ಬೆಳಗಿ ಬಾಳಬೇಕಾದ ಕುಡಿಯೊಂದು ಯವ್ವನದಲ್ಲೇ ಕಮರಿಹೋಗಿದೆ. ಬೆಳಗಾವಿ ಮೂಲದ ಯುವತಿಯೊಬ್ಬಳನ್ನು ಹುಬ್ಬಳ್ಳಿಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಸಿಎ ಮೊದಲ ವರ್ಷದಲ್ಲಿ ಓದುತ್ತಿದ್ದ ನೇಹಾ ಹಿರೇಮಠ ಎಂಬಾಕೆಯನ್ನು ಫಯಾಜ್ ಎನ್ನುವವನು ಕೊಂದು ಹಾಕಿದ್ದಾನೆ. ಈ ಹಿಂದೆ ನೇಹಾ ಓದುತ್ತಿದ್ದ ಕಾಲೇಜಿನಲ್ಲಿ ಈಕೆಯ ಸಹಪಾಠಿಯಾಗಿದ್ದ ಈತ, ತನ್ನ ಪ್ರೀತಿಯನ್ನು ಆಕೆ ತಿರಸ್ಕರಿಸಿದ್ದರಿಂದ ರೊಚ್ಚಿಗೆದ್ದಿದ್ದ. ಬಿಸಿಎಯಲ್ಲಿ ಫೇಲ್ ಆಗಿದ್ದ ಈತನ ಯಾವ ʼಕಲ್ಯಾಣ ಗುಣʼ ನೋಡಿ ಆಕೆ ತನ್ನನ್ನು ಪ್ರೀತಿಸಬೇಕು ಎಂದುಕೊಂಡಿದ್ದನೋ ಗೊತ್ತಿಲ್ಲ. ನಿನ್ನೆ ಏಕಾಏಕಿ ಅವಳು ಓದುತ್ತಿದ್ದ ಕಾಲೇಜಿಗೆ ಬಂದು, ಕ್ಯಾಂಪಸ್‌ನಲ್ಲಿಯೇ ಆಕೆಯನ್ನು ಇರಿದು ಕೊಂದಿದ್ದಾನೆ. ಕೊಲೆ ಮಾಡಿದ ರೀತಿಯೂ ಬೆಚ್ಚಿ ಬೀಳಿಸುವಂತಿದೆ. ಒಂಬತ್ತು ಬಾರಿ ಚಾಕುವಿನಿಂದ ಇರಿದ ಈತ, ನೋವಿನಿಂದ ಆಕೆ ನರಳಾಡುತ್ತಿದ್ದರೂ, ಆಕೆ ಕೊನೆಯುಸಿರು ಎಳೆದದ್ದನ್ನು ಖಚಿತಪಡಿಸಿಕೊಂಡೇ ಅಲ್ಲಿಂದ ತೆರಳಿದ್ದಾನೆ. ಅಂದ ಮೇಲೆ ಆತನಲ್ಲಿ ಇದ್ದುದು ಪ್ರೀತಿಯಲ್ಲ, ಕ್ರೌರ್ಯ ಮಾತ್ರ. ಪ್ರೇಮ ಎಂದೂ ಇಂಥ ವಿಕೃತಿಯನ್ನು ತಾಳಲು ಸಾಧ್ಯವಿಲ್ಲ.
