Site icon Vistara News

KPSC Exam 2024 : ಕೆಪಿಎಸ್‌ಸಿ ಮರುಪರೀಕ್ಷೆಗೆ ಸರ್ಕಾರ ಅಸ್ತು; ಕರ್ತವ್ಯ ಲೋಪವೆಸಗಿದ ಅಧಿಕಾರಿಗಳು ಅಮಾನತು

Govt approves KPSC re-examination Officials suspended for dereliction of duty

ಬೆಂಗಳೂರು: ಕೆಪಿಎಸ್‌ಸಿ ಪ್ರಿಮಿಲ್ಸ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಎಡವಟ್ಟು ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸಲು ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ತಮ್ನ X ಖಾತೆ ಮೂಲಕ ಮರು ಪರೀಕ್ಷೆ ನಡೆಸುವ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡಕ್ಕೆ ಅನುವಾದ ಮಾಡುವ ವೇಳೆ ಆಗಿದ್ದ ಲೋಪದೋಷಗಳ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸಲು ಸಿಎಂ ಸೂಚನೆ ನೀಡಿದ್ದಾರೆ.

ಕಳೆದ ಆಗಸ್ಟ್ 27ರಂದು ಕೆಪಿಎಸ್‌ಸಿ ಪೂರ್ವ ಭಾವಿ ಪರೀಕ್ಷೆ ನಡೆದಿತ್ತು. 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್‌-ಎ ಮತ್ತು ಗ್ರೂಪ್‌-ಬಿ ವೃಂದದ ಒಟ್ಟು 384 ಹುದ್ದೆಗಳಿಗೆ ಪ್ರಿಲಿಮ್ಸ್ ಎಕ್ಸಾಂ ನಡೆಸಿತ್ತು. ಸುಮಾರು 2 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಈ ಪರೀಕ್ಷೆ ಬರೆದಿದ್ದಾರೆ. ಆದರೆ ಈ ಪರೀಕ್ಷೆಯಲ್ಲಿ ಕನ್ನಡದ ಕಗ್ಗೋಲೆ ಮಾಡಲಾಗಿದೆ, ಕನ್ನಡದ ಪ್ರಶ್ನೆಗಳನ್ನು ತಪ್ಪಾಗಿ ಕೇಳಲಾಗಿದೆ. ಇದರಿಂದ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ತೊಂದರೆಯಾಗಿತ್ತು. 60ಕ್ಕೂ ಹೆಚ್ಚು ತಪ್ಪುಗಳನ್ನು ಈ ಪರೀಕ್ಷೆಯಲ್ಲಿ ಮಾಡಲಾಗಿತ್ತು.

ಕೆಪಿಎಸ್‌ಸಿ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕವಾಗಿದ್ದವೆಂಬ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣ, ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಮುಂದಿನ ಎರಡು ತಿಂಗಳುಗಳ ಒಳಗೆ ಮರುಪರೀಕ್ಷೆ ಮಾಡುವಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿದ್ದೇನೆ.

ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಸೇವೆಯನ್ನು ಅಮಾನತು ಮಾಡಲಾಗಿದೆ. ಮುಂಬರುವ ಪರೀಕ್ಷೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ, ಸಮರ್ಪಕವಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ನಾವು ನೇಮಕಾತಿ ಪ್ರಕ್ರಿಯೆಗಳ ಸಮಗ್ರತೆ ಮತ್ತು ನಂಬಿಕಾರ್ಹತೆಯನ್ನು ಎತ್ತಿಹಿಡಿದು, ಪರೀಕ್ಷಾರ್ಥಿಗಳ ಹಿತರಕ್ಷಿಸಲು ಬದ್ಧರಾಗಿದ್ದೇವೆ.

ಕೆಪಿಎಸ್‌ಸಿ ಮರುಪರೀಕ್ಷೆಗೆ ಸರ್ಕಾರ ಅಸ್ತು ಹಿನ್ನೆಲೆಯಲ್ಲಿ ಫ್ರೀಡ್ಂ ಪಾರ್ಕ್‌ನಲ್ಲಿ ಅಭ್ಯರ್ಥಿಗಳ ಸಂಭ್ರಮಾಚರಣೆ ಜೋರಾಗಿತ್ತು. ಈ ಕುರಿತು ಕರವೇ ನಾರಾಯಣ ಗೌಡ ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆ ಗೊಂದಲಕ್ಕೆ ಕಾರಣವಾಗಿತ್ತು. ಕನ್ನಡದ ಮಕ್ಕಳಿಗೆ ಅನ್ಯಾಯವಾಗಿತ್ತು. 160 ಪ್ರಶ್ನೆಗಳು ಗೊಂದಲ ಇದೆ ಎಂದು ಅಭ್ಯರ್ಥಿಗಳು ಹೇಳಿದ್ದರು. ಅಭ್ಯರ್ಥಿಗಳ ಜತೆ ನಾವಿದ್ದೇವೆ ಎಂದು ಹೋರಾಟಕ್ಕೆ ಕರೆ ಕೊಟ್ಟಿದ್ದೆವು. ಮರು ಪರೀಕ್ಷೆಗೆ ನಾವು ಆಗ್ರಹಿಸಿದ್ದೆವು. ಲಕ್ಷಾಂತರ ಮಕ್ಕಳ ಒತ್ತಾಯದಂತೆ ಮರು ಪರೀಕ್ಷೆ ಮಾಡಲು ಆಗ್ರಹಿಸಿದ್ದೆವು. ನಾವು ಸರ್ಕಾರದ ಮುಂದೆ ಬೇಡಿಕೆಯನ್ನು ಇಟ್ಟಿದ್ದವು. ಇವತ್ತು ಸರ್ಕಾರ, ಸಿಎಂ ಮರು ಪರೀಕ್ಷೆಗೆ ಆದೇಶ ಮಾಡಿದ್ದಾರೆ. ಮರು ಪರೀಕ್ಷೆಗೆ ಅವಕಾಶ ಕೊಟ್ಟಿರುವ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ. ಯಾವ ಅಧಿಕಾರಿಗಳು ಈ ಲೋಪಕ್ಕೆ ಕಾರಣವಾಗಿದ್ರಲ್ಲ ಅವರಿಗೆ ಶಿಕ್ಷೆಯಾಗಬೇಕು. ಇದು ಕನ್ನಡಿಗರ ಸಿಕ್ಕ ಜಯವೆಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version