ಒಂದು ಸಾವಿರ ಕೋಟಿಗೂ ಅಧಿಕ ಬೇನಾಮಿ ಆಸ್ತಿ ಹೊಂದಿರುವ ಆರೋಪದಡಿ ಬಂಧಿತರಾಗಿರುವ ಕೆ ಆರ್ ಪುರ ತಾಲೂಕಿನ ತಹಶೀಲ್ದಾರ ಅಜಿತ್ ಕುಮಾರ್ ರೈ ಸರ್ಕಾರಿ ಕೆಲಸದಿಂದ ಅಮಾನತ್ತಾಗಿದ್ದಾರೆ. ಲೋಕಾಯುಕ್ತ ಪೊಲೀಸರು ಬಂಧಿಸಿರುವ ಆರೋಪಿಯನ್ನು ಅಮಾನತು ಮಾಡಿ ಕಂದಾಯ ಇಲಾಖೆಯ ಉಪ ಕಾರ್ಯದರ್ಶಿ ಜಯಲಕ್ಷ್ಮೀ ಆದೇಶ ಹೊರಡಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಅಜಿತ್ ರೈ ಮೇಲೆ ಪ್ರಕರಣ ದಾಖಲಾಗಿದ್ದು, ತನಿಖೆಗೆ ವಿಶೇಷ ಲೋಕಾಯುಕ್ತ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದೆ. ಒಬ್ಬ ವ್ಯಕ್ತಿಯ ಅಕ್ರಮ ಆಸ್ತಿ ತನಿಖೆಗೆ ಎಸ್ ಐ ಟಿ ರಚಿಸಲಾಗಿರುವುದು ಇದೇ ಮೊದಲು.
ಅಜಿತ್ ರೈಗೆ ಸಂಬಂಧಿಸಿದೆ ಎನ್ನಲಾದ 11 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಇತ್ತೀಚೆಗೆ ದಾಳಿ ನಡೆಸಿದ್ದರು. ಈ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದೆ. ಈವರೆಗೆ 150 ಎಕರೆಗೂ ಹೆಚ್ಚು ಜಮೀನು, ದುಬಾರಿ ಬೆಲೆಯ 11 ಕಾರುಗಳು ಸೇರಿದಂತೆ 500 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಪತ್ತೆ ಮಾಡಲಾಗಿದೆ. ಇನ್ನಷ್ಟು ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಗುಮಾನಿ ಇದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದರೊಂದಿಗೆ ರಾಜ್ಯದ ಇನ್ನೂ ಹಲವಾರು ಕಡೆ ಭ್ರಷ್ಟಾಚಾರ ಆರೋಪಿತ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಆಸ್ತಿಪಾಸ್ತಿ ಪತ್ತೆ ಹಚ್ಚಿದ್ದಾರೆ. ಇವೆಲ್ಲವೂ ಭ್ರಷ್ಟಾಚಾರದಿಂದ ಕ್ರೋಡೀಕರಿಸಿದ ಆಸ್ತಿಗಳೋ ಅಲ್ಲವೋ ಎಂಬುದು ತನಿಖೆಯ ನಂತರ ತಿಳಿದುಬರಬಹುದು. ಆದರೆ ಆದಾಯಕ್ಕೂ ಹೊಂದಿರುವ ಆಸ್ತಿಗೂ ಯಾವುದೇ ತಾಳಮೇಳ ಇಲ್ಲದಿರುವುದನ್ನಂತೂ ರಾಜ್ಯದ ಜನತೆ ಗಮನಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಈ ಅಧಿಕಾರಿಗಳು ಉತ್ತರಿಸಬೇಕಾಗುತ್ತದೆ.
