Site icon Vistara News

KRS Dam: ಸಂಪ್ರದಾಯಕ್ಕೆ ಎಳ್ಳು ನೀರು; ಕಾವೇರಿಗೆ ಬಾಗಿನ ಕಾರ್ಯಕ್ರಮದಲ್ಲಿ ಬಾಡೂಟ!

KRS Dam

ಮಂಡ್ಯ: ಸಿಎಂ, ಡಿಸಿಎಂ ಭಾಗವಹಿಸಿದ್ದ ಕೆಆರ್‌ಎಸ್‌ಗೆ (KRS Dam) ಬಾಗಿನ ಸಲ್ಲಿಸುವ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದಾರೆ. ಕಾರ್ಯಕ್ರಮದ ಬಳಿಕ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಭರ್ಜರಿ ಬಾಡೂಟ ಆಯೋಜನೆ ಮಾಡಿದ್ದು, ಈ ಮೂಲಕ ಸಂಪ್ರದಾಯಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಸಂಪ್ರದಾಯ ಮುರಿದು ಬಾಗಿನ ದಿವಸ ಬಾಡೂಟ ಆಯೋಜನೆ ಮಾಡಲಾಗಿದೆ. ಸಿಎಂ, ಸಚಿವರು ಹೊರಟ ಬಳಿಕ ಇಲಾಖೆ ಅಧಿಕಾರಿಗಳು ಭರ್ಜರಿ ಬಾಡೂಟ ಸೇವಿಸಿದ್ದಾರೆ. ಕೆಆರ್‌ಎಸ್‌ನ ಖಾಸಗಿ ಹೋಟೆಲ್‌ನಲ್ಲಿ ಬಾಡೂಟ ಆಯೋಜನೆ ಮಾಡಲಾಗಿತ್ತು.

ಈ ಹಿಂದೆ ಎಂದೂ ಬಾಗಿನ ಸಲ್ಲಿಸಿದ ದಿವಸ ಬಾಡೂಟ ಆಯೋಜಿಸಿದ್ದ ಉದಾಹರಣೆ ಇಲ್ಲ. ಇದೇ ಮೊದಲ ಬಾರಿಗೆ ಬಾಗಿನ ಸಲ್ಲಿಸಿದ ದಿನ ಬಾಡೂಟ ಆಯೋಜನೆ ಮಾಡಲಾಗಿದೆ. ಈ ಮೂಲಕ ಮೂಲಕ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸಂಪ್ರದಾಯ ಮುರಿದಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯ (ಕೆಆರ್‌ಎಸ್‌) ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಬಾಗಿನ ಅರ್ಪಿಸಿದರು. ಬೆಳಗ್ಗೆ 11 ಗಂಟೆಗೆ ಅಭಿಜಿನ್ ಮುಹೂರ್ತದಲ್ಲಿ ಜಲಾಶಯಕ್ಕೆ (KRS Dam) ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ ಅವರು, ನಂತರ ಕಾವೇರಿ ಮಾತೆ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾದರು.

ಬಾಗಿನ ಅರ್ಪಿಸುವ ವೇಳೆ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ಎನ್. ಚೆಲುವರಾಯಸ್ವಾಮಿ, ವೆಂಕಟೇಶ್, ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಮೇಕೆದಾಟು ಯೋಜನೆ ಬಗ್ಗೆ ಚರ್ಚೆಗೆ ಸಿದ್ಧ: ಸಿದ್ದರಾಮಯ್ಯ

ಮೈಸೂರು: ಮೆಟ್ಟೂರು ಅಣೆಕಟ್ಟು ತುಂಬಿ ನೀರು ವ್ಯರ್ಥವಾಗುತ್ತಿದ್ದು, ಈ ಬಗ್ಗೆ ತಮಿಳುನಾಡು ಸರ್ಕಾರದೊಂದಿಗೆ ನಾವು ಮಾತನಾಡಲು ತಯಾರಿದ್ದೇವೆ. ಮೇಕೆದಾಟು ಯೋಜನೆಯಿಂದ ಅವರಿಗೆ ತೊಂದರೆಯಾಗದಿದ್ದರೂ ಮಾತನಾಡಲು ಅವರು ಸಿದ್ಧರಿಲ್ಲ. ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟರೇ ನಾವು ನಿರ್ಮಾಣ ಮಾಡಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಗ್ಲಾದೇಶದಿಂದ 20 ಸಾವಿರ ಜನ ಬೆಂಗಳೂರಿಗೆ ವಲಸೆ ಬಂದಿರುವ ಬಗ್ಗೆ ಮಾತನಾಡಿ, ಈ ಬಗ್ಗೆ ತಿಳಿದಿಲ್ಲ. ವಿಚಾರ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಿಜೆಪಿ ಪಾದಯಾತ್ರೆ: ರಾಜಕೀಯವಾಗಿ ವಿರೋಧಿಸುತ್ತೇವೆ

ವಾಲ್ಮೀಕಿ ಮತ್ತು ಮುಡಾ ಹಗರಣ ವಿರೋಧಿಸಿ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಮಾಡಲಿ, ನಾವೂ ಕೂಡ ರಾಜಕೀಯವಾಗಿ ವಿರೋಧಿಸುತ್ತೇವೆ. ವಾಲ್ಮೀಕಿ ಹಗರಣದಲ್ಲಿ ನಾವು 84.63 ಕೋಟಿ ಹಗರಣವಾಗಿದೆ ಎನ್ನುವುದು ನಿಜ. ಎಸ್.ಐ.ಟಿ ರಚನೆಯಾಗಿದ್ದು ತನಿಖೆಯಾಗುತ್ತಿದೆ. ಅವರೂ ಕೂಡ ಸಿಬಿಐ, ಇಡಿಯವರೂ ತನಿಖೆ ಮಾಡುತ್ತಿದ್ದಾರೆ ಎಂದರು.

