರೆ, ಐರ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಮಾತ್ರ ಹೆಚ್ಚಿನ ಮೊತ್ತ ನೀಡಲಾಗಿದೆ.
ಕಳೆದ ಜನವರಿಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಅವರು ಉದ್ಯೋಗಿಗಳಿಗೆ ಇ-ಮೇಲ್ ಕಳುಹಿಸುವ ಮೂಲಕ ಕೆಲಸದಿಂದ ವಜಾಗೊಳಿಸುತ್ತಿರುವ ತೀರ್ಮಾನವನ್ನು ಪ್ರಕಟಿಸಿದ್ದರು. ಹಾಗೆಯೇ, “ಇಂತಹ ಕಠಿಣ ತೀರ್ಮಾನದಿಂದ ನನ್ನ ಮನಸ್ಸಿಗೆ ನೋವಾಗಿದ್ದು, ಇದರ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ” ಎಂದು ಹೇಳಿದ್ದರು. ಭಾರತದ 450 ಜನ ಗೂಗಲ್‌ನಿಂದ ವಜಾಗೊಂಡಿದ್ದಾರೆ.
ಇದನ್ನೂ ಓದಿ: xooglers: ಗೂಗಲ್‌ನಿಂದ ಕೆಲಸ ಕಳೆದುಕೊಂಡ 7 ಮಂದಿ ಹೊಸ ಕಂಪನಿಯನ್ನೇ ಆರಂಭಿಸಿದರು!
ಕರ್ನಾಟಕ
ವಿಸ್ತಾರ TOP 10 NEWS: ಕರ್ನಾಟಕದ ರಾಜಕೀಯ ಪಲ್ಸ್‌ನಿಂದ, ಸಿದ್ದುಗೆ ವರುಣ ಟೆನ್ಶನ್‌ವರೆಗಿನ ಪ್ರಮುಖ ಸುದ್ದಿಗಳಿವು
ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ದಿನದ ಪ್ರಮುಖ ಬೆಳವಣಿಗೆಗಳಲ್ಲಿ ಪ್ರಮುಖ ಸುದ್ದಿಗಳ ಗುಚ್ಛವೇವಿಸ್ತಾರ TOP 10 NEWS
1. Pulse of Karnataka 2: ಹಳೆ ಮೈಸೂರು, ಕರಾವಳಿ, ಮಲೆನಾಡು, ಮಧ್ಯಕರ್ನಾಟಕದ ಜನರ ನಾಡಿ ಮಿಡಿತ
ವಿಸ್ತಾರ ನ್ಯೂಸ್, ರಾಜ್ಯದ ಪ್ರತಿಷ್ಟಿತ ಪೊಲಿಟಿಕಲ್ ಅನಾಲಿಸಿಸ್ ಸಂಸ್ಥೆಯಾದ ಅಖಾಡ ಜತೆಗೂಡಿ ರಾಜ್ಯದ ಮೂಲೆಮೂಲೆಗೆ ತೆರಳಿ ಸ್ಥಳೀಯರ ಪಲ್ಸ್ ಅರಿಯುವ ಕೆಲಸ ಮಾಡಿದೆ. ಮಾರ್ಚ್ ಮೊದಲ ವಾರದಲ್ಲಿ ಪ್ರಕಟವಾಗಿದ್ದ ಮೊದಲ ಆವೃತ್ತಿ ನಂತರ ಇದೀಗ ಪಲ್ಸ್ ಆಫ್ ಕರ್ನಾಟಕ ಎರಡನೇ ಆವೃತ್ತಿ ಪ್ರಸಾರ ಆರಂಭವಾಗಿದೆ. ಮೊದಲ ದಿನದಂದು ಹಳೆ ಮೈಸೂರು, ಕರಾವಳಿ, ಮಲೆನಾಡು, ಮಧ್ಯಕರ್ನಾಟಕದ ಜನರ ನಾಡಿ ಮಿಡಿತವನ್ನು ಪ್ರಕಟಿಸಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಕರ್ನಾಟಕದ ಎಲ್ಲ ಪ್ರದೇಶದ ಚಿತ್ರಣವನ್ನು ನೀಡಲಾಗುತ್ತದೆ.
