ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಜನೌಷಧ ಯೋಜನೆಯನ್ನು ಜಾರಿ ಮಾಡಿದೆ. ಜನರ ಕೈಗೆಟಕುವ ದರದಲ್ಲಿ ಔಷಧ ಒದಗಿಸುವ ಜನೌಷಧ ಮಳಿಗೆಗಳನ್ನು ಅಲ್ಲಲ್ಲಿ ಸ್ಥಾಪಿಸಲಾಗಿದೆ. ಆದರೆ ಈಗಲೂ ಬಹುತೇಕ ವೈದ್ಯರು ಬ್ರಾಂಡೆಡ್ ಔಷಧಗಳನ್ನೇ ಬರೆದುಕೊಡುತ್ತಿದ್ದಾರೆ. ಹಾಗಾಗಿ ಜನಸಾಮಾನ್ಯರಿಗೆ ಜನೌಷಧ ಯೋಜನೆಯ ಪ್ರಯೋಜನ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಸರ್ಕಾರ, ರೋಗಿಗಳಿಗೆ ಸರ್ಕಾರಿ ವೈದ್ಯರು ಜನೌಷಧವನ್ನೇ ಬರೆದುಕೊಡುವಂತೆ ಆದೇಶ ಹೊರಡಿಸಿದೆ. ಈ ನಿಯಮ ಪಾಲಿಸದ ವೈದ್ಯರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಇದು ಸ್ವಾಗತಾರ್ಹ ಉಪಕ್ರಮ.
ಸಾರ್ವಜನಿಕರಿಗೆ, ಬಡವರಿಗೆ, ಕೆಳಮಧ್ಯಮ ವರ್ಗದವರಿಗೆ ಔಷಧಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ 2008ರಲ್ಲಿ ʼಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಯೋಜನೆʼಯನ್ನು (ಪಿಎಂಬಿಜೆಪಿ) ಆರಂಭಿಸಲಾಗಿತ್ತು. ದೇಶದಲ್ಲಿ 8,675ಕ್ಕೂ ಅಧಿಕ ಜನೌಷಧಿ ಕೇಂದ್ರಗಳಿದ್ದು, ಕರ್ನಾಟಕದಲ್ಲಿ 850ಕ್ಕೂ ಅಧಿಕ ಕೇಂದ್ರಗಳಿವೆ. ಇಡೀ ದೇಶದಲ್ಲಿ ವಾರ್ಷಿಕ ಸುಮಾರು 680 ಕೋಟಿ ರೂ.ನಷ್ಟು ವಹಿವಾಟು ಆಗುತ್ತದೆ. ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದಾಗಿ ಕೇಂದ್ರ ಸರಕಾರ ಕಡಿಮೆ ಬೆಲೆಯಲ್ಲಿ ಔಷಧಗಳನ್ನು ಖರೀದಿಸಿ ಜನೌಷಧ ಕೇಂದ್ರಗಳಿಗೆ ನೀಡುತ್ತಿದೆ. ಅಂದರೆ ಇದರಲ್ಲಿ ಜನರ ತೆರಿಗೆಯ ದೊಡ್ಡ ಪಾಲು ಇದೆ. ಹೀಗಾಗಿ ಜನರೇ ಇದರ ಉಪಯೋಗ ಪಡೆಯಬೇಕಿದೆ. ವೈದ್ಯರು ಜನೌಷಧಿಯನ್ನೇ ಬರೆದುಕೊಡಲು ಸಾರ್ವಜನಿಕರೂ ಒತ್ತಾಯಿಸಬೇಕು; ಆದರೆ, ಅಗ್ಗದ ದರದಲ್ಲಿ ಇದು ಸಿಗುವ ಕಾರಣ ಗುಣಮಟ್ಟ ಚೆನ್ನಾಗಿರಲಾರದು ಎಂದು ಬಹುತೇಕರು ಸಂಶಯಿಸುತ್ತಾರೆ. ಈ ಸಂಶಯಕ್ಕೆ ಕಾರಣವಿಲ್ಲ. ಜನೌಷಧ ಕೇಂದ್ರಗಳಿಗೆ ಭಾರತದ ಟಾಪ್ 30 ಕಂಪನಿಗಳು ಔಷಧಗಳನ್ನು ಉತ್ಪಾದನೆ ಮಾಡಿ ಪೂರೈಕೆ ಮಾಡುತ್ತಿವೆ. ಜತೆಗೆ, ಫಾರ್ಮಸ್ಯುಟಿಕಲ್ಸ್ ಆ್ಯಂಡ್ ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾ (ಪಿಎಂಬಿಐ) ದಿಂದ ಪ್ರಮಾಣೀಕೃತ ಔಷಧವನ್ನು ಪೂರೈಸುವುದರಿಂದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಹೀಗಾಗಿ ಕಡಿಮೆ ಬೆಲೆಯ ಕಾರಣ ಗುಣಮಟ್ಟವಿರುವುದಿಲ್ಲ ಎಂಬುದು ಸುಳ್ಳು.
