Site icon Vistara News

Krishna Byre Gowda: ರಾಜ್ಯಪಾಲರ ಅಧಿಕಾರ ದುರುಪಯೋಗಪಡಿಸಿಕೊಂಡರೆ ಕೋರ್ಟ್‌ಗೆ ಹೋಗುತ್ತೇವೆ: ಕೃಷ್ಣಭೈರೇಗೌಡ

krishna byre gowda

ಹಾಸನ: ಕನ್ನಡಿಗರಿಂದ ಆಯ್ಕೆ ಆಗಿರುವ ಸರ್ಕಾರವನ್ನ ಬುಡಮೇಲು ಮಾಡಲು ಬಿಜೆಪಿ- ಜೆಡಿಎಸ್ (BJP- JDS) ಇಬ್ಬರೂ ಸೇರಿ ಏನಾದರೂ ಮಾಡಿ ಯತ್ನಿಸುತ್ತಿದ್ದಾರೆ. ಅದಕ್ಕಾಗಿ ರಾಜಭವನವನ್ನು (Rajbhavan) ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯಪಾಲರ (Governor) ಕಚೇರಿಯನ್ನು ದುರುಪಯೋಗಪಡಿಸಿಕೊಂಡು ನಮ್ಮ ಸರ್ಕಾರವನ್ನು ಬುಡಮೇಲು ಮಾಡಲು ಹೋದರೆ ನಾವು ಸುಪ್ರೀಂ ಕೋರ್ಟ್‌ಗೆ (Supreme Court) ಹೋಗಿ ಹೋರಾಟ ಮಾಡುತ್ತೇವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ (Revenue Minister Krishna Byre Gowda) ಎಚ್ಚರಿಸಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಲುವಿನಲ್ಲಿ ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಈ ಬಗ್ಗೆ ಮಾತನಾಡಿದರು. ಕೇಂದ್ರ ಸರಕಾರ ಹಾಗೂ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಅವರು ಕಿಡಿ ಕಾರಿದರು.

ಬಿಜೆಪಿ-ಜೆಡಿಎಸ್ ಇಬ್ಬರು ಸೇರಿ ಏನಾದರೂ ಮಾಡಿ ಕನ್ನಡಿಗರಿಂದ ಆಯ್ಕೆ ಆಗಿರುವ ಸರ್ಕಾರವನ್ನ ಬುಡಮೇಲು ಮಾಡಲು ಯತ್ನಿಸುತ್ತಿದ್ದಾರೆ. ಚುನಾಯಿತ ಸರ್ಕಾರವನ್ನು ಸಂವಿಧಾನ ವಿರುದ್ಧವಾಗಿ ಬುಡಮೇಲು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇಡಿ ಬಿಜೆಪಿಯ ಪೊಲಿಟಿಕಲ್ ವಿಂಗ್ ಆಗಿದೆ. ಇಡಿಯವರು ಬಂದು ತಪ್ಪು ಮಾಡಿರುವವರಿಗೆ ರಕ್ಷಣೆ ಕೊಡುತ್ತೇವೆ. ನೀವು ಸಿಎಂ ಮೇಲೆ ಹೇಳಿಕೆ ಕೊಡಿ ಅಂತಾರೆ. ತಪ್ಪು ಮಾಡಿರುವವರನ್ನು ರಕ್ಷಣೆ ಮಾಡಿ ಹಗರಣ ಮುಚ್ಚಿ ಹಾಕಿ ಸಿಎಂ ತಲೆಗೆ ಕಟ್ಟಬೇಕು ಎನ್ನುವುದು ಅವರ ಉದ್ದೇಶ ಎಂದು ಕೃಷ್ಣಭೈರೇಗೌಡ ಹೇಳಿದ್ದಾರೆ.

