ಪ್ರಮುಖ ಸುದ್ದಿ
ವಿಸ್ತಾರ ಸಂಪಾದಕೀಯ: ಪೊಲೀಸರ ಹೊಟ್ಟೆಯ ಬೊಜ್ಜು ಮಾತ್ರವಲ್ಲ, ಅಪರಾಧ ಪ್ರಮಾಣವೂ ಕರಗಲಿ
ಪೊಲೀಸರು ಹೊಟ್ಟೆ ಕರಗಿಸಲಿ ಬಿಡಲಿ, ಅಪರಾಧದ ಪ್ರಮಾಣವನ್ನು ಕರಗಿಸಬೇಕಾದುದಂತೂ ಅತ್ಯಗತ್ಯ. ನೂತನ ಪೊಲೀಸ್ ನಿರ್ದೇಶಕರು ಪೊಲೀಸರ ಹೊಟ್ಟೆ ಕರಗಿಸುವುದರ ಜತೆಗೆ, ಅಪರಾಧ ಪ್ರಮಾಣ ಕರಗಿಸುವ ನಿಟ್ಟಿನಲ್ಲೂ ಹರಿತವಾದ ಯೋಜನೆ ರೂಪಿಸಬೇಕಿದೆ.
ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುವ ಅಲೋಕ್ ಮೋಹನ್ ಅವರು, ಹಿರಿಯ ಅಧಿಕಾರಿಗಳ ಮೊದಲ ಸಭೆಯಲ್ಲಿ ಪೊಲೀಸರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇನ್ನು ಮುಂದೆ ಪೊಲೀಸರು ಸೋಮಾರಿಗಳಾಗುವಂತಿಲ್ಲ, ಹೊಟ್ಟೆ ಬೆಳೆಸಿಕೊಳ್ಳುವಂತಿಲ್ಲ. ಪೊಲೀಸರ ಹೊಟ್ಟೆಯ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳು ನಿಗಾ ಇರಿಸಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ರೌಡಿಸಂ ಮಟ್ಟ ಹಾಕುವುದು, ಜನಸ್ನೇಹಿ ಪೊಲೀಸಿಂಗ್, ಡ್ರಗ್ಸ್ ಜಾಲ ನಿಯಂತ್ರಣ, ಎಸಿಪಿಗಳಿಂದ ಪ್ರತಿದಿನ ಸ್ಟೇಶನ್‌ಗಳಿಗೆ ಭೇಟಿ ಇತ್ಯಾದಿ ಹಲವು ವಿಚಾರಗಳನ್ನು ಡಿಜಿ ಪ್ರಸ್ತಾಪಿಸಿದ್ದಾರೆ. ಇದರಲ್ಲಿ ಮುಖ್ಯವಾದುದು ಪೊಲೀಸರ ಫಿಟ್‌ನೆಸ್ ವಿಚಾರ.
ಖಾಕಿ ಬಟ್ಟೆ, ಲಾಠಿ ಮತ್ತು ಟೋಪಿಯಂತೆ ಬೊಜ್ಜು ಹೊಟ್ಟೆ ಕೂಡ ಪೊಲೀಸರ ಅವಿಭಾಜ್ಯ ಅಂಗ ಎಂಬ ಚಿತ್ರಣ ಹಿಂದಿನಿಂದಲೂ ಇದೆ. ಪೊಲೀಸರ ಹೊಟ್ಟೆ ಕರಗಿಸುವ ಪ್ರಯತ್ನ ರಾಮಕೃಷ್ಣ ಹೆಗಡೆ ಸರಕಾರದ ಕಾಲದಿಂದಲೂ ನಡೆಯುತ್ತ ಬಂದಿದೆ. ಆದರೆ ಈವರೆಗೆ ಸಂಪೂರ್ಣ ಯಶ ಸಿಕ್ಕಿಲ್ಲ ಎನ್ನುವುದು ನಮ್ಮ ಬಹುತೇಕ ಪೊಲೀಸರನ್ನು ನೋಡಿದರೆ ಗೊತ್ತಾಗುತ್ತದೆ. ಅಳತೆ ಮೀರಿ ಬೆಳೆದ ಈ ಹೊಟ್ಟೆಯನ್ನಿಟ್ಟುಕೊಂಡು ಈ ಪೊಲೀಸರು ಕಳ್ಳರನ್ನು ಹೇಗೆ ಹಿಡಿಯುತ್ತಾರೋ ಗೊತ್ತಿಲ್ಲ. ಪೊಲೀಸ್ ಇಲಾಖೆ ಎಂದರೆ ಸೇನಾಪಡೆಯಷ್ಟೇ ಪ್ರಮುಖವಾದುದು. ಸೇನಾಯೋಧರಿಗೆ ಫಿಟ್‌ನೆಸ್ ಎಷ್ಟು ಮುಖ್ಯವೋ ಪೊಲೀಸರಿಗೂ ಅಷ್ಟೇ ಮುಖ್ಯವಾಗಿರಬೇಕು. ಪೊಲೀಸರು ತಮ್ಮ ನೋಟಮಾತ್ರದಿಂದಲೇ ರೌಡಿಗಳಲ್ಲಿ ಮೈಚಳಿ ಮೂಡಿಸುವಂತಿದ್ದರೆ ಅಷ್ಟರ ಮಟ್ಟಿಗೆ ನಮ್ಮ ನಗರಗಳು ಗೂಂಡಾಮುಕ್ತವಾಗುತ್ತವೆ. ಕ್ರೈಮ್‌ಗೆ ತೊಡಗುವವರಿಗೆ ಪೊಲೀಸರ ಅಧಿಕಾರದ ಮಾತ್ರವಲ್ಲ ಫಿಟ್‌ನೆಸ್‌ನ ಭೀತಿಯೂ ಇರಬೇಕು. ಆದರೆ ಪೊಲೀಸರ ಅನಿಯಮಿತ, ಅನಿರ್ದಿಷ್ಟಾವಧಿಯ ಡ್ಯೂಟಿ ಹಾಗೂ ಜೀವನಶೈಲಿಯೇ ಅವರ ಫಿಟ್‌ನೆಸ್‌ಗೆ ಕಂಟಕವಾಗುತ್ತಿದೆ. ಸರಿಯಾದ ಪೌಷ್ಟಿಕವಾದ ಆಹಾರ, ಸಾಕಷ್ಟು ವಿಶ್ರಾಂತಿ, ಕಡ್ಡಾಯ ವ್ಯಾಯಾಮದ ಅಗತ್ಯವೂ ಇವರಿಗಿದೆ. ಡ್ಯೂಟಿಗೆ ಸೇರಿದ ಮೊದಲ ದಿನಗಳಲ್ಲಿ ಫಿಟ್‌ನೆಸ್ ಕಾಪಾಡಿಕೊಳ್ಳುವ ಪೊಲೀಸರು ಬರಬರುತ್ತಾ ಅದನ್ನು ಕಳೆದುಕೊಳ್ಳುವುದಕ್ಕೆ ತಡೆ ಹಾಕಲೂ ಇಲಾಖೆ ಯೋಚಿಸಬೇಕು.
