ರಾಜ್ಯ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಬಿಪಿಎಲ್ ಮನೆಗಳಿಗೆ ದಿನವೂ ಅರ್ಧ ಲೀಟರ್ ಹಾಲು, ಪ್ರತಿಯೊಬ್ಬರಿಗೆ ತಿಂಗಳಿಗೆ ಐದು ಕೆಜಿ ಸಿರಿ ಧಾನ್ಯ ನೀಡುವ ಭರವಸೆ ನೀಡಲಾಗಿದೆ. ವರ್ಷಕ್ಕೆ ಮೂರು ಉಚಿತ ಅಡುಗೆ ಸಿಲಿಂಡರ್ ನೀಡುವ ಘೋಷಣೆ ಮಾಡಲಾಗಿದೆ. ಅದರ ಜತೆಗೇ ಸಮಾನ ನಾಗರಿಕ ಸಂಹಿತೆ ಮತ್ತು ಎನ್‌ಆರ್‌ಸಿ ಜಾರಿಯನ್ನೂ ಪ್ರಕಟಿಸಲಾಗಿದೆ. ಒಂದು ವಾರದ ಹಿಂದೆ ಕಾಂಗ್ರೆಸ್ ತನ್ನ ಉಚಿತ ಕೊಡುಗೆಗಳನ್ನು ಘೋಷಿಸಿತ್ತು. ಅಧಿಕಾರಕ್ಕೆ ಬಂದರೆ ಎಲ್ಲ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಸಂಪೂರ್ಣ ಉಚಿತ ಪ್ರಯಾಣ ಯೋಜನೆ, ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3,000 ರೂಪಾಯಿ ನಿರುದ್ಯೋಗ ಭತ್ಯೆ, ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ಮಾಸಿಕ 2000 ರೂ. ಮತ್ತು ಪ್ರತಿ ತಿಂಗಳು ಒಬ್ಬ ವ್ಯಕ್ತಿಗೆ ತಲಾ 10 ಕೆ.ಜಿ. ಅಕ್ಕಿ ಎಂಬ ಘೋಷಣೆಗಳನ್ನು ಮಾಡಿದೆ. ಜೆಡಿಎಸ್ ವರ್ಷಕ್ಕೆ 5 ಅಡುಗೆ ಅನಿಲ ಸಿಲಿಂಡರ್ ಉಚಿತ, ಗರ್ಭಿಣಿಯರಿಗೆ ಆರು ತಿಂಗಳ ಕಾಲ 6000 ರೂ. ಭತ್ಯೆ ಮುಂತಾದ ಕೊಡುಗೆಗಳನ್ನು ಪ್ರಕಟಿಸಿದೆ.
ಈ ಕೊಡುಗೆಗಳೆಲ್ಲವೂ ಮತದಾರನನ್ನು ತಕ್ಷಣಕ್ಕೆ ತಮ್ಮ ಪಕ್ಷದ ಕಡೆಗೆ ಸೆಳೆಯುವ ಉದ್ದೇಶವನ್ನು ಹೊಂದಿವೆ. ಸಾಮಾಜಿಕ ನ್ಯಾಯ, ದೀನದಲಿತರ ಸಬಲೀಕರಣ ಎಂಬುದು ಮುಖ್ಯವೇ. ಈ ಉಚಿತ ಕೊಡುಗೆಗಳು ಹೆಚ್ಚಾಗಿ ಬಡತನದ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳನ್ನು ಉದ್ದೇಶಿಸಿದೆ. ಇವು ನಿಜಕ್ಕೂ ಕೆಲವು ಬಗೆಯ ಉಚಿತಗಳಿಗೆ ಅರ್ಹವಾಗಿವೆ. ಎಷ್ಟು ದುಡಿದರೂ ಕುಟುಂಬದಲ್ಲಿರುವ ಮಂದಿಯ ಹಿಟ್ಟಿಗೆ ಸಾಲದು ಎಂಬ ಪರಿಸ್ಥಿತಿಯಲ್ಲಿರುವವರಿಗೆ, ಕೆಲವು ಉಚಿತಗಳ ಮೂಲಕ ಹೊಟ್ಟೆಯ ಚಿಂತೆ ನೀಗುವಂತಾದರೆ, ಶಿಕ್ಷಣದಂಥ ಹೆಚ್ಚಿನ ಅಗತ್ಯಗಳನ್ನು ಪಡೆಯುವಲ್ಲಿ ತೊಡಕಾಗುವುದಿಲ್ಲ. ಆದರೆ ಇದನ್ನು ಎಷ್ಟು ನೀಡಬಹುದು ಎಂಬ ವಿವೇಚನೆ ಬೇಕಿದೆ. ಕೇವಲ ಉಚಿತ ಕೊಡುಗೆಗಳಿಂದ ಜನರ ಬದುಕನ್ನು ಬದಲಿಸಲಾಗದು. ಇದು ತಾತ್ಕಾಲಿಕ ಉಪಶಮನ ಮಾತ್ರ.