ಹಗರಣದ ಹಿಂದೆ ಇರುವವರನ್ನು ಪತ್ತೆ ಮಾಡಿ ಶಿಕ್ಷೆ ಕೊಡಲು ಅವರು ಬಂದಿಲ್ಲ. ಈ ಹಗರಣವನ್ನು ಉಪಯೋಗಿಸಿಕೊಂಡು ನಮ್ಮ ರಾಜ್ಯದಲ್ಲಿರುವ ಸರ್ಕಾರವನ್ನು ಬುಡಮೇಲು ಮಾಡಬೇಕು ಎನ್ನುವುದು ಅವರ ಉದ್ದೇಶ. ಬೇರೆ ರಾಜ್ಯಗಳಲ್ಲೂ ಇದೇ ರೀತಿ ಇಡಿ ಉಪಯೋಗಿಸಿಕೊಂಡು ಸರ್ಕಾರ ಅಸ್ಥಿರಗೊಳಿಸಿದ್ದಾರೆ. ಕರ್ನಾಟಕದಲ್ಲೂ ತನಿಖಾ ಸಂಸ್ಥೆಯನ್ನು ಉಪಯೋಗಿಸಿಕೊಂಡು ನಮ್ಮ ಸರ್ಕಾರವನ್ನು ಬುಡಮೇಲು ಮಾಡಲು ಕುತಂತ್ರದಿಂದ ಹೊರಟಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಚುನಾವಣೆ ಮುಗಿದ ಮೇಲೆ ಏನಾದರೂ ಮಾಡಿ ಸರ್ಕಾರ ಬೀಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಕಲ್ಲೇಶ್ ಎನ್ನುವ ಅಧಿಕಾರಿಗೆ ಸಿಎಂ ವಿರುದ್ಧ ಹೇಳಿಕೆ ಕೊಡು, ಕೊಡಲಿಲ್ಲ ಎಂದರೆ ಏಳು ವರ್ಷ ಜೈಲಿಗೆ ಹಾಕ್ತಿವಿ ಎಂದು ಹೆದರಿಸುತ್ತಿದ್ದಾರೆ. ನೀನು ಹೇಳಿಕೆ ಕೊಟ್ಟರೆ ನಾವೇ ರಕ್ಷಣೆ ಕೊಡುತ್ತೇವೆ ಎಂದು ಬಲವಂತದ ಮೇಲೆ ಹೇಳಿಕೆಗಳನ್ನು ಕೊಡಿಸುವ ಮೂಲಕ ಸರ್ಕಾರವನ್ನು ತಪ್ಪು ದಾರಿಗೆ ಎಳೆದು ಸರ್ಕಾರವನ್ನ ಬುಡಮೇಲು ಮಾಡಲು ಹೊರಟಿದ್ದಾರೆ. ಇಡಿ ಅಧಿಕಾರಿ ಮೇಲೆ ಎಫ್‌ಐಆರ್ ಕೂಡ ಆಗಿದೆ. ಅದನ್ನು ಅಲ್ಲಿಗೆ ಬಿಟ್ಟು ಈಗ ರಾಜಭವನವನ್ನು ದುರುಪಯೋಗ ಪಡಿಸಿಕೊಳ್ಳಲು ಹೊರಟಿದ್ದಾರೆ ಎಂದು ಅವರು ಟೀಕಿಸಿದರು.

ರಾಜ್ಯಪಾಲರಿಗೆ ಅರ್ಜಿಗಳನ್ನು ಕೊಟ್ಟು ರಾಜ್ಯಪಾಲರಿಂದ ಸರ್ಕಾರಕ್ಕೆ ಪತ್ರಗಳನ್ನು ಬರೆಸಿ ಏನಾದರೂ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿದ್ದಾರೆ. ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಸಿಲುಕಿಸಿ ಸರ್ಕಾರ ಬುಡಮೇಲು ಮಾಡಲು ಹೊರಟಿದ್ದಾರೆ. ನಮಗೂ ಸಂವಿಧಾನ ಇದೆ. ಈ ದೇಶದಲ್ಲಿ ಜನ ಸಂವಿಧಾನದ‌ ಪರವಾಗಿ ಮತ ಕೊಟ್ಟಿದ್ದಾರೆ. ಸಂವಿಧಾನದ ರಕ್ಷಣೆ ನಮಗೆ ಇದೆ ಎಂದವರು ಹೇಳಿದ್ದಾರೆ.

ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡು ನಮ್ಮ ಸರ್ಕಾರವನ್ನು ಬುಡಮೇಲು ಮಾಡಲು ಹೋದರೆ ನಾವು ಕೋರ್ಟ್‌ಗೆ ಹೋಗಿ ಹೋರಾಟ ಮಾಡುತ್ತೇವೆ. ಹಲವು ರಾಜ್ಯಗಳಲ್ಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಷ್ಟೇ ಅಲ್ಲ ಪ್ರಜಾಪ್ರಭುತ್ವ ಉಳಿಸಲು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಬಿಜೆಪಿಯವರು ಇವತ್ತು ಹತಾಶರಾಗಿದ್ದಾರೆ. ಜೆಡಿಎಸ್‌ನವರು ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಜೆಡಿಎಸ್‌‌ನ ಒಬ್ಬರು, ಬಿಜೆಪಿಯ ಒಬ್ಬರು ದೆಹಲಿಯಲ್ಲಿ ಕುಳಿತುಕೊಂಡು ಕರ್ನಾಟಕಕ್ಕೆ ನ್ಯಾಯ ಕೊಡಿಸುವುದನ್ನು ಬಿಟ್ಟು ನಮ್ಮ ಸರ್ಕಾರ ಬೀಳಿಸಲು ಹೊಂಚು ಹಾಕುತ್ತಿದ್ದಾರೆ. ಕೇಂದ್ರದಲ್ಲಿ ಮಂತ್ರಿಯಾಗಿರುವವರು ಮೇಕೆದಾಟು, ಕಳಸಾಬಂಡೂರಿ ಯೋಜನೆಗೆ ದುಡ್ಡು ಕೊಡಿಸುವುದು ಬಿಟ್ಟು ಅಲ್ಲಿ ಕುಳಿತುಕೊಂಡು ನಮ್ಮ ಸರ್ಕಾರ ಬೀಳಿಸುವುದು ಹೇಗೆಂದು ಸ್ಕೆಚ್ ಹಾಕುತ್ತಿದ್ದಾರೆ ಎಂದು ಅವರು ಟೀಕಿಸಿದರು.