ಘಟನೆಯನ್ನು ಖಂಡಿಸಿ, ಎಂದಿನಂತೆ, ಹಿಂದೂ ಸಂಘಟನೆಗಳು ಬೀದಿಗಿಳಿದಿವೆ. ಹುಡುಗಿಯ ಮೂಲ ಊರಾದ ಮುನವಳ್ಳಿಯಲ್ಲಿ ಮೂರು ದಿನಗಳ ಕಾಲ ಬಂದ್ ಸಾರಲಾಗಿದೆ. ಹುಬ್ಬಳ್ಳಿಯಲ್ಲಿ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ಪ್ರತಿಭಟನೆಗೆ ಇಳಿದಿದ್ದಾರೆ. ಬಿಜೆಪಿ ಮುಖಂಡರು ಸಂತ್ರಸ್ತ ಯುವತಿಯ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಆರೋಪಿಗೆ ಗಲ್ಲು ಶಿಕ್ಷೆ ಕೊಡಿಸಬೇಕು ಎಂದು ಪೊಲೀಸರನ್ನು ಹೆಚ್ಚಿನವರು ಆಗ್ರಹಿಸಿದ್ದಾರೆ. ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಸಿಎಂ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ʼಬಿಜೆಪಿ ಇದನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆʼ ಎಂದು ಆರೋಪಿಸುವುದು ಸುಲಭ; ಆದರೆ ಇಷ್ಟಾದರೂ ಪ್ರತಿಭಟನೆಯ ಧ್ವನಿ ಎಬ್ಬಿಸದೇ ಹೋದರೆ, ಪೊಲೀಸರು ಹಾಗೂ ಆಡಳಿತದಲ್ಲಿ ಇರುವವರು ಇದನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇತ್ತೇ? ರಾಜ್ಯದಲ್ಲಿ ಪ್ರತಿದಿನ ಹಲವಾರು ಕೊಲೆಗಳಾಗುತ್ತವೆ. ನಿನ್ನೆಯಂತೂ ಗದಗದಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿಯ ಕೊಲೆಯಾಗಿದೆ. ಪೊಲೀಸರು ತಮ್ಮದೇ ವೇಗದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಪ್ರಕರಣದ ಗಂಭೀರತೆಯನ್ನು ಆಡಳಿತಕ್ಕೆ ಮುಟ್ಟಿಸಿ, ತನಿಖೆ- ವಿಚಾರಣೆ- ಶಿಕ್ಷೆ ತೀವ್ರಗತಿಯಲ್ಲಿ ನಡೆಯುವಂತೆ ಮಾಡುವುದಂತೂ ಈ ಮೂಲಕ ಸಾಧ್ಯವಿದೆ.
ಇಂಥ ಅಪರಾಧಗಳ ಮೂಲದಲ್ಲಿ ಏನಿರುತ್ತದೆ? ಇನ್ನೊಬ್ಬ ವ್ಯಕ್ತಿಯನ್ನು ಕೊಲ್ಲುವುದು ಇಷ್ಟೊಂದು ಸುಲಭವೇ? ತನ್ನ (ವಿಕೃತ)ಪ್ರೇಮವನ್ನು ತಿರಸ್ಕರಿಸಿದಳೆಂದು ಯುವತಿಯೊಬ್ಬಳನ್ನು ಕೊಲ್ಲುವ ಈ ಮನಸ್ಥಿತಿ ಎಷ್ಟು ವಿಕೃತವಾದುದು ಎಂಬುದನ್ನು ಮತ್ತೆ ಹೇಳಬೇಕಿಲ್ಲ. ತನಗೆ ದೊರೆಯದ ಯುವತಿ ಇನ್ಯಾರಿಗೂ ದೊರೆಯುವುದು ಬೇಡ, ಆಕೆ ಬದುಕುವುದೂ ಬೇಡ ಎನ್ನುವುದು ಬಣ್ಣಿಸಲೂ ಮಾತುಗಳಿಲ್ಲದ ನೀಚತನ. ಇದು ಅಪರೂಪದಲ್ಲಿ ಅಪರೂಪದ ದುಷ್ಕೃತ್ಯ. ಈತನಿಗೆ ಗಲ್ಲು ಶಿಕ್ಷೆ ಆಗಲೇಬೇಕಿದೆ. ಈತನ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಪೊಲೀಸರು ಕಲೆಹಾಕಿ ನ್ಯಾಯಾಲಯದಲ್ಲಿ ಗಟ್ಟಿಯಾಗಿ ವಾದ ಮಂಡಿಸಲು ಪೂರಕವಾಗಿ ಕೆಲಸ ಮಾಡಿದರೆ ಮಾತ್ರ ಇದು ಸಾಧ್ಯ.