ಇವುಗಳನ್ನು ಘೋಷಿಸುವ ಮೊದಲು ಯಾವುದೇ ಪಕ್ಷವೂ ಆರ್ಥಿಕ ತಜ್ಞರ ಸಲಹೆ ಪಡೆದಂತಿಲ್ಲ. ತಕ್ಷಣದ ಮತಗಳ ಲಾಭವನ್ನು ಉದ್ದೇಶವಾಗಿ ಇಟ್ಟುಕೊಂಡ ರಾಜಕೀಯ ಪಕ್ಷಗಳಿಗೆ ಅದು ಬೇಕಾಗಿಯೂ ಇದ್ದಂತಿಲ್ಲ. ತಮ್ಮ ಘೋಷಣೆಗಳು ರಾಜ್ಯ ಬೊಕ್ಕಸದ ಮೇಲೆ ಮಾಡುವ ಪರಿಣಾಮವೇನು, ವಿತ್ತೀಯ ಶಿಸ್ತನ್ನು ಕಾಪಾಡಿಕೊಳ್ಳುವ ಬಗೆ ಹೇಗೆ, ವಿತ್ತೀಯ ಕೊರತೆಯನ್ನು ಸರಿದೂಗಿಸಿಕೊಳ್ಳುವುದು ಹೇಗೆ, ರಾಜ್ಯದ ಮೇಲೆ ಈಗಿರುವ ಸಾಲದ ಹೊರೆಯೆಷ್ಟು, ಇದೆಲ್ಲವನ್ನೂ ಗಂಭೀರವಾಗಿ ಯೋಚಿಸಿದರೆ ಉಚಿತ ಕೊಡುಗೆಗಳನ್ನು ಪ್ರಕಟಿಸುವ ಮುನ್ನ ಇನ್ನಷ್ಟು ವಿವೇಚನೆ ಬಳಸಬಹುದು. ಕಳೆದ 75 ವರ್ಷಗಳ ಸ್ವತಂತ್ರ ಭಾರತದಲ್ಲಿ ಬಹುಪಾಲು ಅವಧಿಯಲ್ಲಿ ಕಾಂಗ್ರೆಸ್ ಆಡಳಿತ ನಡೆಸಿತ್ತು. ಹೀಗಿರುವಾಗ ಈಗಲೂ ಕಾಂಗ್ರೆಸ್ ಉಚಿತ ಕೊಡುಗೆಗಳ ಆಮಿಷ ಒಡ್ಡುತ್ತಿದೆ ಎಂದರೆ ಇಷ್ಟು ವರ್ಷ ಅದು ಜನಸಾಮಾನ್ಯರ ಬದುಕನ್ನು ಹಸನುಗೊಳಿಸುವಲ್ಲಿ ವಿಫಲವಾಗಿದೆ ಎಂದೇ ಅರ್ಥ. ಕುತೂಹಲಕಾರಿ ಸಂಗತಿ ಎಂದರೆ, ಕಾಂಗ್ರೆಸ್ ಘೋಷಿಸುತ್ತಿದ್ದ ಉಚಿತ ಕೊಡುಗೆಗಳನ್ನು ಇಷ್ಟು ದಿನ ಬಿಜೆಪಿ ಟೀಕಿಸುತ್ತಿತ್ತು. ಪ್ರಧಾನಿ ಮಂತ್ರಿಗಳೇ ಇದನ್ನು ಕಟುವಾಗಿ ವ್ಯಂಗ್ಯ ಮಾಡಿದ್ದರು. ಇದೀಗ ಬಿಜೆಪಿ ಕೂಡ ಉಚಿತಗಳ ಮೊರೆ ಹೋಗಿದೆ. ಸಹಜವಾಗಿಯೇ ಕಾಂಗ್ರೆಸ್‌ನ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಶತಕೋಟಿ ಭಾರತೀಯರನ್ನು ಬೆಸೆದ ಮನ್ ಕಿ ಬಾತ್