–Pulse of Karnataka 2: ಹಳೆ ಮೈಸೂರು ವಲಯ: JDS ಭದ್ರಕೋಟೆಯಲ್ಲಿ ಸಿದ್ದರಾಮಯ್ಯ ಆಗುವರೇ ಕಿಂಗ್?
–Pulse of Karnataka 2: ಮಧ್ಯ ಕರ್ನಾಟಕ: ಸೀರೆ, ಮಿಕ್ಸಿ, ಕುಕ್ಕರ್ ನೀಡಿದರೆ ಮತಗಳು ಸಿಗುತ್ತವೆಯೇ?
–Pulse of Karnataka 2: ಕರಾವಳಿ-ಮಲೆನಾಡು: ಬಿಜೆಪಿಗೆ ಮತ ಸೆಳೆಯಲು ಬಿ.ಎಸ್. ಯಡಿಯೂರಪ್ಪ ಎಷ್ಟು ಅನಿವಾರ್ಯ?
2. ಕೋಲಾರ ಬಳಿಕ ವರುಣದಲ್ಲೂ ಸಿದ್ದುಗೆ ಟೆನ್ಶನ್; ವಿಜಯೇಂದ್ರ ಕಣಕ್ಕಿಳಿಸಲು ಬಿಜೆಪಿ ಮಾಸ್ಟರ್ ಪ್ಲ್ಯಾನ್?
ಬೆಂಗಳೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ಕೋಲಾರ ಬಳಿಕ ಇದೀಗ ಸುರಕ್ಷಿತ ಎಂದು ಹೇಳಲಾದ ವರುಣದಲ್ಲೂ ಟೆನ್ಶನ್ ಶುರುವಾಗಿದೆ. ಇದಕ್ಕೆ ಕಾರಣ ಬಿಜೆಪಿ ಮಾಡಿಕೊಂಡಿದೆ ಎನ್ನಲಾದ ಮಾಸ್ಟರ್ ಪ್ಲ್ಯಾನ್. ಇಲ್ಲಿ ಬಿಜೆಪಿಯು ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ತಂತ್ರ ಹೂಡಿದೆ ಎನ್ನಲಾಗಿದೆ. ಇದೇ ಸಂಕೇತವನ್ನು ಬಿಎಸ್‌ವೈ ಕೂಡಾ ನೀಡಿದ್ದಾರೆ.ವಿಜಯೇಂದ್ರ ಆರ್‌ಎಸ್‌ಎಸ್ ಕಚೇರಿಗೆ ಭೇಟಿ ನೀಡಿದ್ದು, ಈ ಬೆಳವಣಿಗೆಗೆ ಪುಷ್ಟಿ ನೀಡಿದೆ. ಪೂರ್ಣ ವರದಿಗೆ ಕ್ಲಿಕ್ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ : ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಚಿಂತನೆ: ಖಚಿತಪಡಿಸಿದ ಬಿ.ಎಸ್.ವೈ
3. ಕ್ರೈಸ್ತ, ಜೈನರಿಗೆ ಮೀಸಲಾತಿ ಮುಂದುವರಿಕೆ; ಮುಸ್ಲಿಮರು ಮಾತ್ರ ಹೊರಕ್ಕೆ: ವರ್ಗೀಕರಣದ ಕುರಿತು ಚರ್ಚೆ
ಎಸ್‌ಸಿಎಸ್‌ಟಿ ಸಮುದಾಯಕ್ಕೆ ಒಳಮೀಸಲಾತಿ ಹಂಚಿಕೆ ನಂತರ ಒಕ್ಕಲಿಗೆ ಹಾಗೂ ವೀರಶೈವ ಲಿಂಗಾಯತರ ಮೀಸಲಾತಿ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇದರ ಕುರಿತು ಕೆಲವು ಜಿಜ್ಞಾಸೆಗಳು ಮೂಡಿವೆ. ಸಂವಿಧಾನಬಾಹಿರ ಎಂದು ಮುಸ್ಲಿಮರನ್ನು ಮೀಸಲಿನಿಂದ ಹೊರಗಿಟ್ಟ ಸರ್ಕಾರ, ಜೈನ್ ಹಾಗೂ ಕ್ರಿಶ್ಚಿಯನ್ನರನ್ನು ಹಾಗೆಯೇ ಉಳಿಸಿಕೊಂಡಿದೆ. ಸರ್ಕಾರದ ಈ ಸರ್ಕಸ್ ಭಾರಿ ಚರ್ಚೆಗೆ ಕಾರಣವಾಗಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
