Site icon Vistara News

ವಿಸ್ತಾರ ಸಂಪಾದಕೀಯ | ಭಯೋತ್ಪಾದನೆಗೆ ಅಸಹಕಾರ ಅಂತಾರಾಷ್ಟ್ರೀಯ ನೀತಿಯಾಗಲಿ

Terrorism

ಎರಡು ದಿನಗಳ ಕಾಲ ದೆಹಲಿಯಲ್ಲಿ ʼನೋ ಮನಿ ಫಾರ್‌ ಟೆರರ್‌ʼ (ಎನ್‌ಎಂಎಫ್‌ಟಿ) ಸಮ್ಮೇಲನ ನಡೆದಿದೆ. ʼಭಯೋತ್ಪಾದನೆಗೆ ಎಲ್ಲ ಬಗೆಯ ಹಣಕಾಸು ಪೂರೈಕೆ ತಡೆಯುವುದುʼ ಇದರ ಮೂಲ ಆಶಯ. 72 ದೇಶಗಳ ಪ್ರತಿನಿಧಿಗಳು ಹಾಗೂ 15 ಅಂತಾರಾಷ್ಟ್ರೀಯ ಸಂಘಟನೆಗಳು ಇದರಲ್ಲಿ ಭಾಗವಹಿಸಿದ್ದರು. ಇದು ಮೂರನೇ ಎನ್‌ಎಂಎಫ್‌ಟಿ ಸಮ್ಮೇಳನ. ಈ ಮೊದಲು 2018ರ ಏಪ್ರಿಲ್‌ನಲ್ಲಿ ಪ್ಯಾರಿಸ್‌ನಲ್ಲಿ ಹಾಗೂ 2019ರ ನವೆಂಬರ್‌ನಲ್ಲಿ ಮೆಲ್ಬೋರ್ನ್‌ನಲ್ಲಿ ಸಮ್ಮೇಳನಗಳು ನಡೆದಿದ್ದವು. ಈ ಬಾರಿಯ ಸಮ್ಮೇಳನ ಆತಿಥ್ಯ ವಹಿಸಿದ್ದ ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತನಾಡಿ ʼʼಎಲ್ಲ ಬಗೆಯ ಭಯೋತ್ಪಾದನೆಗೆ ತಡೆ ಹಾಕಲು ಎಲ್ಲ ದೇಶಗಳು ಮುಂದಾಗಬೇಕು. ಕೆಲವು ದೇಶಗಳು ಉಗ್ರಗಾಮಿ ಚಟುವಟಿಕೆಗಳಿಗೆ ನೇರ ಅಥವಾ ಪರೋಕ್ಷವಾಗಿ ಹಣ ಒದಗಿಸುತ್ತಿವೆ. ಅಂಥ ದೇಶಗಳು ತಕ್ಕ ಬೆಲೆ ತೆರುವಂತೆ ಮಾಡಬೇಕುʼʼ ಎಂದು ಕರೆ ನೀಡಿದ್ದಾರೆ. ಇದು ಪರೋಕ್ಷವಾಗಿ ಚೀನಾ ಹಾಗೂ ಪಾಕಿಸ್ತಾನದ ಬಗ್ಗೆ ನೀಡಿದ ಸಂದೇಶ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಭಯೋತ್ಪಾದನೆಯನ್ನು ತಡೆಗಟ್ಟಲು ಬೇಕಿರುವ ಪ್ರಮುಖ ಕ್ರಮಗಳಲ್ಲಿ ವ್ಯೂಹಾತ್ಮಕ ಮಿತ್ರತ್ವದ ಜತೆಗೆ ಭಯೋತ್ಪಾದಕರಿಗೆ ಹಣಕಾಸಿನ ಪೂರೈಕೆಯನ್ನು ಕತ್ತರಿಸುವುದೂ ಒಂದು. ಇದಕ್ಕಾಗಿಯೇ ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್‌) ಎಂಬ ಅಂತಾರಾಷ್ಟ್ರೀಯ ಸಂಸ್ಥೆ 1989ರಲ್ಲಿ ರಚನೆಯಾಗಿದ್ದು, ಟೆರರಿಸಂಗೆ ಅಧಿಕೃತ ಹಣದ ಪೂರೈಕೆ ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳತೊಡಗಿತು. ಅಮೆರಿಕವೂ ಸೇರಿದಂತೆ ಜಗತ್ತಿನ ದೊಡ್ಡ ದೇಶಗಳು ಟೆರರಿಸಂನ ಭಯಾನಕ ಪರಿಣಾಮಗಳ ಬಗ್ಗೆ ಎಚ್ಚರಗೊಂಡದ್ದು 2001ರಲ್ಲಿ, ನ್ಯೂಯಾರ್ಕಿನ ಮೇಲೆ ವಿಮಾನ ದಾಳಿ ನಡೆದ ಬಳಿಕ. ಆದರೆ ಭಾರತ ದೇಶವು ಈ ಭಯೋತ್ಪಾದನೆಯ ಪುರಾತನ ಫಲಾನುಭವಿ. ಸಾಕಷ್ಟು ಕಿರುಕುಳವನ್ನು ದಶಕಗಳಿಂದ ಎದುರಿಸುತ್ತಿದ್ದು, ಅದಕ್ಕೆ ತಡೆಹಾಕುವ ನಾನಾ ವಿಧಾನಗಳನ್ನೂ ಕರಗತ ಮಾಡಿಕೊಂಡಿದೆ. ಹೀಗಾಗಿಯೇ ಈ ವಿಷಯದಲ್ಲಿ ಭಾರತದ ಹಿರಿತನವನ್ನು ಇತರ ದೇಶಗಳು ಮನ್ನಿಸುವಂತಿದೆ. ಈ ಬಾರಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿಯವರು, ಜಗತ್ತು ಭಯೋತ್ಪಾದನೆಯನ್ನು ಎದುರಿಸಲು ಎಲ್ಲರನ್ನೂ ಒಳಗೊಂಡ ವಿಧಾನವನ್ನು ಅನುಸರಿಸಬೇಕು ಎಂದೂ ಹೇಳಿದ್ದಾರೆ. ಅಂದರೆ ಭಯೋತ್ಪಾದನೆ ಎಂಬುದು ಇಂದು ಜಾಗತಿಕ ಸಮಸ್ಯೆ. ಇದನ್ನು ತಡೆಯಲು ಎಲ್ಲ ದೇಶಗಳು ಒಟ್ಟಾಗದೇ ನಿರ್ವಾಹವಿಲ್ಲ. ಅದರಲ್ಲಿ ಅಂತಾರಾಷ್ಟ್ರೀಯ ಹಣದ ಹರಿವಿಗೆ ಅಲ್ಲಲ್ಲಿಯೇ ತಡೆ ಹಾಕುವುದೂ ಒಂದು ಕ್ರಮ.

