ರಾಜ್ಯ ಸರ್ಕಾರಿ ನೌಕರರು ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ತೀರ್ಮಾನವೊಂದನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಏಳನೇ ವೇತನ ಆಯೋಗವನ್ನು (7th Pay Commission) ರಚಿಸಿ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್ ರಾವ್ ಅವರನ್ನು ಈ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಆರನೇ ವೇತನ ಆಯೋಗದ ಅವಧಿ ಮುಗಿದಿದ್ದರೂ ಸರ್ಕಾರ 7ನೇ ವೇತನ ಆಯೋಗ ರಚಿಸಿರಲಿಲ್ಲ. ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ಸರ್ಕಾರಿ ನೌಕರರು ಒತ್ತಡ ಹೇರುತ್ತಲೇ ಬಂದಿದ್ದರು. ಕಳೆದ ಎರಡು ಮೂರು ತಿಂಗಳಿನಿಂದ ಅಳೆದು-ತೂಗಿ ಕೊನೆಗೂ ಸರ್ಕಾರ ಈ ಸಂಬಂಧ ಅಂತಿಮ ತೀರ್ಮಾನ ತೆಗೆದುಕೊಂಡಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡುವ ಸಂಪ್ರದಾಯ ಹೊಂದಿರುವ ರಾಜ್ಯ ಸರ್ಕಾರ, ಕಳೆದ ಜುಲೈನಲ್ಲಿಯೇ ಆಯೋಗವನ್ನು ರಚಿಸಬೇಕಿತ್ತು. ಈಗ ತಡವಾಗಿಯಾದರೂ ಈ ತೀರ್ಮಾನ ತೆಗೆದುಕೊಂಡಿರುವುದು ಸ್ವಾಗತಾರ್ಹ.
ವೇತನ ಆಯೋಗ ಈಗ ರಚನೆಯಾದರೆ ಅದಕ್ಕೆ ವರದಿ ನೀಡಲು ಕನಿಷ್ಠ 4 ತಿಂಗಳಾದರೂ ಕಾಲಾವಕಾಶ ಬೇಕಿರುತ್ತದೆ. ಅದು ನೀಡುವ ಶಿಫಾರಸನ್ನು ರಾಜ್ಯ ಸರ್ಕಾರ ಒಮ್ಮೆ ಅಥವಾ ಹಂತ ಹಂತವಾಗಿ ಜಾರಿಗೆ ತರಬೇಕಿರುತ್ತದೆ. ಇದರಿಂದ 5.40 ಲಕ್ಷ ಸರ್ಕಾರಿ ನೌಕರರು, 3 ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ 4 ಲಕ್ಷ ನಿವೃತ್ತ ನೌಕರರು ಇದರ ಲಾಭ ಪಡೆಯಲಿದ್ದಾರೆ.
ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಂತೆ ಸರ್ಕಾರಿ ನೌಕರರನ್ನೂ ತಟ್ಟಿದೆ. ಹೀಗಾಗಿ ವೇತನ ಪರಿಷ್ಕರಣೆ ಆದಷ್ಟು ಬೇಗ ಆಗಬೇಕೆಂಬ ನೌಕರರ ಬೇಡಿಕೆ ಸಮಂಜಸವಾಗಿಯೇ ಇದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಸಕಾಲಕ್ಕೆ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ರಾಜ್ಯ ಸರ್ಕಾರವೂ ಈ ರೀತಿಯೇ ನಡೆದುಕೊಳ್ಳಬೇಕೆಂದು ರಾಜ್ಯದ ಸರ್ಕಾರಿ ನೌಕರರು ಒತ್ತಾಯಿಸುತ್ತಿರುವುದರಲ್ಲಿ ತಪ್ಪೇನೂ ಇಲ್ಲ. ಕೇಂದ್ರ ಸರ್ಕಾರಿ ನೌಕರರಿಗೆ ಹೋಲಿಸಿದರೆ ಅಗಾಧ ವೇತನ ತಾರತಮ್ಯತೆ ಇದ್ದರೂ ಕಾರ್ಯಾಂಗದ ಕೆಲಸಕ್ಕೆ ಚ್ಯುತಿ ಬಾರದಂತೆ ಶ್ರಮಿಸುತ್ತಿರುವ ನೌಕರರಿಗೆ ವೇತನ, ಭತ್ಯೆಗಳನ್ನು ಸೂಕ್ತ ಸಮಯದಲ್ಲಿ ಮತ್ತು ಸರಿಯಾಗಿ ನೀಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ.