ಪೂರಕ ವರದಿ : ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಯಡಿಯೂರಪ್ಪ
4.ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ಆಂತರಿಕ ಚುನಾವಣೆ
ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಇತಿಹಾಸದಲ್ಲೆ ಮೊಟ್ಟ ಮೊದಲ ಬಾರಿಗೆ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ಕಾರ್ಯಕರ್ತರ ಆಂತರಿಕ ಚುನಾವಣೆಯನ್ನು ಶುಕ್ರವಾರ ರಾಜ್ಯಾದ್ಯಂತ ನಡೆಸಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಚುನಾವಣಾ ಅಕ್ರಮ: ತುಮಕೂರು ಗ್ರಾಮಾಂತರ ಜೆಡಿಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ
ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಜಾತ್ಯತೀತ ಜನತಾದಳಕ್ಕೆ ತೀವ್ರ ಹಿನ್ನಡೆಯಾಗಿದೆ. ತುಮಕೂರು ಗ್ರಾಮಾಂತರದ ಜೆಡಿಎಸ್ ಶಾಸಕ ಗೌರಿಶಂಕರ್ ಅವರನ್ನು ರಾಜ್ಯ ಹೈಕೋರ್ಟ್ ಶಾಸಕತ್ವದಿಂದ ಅನರ್ಹಗೊಳಿಸಿದೆ. ಆದರೆ, ಈ ಆದೇಶ ಈ ಅವಧಿಗೆ ಮಾತ್ರ ಸೀಮಿತವಾಗಿದ್ದು, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಹಿಂದಿ ಹೇರಿಕೆ ವಿರೋಧಕ್ಕೆ ಮಣಿದ ಕೇಂದ್ರ, ಮೊಸರು ಪ್ಯಾಕೆಟ್‌ನಲ್ಲಿ ‘ದಹಿ’ ಎಂಬ ಮುದ್ರಣ ಆದೇಶ ವಾಪಸ್
ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಯತ್ನಕ್ಕೆ ಕರ್ನಾಟಕ ಹಾಗೂ ತಮಿಳುನಾಡು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೊಸರಿನ ಮೇಲೆ ಹಿಂದಿಯ ದಹಿ (Dahi Row) ಎಂಬುದಾಗಿ ಮುದ್ರಿಸಬೇಕು ಎಂಬ ಆದೇಶವನ್ನು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ(FSSAI)ವು ಹಿಂಪಡೆದಿದೆ. ಆ ಮೂಲಕ ಕರ್ನಾಟಕ ಹಾಗೂ ತಮಿಳುನಾಡು ಸೇರಿ ಹಲವೆಡೆ ವ್ಯಕ್ತವಾದ ವಿರೋಧಕ್ಕೆ ಕೇಂದ್ರ ಸರ್ಕಾರ ಮಣಿದಂತಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಮೋದಿ ಓಡಿಸಿ, ದೇಶ ಉಳಿಸಿ ಬಳಿಕ ದೇಶಾದ್ಯಂತ ಆಪ್‌ನಿಂದ ಪೋಸ್ಟರ್ ಕ್ಯಾಂಪೇನ್ ಶುರು!