ಪಾಕಿಸ್ತಾನ ಹಾಗೂ ಚೀನಾಗಳ ಪಾತ್ರದ ಬಗ್ಗೆ ಮೋದಿಯವರು ಪರೋಕ್ಷವಾಗಿ ಹೇಳಿದ್ದರೂ ಇದರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅಫ್ಘಾನಿಸ್ತಾನವೂ ಸೇರಿದಂತೆ ಸುತ್ತಮುತ್ತಲಿನ ದೇಶಗಳಲ್ಲಿ ಹಾವಳಿ ಎಬ್ಬಿಸಿರುವ ಇಸ್ಲಾಮಿಕ್‌ ಉಗ್ರರಿಗೆ ಶಸ್ತ್ರಾಸ್ತ್ರಗಳು, ಹಣಕಾಸು ಪೂರೈಕೆಯಾಗುತ್ತಿರುವುದೇ ಪಾಕಿಸ್ತಾನದಿಂದ. ಇದನ್ನು ತಡೆಯಲು ವಿಶ್ವಸಂಸ್ಥೆಯಲ್ಲಿ ಎಲ್ಲ ಬಗೆಯ ಪ್ರಯತ್ನಗಳನ್ನೂ ಭಾರತ ಮಾಡುತ್ತಿದೆ. ಆದರೆ ಸ್ವಹಿತಾಸಕ್ತಿಗಾಗಿ ಪಾಕಿಸ್ತಾನವನ್ನು ಚೀನಾ ಬೆಂಬಲಿಸುತ್ತಿದೆ. ಯಾವುದಾದರೂ ರಾಷ್ಟ್ರ ಅಕ್ರಮ ಹಣ ವರ್ಗಾವಣೆ ಹಾಗೂ ಭಯೋತ್ಪಾದನೆಗೆ ಹಣಕಾಸಿನ ನೆರವು ಒದಗಿಸುತ್ತದೆ ಎಂದರೆ ಅದನ್ನು ಎಫ್ಎಟಿಎಫ್ ಬೂದು ಪಟ್ಟಿಗೆ ಸೇರಿಸುತ್ತದೆ. ಈ ಪ್ರಕ್ರಿಯೆ ಆ ದೇಶದ ಅಕ್ರಮ ಹಣ ವರ್ಗಾವಣೆ ತಡೆ ಹಾಗೂ ಭಯೋತ್ಪಾದನೆಗೆ ಹಣಕಾಸಿನ ನೆರವು ತಡೆಯುವ ಕಾನೂನುಗಳಲ್ಲಿ ವೈಫಲ್ಯವಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಎಫ್ಎಟಿಎಫ್ ಕಪ್ಪು ಪಟ್ಟಿಯಲ್ಲಿ ಉತ್ತರ ಕೊರಿಯಾ ಹಾಗೂ ಇರಾನ್ ಎರಡೇ ರಾಷ್ಟ್ರಗಳಿವೆ. ಪಾಕಿಸ್ತಾನ ಬೂದು ಪಟ್ಟಿಯಲ್ಲಿದೆ. ತಾನು ಕಪ್ಪು ಪಟ್ಟಿಗೆ ಜಾರದಂತೆ ಕಾಪಾಡಿಕೊಳ್ಳಲು ಅದು ಮಿತ್ರ ರಾಷ್ಟ್ರಗಳಾದ ಚೀನಾ, ಟರ್ಕಿ ಹಾಗೂ ಮಲೇಷಿಯಾಗಳ ಬೆಂಬಲ ಪಡೆದಿದೆ. ಇತ್ತ ಅಮೆರಿಕಾ, ಒಂದೆಡೆ ಪಾಕಿಸ್ತಾನವನ್ನು ಚಿವುಟುವ ಹಾಗೂ ಇನ್ನೊಂದೆಡೆ ಅದಕ್ಕೆ ತೊಟ್ಟಿಲು ತೂಗುವ ನೀತಿಯನ್ನು ಅನುಸರಿಸುತ್ತಿದೆ. ಇಂಥ ದ್ವಿಮುಖ ನೀತಿ ನಿವಾರಣೆಯಾಗದೆ ಅಂತಾರಾಷ್ಟ್ರೀಯ ಟೆರರಿಸಂ ತೊಡೆದುಹಾಕಲು ಸಾಧ್ಯವಿಲ್ಲ.

ಹಾಗೆಯೇ ಈ ಬಾರಿಯ ಸಮ್ಮೇಳನದಲ್ಲಿ ಭಯೋತ್ಪಾದನೆಯ ಹಣಕಾಸಿಗೆ ಆಧುನಿಕ ತಂತ್ರಜ್ಞಾನದ ನೆರವಿನ ಬಗ್ಗೆ ಹೆಚ್ಚಿನ ಚರ್ಚೆ ನಡೆದಿದೆ. ಡಾರ್ಕ್‌ ವೆಬ್‌ ಬಳಕೆ, ಸಾಮಾಜಿಕ ಜಾಲತಾಣಗಳ ದುರ್ಬಳಕೆ, ಅವುಗಳಲ್ಲಿನ ನಿಯಂತ್ರಣದ ಕೊರತೆ, ಕ್ರೌಡ್ ಫಂಡಿಂಗ್, ಇತ್ಯಾದಿಗಳು ಇನ್ನಷ್ಟು ಕಳವಳಕ್ಕೆ ಕಾರಣವಾಗಿವೆ ಎಂಬುದು ಸಮ್ಮೇಳನದಲ್ಲಿ ಚರ್ಚೆಯಾದ ಅಂಶ. ತಂತ್ರಜ್ಞಾನ ಸವಲಾಗಿರುವಂತೆ, ಅವಕಾಶವೂ ಆಗಿದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳ ಸಹಕಾರ ಹೆಚ್ಚಿನ ಸಾಧನೆಗೆ ಕಾರಣವಾದೀತು. ಮಾದಕ ದ್ರವ್ಯಗಳ ಕಳ್ಳಸಾಗಾಣಿಕೆ ಕೂಡ ಟೆರರಿಸಂಗೆ ಪೂರಕವಾದ, ಹಣಕಾಸು ಸಂಗ್ರಹಕ್ಕಾಗಿ ನಡೆಯುತ್ತಿರುವ ಒಂದು ಜಾಗತಿಕ ದಂಧೆ. ಕೆಲವ ದೇಶಗಳೇ ಈ ಡ್ರಗ್ಸ್‌ ವ್ಯವಸನದಿಂದ ಸರ್ವನಾಶವಾಗಿವೆ. ಇದನ್ನೂ ಮಟ್ಟಹಾಕಬೇಕಿದೆ. ಇದಕ್ಕಾಗಿ ದೇಶ ದೇಶಗಳ ಮಧ್ಯೆ ಹೆಚ್ಚಿನ ಸಹಕಾರ ಅಗತ್ಯವಿದೆ. ಅಂಥದೊಂದು ಸಹಕಾರಕ್ಕೆ ಈ ಸಮ್ಮೇಳನ ಮುನ್ನುಡಿಯಾಗಲಿ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆಯಾಗಲಿ

Exit mobile version