ಖಾಸಗಿ ವೈದ್ಯರೇನೋ ದುಬಾರಿ ಬೆಲೆಯ ಔಷಧಗಳನ್ನು ಬರೆದುಕೊಡುವುದನ್ನು ಅರ್ಥ ಮಾಡಿಕೊಳ್ಳಬಹುದು. ಯಾಕೆಂದರೆ ಅನೇಕ ಔಷಧ ಕಂಪನಿಗಳು, ಬ್ರಾಂಡ್‌ಗಳು ಖಾಸಗಿ ವೈದ್ಯರ ಜತೆಗೆ ತಮ್ಮನ್ನೇ ಪ್ರಮೋಟ್ ಮಾಡಬೇಕೆಂದು ಒಪ್ಪಂದ ಮಾಡಿಕೊಂಡಿರುತ್ತವೆ. ಅದು ಅವರ ಉದ್ಯಮ ಅನ್ನೋಣ. ಆದರೆ ಸರ್ಕಾರಿ ವೈದ್ಯರು ತಮ್ಮ ವಿವೇಚನೆಯನ್ನು ಉಪಯೋಗಿಸಬೇಕು. ದುಬಾರಿ ಬೆಲೆಯ ಹಾಗೂ ಜನೌಷಧ ಎರಡೂ ಆಯ್ಕೆಗಳನ್ನು ಜನರಿಗೆ ನೀಡುವ ಮೂಲಕ ವೈದ್ಯರು ಈ ನೈತಿಕ ಬಿಕ್ಕಟ್ಟಿನಿಂದ ಪಾರಾಗಬಹುದು. ಆದರೆ ಸರ್ಕಾರಿ ವೈದ್ಯರು ದುಬಾರಿ ಔಷಧ ಬರೆದುಕೊಡುವುದನ್ನು ಸಮರ್ಥಿಸಲು ಸಾಧ್ಯವಿಲ್ಲ. ಇವರು ಜನೌಷಧವನ್ನು ಹೆಚ್ಚು ಹೆಚ್ಚು ಬಳಸಬೇಕಾದವರು. ಯಾಕೆಂದರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸರ್ಕಾರಿ ಆಸ್ಪತ್ರೆಗಳ ಬಳಕೆದಾರರೇ ಬಡವರು, ಕೆಳಮಧ್ಯಮ ಹಾಗೂ ಮಧ್ಯಮ ವರ್ಗದವರು. ಇಂಥವರಿಗಾಗಿ ಜನೌಷಧವನ್ನು ಹೆಚ್ಚಾಗಿ ನೀಡುವ ಮೂಲಕ ಇವುಗಳ ಬಳಕೆ ಉತ್ತೇಜಿಸಿದರೆ ಯೋಜನೆಯ ಉದ್ದೇಶ ಸಫಲವಾಗುತ್ತದೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಶಾಸನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಲಿ
ಜನೌಷಧದಲ್ಲೂ ಕೊರತೆಗಳಿವೆ. ಜನೌಷಧ ಕೇಂದ್ರಗಳಲ್ಲಿ 1,450 ಬಗೆಯ ಔಷಧಗಳನ್ನು ನೀಡಬೇಕು. ಆದರೆ ಅಷ್ಟೆಲ್ಲ ಲಭ್ಯವಿಲ್ಲ. ನಿತ್ಯ ಬೇಡಿಕೆ ಇರುವ ಬಿಪಿ, ಶುಗರ್ ಮಾತ್ರೆಗಳು ನಿಯಮಿತವಾಗಿ ಪೂರೈಕೆಯಾಗುತ್ತಿಲ್ಲ. ನಿತ್ಯ ಬಳಕೆಯ ಔಷಧಗಳು ಇಲ್ಲಿ ಸಿಗದ ಕಾರಣ ಜನರು ಅನಿವಾರ್ಯವಾಗಿ ಬೇರೆಡೆ ಮುಖ ಮಾಡಬೇಕಾಗುತ್ತದೆ. ಹೊಸ ಕೇಂದ್ರಗಳಿಗೆ ಲೈಸೆನ್ಸ್ ನೀಡಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಾಯಿಲೆ ಹಾಗೂ ಅವುಗಳ ಲಕ್ಷಣಗಳಿಗೆ ಅನುಗುಣವಾದ ಹೊಸ ಔಷಧಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದರೂ, ಜನೌಷಧದಲ್ಲಿ ಅಷ್ಟೆಲ್ಲ ಆವಿಷ್ಕಾರಗಳಿಗೆ ಅವಕಾಶವಿಲ್ಲ. ಇವೆಲ್ಲ ಕೊರತೆಗಳು ಸರಿಹೋದರೆ ಜನೌಷಧ ಬ್ರಾಂಡ್, ಇತರ ಯಾವುದೇ ಬ್ರಾಂಡ್‌ಗೆ ಸರಿಸಾಟಿಯಾಗಿ ನಿಲ್ಲಬಲ್ಲದು. ಸರ್ಕಾರ ಇದನ್ನೂ ಗಮನಿಸಬೇಕು. ಹಾಗೆಯೇ ಜನೌಷಧವನ್ನು ಕಡೆಗಣಿಸಿ ದುಬಾರಿ ಔಷಧ ಬರೆದುಕೊಡುವ ವೈದ್ಯರ ಬಗ್ಗೆಯೂ ನಿಗಾ ವಹಿಸಿ ತಪ್ಪಿತಸ್ಥ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆ ಮೂಲಕ ಬಡವರಿಗೆ ವರದಾನವಾಗಿರುವ ಜನೌಷಧ ಯೋಜನೆ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು.