Site icon Vistara News

ವಿಸ್ತಾರ ಸಂಪಾದಕೀಯ: ರಾಜ್ಯ ಸರ್ಕಾರ ಆರ್ಥಿಕ ಶಿಸ್ತಿನೊಂದಿಗೆ ಗ್ಯಾರಂಟಿಗಳನ್ನು ಜಾರಿ ಮಾಡಲಿ

Vidhansoudha

ಐದು ಗ್ಯಾರಂಟಿಗಳ ಜಾರಿ ಕುರಿತು ಎದ್ದಿದ್ದ ಗೊಂದಲಗಳನ್ನು ಸಿಎಂ ಸಿದ್ದರಾಮಯ್ಯ ಒಂದು ಹಂತಕ್ಕೆ ನಿವಾರಿಸಿದ್ದಾರೆ. ಆದರೆ, ಈ ಕಾರ್ಯಕ್ರಮಗಳ ಜಾರಿಗೆ ಸಂಪನ್ಮೂಲಗಳ ಕ್ರೋಡೀಕರಣ ಕುರಿತು ಸ್ಪಷ್ಟ ಮಾಹಿತಿಯನ್ನು ಜನರ ಮುಂದಿಟ್ಟಿಲ್ಲ. ಜನ ಕಲ್ಯಾಣ ಕಾರ್ಯಕ್ರಮಗಳ ಜತೆಗೇ ರಾಜ್ಯದ ಅಭಿವೃದ್ಧಿಯೂ ಅಷ್ಟೇ ಮುಖ್ಯ ಎಂಬುದನ್ನು ಸರ್ಕಾರ ಮರೆಯಬಾರದು.

ವಿಧಾನಸಭೆ ಚುನಾವಣೆಗೂ ಮುಂಚೆ ಕಾಂಗ್ರೆಸ್ ಪಕ್ಷವು ‘ಐದು ಗ್ಯಾರಂಟಿ’ಗಳ ಬಗ್ಗೆ ಘೋಷಣೆ ಮಾಡಿತ್ತು. ಅಧಿಕಾರಕ್ಕೇರಿದ ಮೊದಲ ಸಂಪುಟ ಸಭೆಯಲ್ಲಿ ಈ ಗ್ಯಾರಂಟಿಗಳನ್ನು ಜಾರಿ ಮಾಡುವ ಬಗ್ಗೆ ವಾಗ್ದಾನ ನೀಡಿತ್ತು. ಪರಿಣಾಮವಾಗಿ ಜನರು ಕಾಂಗ್ರೆಸ್ ಕೈ ಹಿಡಿದಿದ್ದರು. ಎಲ್ಲರ ನಿರೀಕ್ಷೆ ಮೀರಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೇರಿತು. ಆದರೆ, ಸರ್ಕಾರ ರಚನೆಯಾಗಿ 20 ದಿನಗಳಾದರೂ ‘ಗ್ಯಾರಂಟಿಗಳ’ ಬಗ್ಗೆ ಸ್ಪಷ್ಟವಾದ ಘೋಷಣೆಯಾಗಲಿ, ಮಾರ್ಗದರ್ಶಿ ಸೂತ್ರಗಳಾಗಲಿ ಪ್ರಕಟವಾಗದ್ದರಿಂದ, ರಾಜ್ಯದಲ್ಲಿ ನಿತ್ಯ ಗ್ಯಾರಂಟಿಗಳ ರಗಳೆ ಕೇಳುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಗ್ಯಾರಂಟಿಗಳ ಜಾರಿ’ಗಳ ಕುರಿತು ಇದ್ದ ಗೊಂದಲಗಳನ್ನು ಒಂದು ಹಂತದವರಿಗೆ ನಿವಾರಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಗ್ಯಾರಂಟಿಗಳನ್ನು ಜಾರಿ ಮಾಡುವ ಘೋಷಣೆ ಮಾಡಿದ್ದಾರೆ. ಜತೆಗೆ, ಅರ್ಹ ಫಲಾನುಭವಿಗಳು ಯಾರಾಗಿರುತ್ತಾರೆಂಬುದನ್ನೂ ತಿಳಿಸಿದ್ದಾರೆ.