ನವದೆಹಲಿ: ಮೋದಿಯನ್ನು ಓಡಿಸಿ, ದೇಶವನ್ನು ಉಳಿಸಿ ಅಭಿಯಾನದ ಬಳಿಕ ಆಮ್ ಆದ್ಮಿ ಪಾರ್ಟಿ, ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಪೋಸ್ಟರ್ ಕ್ಯಾಂಪೇನ್ ಗುರುವಾರ ಆರಂಭಿಸಿದೆ. ಒಟ್ಟು 11 ಭಾಷೆಗಳಲ್ಲಿ ದೇಶಾದ್ಯಂತ ಮೋದಿ ವಿರೋಧಿ ಪೋಸ್ಟರ್‌ಗಳನ್ನು ಪ್ರದರ್ಶಿಸಿದೆ. ಈ ಹಿಂದೆ, ಮೋದಿಯನ್ನು ಓಡಿಸಿ, ದೇಶವನ್ನು ಉಳಿಸಿ ಪೋಸ್ಟರ್‌ಗಳನ್ನು ದಿಲ್ಲಿಯ ಬೀದಿಗಳಲ್ಲಿ ಅಂಟಿಸಲಾಗಿತ್ತು. ಈ ಸಂಬಂಧ ದಿಲ್ಲಿ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ನೂರು ಎಫ್ಐಆರ್‌ಗಳನ್ನು ದಾಖಲಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. IPL 2023: ಆರ್ಸಿಬಿಗೆ ಆಘಾತ; ಮೊದಲ ಪಂದ್ಯಕ್ಕೆ ಸ್ಟಾರ್ ಆಟಗಾರರು ಅಲಭ್ಯ
ಕಳೆದ 15 ಆವೃತ್ತಿಯ ಐಪಿಎಲ್ನಲ್ಲಿ ಈ ಸಲ ಕಪ್ ನಮ್ದೇ ಎಂದು ಹೇಳುತ್ತಲೇ ಬಂದಿರುವ ಆರ್ಸಿಬಿ ಒಂದು ಬಾರಿಯೂ ಕಪ್ ಗೆಲ್ಲುವಲ್ಲಿ ಯಶಸ್ಸು ಕಂಡಿಲ್ಲ. ಈ ಬಾರಿಯಾದರೂ ಕಪ್ ಗೆಲ್ಲಬೇಕೆಂದಿದ್ದ ಆರ್ಸಿಬಿಗೆ ಗಾಯದ ಸಮಸ್ಯೆಯೊಂದು ಅಡ್ಡಿಯಾದಂತೆ ತೋರುತ್ತಿದೆ. ಆರ್ಸಿಬಿ ತನ್ನ ಐಪಿಎಲ್ ಅಭಿಯಾನವನ್ನು ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಆರಂಭಿಸಲಿದೆ. ಆದರೆ ಈ ಪಂದ್ಯಕ್ಕೆ ಸ್ಟಾರ್ ಆಟಗಾರರಿಬ್ಬರು ಅಲಭ್ಯರಾಗಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ. ಪೂರ್ಣ ವರದಿಗೆ ಲಿಂಕ್ ಕ್ಲಿಕ್ ಮಾಡಿ
9. Import duty exemption : ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧಗಳ ದರ ಇಳಿಕೆ
ಕೇಂದ್ರ ಸರ್ಕಾರವು ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧ ಹಾಗೂ ಆಹಾರಗಳ ದರ ಇಳಿಕೆಗೆ ಪೂರಕವಾಗಿ, ಅವುಗಳಿಗೆ ಆಮದು ಸುಂಕದಿಂದ ವಿನಾಯಿತಿ (Import duty exemption) ನೀಡಿದೆ. ಏಪ್ರಿಲ್ 1ರಿಂದ ಈ ಆಮದು ಸುಂಕ ವಿನಾಯಿತಿ ಅನ್ವಯವಾಗಲಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
10. ‘ಲೋಕವನ್ನೇ ಗೆದ್ದವನೆ’; ಮೋದಿ ಭಾವಚಿತ್ರಕ್ಕೆ ಮುತ್ತು ಕೊಟ್ಟ ಕರ್ನಾಟಕದ ರೈತ, ವಿಡಿಯೊ ವೈರಲ್
ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಎಷ್ಟೇ ಟೀಕೆ ಮಾಡಿದರೂ, ಬೆಲೆಯೇರಿಕೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದರೂ, ಪ್ರಧಾನಿ ಮೋದಿ ಅವರ ಮೇಲೆ ಜನರಿಗಿರುವ ಪ್ರೀತಿ, ಬೆಂಬಲದಲ್ಲಿ ಮಾತ್ರ ಕಡಿಮೆಯಾಗಿಲ್ಲ. ದೇಶದ ಯಾವುದೇ ಮೂಲೆಗೆ ಹೋದರೂ ನರೇಂದ್ರ ಮೋದಿ ಅವರಿಗೆ ಜನ ಭಾರಿ ಬೆಂಬಲ ವ್ಯಕ್ತಪಡಿಸುತ್ತಾರೆ. ಗಂಟೆಗಟ್ಟಲೆ ನಿಂತು, ಜನರ ಗದ್ದಲದ ಮಧ್ಯೆಯೂ ಮೋದಿ ಅವರನ್ನು ಕಣ್ತುಂಬಿಕೊಳ್ಳುತ್ತಾರೆ. ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ ಕರ್ನಾಟಕದ ರೈತರೊಬ್ಬರು ಬಸ್ ಮೇಲಿರುವ ಮೋದಿ ಅವರ ಭಾವಚಿತ್ರಕ್ಕೆ ಮುತ್ತು ಕೊಟ್ಟಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇನ್ನಷ್ಟು ಪ್ರಮುಖ ಸುದ್ದಿಗಳು
- Indore Temple Tragedy: ಇಂದೋರ್ ದೇಗುಲದಲ್ಲಿ ಮೆಟ್ಟಿಲುಬಾವಿ ಕುಸಿದು 13 ಜನ ಸಾವು; ಮೋದಿ ಸಂತಾಪ
- World Master Athletics: 95ನೇ ವಯಸ್ಸಿನಲ್ಲಿ ಮೂರು ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಭಗವಾನಿ ದೇವಿ
- ವಿಧಾನಸಭೆಯಲ್ಲಿ ಕುಳಿತು ಬ್ಲ್ಯೂ ಫಿಲಂ ವೀಕ್ಷಿಸಿದ ತ್ರಿಪುರಾ ಬಿಜೆಪಿ ಶಾಸಕ, ಉಗಿದು ಉಪ್ಪಿನಕಾಯಿ ಹಾಕಿದ ಜನ
- ಧವಳ ಧಾರಿಣಿ ಅಂಕಣ: ರಾಮನೆನ್ನುವ ನಿತ್ಯ ಆದರ್ಶ
- ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಭಾಗ-6, ನಿಮ್ಮದೂ ಒಂದು ಯಶೋಗಾಥೆ ಯಾಕಾಗಬಾರದು?
-
ಕರ್ನಾಟಕ14 hours ago
High Court order: ತುಮಕೂರು ಗ್ರಾಮಾಂತರ ಜೆಡಿಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ: ಕೋರ್ಟ್ ಆದೇಶ
-
ಕ್ರಿಕೆಟ್15 hours ago
IND VS PAK: ಏಕದಿನ ವಿಶ್ವಕಪ್; ತಟಸ್ಥ ತಾಣದಲ್ಲಿ ನಡೆಯಲಿದೆ ಪಾಕಿಸ್ತಾನದ ಪಂದ್ಯಗಳು!
-
ಕರ್ನಾಟಕ12 hours ago
Karnataka BJP: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಚಿಂತನೆ: ಖಚಿತಪಡಿಸಿದ ಬಿ.ಎಸ್. ಯಡಿಯೂರಪ್ಪ
-
ಕ್ರಿಕೆಟ್12 hours ago
ICC World Cup 2023: ಭಾರತದಲ್ಲೇ ನಡೆಯಲಿದೆ ವಿಶ್ವ ಕಪ್ ಪಂದ್ಯ; ಐಸಿಸಿ ಸ್ಪಷ್ಟನೆ
-
ಕರ್ನಾಟಕ13 hours ago
Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ
-
ಕರ್ನಾಟಕ14 hours ago
Karnataka BJP: ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಬಿ.ಎಸ್. ಯಡಿಯೂರಪ್ಪ
-
ದೇಶ14 hours ago
ಸ್ಮೃತಿ ಇರಾನಿಯನ್ನು ಡಾರ್ಲಿಂಗ್ ಎಂದು ಬಿಜೆಪಿ ನಾಯಕ ಟ್ವೀಟ್, ಮಾನಹಾನಿ ನೋಟಿಸ್ ಕಳುಹಿಸಿದ ಕೈ ನಾಯಕ!
-
ಕ್ರಿಕೆಟ್10 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