ಪೊಲೀಸರು ಹೊಟ್ಟೆ ಕರಗಿಸಲಿ ಬಿಡಲಿ, ಅಪರಾಧದ ಪ್ರಮಾಣವನ್ನು ಕರಗಿಸಬೇಕಾದುದಂತೂ ಅತ್ಯಗತ್ಯ. ನೂತನ ಪೊಲೀಸ್ ನಿರ್ದೇಶಕರು ಪೊಲೀಸರ ಹೊಟ್ಟೆ ಕರಗಿಸುವುದರ ಜತೆಗೆ, ಅಪರಾಧ ಪ್ರಮಾಣ ಕರಗಿಸುವ ನಿಟ್ಟಿನಲ್ಲೂ ಹರಿತವಾದ ಯೋಜನೆ ರೂಪಿಸಬೇಕಿದೆ. ಮುಖ್ಯವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊಲೆ, ಸುಲಿಗೆ, ಸರಗಳ್ಳತನ, ಸೈಬರ್ ವಂಚನೆ ಮುಂತಾದ ಪಾತಕ ಕೃತ್ಯಗಳು ಅವ್ಯಾಹತವಾಗಿ ನಡೆಯುತ್ತಿವೆ. ರೌಡಿಗಳು ಬೀದಿಬೀದಿಯಲ್ಲಿ ಹೊಡೆದಾಡಿಕೊಳ್ಳುತ್ತಿದ್ದಾರೆ; ಸಾರ್ವಜನಿಕ ಶಾಂತಿಭಂಗ ಮಾಡುತ್ತಿದ್ದಾರೆ. ಕೆಲವು ಪ್ರದೇಶಗಳನ್ನು ಕೆಲವು ರೌಡಿಗಳೇ ಹಂಚಿಕೊಂಡಿರುವಂತಿದೆ. ಕೆ.ಆರ್ ಮಾರ್ಕೆಟ್ ಮುಂತಾದ ಕಡೆ ರೌಡಿಗಳ ಭೂಗತ ವಸೂಲಿ ಜಗತ್ತು ಕಾರ್ಯಾಚರಿಸುತ್ತಿದೆ ಎಂಬ ಮಾಹಿತಿ ಇದೆ. ಭೂಗತ ಪಾತಕಿಗಳು, ಭೂ ಅತಿಕ್ರಮಣಕಾರರು, ಬೆಟ್ಟಿಂಗ್ ದಂಧೆ, ವೇಶ್ಯಾವಾಟಿಕೆಯಂಥ ಅಕ್ರಮ ದಂಧೆಗಳಿಗೆ ಕೆಲವು ಪೊಲೀಸ್ ಅಧಿಕಾರಿಗಳೇ ತೆರೆಮರೆಯಲ್ಲಿ ಕೈ ಜೋಡಿಸಿರುವುದು ಗುಟ್ಟೇನಲ್ಲ. ಇಂಥ ತೆರೆಮರೆಯ ಪೊಲೀಸ್ ಅಕ್ರಮಗಳಿಗೆ ನೂತನ ಪೊಲೀಸ್ ಮಹಾ ನಿರ್ದೇಶಕರು ಅಂಕುಶ ಹಾಕಬೇಕಿದೆ.
