7ನೇ ವೇತನ ಆಯೋಗದ ವರದಿಯ ಜಾರಿಯು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಂತರ ಪರಿಹಾರ ಘೋಷಿಸಬೇಕು ಹಾಗೂ ಹಳೆ ಪಿಂಚಣಿ ಯೋಜನೆಯನ್ನು (OPS) ಜಾರಿಗೊಳಿಸಲೇಬೇಕೆಂದು ಒತ್ತಾಯಿಸಿ ರಾಜ್ಯದ ಸರ್ಕಾರಿ ನೌಕರರು ಮಾರ್ಚ್ 1ರಿಂದ ಮುಷ್ಕರ ನಡೆಸುವುದಾಗಿ ಪ್ರಕಟಿಸಿದ್ದಾರೆ. ನೌಕರರ ಸಂಘ ನೀಡಿರುವ ಮಾಹಿತಿ ಪ್ರಕಾರ ರಾಜ್ಯದ ಎಲ್ಲ ಸರ್ಕಾರಿ ನೌಕರರು ಮಾರ್ಚ್ 1ರಿಂದ ಕರ್ತವ್ಯಕ್ಕೆ ಗೈರು ಹಾಜರಾಗಲಿದ್ದಾರೆ. ಗೈರು ಪ್ರತಿಭಟನೆಗೆ ಸರ್ಕಾರ ಮಣಿಯದಿದ್ದರೆ ಮುಷ್ಕರ ಇನ್ನಷ್ಟು ಉಲ್ಬಣಿಸಬಹುದು. ಸದ್ಯಕ್ಕೆ ಆರೋಗ್ಯ ಸೇವಾ ನೌಕರರು ಕಪ್ಪು ಪಟ್ಟಿ ಧರಿಸಿ ಸೇವೆ ಸಲ್ಲಿಸಲು ಸಂಘ ಸೂಚಿಸಿದೆ. ಮುಷ್ಕರ ಉಲ್ಬಣಿಸಿದರೆ ಮಾತ್ರ ಸರ್ಕಾರದ ಯಾವುದೇ ಸೇವೆ ಸಾರ್ವಜನಿಕರಿಗೆ ಲಭ್ಯವಾಗದೆ ಭಾರಿ ತೊಂದರೆಯಾಗುವ ಸಾಧ್ಯತೆಯಿದೆ. ಕುಡಿಯುವ ನೀರು, ಕಸ ಸಂಗ್ರಹದಿಂದ ಹಿಡಿದು ಎಲ್ಲ ಸೇವೆಗಳೂ ಬಂದ್ ಆದರೆ ಬದುಕು ದುರ್ಭರವಾಗಬಹುದು.
7ನೇ ವೇತನ ಆಯೋಗದ ಶಿಫಾರಸು ಜಾರಿಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ತೋರಬೇಕು ಎಂದು ಸರ್ಕಾರಿ ನೌಕರರ ಸಂಘಟನೆಗಳು ಆಗ್ರಹಿಸಿದ್ದವು. ಮುಖ್ಯಮಂತ್ರಿಗಳು ವಿಧಾನಸಭಾ ಕಲಾಪದಲ್ಲೇ ಆಯೋಗದ ಮಧ್ಯಂತರ ವರದಿಯನ್ನು ಪಡೆದು ಜಾರಿಗೆ ತರುವುದಾಗಿ, ಅದಕ್ಕೆ 6000 ಕೋಟಿ ರೂ. ಇಡುವುದಾಗಿ ಹೇಳಿದ್ದರು. ಆದರೆ ಭರವಸೆ ಸಾಲದು, ಅಧಿಕೃತ ಆದೇಶ ಬೇಕು ಎಂದು ಸರ್ಕಾರಿ ನೌಕರರು ಪಟ್ಟು ಹಿಡಿದಿದ್ದಾರೆ. ಮುಷ್ಕರ ಶುರುವಾದರೆ ಚುನಾವಣೆಯ ಹೊಸ್ತಿಲಲ್ಲಿ ಸರ್ಕಾರ ಮತ್ತೊಂದು ಇಕ್ಕಟ್ಟಿನಲ್ಲಿ ಸಿಲುಕುವ ಸಾಧ್ಯತೆಗಳಿವೆ. ಸರ್ಕಾರಿ ಯಂತ್ರ ಸ್ತಬ್ಧವಾದರೆ ಇಡೀ ರಾಜ್ಯಕ್ಕೆ ಇದರ ಪರಿಣಾಮ ತಟ್ಟಬಹುದು. ಸರ್ಕಾರಿ ನೌಕರರ ಮುಷ್ಕರ ಜನಸಾಮಾನ್ಯರ ಜನಜೀವನಕ್ಕೆ ತೊಂದರೆ ತಂದಿಡದಂತೆ ನೋಡಿಕೊಳ್ಳಬೇಕು. ಸರ್ಕಾರ ಕಾನೂನು ಕ್ರಮಗಳಿಗೆ, ಎಸ್ಮಾದಂಥ ಕ್ರಮಗಳಿಗೇನೋ ಮುಂದಾಗಬಹುದು. ಆದರೆ ಅದರಿಂದ ನೌಕರರ ಮನವೊಲಿಸಿ ಕೆಲಸ ಮಾಡುವಂತೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಪ್ರತಿಷ್ಠೆ ತೊರೆದು ನೌಕರರ ಬೇಡಿಕೆಗಳಿಗೆ ಸ್ಪಂದಿಸಬೇಕು.
