ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುವ ಅಲೋಕ್ ಮೋಹನ್ ಅವರು, ಹಿರಿಯ ಅಧಿಕಾರಿಗಳ ಮೊದಲ ಸಭೆಯಲ್ಲಿ ಪೊಲೀಸರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇನ್ನು ಮುಂದೆ ಪೊಲೀಸರು ಸೋಮಾರಿಗಳಾಗುವಂತಿಲ್ಲ, ಹೊಟ್ಟೆ ಬೆಳೆಸಿಕೊಳ್ಳುವಂತಿಲ್ಲ. ಪೊಲೀಸರ ಹೊಟ್ಟೆಯ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳು ನಿಗಾ ಇರಿಸಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ರೌಡಿಸಂ ಮಟ್ಟ ಹಾಕುವುದು, ಜನಸ್ನೇಹಿ ಪೊಲೀಸಿಂಗ್, ಡ್ರಗ್ಸ್ ಜಾಲ ನಿಯಂತ್ರಣ, ಎಸಿಪಿಗಳಿಂದ ಪ್ರತಿದಿನ ಸ್ಟೇಶನ್‌ಗಳಿಗೆ ಭೇಟಿ ಇತ್ಯಾದಿ ಹಲವು ವಿಚಾರಗಳನ್ನು ಡಿಜಿ ಪ್ರಸ್ತಾಪಿಸಿದ್ದಾರೆ. ಇದರಲ್ಲಿ ಮುಖ್ಯವಾದುದು ಪೊಲೀಸರ ಫಿಟ್‌ನೆಸ್ ವಿಚಾರ.
ಖಾಕಿ ಬಟ್ಟೆ, ಲಾಠಿ ಮತ್ತು ಟೋಪಿಯಂತೆ ಬೊಜ್ಜು ಹೊಟ್ಟೆ ಕೂಡ ಪೊಲೀಸರ ಅವಿಭಾಜ್ಯ ಅಂಗ ಎಂಬ ಚಿತ್ರಣ ಹಿಂದಿನಿಂದಲೂ ಇದೆ. ಪೊಲೀಸರ ಹೊಟ್ಟೆ ಕರಗಿಸುವ ಪ್ರಯತ್ನ ರಾಮಕೃಷ್ಣ ಹೆಗಡೆ ಸರಕಾರದ ಕಾಲದಿಂದಲೂ ನಡೆಯುತ್ತ ಬಂದಿದೆ. ಆದರೆ ಈವರೆಗೆ ಸಂಪೂರ್ಣ ಯಶ ಸಿಕ್ಕಿಲ್ಲ ಎನ್ನುವುದು ನಮ್ಮ ಬಹುತೇಕ ಪೊಲೀಸರನ್ನು ನೋಡಿದರೆ ಗೊತ್ತಾಗುತ್ತದೆ. ಅಳತೆ ಮೀರಿ ಬೆಳೆದ ಈ ಹೊಟ್ಟೆಯನ್ನಿಟ್ಟುಕೊಂಡು ಈ ಪೊಲೀಸರು ಕಳ್ಳರನ್ನು ಹೇಗೆ ಹಿಡಿಯುತ್ತಾರೋ ಗೊತ್ತಿಲ್ಲ. ಪೊಲೀಸ್ ಇಲಾಖೆ ಎಂದರೆ ಸೇನಾಪಡೆಯಷ್ಟೇ ಪ್ರಮುಖವಾದುದು. ಸೇನಾಯೋಧರಿಗೆ ಫಿಟ್‌ನೆಸ್ ಎಷ್ಟು ಮುಖ್ಯವೋ ಪೊಲೀಸರಿಗೂ ಅಷ್ಟೇ ಮುಖ್ಯವಾಗಿರಬೇಕು. ಪೊಲೀಸರು ತಮ್ಮ ನೋಟಮಾತ್ರದಿಂದಲೇ ರೌಡಿಗಳಲ್ಲಿ ಮೈಚಳಿ ಮೂಡಿಸುವಂತಿದ್ದರೆ ಅಷ್ಟರ ಮಟ್ಟಿಗೆ ನಮ್ಮ ನಗರಗಳು ಗೂಂಡಾಮುಕ್ತವಾಗುತ್ತವೆ. ಕ್ರೈಮ್‌ಗೆ ತೊಡಗುವವರಿಗೆ ಪೊಲೀಸರ ಅಧಿಕಾರದ ಮಾತ್ರವಲ್ಲ ಫಿಟ್‌ನೆಸ್‌ನ ಭೀತಿಯೂ ಇರಬೇಕು. ಆದರೆ ಪೊಲೀಸರ ಅನಿಯಮಿತ, ಅನಿರ್ದಿಷ್ಟಾವಧಿಯ ಡ್ಯೂಟಿ ಹಾಗೂ ಜೀವನಶೈಲಿಯೇ ಅವರ ಫಿಟ್‌ನೆಸ್‌ಗೆ ಕಂಟಕವಾಗುತ್ತಿದೆ. ಸರಿಯಾದ ಪೌಷ್ಟಿಕವಾದ ಆಹಾರ, ಸಾಕಷ್ಟು ವಿಶ್ರಾಂತಿ, ಕಡ್ಡಾಯ ವ್ಯಾಯಾಮದ ಅಗತ್ಯವೂ ಇವರಿಗಿದೆ. ಡ್ಯೂಟಿಗೆ ಸೇರಿದ ಮೊದಲ ದಿನಗಳಲ್ಲಿ ಫಿಟ್‌ನೆಸ್ ಕಾಪಾಡಿಕೊಳ್ಳುವ ಪೊಲೀಸರು ಬರಬರುತ್ತಾ ಅದನ್ನು ಕಳೆದುಕೊಳ್ಳುವುದಕ್ಕೆ ತಡೆ ಹಾಕಲೂ ಇಲಾಖೆ ಯೋಚಿಸಬೇಕು.
ಪೊಲೀಸರು ಹೊಟ್ಟೆ ಕರಗಿಸಲಿ ಬಿಡಲಿ, ಅಪರಾಧದ ಪ್ರಮಾಣವನ್ನು ಕರಗಿಸಬೇಕಾದುದಂತೂ ಅತ್ಯಗತ್ಯ. ನೂತನ ಪೊಲೀಸ್ ನಿರ್ದೇಶಕರು ಪೊಲೀಸರ ಹೊಟ್ಟೆ ಕರಗಿಸುವುದರ ಜತೆಗೆ, ಅಪರಾಧ ಪ್ರಮಾಣ ಕರಗಿಸುವ ನಿಟ್ಟಿನಲ್ಲೂ ಹರಿತವಾದ ಯೋಜನೆ ರೂಪಿಸಬೇಕಿದೆ. ಮುಖ್ಯವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊಲೆ, ಸುಲಿಗೆ, ಸರಗಳ್ಳತನ, ಸೈಬರ್ ವಂಚನೆ ಮುಂತಾದ ಪಾತಕ ಕೃತ್ಯಗಳು ಅವ್ಯಾಹತವಾಗಿ ನಡೆಯುತ್ತಿವೆ. ರೌಡಿಗಳು ಬೀದಿಬೀದಿಯಲ್ಲಿ ಹೊಡೆದಾಡಿಕೊಳ್ಳುತ್ತಿದ್ದಾರೆ; ಸಾರ್ವಜನಿಕ ಶಾಂತಿಭಂಗ ಮಾಡುತ್ತಿದ್ದಾರೆ. ಕೆಲವು ಪ್ರದೇಶಗಳನ್ನು ಕೆಲವು ರೌಡಿಗಳೇ ಹಂಚಿಕೊಂಡಿರುವಂತಿದೆ. ಕೆ.