ಇದನ್ನೂ ಓದಿ: DGP Karnataka: ಪೊಲೀಸರ ಬೊಜ್ಜು ಕರಗಿಸಲು ಡಿಜಿಪಿ ಖಡಕ್ ಕ್ಲಾಸ್; ಫಿಟ್ನೆಸ್ ಮಂತ್ರ ಜಪಿಸಿದ ಅಲೋಕ್ ಮೋಹನ್
ಕ್ರಿಮಿನಲ್‌ಗಳು ತಮ್ಮ ಅಕೃತ್ಯಗಳಿಗೆ ಆಧುನಿಕ ವಿಧಾನಗಳನ್ನು ಅನುಸರಿಸುತ್ತಿದ್ದಾರೆ; ಹೀಗಾಗಿ ಪೊಲೀಸ್ ಇಲಾಖೆಯೂ ಅತ್ಯಾಧುನಿಕವಾಗುವುದು ಅನಿವಾರ್ಯವಾಗಿದೆ. ನಮ್ಮಲ್ಲಿರುವ ಸೈಬರ್ ಸೆಲ್‌ನ ಸಿಬ್ಬಂದಿ ಸಂಖ್ಯೆ ಕಡಿಮೆ. ನಡೆಯುತ್ತಿರುವ ಸೈಬರ್ ಅಪರಾಧದ ಪ್ರಮಾಣ ನಿಯಂತ್ರಿಸಲು ಇದು ಸಾಲದು. ಮುಂದಿನ ವರ್ಷಗಳಲ್ಲಿ ಇದು ಹಲವು ಪಟ್ಟು ಹೆಚ್ಚಲಿದೆ. ಮಾದಕ ದ್ರವ್ಯದ ಮಾಫಿಯಾ ಗಾಬರಿಯಾಗುವಷ್ಟು ಬೆಳೆದು ನಿಂತಿದೆ. ಇದನ್ನು ತಳದಿಂದಲೇ ನಾಶ ಮಾಡುವುದು ಅಗತ್ಯವಾಗಿದೆ. ನಾಗರಿಕರು ಪೊಲೀಸ್ ಠಾಣೆಗೆ ಬರಲು ಹೆದರುವ ವಾತಾವರಣ ಇರಬಾರದು, ಪೊಲೀಸರು ಜನಸ್ನೇಹಿಯಾಗಿ ಕಾರ್ಯಾಚರಿಸಬೇಕು ಎಂಬುದಕ್ಕೆ ಡಿಜಿಯೂ ಒತ್ತು ಕೊಟ್ಟಿದ್ದಾರೆ. ಅವರ ಆಶಯ ನನಸಾಗಲಿ.
ಉದ್ಯೋಗ
UPSC Prelims 2023: ನಾಳೆ ಯುಪಿಎಸ್‌ಸಿ ಪ್ರಿಲಿಮ್ಸ್; ಈ ಬಾರಿಯೂ ಕನ್ನಡದಲ್ಲಿ ನಡೆಯೋಲ್ಲ ಪರೀಕ್ಷೆ
ನಾಗರಿಕ ಸೇವಾ ಹುದ್ದೆಗಳ ನೇಮಕಕ್ಕಾಗಿ ಕೇಂದ್ರ ಲೋಕಸೇವಾ ಆಯೋಗವು ಭಾನುವಾರ ಪೂರ್ವಭಾವಿ ಪರೀಕ್ಷೆ (UPSC Prelims 2023) ನಡೆಸಲಿದೆ. ಈ ಪರೀಕ್ಷೆ ಕುರಿತ ಮಾಹಿತಿ ಇಲ್ಲಿದೆ.
ಬೆಂಗಳೂರು: ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) ಭಾರತೀಯ ನಾಗರಿಕ ಸೇವಾ ಅಧಿಕಾರಿ (ಐಎಎಸ್) ಮತ್ತು ಭಾರತೀಯ ಅರಣ್ಯ ಸೇವಾ ಅಧಿಕಾರಿ (ಐಎಫ್‌ಎಸ್) ಹುದ್ದೆಗಳ ನೇಮಕಕ್ಕೆ ಮೇ 28ರ ಭಾನುವಾರದಂದು ಪೂರ್ವಭಾವಿ ಪರೀಕ್ಷೆ (UPSC Prelims 2023) ನಡೆಸಲಿದೆ.
ರಾಜ್ಯದಲ್ಲಿ ಬೆಂಗಳೂರು, ಧಾರವಾಡ ಮತ್ತು ಮೈಸೂರಿನಲ್ಲಿ ಪೂರ್ವಭಾವಿ ಪರೀಕ್ಷೆ ನಡೆಯಲಿದ್ದು ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪೂರ್ವ ಭಾವಿ ಪರೀಕ್ಷೆಯನ್ನು ಕನ್ನಡದಲ್ಲಿಯೂ ನಡೆಸಬೇಕೆಂಬ ಬೇಡಿಕೆಗೆ ಯುಪಿಎಸ್‌ಸಿಯು ಈ ಬಾರಿಯೂ ಮನ್ನಣೆ ನೀಡಿಲ್ಲ. ಹೀಗಾಗಿ ಅಭ್ಯರ್ಥಿಗಳು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಬಹುದಾಗಿದೆ. ʻʻದೇಶದ ಪ್ರತಿಷ್ಠಿತ ಪರೀಕ್ಷೆ ಎಂದು ಹೆಸರು ಮಾಡಿರುವ ಈ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಿದರೆ ಮಾತ್ರ ರಾಜ್ಯದ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆʼʼ ಎಂದು ಕನ್ನಡ ಪರ ಹೋರಾಟಗಾರ ಗಿರೀಶ್ ಮತ್ತೇರ ಒತ್ತಾಯಿಸಿದ್ದಾರೆ.
