Site icon Vistara News

ವಿಸ್ತಾರ ಸಂಪಾದಕೀಯ: ಹೊಸ ಮುಖ್ಯಮಂತ್ರಿ ಆಯ್ಕೆ ಬಿಕ್ಕಟ್ಟು ಬೇಗ ಬಗೆಹರಿಯಲಿ

Karnataka Politics

#image_title

ರಾಜ್ಯದ ಜನತೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಬಹುಮತ ನೀಡಿದ್ದಾರೆ. 135 ಸ್ಥಾನಗಳನ್ನು ಪಡೆದ ಕಾಂಗ್ರೆಸ್‌ ಸ್ವಂತಬಲದಿಂದ ಸರ್ಕಾರ ರಚಿಸುವ ಹಂತದಲ್ಲಿದೆ. ಅತಂತ್ರ ವಿಧಾನಸಭೆಯ ಆತಂಕ ದೂರವಾಗಿ ಸ್ಥಿರ ಸರ್ಕಾರದ ಆಶಾ ಭಾವನೆ ಮೂಡಿದೆ. ಆದರೆ ಫಲಿತಾಂಶ ಬಂದು ಮೂರು ದಿನ ಕಳೆದರೂ ಮುಖ್ಯಮಂತ್ರಿ ಹೆಸರು ಘೋಷಿಸಲಾಗದೆ ಕಾಂಗ್ರೆಸ್ ಹೈಕಮಾಂಡ್ ಪರದಾಡುತ್ತಿದೆ. ಸಿಎಂ ಹುದ್ದೆಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಈ ಇಬ್ಬರು ನಾಯಕರ ಬೆಂಬಲಿಗರ ನಡುವೆಯೂ ಜಿದ್ದಾಜಿದ್ದಿ ನಡೆಯುತ್ತಿದೆ. ಈ ಇಬ್ಬರು ನಾಯಕರ ಪರ ಅವರವರ ಸಮುದಾಯಗಳ ಸ್ವಾಮೀಜಿಗಳೂ ಲಾಬಿ ನಡೆಸುತ್ತಿರುವುದು ಗಮನಾರ್ಹ. ಈ ಇಬ್ಬರ ನಡುವಿನ ಜಿದ್ದಾಜಿದ್ದು ಹೈಕಮಾಂಡ್‌ಗೂ ಬಿಕ್ಕಟ್ಟು ತಂದಿಟ್ಟಂತೆ ಕಾಣುತ್ತಿದೆ. ಎಐಸಿಸಿ ಅಧ್ಯಕ್ಷರೂ ಈ ಇಬ್ಬರೂ ನಾಯಕರ ಜತೆ ಮಾತುಕತೆ ನಡೆಸಿದ್ದು, ಇಬ್ಬರೂ ತಮ್ಮ ಪಟ್ಟು ಸಡಿಲಿಸಿಲ್ಲ. ಇದರಿಂದ ಏನಾಗಲಿದೆ ಎಂಬುದನ್ನು ವಿವೇಚಿಸೋಣ.