ಬಿಜೆಪಿ ಕಾಲದಲ್ಲಿ ಭ್ರಷ್ಟಾಚಾರ ನಡೆದಿಲ್ಲವೇ?

ಉಪಮುಖ್ಯಮಂತ್ರಿಗಳು ಅಯೋಗ್ಯ ಅಧಿಕಾರಿಗಳು ಹೀಗೆ ಮಾಡಿದ್ದಾರೆ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರ ಕಾಲದಲ್ಲಿ ಭ್ರಷ್ಟಾಚಾರ ನಡೆದಿಲ್ಲವೇ? ಅದಕ್ಕಾಗಿಯೇ 21 ಹಗರಣಗಳನ್ನು ಪಟ್ಟಿ ಮಾಡಿ ಹೇಳಿದ್ದೇನೆ ಎಂದರು. ಕೆಲವು ತನಿಖೆಗಳು ನಡೆಯುತ್ತಿವೆ. ರಾಘವೇಂದ್ರ ಸಹಕಾರಿ ಬ್ಯಾಂಕ್ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಇಂದಿನವರೆಗೂ ಸಿಬಿಐ ತನಿಖೆ ಪೂರ್ಣಗೊಳಿಸಿಲ್ಲ. ಅವರ ಅವಧಿಯಲ್ಲಿ ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ಕೊಟ್ಟಿಲ್ಲ. 7-8 ಹಗರಣಗಳನ್ನು ಸಿಬಿಐಗೆ ವಹಿಸಲಾಗಿದೆ. ಇದೆ ಬಿಜೆಪಿ ನಾವು ಅಧಿಕಾರದಲ್ಲಿದ್ದಾಗ ಸಿಬಿಐ ಅನ್ನು ಚೋರ್ ಬಚಾವ್ ಸಂಸ್ಥೆ ಎನ್ನುತ್ತಿದ್ದರು. ಈಗ ಸಿಬಿಐ ಗೆ ಮೇಲೆ ಇವರಿಗೇನು ಪ್ರೀತಿ ಎಂದರು. ಈ ಕುರಿತ ದಾಖಲೆಗಳನ್ನು ನಾನು ಕೊಡುತ್ತೇನೆ ಎಂದರು.

ಇದನ್ನೂ ಓದಿ | CM Siddaramaiah: ನಾಳೆ ದಿಲ್ಲಿಗೆ ಸಿಎಂ- ಡಿಸಿಎಂ ದೌಡು; ಸಚಿವ ಸಂಪುಟದಲ್ಲಿ ಬದಲಾವಣೆ ಫಿಕ್ಸ್?

ನನ್ನ ಮೇಲೆ ಯಾವ ಕಪ್ಪು ಮಸಿಯೂ ಇಲ್ಲ

ಮುಡಾ ಪ್ರಕರಣದಲ್ಲಿ ನಿವೇಶನಗಳನ್ನು ಸಿಎಂ ಹಿಂದಿರುಗಿಸಿ ತನಿಖೆಗೆ ಅವಕಾಶ ಕೊಡಬೇಕೆಂದು ಬಿಜೆಪಿ ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಮೂಡಾ ಪ್ರಕರಣದಲ್ಲಿ ನನ್ನ ಮೇಲೆ ಯಾವ ಕಪ್ಪು ಮಸಿಯೂ ಇಲ್ಲ. ಈ ಬಗ್ಗೆ ನ್ಯಾಯಾಂಗ ಆಯೋಗ ರಚನೆಯಾಗಿದೆ. ಬಿಜೆಪಿ ಯಾವುದೇ ನ್ಯಾಯಾಂಗ ತನಿಖೆ ರಚಿಸಿತ್ತೆ ಎಂದು ಪ್ರಶ್ನಿಸಿದರು. ಕೋವಿಡ್ 19 ಸಂದರ್ಭದಲ್ಲಿ 3 ರಿಂದ 4 ಸಾವಿರ ಕೋಟಿ ರೂಪಾಯಿ ನುಂಗಿ ಹಾಕಿದ್ದಾರೆ. ನ್ಯಾಯಾಂಗ ತನಿಖೆ ಅಥವಾ ಸಿಬಿಐಗೆ ವಹಿಸಲು ಕೊಡಿ ಎಂಡು ಒತ್ತಾಯಿಸಿದೆ. ಆದರೆ ಅವರು ಕೊಡಲಿಲ್ಲ ಎಂದರು. ಯಾವುದೇ ತಪ್ಪಿಲ್ಲದಿದ್ದರೂ ಕೂಡ ಜನರ ಮನಸ್ಸಿನಲ್ಲಿ ಅನುಮಾನವಿರಬಾರದು ಎಂಬ ಕಾರಣಕ್ಕೆ ನ್ಯಾಯಾಂಗ ಆಯೋಗ ರಚಿಸಲಾಗಿದೆ ಎಂದರು. ಒಬ್ಬ ಸಚಿವರು, ಮುಖ್ಯಮಂತ್ರಿಯಾಗಿದ್ದವರು ಹೇಗೆ ಮಾತನಾಡಿದರೆ ಹೇಗೆ? ನಮಗೆ ನಮ್ಮ ಪೊಲೀಸರ ಮೇಲೆ ನಂಬಿಕೆ ಇದೆ ಎಂದರು.

Exit mobile version