ಈಗಾಗಲೇ ಪ್ರವೇಶ ಪತ್ರವನ್ನು ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದ್ದು, ಅಭ್ಯರ್ಥಿಗಳು ಇದನ್ನು ಡೌನ್‌ಲೋಡ್ ಮಾಡಿ, ಪ್ರಿಂಟ್ ತೆಗೆದುಕೊಂಡು ಪರೀಕ್ಷೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಎರಡು ಶಿಫ್ಟ್‌ಗಳಲ್ಲಿ ಪರೀಕ್ಷೆ ನಡೆಯಲಿದ್ದು, ಬೆಳಗ್ಗೆ 9:30 ರಿಂದ 11:30ರ ವರೆಗೆ ಒಂದು ಶಿಫ್ಟ್‌ನ ಪರೀಕ್ಷೆ ನಡೆದರೆ ಮತ್ತೊಂದು ಶಿಫ್ಟ್‌ನ ಪರೀಕ್ಷೆಯು ಮಧ್ಯಾಹ್ನ 2:30 ರಿಂದ 4:30ರ ವರೆಗೆ ನಡೆಯಲಿದೆ. ಈ ಪರೀಕ್ಷೆಯು ಆಫ್‌ಲೈನ್‌ನಲ್ಲಿ ನಡೆಸಲಾಗುತ್ತದೆ.
ಪ್ರವೇಶ ಪತ್ರದೊಂದಿಗೆ ಫೋಟೊ ಇರುವ ಗುರುತಿನ ಚೀಟಿ ತರುವುದು ಕಡ್ಡಾಯ ಎಂದು ಯುಪಿಎಸ್‌ಸಿ ತಿಳಿಸಿದೆ. ಪರೀಕ್ಷೆ ಆರಂಭವಾಗುವುದಕ್ಕಿಂತಲೂ ಹತ್ತು ನಿಮಿಷ ಮೊದಲ ಪರೀಕ್ಷಾ ಕೇಂದ್ರದ ಬಾಗಿಲನ್ನು ಮುಚ್ಚಲಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಸಾಕಷ್ಟು ಮೊದಲೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಬೇಕೆಂದು ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರದ ಬಾಗಿಲು ಮುಚ್ಚಿದ ನಂತರ ಯಾವುದೇ ಅಭ್ಯರ್ಥಿಗೆ ಪರೀಕ್ಷಾ ಕೇಂದ್ರ ಪ್ರವೇಶಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಎಚ್ಚರಿಸಲಾಗಿದೆ. ಪ್ರವೇಶ ಕೇಂದ್ರ ಮಾಹಿತಿಯನ್ನು ಪ್ರವೇಶ ಪತ್ರದಲ್ಲಿ ಒದಗಿಸಲಾಗಿರುತ್ತದೆ.
ಇದನ್ನೂ ಓದಿ : IAS prelims 2022: ಕೊನೆಯ ಕ್ಷಣದ ಸಿದ್ಧತೆ ಹೇಗಿರಬೇಕು, ಏನೇನು ಓದಬೇಕು ಗೊತ್ತೇ?
ಪರೀಕ್ಷೆಯಲ್ಲಿ ಅನುಸರಿಸಬೇಕಾಗಿರುವ ನಿಯಮಗಳನ್ನು ಪ್ರವೇಶ ಪತ್ರದಲ್ಲಿ ಒದಗಿಸಲಾಗುತ್ತದೆ. ಇದನ್ನು ಅಭ್ಯರ್ಥಿಗಳು ಓದಿಕೊಂಡೇ ಪರೀಕ್ಷೆಗೆ ಹಾಜರಾಗಬೇಕಿರುತ್ತದೆ. ಪರೀಕ್ಷೆಯಲ್ಲಿ ಸರಿ ಉತ್ತರವನ್ನು ಗುರುತಿಸಲು ಕೇವಲ ಬ್ಲಾಕ್ ಬಾಲ್ ಪಾಯಿಂಟ್ ಪೆನ್ ಅನ್ನು ಮಾತ್ರ ಬಳಸುವಂತೆ ಆಯೋಗ ಕೋರಿದೆ.
ಮೊದಲಿಗೆ ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿ, ನೇಮಕ ಮಾಡಿಕೊಳ್ಳಲಾಗುತ್ತದೆ.
ಪ್ರವೇಶ ಪತ್ರ ಪಡೆಯಲು ಇಲ್ಲಿ ಕ್ಲಿಕ್ (Click Here) ಮಾಡಿ.
ಈ ಬಾರಿ ಒಟ್ಟು 1,105 ಐಎಎಸ್ ಮತ್ತು 150 ಐಎಫಎಸ್ ಹುದ್ದೆಗಳಿಗೆ ನೇಮಕ ನಡೆಯಲಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದಲ್ಲಿ ಈ ಬಾರಿ ಅತಿ ಹೆಚ್ಚು ಐಎಎಸ್ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ. ಕಳೆದ ವರ್ಷ ಮೊದಲಿಗೆ ಕಡಿಮೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದರೂ ನಂತರ 1,011 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು. 2016 ರಲ್ಲಿ 1079 ಹುದ್ದೆಗಳಿಗೆ ನೇಮಕ ನಡೆದಿತ್ತು. 2017 ರಲ್ಲಿ 980, 2018 ರಲ್ಲಿ 782, 2019 ರಲ್ಲಿ 896 ಮತ್ತು 2020 ರಲ್ಲಿ 796 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು. 2021 ರಲ್ಲಿ ಕೇವಲ 712 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು. ಈ ಬಾರಿಯ ಹುದ್ದೆಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : UPSC Prelims 2023: ಮೇ 28ರಂದು ಬೆಂಗಳೂರಿನಲ್ಲಿ ಬೆಳಗ್ಗೆ 6ರಿಂದಲೇ ಮೆಟ್ರೋ ಸಂಚಾರ ಆರಂಭ
ಸಹಾಯವಾಣಿ ಸಂಖ್ಯೆ: 011-23385271 / 011-23381125 / 011-23098543
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ : https://www.upsc.gov.in/
ಇದನ್ನೂ ಓದಿ: UPSC Preparation : ವೃತ್ತಿಪರರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಕ್ಸೆಸ್ ಆಗಬೇಕಿದ್ದರೆ ಏನು ಮಾಡಬೇಕು?