ಈಗ ಆಯೋಗ ರಚಿಸಿರುವ ಸರ್ಕಾರ ಮುಂದಿನ ಫೆಬ್ರವರಿಯಲ್ಲಿ ಮಂಡಿಸಲಾಗುವ ಬಜೆಟ್ ನ ಒಳಗೆ ಆಯೋಗದಿಂದ ಮಧ್ಯಂತರ ವರದಿಯನ್ನಾದರೂ ತರಿಸಿಕೊಂಡು, ಬಜೆಟ್ ನಲ್ಲಿ ಇದನ್ನು ಪ್ರಕಟಿಸಬೇಕು ಮತ್ತು ಆದಷ್ಟು ಬೇಗ ಅದನ್ನು ಜಾರಿಗೆ ತರುವ ಜವಾಬ್ದಾರಿಯನ್ನೂ ನಿಭಾಯಿಸಬೇಕು.
ಕಳೆದ ವಿಧಾನಸಭೆಯ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ “ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಯ ವಿಷಯವು ಸರ್ಕಾರದ ನೀತಿ ನಿರ್ಣಯಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ರಾಜ್ಯದ ಆರ್ಥಿಕ ಸ್ಥಿತಿಗತಿಗಳನ್ನು ಗಮನದಲ್ಲಿರಿಸಿ ಸಂದರ್ಭಾನುಸಾರ ಕ್ರಮ ತೆಗೆದುಕೊಳ್ಳಲಾಗುವುದುʼʼ ಎಂದಿದ್ದರು. ಕೊರೊನಾದಿಂದ ಸೃಷ್ಟಿಯಾಗಿದ್ದ ಸಂಕಷ್ಟಗಳು ಈಗ ಇಲ್ಲ. ಹೀಗಾಗಿ ಸರ್ಕಾರಕ್ಕಾಗಿ ದುಡಿಯುತ್ತಿರುವ ಕೈಗಳನ್ನು, ಅವಲಂಬಿಸಿರುವ ಕುಟುಂಬಗಳನ್ನು ಆರ್ಥಿಕವಾಗಿ ಬಲಪಡಿಸುವ ಕೆಲಸವನ್ನು ಸರ್ಕಾರ ಈಗ ಮಾಡಲು ಹಿಂದೆ ಮುಂದೆ ನೋಡಬಾರದು.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ನಡುವಿನ ವೇತನ ತಾರತಮ್ಯತೆಯನ್ನು ನಿವಾರಿಸುವುದು ಸದ್ಯಕ್ಕೆ ಕಷ್ಟವಾಗಬಹುದು. ಆದರೆ ವಿವಿಧ ಇಲಾಖಾ ವೃಂದಗಳ ವೇತನ ಶ್ರೇಣಿಯಲ್ಲಿರುವ ತಾರತಮ್ಯಗಳನ್ನು ಸರಿಪಡಿಸುವುದು ಸರ್ಕಾರಕ್ಕೆ ಕಷ್ಟವೇನಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಇಚ್ಛಾಶಕ್ತಿಯನ್ನಷ್ಟೇ ಪ್ರದರ್ಶಿಸಬೇಕಿದೆ.
ಹಾಲಿ ಪಡೆಯುತ್ತಿರುವ ಡಿಎಯನ್ನು ಮೂಲವೇತನದೊಂದಿಗೆ ಸೇರಿಸಿ ಅದರ ಆಧಾರದಲ್ಲಿ ವೇತನ ಪರಿಷ್ಕರಣೆ ಮಾಡಬೇಕು ಮತ್ತು ಮೂಲ ವೇತನದ ಮೇಲೆ ಶೇ.30ರಿಂದ 40ರಷ್ಟು ವೇತನ ಹೆಚ್ಚಳವಾಗಬೇಕು. 2022ರ ಜುಲೈ1 ರಿಂದ ಅನ್ವಯವಾಗುವಂತೆ ಪರಿಷ್ಕರಣೆಯಾಗಬೇಕು ಎಂದೆಲ್ಲಾ ನೌಕರರು ಬೇಡಿಕೆ ಮಂಡಿಸಿದ್ದಾರೆ. ಈ ಕುರಿತು ಆಯೋಗ ತೀರ್ಮಾನ ತೆಗೆದುಕೊಳ್ಳಲಿದೆ. ಅದರ ಶಿಫಾರಸನ್ನು ಜಾರಿಗೆ ತರುವ ಕುರಿತು ಬದ್ಧತೆಯನ್ನೂ ಈ ಸಂದರ್ಭದಲ್ಲಿ ಸರ್ಕಾರ ಪ್ರಕಟಿಸಬೇಕಿದೆ.
ವಿಸ್ತಾರ ಟಿವಿಯಲ್ಲಿ ಬೆಳಗ್ಗೆ 8.27ಕ್ಕೆ ಪ್ರಸಾರವಾಗುವ ನ್ಯೂಸ್ ಮಾರ್ನಿಂಗ್ ವಿತ್ HPKಯಲ್ಲಿ ‘ವಿಸ್ತಾರ ಸಂಪಾದಕೀಯ’ ವಿಶ್ಲೇಷಣೆ ನೋಡಿ…
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಶಿಕ್ಷಣ ಎನ್ನುವುದು ಲಾಭ ದೋಚುವ ವ್ಯಾಪಾರವಲ್ಲ