ಶಿವಮೊಗ್ಗ: ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರದಲ್ಲಿ ಪಿಎಂ ನರೇಂದ್ರ ಮೋದಿ (PM Narendra Modi) ಅವರ ಭಾವಚಿತ್ರ ಬಳಸಿಕೊಳ್ಳುವ ವಿಚಾರದಲ್ಲಿ ಶಿವಮೊಗ್ಗದಲ್ಲಿ (Shimogga) ಬಿಗ್ ಫೈಟ್ ಶುರುವಾಗಿದೆ. ಬಿಜೆಪಿಯಿಂದ (BJP) ಸಿಡಿದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಸ್ ಈಶ್ವರಪ್ಪ (KS Eshwarappa) ಮೋದಿ ಭಾವಚಿತ್ರ ಬಳಕೆಗೆ ಅವಕಾಶ ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ.
ಈಶ್ವರಪ್ಪ ಪ್ರಚಾರದ ವೇಳೆ ಮೋದಿ ಅವರ ಫೋಟೋ ಬಳಕೆ ಮಾಡಿಕೊಂಡಿದ್ದಕ್ಕೆ ಬಿ.ವೈ ರಾಘವೇಂದ್ರ ಅವರು ವ್ಯಂಗ್ಯವಾಡಿದ್ದರು. ರಾಘವೇಂದ್ರಗೆ ತಿರುಗೇಟು ನೀಡಿದ್ದ ಈಶ್ವರಪ್ಪ (KS Eshwarappa) ಅವರು, “ಮೋದಿ ಏನು ಅವರಪ್ಪನ ಮನೆಯ ಆಸ್ತಿನಾ?” ಎಂದು ಕಿಡಿಕಾರಿದ್ದರು. ಇದೀಗ, ಮೋದಿ ಚಿತ್ರ ಬಳಕೆಗೆ ಬಿಜೆಪಿಯವರು ತಡೆ ತಾರದಂತೆ ಮುಂಚಿತವಾಗಿಯೇ ಶಿವಮೊಗ್ಗ ಕೋರ್ಟ್‌ನಲ್ಲಿ ಕೆವಿಯಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಬಿಜೆಪಿಯಿಂದ ಟಿಕೆಟ್ ಸಿಗದೆ ಇರುವ ಕಾತಣಕ್ಕೆ ಬಂಡಾಯವೆದ್ದಿರುವ ಈಶ್ವರಪ್ಪ, ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಈಗಾಗಲೇ ಈಶ್ವರಪ್ಪ ಚುನಾವಣಾ ಪ್ರಚಾರದ ಕಾರ್ಯವನ್ನು ಶುರು ಮಾಡಿಕೊಂಡಿದ್ದಾರೆ. “ರಾಘವೇಂದ್ರ ಅವರನ್ನು ಸೋಲಿಸಲೆಂದೇ ನನ್ನನ್ನು ಪಕ್ಷೇತರನಾಗಿ ಸ್ಪರ್ಧಿಸುವಂತೆ ಅಮಿತ್ ಶಾ ಮಾಡಿದ್ದಾರೆ. ಆದ್ದರಿಂದ ನಾನು ಮಾತಾಡಲು ಅವಕಾಶ ಕೇಳಿ ದಿಲ್ಲಿಗೆ ಹೋದರೂ ಅವಕಾಶ ಕೊಟ್ಟಿಲ್ಲ. ಯಡಿಯೂರಪ್ಪ- ರಾಘವೇಂದ್ರ ಅವರನ್ನು ನಾನು ಸೋಲಿಸುವುದು ಅವರಿಗೆ ಬೇಕಾಗಿದೆ” ಎಂದು ಈಶ್ವರಪ್ಪ ಟಾಂಗ್ ನೀಡಿದ್ದರು.
ಹೀಗಾಗಿ, ಮೋದಿ ಹೆಸರು ಹೇಳಿಕೊಂಡು ಅವರು ಪ್ರಚಾರದಲ್ಲಿ ಮೋದಿ ಫೋಟೋವನ್ನು ಬಳಸಲು ಮುಂದಾಗಿದ್ದಾರೆ. ಇದನ್ನು ಬಿಜೆಪಿ ವಿರೋಧಿಸಿತ್ತು. ಇದಕ್ಕೆ ವಿರೋಧ ಕೇಳಿ ಬಂದ ಬೆನ್ನಲ್ಲೇ ಈಶ್ವರಪ್ಪ ಅವರು ಕೋರ್ಟ್ ಮೊರೆ ಹೋಗಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಗನಿಗೆ ಟಿಕೆಟ್ ಸಿಗಬೇಕು ಎಂದು ಈಶ್ವರಪ್ಪ ಹಠ ಹಿಡಿದಿದ್ದರು. ಆದರೆ ಹಾವೇರಿ ಟಿಕೆಟ್ ಬಸವರಾಜ್ ಬೊಮ್ಮಾಯಿ ಅವರಿಗೆ ಹೋಗಿತ್ತು. ಇದರಿಂದ ಸಿಟ್ಟಿಗೆದ್ದ ಈಶ್ವರಪ್ಪ ಬಂಡಾಯವೆದ್ದಿದ್ದರು. ಬಂಡಾಯ ಶಮನ ಮಾಡುವುದಕ್ಕೆ ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಬೆಂಗಳೂರಿಗೆ ಬಂದಿದ್ದ ಅಮಿತ್ ಶಾ ಅವರು ಈಶ್ವರಪ್ಪ ಅವರಿಗೆ ಕರೆ ಮಾಡಿದ್ದರು. ದೆಹಲಿಗೆ ಆಹ್ವಾನ ಕೊಟ್ಟು ಹೋಗಿದ್ದರು. ಅದರಂತೆ ಈಶ್ವರಪ್ಪ ಅವರು ದೆಹಲಿಗೂ ಹೋಗಿದ್ದರು. ಅಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗುವುದಕ್ಕೆ ಸಾಧ್ಯವಾಗಲಿಲ್ಲ. ದೆಹಲಿಯಿಂದಲೇ ಮತ್ತೆ ಬಂಡಾಯದ ಸ್ಪರ್ಧೆ ಘೋಷಣೆ ಮಾಡಿದ್ದರು. ಈಗಾಗಲೇ ಪ್ರಚಾರ ಕಾರ್ಯವನ್ನು ಶುರು ಮಾಡಿದ್ದು, ಮೋದಿ ಫೋಟೋಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: KS Eshwarappa: ದೆಹಲಿಯಲ್ಲಿ ಭೇಟಿಗೆ ಸಿಗದ ಅಮಿತ್ ಶಾ; ಸ್ಪರ್ಧೆ ನಿಶ್ಚಿತ ಎಂದ ಈಶ್ವರಪ್ಪ