ನಾಡಿನ ದೃಷ್ಟಿಯಿಂದಲೂ, ಕಾಂಗ್ರೆಸ್‌ ಪಕ್ಷದ ದೃಷ್ಟಿಯಿಂದಲೂ, ಈ ಬೆಳವಣಿಗೆ ಆಶಾದಾಯಕವೇನೂ ಅಲ್ಲ. ಹಾಗೆ ನೋಡಿದರೆ, ಈ ಇಬ್ಬರೂ ನಾಯಕರೂ ಈಗ ಇರುವ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಾದವರೇ ಹೌದು. ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸ್ಥಿರ ಆಡಳಿತ ನೀಡಿದ್ದಾರೆ. ಆ ಸಂದರ್ಭದಲ್ಲಿ ದೀನದಲಿತರು, ಶೋಷಿತರ ಪರವಾದ ಅನೇಕ ನಿಲುವುಗಳನ್ನು ತಾಳಿ, ಬಡವರ ಪರವಾದ ಅನೇಕ ಯೋಜನೆಗಳನ್ನು ತಂದು ನಾಡಿನಲ್ಲಿ ಮಾನ್ಯತೆ ಪಡೆದಿದ್ದಾರೆ. ಅವರಿಗೆ ರಾಜ್ಯಾದ್ಯಂತ ಸಲ್ಲುವ ಜನನಾಯಕನ ಇಮೇಜ್‌ ಇದೆ. ಹಿಂದುಳಿದ ಸಮುದಾಯದಿಂದ ಬಂದ ಅವರು ಇಂದು ದಕ್ಷಿಣ ಭಾರತದ ರಾಜ್ಯವೊಂದರ ಕಾಂಗ್ರೆಸ್‌ನ ಬಹುಮಾನ್ಯ ನಾಯಕರಾಗಿರುವುದು ಸಣ್ಣ ಮಾತಲ್ಲ. ಹಾಗೇ ಡಿ.ಕೆ ಶಿವಕುಮಾರ್‌ ಅವರು ಈ ಬಾರಿ ಕಾಂಗ್ರೆಸ್‌ ಪಕ್ಷವನ್ನು ತಳಮಟ್ಟದಿಂದ ಚುರುಕಾಗಿ ಒಟ್ಟುಗೂಡಿಸಿ, ಚುನಾವಣಾ ಕದನದಲ್ಲಿ ಮುನ್ನಡೆಸಿ ಪಕ್ಷಕ್ಕೆ ವಿಜಯದ ಮಾಲೆ ಹಾಕಿಸಿದ್ದಾರೆ. ಅವರ ಸಂಘಟನಾ ಚಾತುರ್ಯ, ಓಡಾಟದ ಪರಿಶ್ರಮಗಳು ಪಕ್ಷವನ್ನು ಅಧಿಕಾರದ ಹೊಸ್ತಿಲಲ್ಲಿ ತಂದು ನಿಲ್ಲಿಸಿವೆ. ಹೀಗಾಗಿ, ಯಾರು ಹಿತವರು ಈ ಇಬ್ಬರೊಳಗೆ ಎಂಬ ಪ್ರಶ್ನೆಗೆ ಖಚಿತ ಉತ್ತರ ನೀಡುವುದು ಸುಲಭವಲ್ಲ.

ಆದರೆ, ಈ ಇಬ್ಬರೂ ಮುಖ್ಯಮಂತ್ರಿ ಗಾದಿಗಾಗಿ ನಡೆಸುತ್ತಿರುವ ಜಿದ್ದಾಜಿದ್ದಿ ಮಾತ್ರ ಸಾಧುವಲ್ಲ. ಇದರಿಂದ ನಾಡಿನ ಹಿತ ಸಾಧನೆಯಾಗದು. ಇದರಿಂದ ಪಕ್ಷವೂ ಎರಡಾಗಿ ಒಡೆದುಹೋಗುತ್ತದೆ; ಪಕ್ಷಕ್ಕೆ ಮತ ಹಾಕಿದ ಮತದಾರರೂ ಎರಡಾಗಿ ಸೀಳಿಹೋಗಲಿದ್ದಾರೆ. ಈಗಾಗಲೇ ಅದು ಆದಂತಿದೆ. ಒಂದೆಡೆ ಸಿದ್ದರಾಮಯ್ಯ ಅವರನ್ನು ಕುರುಬರು, ದಲಿತರು ಬೆಂಬಲಿಸುತ್ತಿದ್ದರೆ, ಒಕ್ಕಲಿಗರು, ಲಿಂಗಾಯತರು ಮುಂತಾದವರು ಡಿ.ಕೆ ಶಿವಕುಮಾರ್‌ ಅವರನ್ನು ಬೆಂಬಲಿಸುತ್ತಿದ್ದಾರೆ. ಜಾತಿ ಸಂಘಟನೆಗಳು, ಮಠಾಧೀಶರು ಕೂಡ ಅಧಿಕಾರದ ಈ ಕಿತ್ತಾಟದಲ್ಲಿ ಭಾಗವಹಿಸುತ್ತಿರುವಂತಿದೆ. ಈ ನಾಯಕರೇ ಬೇಡವೆಂದರೂ ಜಾತಿಯ ಪ್ರಶ್ನೆ ಈ ಅಧಿಕಾರದ ಮೇಲಾಟದಲ್ಲಿ ಪ್ರವೇಶಿಸಿಬಿಟ್ಟಿದೆ. ಇದು ನಾಡನ್ನು ಇನ್ನಷ್ಟು ಚೂರುಚೂರಾಗಿ ಒಡೆಯುವುದಲ್ಲದೆ ಒಂದಾಗಿಸದು. ದಶಕಗಳ ಬಳಿಕ ಕಾಂಗ್ರೆಸ್‌ಗೆ ದೊರೆತ ಈ ಸ್ಪಷ್ಟ ಬಹುಮತದ ಹಿಂದೆ ಈ ಪಕ್ಷ ತಮಗೆ ಉತ್ತಮ ಆಡಳಿತ ನೀಡಲಿ ಎಂಬ ಮತದಾರರ ಆಶಯ ಇದೆಯೇ ಹೊರತು ತಮ್ಮನ್ನು ಒಡೆದಾಳಲಿ ಎಂಬುದಲ್ಲ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ವೈದ್ಯರು ಜನೌಷಧವನ್ನೇ ಬರೆದು ಕೊಡಲಿ