ಆರ್ ಮಾರ್ಕೆಟ್ ಮುಂತಾದ ಕಡೆ ರೌಡಿಗಳ ಭೂಗತ ವಸೂಲಿ ಜಗತ್ತು ಕಾರ್ಯಾಚರಿಸುತ್ತಿದೆ ಎಂಬ ಮಾಹಿತಿ ಇದೆ. ಭೂಗತ ಪಾತಕಿಗಳು, ಭೂ ಅತಿಕ್ರಮಣಕಾರರು, ಬೆಟ್ಟಿಂಗ್ ದಂಧೆ, ವೇಶ್ಯಾವಾಟಿಕೆಯಂಥ ಅಕ್ರಮ ದಂಧೆಗಳಿಗೆ ಕೆಲವು ಪೊಲೀಸ್ ಅಧಿಕಾರಿಗಳೇ ತೆರೆಮರೆಯಲ್ಲಿ ಕೈ ಜೋಡಿಸಿರುವುದು ಗುಟ್ಟೇನಲ್ಲ. ಇಂಥ ತೆರೆಮರೆಯ ಪೊಲೀಸ್ ಅಕ್ರಮಗಳಿಗೆ ನೂತನ ಪೊಲೀಸ್ ಮಹಾ ನಿರ್ದೇಶಕರು ಅಂಕುಶ ಹಾಕಬೇಕಿದೆ.
ಇದನ್ನೂ ಓದಿ: DGP Karnataka: ಪೊಲೀಸರ ಬೊಜ್ಜು ಕರಗಿಸಲು ಡಿಜಿಪಿ ಖಡಕ್ ಕ್ಲಾಸ್; ಫಿಟ್ನೆಸ್ ಮಂತ್ರ ಜಪಿಸಿದ ಅಲೋಕ್ ಮೋಹನ್
ಕ್ರಿಮಿನಲ್‌ಗಳು ತಮ್ಮ ಅಕೃತ್ಯಗಳಿಗೆ ಆಧುನಿಕ ವಿಧಾನಗಳನ್ನು ಅನುಸರಿಸುತ್ತಿದ್ದಾರೆ; ಹೀಗಾಗಿ ಪೊಲೀಸ್ ಇಲಾಖೆಯೂ ಅತ್ಯಾಧುನಿಕವಾಗುವುದು ಅನಿವಾರ್ಯವಾಗಿದೆ. ನಮ್ಮಲ್ಲಿರುವ ಸೈಬರ್ ಸೆಲ್‌ನ ಸಿಬ್ಬಂದಿ ಸಂಖ್ಯೆ ಕಡಿಮೆ. ನಡೆಯುತ್ತಿರುವ ಸೈಬರ್ ಅಪರಾಧದ ಪ್ರಮಾಣ ನಿಯಂತ್ರಿಸಲು ಇದು ಸಾಲದು. ಮುಂದಿನ ವರ್ಷಗಳಲ್ಲಿ ಇದು ಹಲವು ಪಟ್ಟು ಹೆಚ್ಚಲಿದೆ. ಮಾದಕ ದ್ರವ್ಯದ ಮಾಫಿಯಾ ಗಾಬರಿಯಾಗುವಷ್ಟು ಬೆಳೆದು ನಿಂತಿದೆ. ಇದನ್ನು ತಳದಿಂದಲೇ ನಾಶ ಮಾಡುವುದು ಅಗತ್ಯವಾಗಿದೆ. ನಾಗರಿಕರು ಪೊಲೀಸ್ ಠಾಣೆಗೆ ಬರಲು ಹೆದರುವ ವಾತಾವರಣ ಇರಬಾರದು, ಪೊಲೀಸರು ಜನಸ್ನೇಹಿಯಾಗಿ ಕಾರ್ಯಾಚರಿಸಬೇಕು ಎಂಬುದಕ್ಕೆ ಡಿಜಿಯೂ ಒತ್ತು ಕೊಟ್ಟಿದ್ದಾರೆ. ಅವರ ಆಶಯ ನನಸಾಗಲಿ.