ನಾವು ಕೈಕಟ್ಟಿ ಕುಳಿತು ಕೊಳ್ಳುವುದಿಲ್ಲ, ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಎಲ್ಲಾ ಸವಾಲುಗಳನ್ನು ಎದುರಿಸಲು ತಯಾರಿದ್ದೇವೆ. ಅವರು ಏನು ಮಾಡ್ತಾರೆ ಮಾಡಲಿ. ಈಗ ಅವರವರಲ್ಲೇ ಜಗಳ ಶುರುವಾಗಿದೆ. ಪ್ರಜಾಪ್ರಭುತ್ವ ಉಳಿಯಬೇಕು ಅದಕ್ಕಾಗಿ ಬೀದಿ ಹೋರಾಟ ಹಾಗೂ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಈ ಸರ್ಕಾರ ಅಲ್ಲಾಡಿಸಬೇಕು ಎಂದು ಹಗಲುಗನಸು ಕಾಣುತ್ತಿದ್ದಾರೆ. ಇಡಿ ಆಯ್ತು, ಈಗ ರಾಜ್ಯಪಾಲರ ಕಚೇರಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಜನಗಳ ದೃಷ್ಟಿಯಲ್ಲಿ ಒಂದು ಕಲ್ಪನೆ ಕ್ರಿಯೇಟ್ ಮಾಡಲು ಎಲ್ಲಾ ಪಿತೂರಿ ಮಾಡುತ್ತಿದ್ದಾರೆ ಎಂದರು.

ನಾವು ಆಯೋಗ ರಚನೆ ಮಾಡಿದ್ದೇವೆ. ಅವರು ತನಿಖೆ ಮಾಡಲಿ. ಮೈಸೂರು ಮುಡಾದಲ್ಲಿ ಹೆಚ್ಚು ಸೈಟ್‌ಗಳನ್ನು ತೆಗೆದುಕೊಂಡಿರುವುದು ಬಿಜೆಪಿ, ಜೆಡಿಎಸ್‌ನವರು. ಸಾವಿರಾರು ಸೈಟ್‌ಗಳು, ಸಾವಿರಾರು ಬದಲಿ ಜಮೀನುಗಳನ್ನು ತೆಗೆದುಕೊಂಡಿದ್ದಾರೆ. ಅವರೇ ಮಾಡಬಾರದ್ದು ಮಾಡಿ ನಮ್ಮ ಕಡೆಗೆ ಬೆರಳು ತೋರಿಸುತ್ತಿದ್ದಾರೆ. ಅವರ ಉದ್ದೇಶ ಯಾವ ಹಗರಣವೂ ಅಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಕೊಡುವುದೂ ಅಲ್ಲ. ಅವರಿಗೆ ಅಧಿಕಾರದ ದಾಹ. ಬಡವರ ಪರವಾಗಿ ಇರುವ ಕಾಂಗ್ರೆಸ್ ಸರ್ಕಾರವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಏನಾದರೂ ಮಾಡಿ ಬಡವರ ಪರ ಇರುವ ಸರ್ಕಾರವನ್ನು ಬುಡಮೇಲು ಮಾಡಲು ಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ವಾಲ್ಮೀಕಿ ಹಗರಣ ಮುಚ್ಚಿ ಹಾಕಿದರು ಎಂದು ಯತ್ನಾಳ್ ಅವರು ಹೇಳಿದ್ದಾರೆ. ಇನ್ನೊಂದು ಕಡೆ ಪಾದಯಾತ್ರೆ ಬೇಕಾಗಿಲ್ಲ ಎಂದು ಜೆಡಿಎಸ್‌ನವರು ಹೇಳುತ್ತಿದ್ದಾರೆ. ಏಕೆಂದರೆ ಅವರೇ ಹೆಚ್ಚು ಫಲಾನುಭವಿಗಳು. ತನಿಖೆ ಮಾಡಿದರೆ ಹೆಚ್ಚು ಹೊರಗೆ ಬರುವುದು ಅವರದ್ದೇ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಲು ನಮ್ಮ ಸರ್ಕಾರ ದೃಢವಾಗಿದೆ. ಆ ದಿಕ್ಕಿನಲ್ಲಿ ನಾವು ಕೆಲಸವನ್ನು ಮಾಡ್ತೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: Wayanad Landslide: ಭೂಕುಸಿತದ ಬಗ್ಗೆ ಒಂದು ವಾರ ಮೊದಲೇ ನೀಡಲಾಗಿತ್ತಾ ಎಚ್ಚರಿಕೆ? ಕೇಂದ್ರದ ಸೂಚನೆ ನಿರ್ಲಕ್ಷಿಸಿತ್ತಾ ಕೇರಳ ಸರ್ಕಾರ?

Exit mobile version