ಇನ್ನು ಈ ಇಬ್ಬರೂ ಒಂದಾಗಿ ಆಡಳಿತ ನಡೆಸಿದರೂ, ಇವರು ನಿಜವಾಗಿಯೂ ಒಂದಾಗಿದ್ದಾರಾ ಇಲ್ಲವಾ ಎಂಬ ಕೌತುಕದ ಪ್ರಶ್ನೆಯೊಂದು ಎಲ್ಲರಲ್ಲಿ ಉಳಿದೇ ಉಳಿಯುತ್ತದೆ. ಈ ಒಡಕು ಹಾಗೂ ಅದರ ಪಶ್ಚಾತ್‌ ಕಂಪನಗಳು ಮುಂದೆ ಇವರ ಕೈಕೆಳಗಿನ ಸಚಿವರು, ಶಾಸಕರು, ಅಧಿಕಾರಿಗಳಲ್ಲಿ ಕೂಡ ಪ್ರತಿಫಲಿಸಲಿದೆ. ಇದರಿಂದ ನಾಡಿನ ಅಭಿವೃದ್ಧಿಯ ಕಾಯಕ ಕೂಡ ಹಿನ್ನಡೆ ಕಾಣಬಹುದು. ಈಗಾಗಲೇ ಕಾಂಗ್ರೆಸ್‌ ಹವಲು ʼಗ್ಯಾರಂಟಿ ಸ್ಕೀಮ್‌ʼಗಳನ್ನು ಭರವಸೆಯಾಗಿ ನೀಡಿದೆ. ಕೆಲವು ರೈತರು ʼಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ, ಹೀಗಾಗಿ ಕರೆಂಟ್‌ ಬಿಲ್‌ ಕಟ್ಟುವುದಿಲ್ಲʼ ಎಂದೂ ಹೇಳಿದ್ದಾರೆ. ಜನ ಕಾಂಗ್ರೆಸ್‌ನ ಮೇಲೆ ಅಷ್ಟೊಂದು ಭರವಸೆ ಇಟ್ಟಿದ್ದಾರೆ ಎಂದರ್ಥ. ಹೀಗಾಗಿ, ಮುಖ್ಯಮಂತ್ರಿ ಆಯ್ಕೆ ಬಿಕ್ಕಟ್ಟು ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗದಿರಲಿ. ಬಹುಮತ ನೀಡಿರುವ ರಾಜ್ಯದ ಜನತೆಯ ಆಶಯವನ್ನು ಕಾಂಗ್ರೆಸ್ ಹುಸಿಗೊಳಿಸದಿರಲಿ. ಸೂಕ್ತ ಮುಖ್ಯಮಂತ್ರಿಯ ಆಯ್ಕೆ ಬೇಗನೇ ಆಗಿ, ಸರ್ಕಾರ ಕಾರ್ಯಾರಂಭಿಸಲಿ.

Exit mobile version