ಕರ್ನಾಟಕ
Karnataka Cabinet: ರಾಜ್ಯ ಕಾಂಗ್ರೆಸ್ ನಾಯಕರ ಜತೆಗೆ ಮಾತುಕತೆ ಕಟ್: ಸದನದಲ್ಲಿ ನೋಡ್ಕೊತೀನಿ ಎಂದ ಜಯಚಂದ್ರ
ನಾನು ಮಿನಿಸ್ಟರ್ ಆಗದಿದ್ದರೂ ಶಾಸಕ ಸ್ಥಾನದಿಂದ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಬಳಿ ದಾಖಲೆ ಇದೆ, ಮಾತನಾಡುವ ಶಕ್ತಿ ಇದೆ ಎಂದು ಟಿ.ಬಿ. ಜಯಚಂದ್ರ ಹೇಳಿದ್ದಾರೆ.
ಬೆಂಗಳೂರು: ಇನ್ನುಮುಂದೆ ತಮಗೂ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಮಾತನಾಡುವುದಿಲ್ಲ ಎಂದಿರುವ ಹಿರಿಯ ಕಾಂಗ್ರೆಸಿಗ ಹಾಗೂ ಮಾಜಿ ಸಚಿವ ಟಿ.ಬಿ. ಜಯಚಂದ್ರ, ಸದನ ಕರೆಯಲ್ಲಿ ಅಲ್ಲಿ ಮಾತಾಡುತ್ತೇನೆ ಎಂದು ಹೇಳಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಅನೇಕ ಖಾತೆಗಳನ್ನು ನಿರ್ವಹಣೆ ಮಾಡುತ್ತಿದ್ದ ಪ್ರಭಾವಿ ಸಚಿವರಾಗಿದ್ದ ಟಿ.ಬಿ. ಜಯಚಂದ್ರ ಅವರು ಈ ಬಾರಿಯೂ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದರು. ಸಚಿವರ ಪಟ್ಟಿಯಲ್ಲಿ ಕೊನೆಯವರೆಗೂ ಹೋಗಿ ತಮ್ಮ ಹೆಸರು ಕೈಬಿಡಲಾಗಿದೆ ಎಂದು ಅಸಮಾಧಾನಗೊಂಡಿರುವ ಟಿ.ಬಿ. ಜಯಚಂದ್ರ, ಮಾಧ್ಯಮಗಳ ಎದುರು ಕೋಪ ಹೊರಹಾಕಿದ್ದಾರೆ.
ನನಗೆ ಮಂತ್ರಿ ಪದವಿ ಸಿಗಬೇಕಿತ್ತು. ಕೊನೆಯ ಕ್ಷಣದವರೆಗೂ ನನ್ನ ಹೆಸರು ಪಟ್ಟಿಯಲ್ಲಿತ್ತು. ನನಗೆ ಸಚಿವ ಸ್ಥಾನ ತಪ್ಪಲು ನಮ್ಮ ಜಿಲ್ಲೆಯ ನಾಯಕರು ಕಾರಣರಲ್ಲ. ಪರಮೇಶ್ವರ್ ಕೋಟಾ ಬೇರೆ, ರಾಜಣ್ಣ ಖೋಟಾ ಬೇರೆ. ನನ್ನದು ನನ್ನ ಸಮುದಾಯದ ಕೋಟ. ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಮ್ಮ ಕಾರ್ಯಕರ್ತರು ಹೋರಾಟಕ್ಕೆ ಮುಂದಾದರು. ಆದರೆ ನಾನು ಪಕ್ಷದ ಶಿಸ್ತಿನ ಸಿಪಾಯಿ. ನಾನು ಶಾಸಕನಾದಾಗ ಈಗ ವಿಧಾನ ಸಭೆಯಲ್ಲಿ ಇರೋರು ಯಾರೂ ಶಾಸಕರಾಗಿರಲಿಲ್ಲ. ನನ್ನ ಸಚಿವ ಸ್ಥಾನ ತಪ್ಪಲು ಕೆಲ ರಿಯಲ್ ಎಸ್ಟೇಟ್ ಹಾಗೂ ಎಜುಕೇಷನ್ ಮಾಫಿಯಾ ಕೆಲಸ ಮಾಡಿದೆ. ನಾನು ನೀರು ಬೇಕು ಜನರಿಗೆ ಅಂತ ಲಾಭಿ ಮಾಡಿದೆ, ಅವರು ಎಜುಕೇಷನ್ ಸಂಸ್ಥೆಗಳು ಬೇಕು ಅಂತ ಲಾಭಿ ಮಾಡಿದರು. ಇವರೇ ನನಗೆ ಸಚಿವ ಸ್ಥಾನ ತಪ್ಪಿಸುವಲ್ಲಿ ಕಾರಣರಾಗಿದ್ದಾರೆ.