ಇದರ ಜೊತೆಗೆ ಮತಾಂಧತೆಯೂ ಸೇರಿದಂತಿದೆ. ಇದು ಒಬ್ಬ ವ್ಯಕ್ತಿಯ ಮನಸ್ಥಿತಿ ಮಾತ್ರವೇ ಅಲ್ಲ; ಹೀಗೆ ಸಮಾಜದಲ್ಲಿ ಭಯ ಉತ್ಪಾದಿಸುವ ಸಂಘಟನೆಗಳ ವರ್ತನೆಯೂ ಹೀಗೇ ಇರುತ್ತದೆ. ಈತನ ಹಿಂದೆ ಇನ್ಯಾರದಾದರೂ ಕೈವಾಡವಿದೆಯೇ ಎಂಬ ಕೋನದಲ್ಲಿ ಕೂಡ ತನಿಖೆ ನಡೆಸುವುದು ಒಳಿತು. ಈತನ ಕೃತ್ಯವನ್ನು ನೋಡಿದರೆ ಇದು ʼಲವ್ ಜಿಹಾದ್ ಕೊಲೆʼ ಆಗಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಾರ್ವಜನಿಕ ಆಹಾರದಲ್ಲಿ ಆರೋಗ್ಯ ಕಾಳಜಿ ಪ್ರಮುಖವಾಗಿರಲಿ
ಇದರ ಜೊತೆಗೆ ಕಾನೂನು ಸುವ್ಯವಸ್ಥೆಯ ಪ್ರಶ್ನೆಯೂ ತಳುಕು ಹಾಕಿಕೊಂಡಿದೆ. ಗೃಹ ಸಚಿವರು ಈ ಕುರಿತು ಪ್ರತಿಕ್ರಿಯೆ ನೀಡುತ್ತ, “ನೇಹಾ ಕೊಲೆ ಆಕಸ್ಮಿಕ. ಆಕೆಯೂ ಆರೋಪಿಯೂ ಪ್ರೀತಿಸುತ್ತಿದ್ದರು. ಆಕೆ ನಿರಾಕರಿಸಿದ್ದರಿಂದ ಕೊಲೆ ಮಾಡಿದ್ದಾನೆ” ಎಂದು ಹಗುರವಾದ ಹೇಳಿಕೆ ನೀಡಿದ್ದಾರೆ. ಇದೊಂದು ಬೇಜವಾಬ್ದಾರಿ ಹೇಳಿಕೆ. ಆಕಸ್ಮಿಕ ಎಂಬುದಕ್ಕೆ ಯಾವುದೇ ಅರ್ಥವಿಲ್ಲ. ಇಂಥ ಅಪರಾಧಗಳು ಆಕಸ್ಮಿಕವಾಗಿ ಆಗುವುದಿಲ್ಲ. ಅದರ ಹಿಂದೆ ತರ್ಕಬದ್ಧ ಯೋಜನೆ ಇರುತ್ತದೆ. ಆದ್ದರಿಂದ ಈತ ಗರಿಷ್ಠ ಶಿಕ್ಷೆಗೆ ಅರ್ಹ. ಗೃಹ ಸಚಿವರು ಹಾಗೂ ಪೊಲೀಸರು ರಾಜ್ಯದ ಕಾನೂನು ಸುವ್ಯವಸ್ಥೆಯತ್ತ ಗಂಭೀರ ಗಮನ ನೆಟ್ಟಿದ್ದಾರೆಯೇ? ಈ ಪ್ರಶ್ನೆಯನ್ನು ಅವರು ಉತ್ತರಿಸಬೇಕಿದೆ. ಅಪರಾಧಗಳು ಸಂಭವಿಸದಂತೆ ಕಠಿಣ ಕಾನೂನು ಸುವ್ಯವಸ್ಥೆಯನ್ನು ಜಾರಿಯಲ್ಲಿಡುವುದೇ ಅಪರಾಧಗಳನ್ನು ತಡೆಯುವ ಸುಲಭ ವಿಧಾನ. ಇಂಥ ಅಪರಾಧಗಳು ಇನ್ನು ಘಟಿಸದಿರಲಿ.