ಸದ್ಯ ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆಗಳ ಪರಿಷ್ಕರಣೆಗಾಗಿ ಸರ್ಕಾರ ರಚಿಸಿದ್ದ 7ನೇ ವೇತನ ಆಯೋಗದ ವರದಿಯ ಶಿಫಾರಸುಗಳನ್ನು ಜಾರಿ ಮಾಡುವಂತೆ ನೌಕರರು ಆಗ್ರಹಿಸುತ್ತಿದ್ದಾರೆ. ಸರ್ಕಾರಿ ನೌಕರರಿಗೆ 2022ರ ಜುಲೈಯಿಂದಲೇ ಪೂರ್ವಾನ್ವಯವಾಗಿ ಪರಿಷ್ಕೃತ ವೇತನ, ಭತ್ಯೆಗಳು ದೊರೆಯಬೇಕು. ಚುನಾವಣೆ ನೀತಿ ಸಂಹಿತೆ ಜಾರಿಗೆ ಮೊದಲು ಶೇ. 40% ಫಿಟ್‌ಮೆಂಟ್ ಸೌಲಭ್ಯದೊಂದಿಗೆ ಇದು ಜಾರಿಗೆ ಬರುವಂತೆ ಆದೇಶ ಹೊರಡಿಸಬೇಕು. ಕಚೇರಿ ವೇಳೆಯನ್ನು ಹೆಚ್ಚಿಸಿ, ವಾರದ ಕರ್ತವ್ಯದ ದಿನಗಳನ್ನು ಕಡಿಮೆ ಮಾಡಬೇಕು. ವಿಶೇಷ ಭತ್ಯೆ ದ್ವಿಗುಣಗೊಳಿಸಬೇಕು, ತುಟ್ಟಿಭತ್ಯೆಯನ್ನು ಕೇಂದ್ರ ನೌಕರರಿಗೆ ಸರಿಸಮಾನವಾಗಿ ನೀಡಬೇಕು. ವಾರ್ಷಿಕ ವೇತನ ಬಡ್ತಿ ದರ 3.04%ರಷ್ಟು ಏರಿಸಬೇಕು. ಇನ್ನು ಪಿಂಚಣಿಗೆ ಸಂಬಂಧಿಸಿ, ಕೆಲವು ರಾಜ್ಯಗಳು ಈಗಾಗಲೇ ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸಿರುವ ಮಾದರಿಯಂತೆ ರಾಜ್ಯದಲ್ಲೂ ಅದನ್ನು ರದ್ದುಗೊಳಿಸಿ 2006ರಿಂದಲೇ ಅನ್ವಯವಾಗುವಂತೆ ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸಬೇಕು- ಎಂಬಿತ್ಯಾದಿ ಬೇಡಿಕೆಗಳು ನೌಕರರದಾಗಿವೆ.
ಇದನ್ನೂ ಓದಿ: Govt Employees Strike: ವರದಿ ಜಾರಿಗೆ ಸಮಯ ಕೇಳಿದ ಬೊಮ್ಮಾಯಿ, ಪಟ್ಟು ಬಿಡದ ನೌಕರರ ಸಂಘ, ನಿಲ್ಲದ ಹಗ್ಗಜಗ್ಗಾಟ
ಈ ಬೇಡಿಕೆಗಳಲ್ಲಿ ನ್ಯಾಯಯುತವಾದುದನ್ನು ಸರ್ಕಾರ ಪರಿಗಣಿಸಬೇಕಾಗುತ್ತದೆ. ಸಕಾಲಿಕ ವೇತನ ಪರಿಷ್ಕರಣೆ ಈ ಹಣದುಬ್ಬರದ ಕಾಲದಲ್ಲಿ ಅಗತ್ಯವಾಗಿದೆ. ಗ್ರಾಹಕ ಮಾರುಕಟ್ಟೆಯ ದರಗಳು, ತೆರಿಗೆ ಹಾಗೂ ಸಾಲದ ಬಡ್ಡಿದರಗಳೂ ಹೆಚ್ಚುತ್ತಿರುವಾಗ, ಅದಕ್ಕನುಗುಣವಾಗಿ ವೇತನವೂ ಹೆಚ್ಚಬೇಕಿದೆ. ರಾಜ್ಯದಲ್ಲಿ ಸುಮಾರು 5.3 ಲಕ್ಷದಷ್ಟು ಸರ್ಕಾರಿ ನೌಕರರಿದ್ದಾರೆ. ಇಷ್ಟು ಮಂದಿಗೆ ವೇತನ ಮತ್ತಿತರ ಭತ್ಯೆಗಳ ಹೆಚ್ಚಳದಿಂದ ಖಜಾನೆಗೆ ಎಷ್ಟು ಹೊರೆಯಾಗಲಿದೆ ಎಂಬುದನ್ನೂ ಪರಿಗಣಿಸಬೇಕು. ಆರ್ಥಿಕ ಹೊರೆಯನ್ನೂ ಸಮತೋಲನ ಮಾಡಿಕೊಂಡು ನೌಕರರ ಬೇಡಿಕೆ ಈಡೇರಿಸುವತ್ತ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ನೌಕರರು ಮುಷ್ಕರದ ಹಾದಿ ಹಿಡಿದು ಆಡಳಿತ ಯಂತ್ರ ಸ್ತಬ್ಧವಾಗಿ ಜನಸಾಮಾನ್ಯರಿಗೆ ತೊಂದರೆಯಾಗುವ ಮುನ್ನವೇ ಸರ್ಕಾರ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಹಾಗೆಯೇ, ಜನಸಾಮಾನ್ಯರ ಹಿತಕ್ಕೆ ಸಂಕಷ್ಟ ಒಡ್ಡಿ ತಮ್ಮ ವೇತನ ಹೆಚ್ಚು ಮಾಡಿಕೊಳ್ಳುವುದು ಎಷ್ಟು ನ್ಯಾಯಯುತ ಎಂದು ನೌಕರರ ಸಂಘಟನೆಗಳೂ ಯೋಚಿಸಬೇಕು.