ನಾನು ಮಿನಿಸ್ಟರ್ ಆಗದಿದ್ದರೂ ಶಾಸಕ ಸ್ಥಾನದಿಂದ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಬಳಿ ದಾಖಲೆ ಇದೆ, ಮಾತನಾಡುವ ಶಕ್ತಿ ಇದೆ. ಸದನದಲ್ಲಿ ಎಲ್ಲವನ್ನೂ ಮಾತನಾಡ್ತೀನಿ. ನಾನು ಯಾವನಿಗೂ ಹೆದರಲ್ಲ. ಮುಂದೆ ಸದನ ಕರೆಯಲಿ ಎಲ್ಲವನ್ನೂ ಮಾತನಾಡ್ತೀನಿ. ಇನ್ನು ಏನಿದ್ದರೂ ಹೈಕಮಾಂಡ್ ಜತೆ ಮಾತ್ರ ನನ್ನ ಮಾತುಕತೆ. ರಾಜ್ಯದ ನಾಯಕರ ಜತೆ ಮಾತುಕತೆ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: Electricity Bill: ಇವತ್ತಿಂದ ಕರೆಂಟ್ ಬಿಲ್ ಕಟ್ಟಂಗಿಲ್ಲ; ಇದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಆರ್ಡರ್!
ಕರ್ನಾಟಕ
Karnataka Cabinet: ಕಾಂಗ್ರೆಸ್‌ನಲ್ಲಿ ಮತ್ತೆ ಶುರುವಾಯಿತು ಮೂಲ-ವಲಸಿಗ ಜಗಳ: ಸಿಎಂ ವಿರುದ್ಧ ಹರಿಪ್ರಸಾದ್ ಪ್ರಹಾರ
ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ಮುಂದುವರಿಸಿದ ಬಿ.ಕೆ. ಹರಿಪ್ರಸಾದ್, ನಾನು ಪಕ್ಷ ಕಟ್ಟಿದವನು. ಪಕ್ಷಕ್ಕಾಗಿ ಸಾಕಷ್ಟು ಶ್ರಮ ವಹಿಸಿದ್ದೇನೆ ಎಂದಿದ್ದಾರೆ.
ಬೆಂಗಳೂರು: ಚುನಾವಣೆಯುದ್ದಕ್ಕೂ ಒಗ್ಗಟ್ಟಿನ ಮಂತ್ರವನ್ನು ಜಪಿಸಿಕೊಂಡು ಸರಳ ಬಹುಮತ ಪಡೆದ ಕಾಂಗ್ರೆಸ್‌ನಲ್ಲಿ ಇದೀಗ ಸಚಿವ ಸಂಪುಟ ವಿಸ್ತರಣೆ ನಂತರ ಮತ್ತೆ ಮೂಲ ಹಾಗೂ ವಲಸಿಗ ಜಗಳ ಆರಂಭವಾಗಿದೆ.
ಅತ್ಯಂತ ಹಿರಿಯ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದರೂ ಸಚಿವ ಸ್ಥಾನ ಸಿಗದೇ ಇರುವ ಬಗ್ಗೆ ಬಿ.ಕೆ. ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ʼಹೊರಗಿನಿಂದ ಬಂದʼ ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.
ಸಚಿವ ಸ್ಥಾನ ಮಿಸ್ ಆದ ಕುರಿತು ಮಾತನಾಡಿದ ಹರಿಪ್ರಸಾದ್, ಸಿಎಂ ಏನು ಬೇಕೋ ಹಾಗೆ ಮಾಡಿಕೊಂಡಿದ್ದಾರೆ. ಸಭಾ ನಾಯಕನಿಗೆ ಸಚಿವ ಸ್ಥಾನ ನೀಡುವ ಪದ್ಧತಿ, ಸಂಪ್ರದಾಯ ಇತ್ತು. ಸಿಎಂ ಅದನ್ನು ಈಗ ಬದಲಾಯಿಸಿದ್ದಾರೆ. ಅಷ್ಟಕ್ಕೂ ನನ್ನನ್ನು ಮಂತ್ರಿ ಮಾಡಿ ಎಂದು ಯಾರಲ್ಲೂ ಕೇಳಿಕೊಂಡಿರಲಿಲ್ಲ. ಎಲ್ಲಿಯವರೆಗೂ ಹೇಳುತ್ತಾರೋ ಅಲ್ಲಿಯವರೆಗೂ ನಾನು ಇರುತ್ತೇನೆ ಎಂದರು.
ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ಮುಂದುವರಿಸಿದ ಬಿ.ಕೆ. ಹರಿಪ್ರಸಾದ್, ನಾನು ಪಕ್ಷ ಕಟ್ಟಿದವನು. ಪಕ್ಷಕ್ಕಾಗಿ ಸಾಕಷ್ಟು ಶ್ರಮ ವಹಿಸಿದ್ದೇನೆ. ನಾನು ಸ್ವಂತ ಮನೆಯಲ್ಲಿ ಇರುವವನು, ಬಾಡಿಗೆ ಮನೆಯಲ್ಲಿ ಇರುವವನು ಅಲ್ಲ. ನನ್ನ ಸಾಮಾಜಿಕ ನ್ಯಾಯಕ್ಕೂ ಅಹಿಂದಕ್ಕೂ ವ್ಯತ್ಯಾಸ ಇದೆ. ನಾನು ಅಹಿಂದ ಅಂತಾ ಹೇಳೋನಲ್ಲಾ. ನಾನು ಅಧಿಕಾರ ಕೊಡಿ ಅಂತಾ ಎಂದೂ ಕಾಲು ಹಿಡಿದವನಲ್ಲ. ನಾನು ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: Karnataka Election : ಮಂಕಾಳ ವೈದ್ಯಗೆ ಗೆಲುವು ಮಾತ್ರವಲ್ಲ ಮಂತ್ರಿಗಿರಿಯೂ ಗ್ಯಾರಂಟಿ ಎಂದ ಬಿ.ಕೆ. ಹರಿಪ್ರಸಾದ್
ಕರ್ನಾಟಕ
Laxmi Hebbalkar: ಸಚಿವೆಯಾಗುವುದರ ಜತೆಗೆ ಅಜ್ಜಿಯೂ ಆದ ಲಕ್ಷ್ಮಿ ಹೆಬ್ಬಾಳ್ಕರ್; ಒಂದೇ ದಿನ 2 ಸಿಹಿ ಸುದ್ದಿ!
Karnataka Cabinet expansion: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಮೂಲಕ ಇದೇ ಮೊದಲ ಬಾರಿಗೆ ಮಂತ್ರಿ ಪಟ್ಟ ಗಿಟ್ಟಿಸಿಕೊಂಡ ಖುಷಿಯಲ್ಲಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಜ್ಜಿಯಾಗಿದ್ದಾರೆ. ಒಂದೇ ದಿನ ಎರಡು ಸಂತಸದ ಸುದ್ದಿಯನ್ನು ಅವರು ಪಡೆದಂತಾಗಿದೆ.
ಬೆಳಗಾವಿ: ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಅವರಿಗೆ ಇಂದು ಶುಭ ಶನಿವಾರ. ಅವರು ಶನಿವಾರ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಮೊದಲ ಬಾರಿಗೆ ಮಂತ್ರಿ ಪಟ್ಟವನ್ನು ಅಲಂಕರಿಸಿದ್ದಾರೆ. ಇದೇ ವೇಳೆ ಅವರು ಅಜ್ಜಿಯೂ ಆಗಿದ್ದಾರೆ.
ಪುತ್ರ ಮೃಣಾಲ್ ಹಾಗೂ ಹಿತಾ ದಂಪತಿಗೆ ಹೆಣ್ಣು ಮಗು ಜನಿಸಿದೆ. ಈ ಮೂಲಕ ಇವರ ಮನೆಗೆ ಮತ್ತೊಂದು ಪುಟ್ಟ ಲಕ್ಷ್ಮಿ ಪ್ರವೇಶ ಆದಂತೆ ಆಗಿದೆ. ಒಂದು ಕಡೆ ಸಚಿವರಾಗಿರುವ ಖುಷಿಯಲ್ಲಿದ್ದ ಲಕ್ಷ್ಮಿ ಅವರಿಗೆ ಈ ಸುದ್ದಿಯು ಸಖತ್ ಖುಷಿ ಕೊಟ್ಟಿದೆ.
ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಸೊಸೆ ಹಿತಾ ಮೃಣಾಲ್ ಹೆಬ್ಬಾಳ್ಕರ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವಾಗಿ ಅವರು ತಮ್ಮ ಆಪ್ತರ ಬಳಿ ಖುಷಿಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Karnataka Cabinet: ಸಂಪುಟದಲ್ಲಿ ಸೋತರೂ ಖಾತೆಯಲ್ಲಿ ಗೆದ್ದ ಡಿ.ಕೆ. ಶಿವಕುಮಾರ್: ಇಲ್ಲಿದೆ ಎಲ್ಲ ಸಚಿವರ ಖಾತೆಗಳ ಪಟ್ಟಿ
ಎರಡನೇ ಬಾರಿಯೇ ಬಂಪರ್
ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ ಎರಡನೇ ಬಾರಿಗೆ ವಿಜಯ ಸಾಧಿಸಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಿದ್ದರಾಮಯ್ಯ ಅವರ ಸಂಪುಟ ಸೇರುವ ಅವಕಾಶ ಒದಗಿ ಬಂದಿದೆ. ಲಿಂಗಾಯತ ಕೋಟಾದಡಿ ಹೆಬ್ಬಾಳ್ಕರ್ ಅವರು ಸಂಪುಟ ಸೇರಿದ್ದಾರೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯೆ ಏರ್ಪಟ್ಟಿದ್ದ ತೀವ್ರ ಪೈಪೋಟಿಯ ಮಧ್ಯೆಯೂ ರಮೇಶ್ ಬೆಂಬಲಿಗ ಹಾಗೂ ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೋಳಕರ್ ಅವರನ್ನು ಮಣಿಸುವಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಯಶಸ್ವಿಯಾಗಿದ್ದರು.
ಅಲ್ಲದೆ, ತಮ್ಮ ಕ್ಷೇತ್ರದಲ್ಲಿ ಪ್ರಭಾವವನ್ನು ಹೊಂದಿಲ್ಲದೆ, ಕಾಂಗ್ರೆಸ್ ಮಟ್ಟಿಗೆ ಬೆಳಗಾವಿ ಜಿಲ್ಲೆಯಲ್ಲಿ ಹಿಡಿತವನ್ನು ಸಾಧಿಸಿದ್ದಾರೆ. ಚುನಾವಣೆಗೂ ಪೂರ್ವದಲ್ಲಿ ಪಕ್ಷ ಸಂಘಟನೆಗೆ ಸಾಕಷ್ಟು ಶ್ರಮ ವಹಿಸಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಅಥಣಿಯಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದಲ್ಲದೆ, ಬೆಂಬಲಿಗರ ಸಭೆಯನ್ನೂ ನಡೆಸಿದ್ದರು. ಕೊನೆಗೆ ಬಿಜೆಪಿ ಹೈಕಮಾಂಡ್ ರಮೇಶ್ ಜಾರಕಿಹೊಳಿ ಅವರ ಒತ್ತಡಕ್ಕೆ ಮಣಿದು ಅವರ ಬೆಂಬಲಿಗ ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ನೀಡಿತ್ತು. ಇದರಿಂದ ಪಕ್ಷೇತರವಾಗಿ ಸ್ಪರ್ಧೆ ಮಾಡಲು ಸವದಿ ಮುಂದಾಗಿದ್ದರು. ಆದರೆ, ಈ ವೇಳೆ ಮಧ್ಯ ಪ್ರವೇಶ ಮಾಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಕರೆತಂದು ಪಕ್ಷ ಸೇರ್ಪಡೆ ಮಾಡಿಸಿದ್ದರು. ಅಲ್ಲದೆ, ಲಕ್ಷ್ಮಣ ಸವದಿ ಅವರು ಈಗ ಗೆದ್ದು ಬೀಗಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಪದಗ್ರಹಣ; ವಿಡಿಯೊ ಇಲ್ಲಿದೆ
ಇದನ್ನೂ ಓದಿ: Electricity Bill: ಇವತ್ತಿಂದ ಕರೆಂಟ್ ಬಿಲ್ ಕಟ್ಟಂಗಿಲ್ಲ; ಇದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಆರ್ಡರ್!
ಜಗದೀಶ್ ಶೆಟ್ಟರ್ ಸೇರ್ಪಡೆಯಲ್ಲೂ ಮಹತ್ವದ ಪಾತ್ರ
ಜಗದೀಶ್ ಶೆಟ್ಟರ್ ಅವರು ಬಿಜೆಪಿಯಲ್ಲಿದ್ದಾಗ ಅವರ ವಿರುದ್ಧ ಸ್ಪರ್ಧೆ ಮಾಡಿದ್ದ ಮಹೇಶ್ ನಲವಾಡ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಇದಾದ ಬಳಿಕ ತಕ್ಷಣವೇ ಕಾರ್ಯಪ್ರವೃತ್ತರಾದ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಅಳಿಯ, ಕಾಂಗ್ರೆಸ್‌ನ ಯುವ ನಾಯಕ ರಜತ್ ಉಳ್ಳಾಗಡ್ಡಿಮಠ ಅವರನ್ನು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರವಂತೆ ಸೂಚಿಸಿದರು. ಅವರು ಈ ನಿಟ್ಟಿನಲ್ಲಿ ಸಕಲ ಪ್ರಯತ್ನವನ್ನು ಮಾಡುತ್ತಿರುವಾಗಲೇ ಬಿಜೆಪಿಯಿಂದ ಶೆಟ್ಟರ್‌ಗೆ ಟಿಕೆಟ್ ಕೈತಪ್ಪಿತ್ತು. ಆಗ ಅವರ ಮಾಸ್ಟರ್ ಪ್ಲ್ಯಾನ್ ಮಾಡುವ ಲಕ್ಷ್ಮಿ ಹೆಬ್ಬಾಳ್ಕರ್, ಅಳಿಯನ ಮೂಲಕ ಶೆಟ್ಟರ್ ಅವರನ್ನು ಕಾಂಗ್ರೆಸ್‌ಗೆ ಕರೆತಂದರು. ಈ ಮೂಲಕ ಲಿಂಗಾಯತ ಮತ ಕ್ರೋಢೀಕರಣದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.
-
ಸುವಚನ14 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ6 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
Live News8 hours ago
Karnataka Cabinet Expansion Live : 34 ಸಚಿವರಿಗೆ ಖಾತೆ ಹಂಚಿಕೆ; ಬಯಸಿದ ಖಾತೆ ಪಡೆದ ಡಿ ಕೆ ಶಿವಕುಮಾರ್
-
ಕರ್ನಾಟಕ20 hours ago
RP Ashok: ಇನ್ಸ್ಪೆಕ್ಟರ್ ಆರ್.ಪಿ.ಅಶೋಕ್ಗೆ ಆರ್ಯಭಟ ಪ್ರಶಸ್ತಿ ಪ್ರದಾನ
-
ಕರ್ನಾಟಕ21 hours ago
ರಾಜ್ಯ ಸಚಿವ ಸಂಪುಟ ವಿಸ್ತರಣೆ: ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ 24 ಶಾಸಕರಿಗೆ ಸಚಿವ ಸ್ಥಾನ, ಮತ್ತೆ ಸಿದ್ದು ಮೇಲುಗೈ
-
ಕ್ರಿಕೆಟ್21 hours ago
IPL 2023: ಗಿಲ್ ಶತಕದ ಕಮಾಲ್; ಮುಂಬೈಗೆ ಬೃಹತ್ ಮೊತ್ತದ ಗುರಿ
-
ಉತ್ತರ ಕನ್ನಡ19 hours ago
Honnavar News: ಕಾರಿಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ, 30 ಮಂದಿಗೆ ಗಾಯ
-
ಪ್ರಮುಖ ಸುದ್ದಿ19 hours ago
ವಿಸ್ತಾರ ಸಂಪಾದಕೀಯ: ರಾಜ್ಯಾದ್ಯಂತ ಗ್ಯಾರಂಟಿ ಭರವಸೆಯ ಗದ್ದಲ, ಹೊಸ ಸರ್ಕಾರ ಗೊಂದಲ ನಿವಾರಿಸಲಿ