ಅಜಿತ್ ರೈ ಪ್ರಕರಣದಲ್ಲಂತೂ ಆದಾಯದ ನೂರಾರು ಪಟ್ಟು ಆಸ್ತಿ ಕಂಡುಬಂದಿರುವುದು ಖಚಿತ. ಒಬ್ಬ ಸಾಮಾನ್ಯ ತಹಶೀಲ್ದಾರ್ ಇಷ್ಟು ಕ್ಷಿಪ್ರ ಅವಧಿಯಲ್ಲಿ ಇಷ್ಟೊಂದು ಆಸ್ತಿ ಮಾಡಿರುವುದು ಹೇಗೆ? ಇದನ್ನು ಸಮಗ್ರ ಹಾಗೂ ಪಾರದರ್ಶಕ ತನಿಖೆಗೆ ಒಳಪಡಿಸಿ ಭ್ರಷ್ಟಾಚಾರದ ಬೇರುಗಳನ್ನು ಕಂಡುಹಿಡಿದು ನ್ಯಾಯಾಂಗದ ವಿಚಾರಣೆಯ ವ್ಯಾಪ್ತಿಯಲ್ಲಿ ತರಬೇಕಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯನ್ನೂ ಕೊಡಿಸಬೇಕಿದೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಪಾತಕಿಗಳ ಜಾಗದಲ್ಲಿ ಬಡವರಿಗೆ ಮನೆ; ಯೋಗಿ ಆದಿತ್ಯನಾಥ್ ಮಾದರಿ ನಡೆ
ಅಧಿಕಾರ ಶಾಹಿಯ ಭ್ರಷ್ಟತೆಯನ್ನು ಬಯಲಿಗೆಳೆಯುವುದಕ್ಕೆ ನಮಗೆ ಸದ್ಯಕ್ಕೆ ಇರುವ ಬ್ರಹ್ಮಾಸ್ತ್ರವೆಂದರೆ ಲೋಕಾಯುಕ್ತ. ಕೆಲ ವರ್ಷಗಳ ಹಿಂದೆ ನಿಷ್ಕ್ರಿಯಗೊಂಡಿದ್ದ ಲೋಕಾಯುಕ್ತಕ್ಕೆ ನ್ಯಾಯಾಂಗ ನಿರ್ದೇಶನದ ಬಳಿಕ ಮರುಜೀವ ಬಂದಿದ್ದು ಚುರುಕಾಗಿ ಕಾರ್ಯ ನಿರ್ವಹಿಸುತ್ತಿದೆ. ಲೋಕಾಯುಕ್ತದ ಈ ಕ್ರಿಯಾಶೀಲತೆಯನ್ನು ಇನ್ನಷ್ಟು ಸುಧಾರಿಸುವ ಹಾಗೂ ಉಪಯೋಗಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಬೇಕು. ಲೋಕಾಯುಕ್ತಕ್ಕೆ ಅಗತ್ಯವಾಗಿರುವ ತನಿಖಾಧಿಕಾರಿಗಳು, ಪೂರಕ ಸಿಬ್ಬಂದಿ ಮತ್ತಿತರರನ್ನು ಒದಗಿಸಿ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕಾಗಿದೆ. ವರದಿಗಳ ಪ್ರಕಾರ ಲೋಕಾಯುಕ್ತದಲ್ಲಿ ಶೇ.35 ರಷ್ಟು ಸಿಬ್ಬಂದಿ ಕೊರತೆ ಇದೆ.
ಹಾಗೆಯೇ ಲೋಕಾಯುಕ್ತ ತನಿಖೆಗಳನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವುದು ಅತ್ಯಗತ್ಯವಾಗಿದೆ. ಇದುವರೆಗೂ ನಡೆಸಲಾಗಿರುವ ಲೋಕಾಯುಕ್ತ ದಾಳಿಗಳಲ್ಲಿ ಸಿಕ್ಕಿ ಬಿದ್ದಿರುವ ಅಧಿಕಾರಿಗಳಲ್ಲಿ ಶೇ.50ರಷ್ಟು ಪ್ರಕರಣಗಳು ಯಾವುದೇ ತುದಿ ಮುಟ್ಟದೇ, ತಪ್ಪಿತಸ್ಥರಿಗೆ ಶಿಕ್ಷೆಯಾಗದೇ ಹಾಗೇ ಉಳಿದುಕೊಂಡಿವೆ. ಲೋಕಾಯುಕ್ತ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ನಂಬಿಕೆ ಉಳಿಯಬೇಕಿದ್ದರೆ ದಾಳಿಗಳ ಜೊತೆಜೊತೆಗೇ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದೂ ಅಗತ್ಯವಾಗಿದೆ.