ರಾಜ್ಯದ ವಿತ್ತೀಯ ಶಿಸ್ತನ್ನು ಸರಿದೂಗಿಸಲು ʼಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯಿದೆ- 2002 (ಕೆಎಫ್‌ಆರ್‌ಎ) ನಿರ್ಣಾಯಕ. ವಿತ್ತೀಯ ಕೊರತೆಯು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) 3%ಕ್ಕಿಂತ ಹೆಚ್ಚಿರಬಾರದು ಎಂಬುದು ಈ ಕಾಯಿದೆಯ ನಿಯಮ. ಆರ್ಥಿಕ ಶಿಸ್ತನ್ನು ಉಲ್ಲಂಘಿಸುವಲ್ಲಿ ಉಚಿತ ಕೊಡುಗೆಗಳ ಪಾತ್ರ ದೊಡ್ಡದು. 2023-24ರ ಬಜೆಟ್ ಪ್ರಕಾರ ಕರ್ನಾಟಕ ಜಿಎಸ್‌ಡಿಪಿ ₹ 23.33 ಲಕ್ಷ ಕೋಟಿ; ಈಗಗಲೇ ಇರುವ ವಿತ್ತೀಯ ಕೊರತೆಯ ಪ್ರಮಾಣವೇ ₹ 60,531 ಕೋಟಿ. ಇದು 3%ದ ಸನಿಹ ಇದೆ. ಕಾಂಗ್ರೆಸ್ ಘೋಷಿಸುತ್ತಿರುವ ಉಚಿತಗಳ ಒಟ್ಟಾರೆ ಲೆಕ್ಕ ತೆಗೆದರೆ ಅದು ವಿತ್ತೀಯ ಕೊರತೆಯ ಶೇ.5ನ್ನು ಮೀರುತ್ತದೆ; ಬಿಜೆಪಿಯ ಉಚಿತಗಳು ಶೇ.4ನ್ನು ತಲುಪುತ್ತವೆ. ಅಂದರೆ ಇವು ವಿತ್ತೀಯ ಶಿಸ್ತನ್ನು ದೊಡ್ಡ ಪ್ರಮಾಣದಲ್ಲಿ ಉಲ್ಲಂಘಿಸುವುದು ಮತ್ತು ರಾಜ್ಯದ ಮೇಲೆ ಮತ್ತಷ್ಟು ಸಾಲದ ಹೊರೆಯನ್ನು ಉಂಟುಮಾಡುವುದು ಶತಸ್ಸಿದ್ಧ. ಹೀಗೆ ಉಚಿತ ಕೊಡುಗೆಗಳಿಗೆ ಅಪಾರ ಹಣ ಖರ್ಚು ಮಾಡಿದರೆ, ರಾಜ್ಯದ ಅಭಿವೃದ್ಧಿಗೆ ಭಾರಿ ಹೊಡೆತ ಬೀಳಲಿದೆ. ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಇಂಥ ಅಗ್ಗದ ತಂತ್ರ ಬಳಸುವ ಬದಲು, ಅಭಿವೃದ್ಧಿ ಮಂತ್ರ ಪಠಿಸಿ ಜನರ ಮನ ಗೆಲ್ಲಲಿ. ಉಚಿತ ಕೊಡುಗೆಗಳನ್ನು ಘೋಷಿಸುವುದು ಸುಲಭ; ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಈಡೇರಿಸುವುದು ಕಷ್ಟ. ಈಡೇರಿಸದಿದ್ದರೆ ವಚನಭಂಗದ ಅಪಖ್ಯಾತಿ, ಈಡೇರಿಸಿದರೆ ಸಾಲದ ಹೊರೆ ಖಾತ್ರಿ.