ಈಗ ಸರ್ಕಾರ ಘೋಷಣೆ ಮಾಡಿರುವ ಪ್ರಕಾರ, ಗೃಹಜ್ಯೋತಿ ಯೋಜನೆಯಡಿ 12 ತಿಂಗಳಲ್ಲಿ ಎಷ್ಟು ವಿದ್ಯುತ್‌ ಬಳಸಿದ್ದಾರೆಂಬುದನ್ನು ಲೆಕ್ಕ ಹಾಕಿ, ಅದಕ್ಕೆ ಶೇ.10 ಸೇರಿಸಲಾಗುತ್ತದೆ. 199 ಯೂನಿಟ್ ಸರಾಸರಿವರೆಗೂ ಯಾವುದೇ ಬಿಲ್ ಪಾವತಿಸುವಂತಿಲ್ಲ. ಗೃಹಲಕ್ಷ್ಮೀ ಯೋಜನೆಯಡಿ, ಮನೆ ಯಜಮಾನಿಗೆ 2000 ರೂ. ಸಹಾಯ ಧನ ಪಾವತಿಯು ಆಗಸ್ಟ್ 15ರಿಂದ ಜಾರಿಯಾಗಲಿದೆ. ಅದರ ಪೂರ್ವದಲ್ಲಿ ಒಂದಿಷ್ಟು ದಾಖಲಾತಿ ಪ್ರಕ್ರಿಯೆಗಳನ್ನು ಫಲಾನುಭವಿಗಳು ಪೂರೈಸಬೇಕು ಮತ್ತು ಮನೆಯೊಡತಿಯನ್ನು ಕುಟುಂಬವೇ ನಿರ್ಧರಿಸಬೇಕಾಗುತ್ತದೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರು ಕರ್ನಾಟಕದೊಳಗೆ ಜೂನ್ 11ರಿಂದ ಸಂಪೂರ್ಣ ಉಚಿತವಾಗಿ ಪ್ರಯಾಣಿಸಬಹುದು. ಅನ್ನಭಾಗ್ಯ ಯೋಜನೆಯು ಜುಲೈ ತಿಂಗಳಿಂದ ಜಾರಿಯಾಗುತ್ತಿದೆ. ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡಿನ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ಘೋಷಿಸಲಾಗಿದೆ. ಯುವನಿಧಿಯಡಿ ಪ್ರಸಕ್ತ ಸಾಲಿನಲ್ಲಿ ಪಾಸಾದ ಪದವೀಧರರು ಮತ್ತು ಡಿಪ್ಲೋಮಾ ಕೋರ್ಸ್ ಮಾಡಿದವರಿಗೆ ಕ್ರಮವಾಗಿ 3 ಸಾವಿರ ಮತ್ತು 1500 ರೂ. ನೀಡಲಾಗುತ್ತದೆ. ಆದರೆ, ಈ ನೆರವು 24 ತಿಂಗಳಿಗೆ ಮಾತ್ರವೇ ಇರಲಿದೆ. ಈ ಅವಧಿಯಲ್ಲಿ ಸರ್ಕಾರಿ ಅಥವಾ ಖಾಸಗಿ ಉದ್ಯೋಗ ದೊರೆತರೆ ನೆರವು ಸ್ಥಗಿತವಾಗಲಿದೆ. ಹೀಗೆ ಐದೂ ಗ್ಯಾರಂಟಿಗಳಿಗೆ ಕೆಲವು ಷರತ್ತುಗಳೊಂದಿಗೆ ಜಾರಿ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ’ ಮಾಡಿದ್ದಾರೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಬೆಂಗಳೂರಿನಲ್ಲಿ ಐಫೋನ್ ಉತ್ಪಾದನಾ ಘಟಕದ ಕನಸು ನನಸಾಗಲಿ

ಭದ್ರತೆ ಮತ್ತು ರಕ್ಷಣೆ, ಆರ್ಥಿಕ ಚಟುವಟಿಕೆಗಳು ಮತ್ತು ಜನಕಲ್ಯಾಣ… ಈ ಮೂರು ತತ್ವಗಳ ಮೇಲೆ ಆಧುನಿಕ ರಾಷ್ಟ್ರಗಳ ಸರ್ಕಾರಗಳು ಕಾರ್ಯನಿರ್ವಹಿಸುತ್ತಿವೆ. ನಮ್ಮ ದೇಶದ ಸಂದರ್ಭಕ್ಕೆ ಅನುಗುಣವಾಗಿ ಹೇಳುವುದಾದರೆ, ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಭದ್ರತೆ ಮತ್ತ ರಕ್ಷಣೆಯನ್ನು ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ. ರಾಜ್ಯ ಸರ್ಕಾರಗಳಿಗೆ ತಮ್ಮ ರಾಜ್ಯದ ಜನ ಕಲ್ಯಾಣವೇ ಮುಖ್ಯ ಧ್ಯೇಯ. ಸಿದ್ದರಾಮಯ್ಯ ಸರ್ಕಾರವು ಈಗ ಜಾರಿ ಮಾಡಿರುವ ಯೋಜನೆಗಳು ಈ ಜನ ಕಲ್ಯಾಣದ ಭಾಗವೇ ಆಗಿವೆ. ಈ ಯೋಜನೆಗಳು ಎಲ್ಲೂ ಸೋರಿಕೆಯಾಗದೇ, ಭ್ರಷ್ಟಾಚಾರ ಇಲ್ಲದೇ ಜಾರಿಯಾದರೆ ಜನರಿಗೆ ಲಾಭವೇ ಆಗಲಿದೆ. ಆದರೆ, ಈ ರೀತಿಯ ‘ವಿಪರೀತ ಜನಕಲ್ಯಾಣ’ ಕಾರ್ಯಕ್ರಮಗಳ ಜಾರಿಯು ‘ಕತ್ತಿ ಮೇಲಿನ ನಡಿಗೆ’ಯೇ ಆಗಿರುತ್ತದೆ. ಸ್ವಲ್ಪವೇ ಯಾಮಾರಿದರೂ ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗುವುದು ಶತಸಿದ್ಧ. ಮುಖ್ಯಮಂತ್ರಿಗಳು ಶುಕ್ರವಾರದ ಪತ್ರಿಕಾಗೋಷ್ಠಿಯಲ್ಲಿ ಗ್ಯಾರಂಟಿಗಳ ಜಾರಿಗಳಿಗಿರುವ ಷರತ್ತುಗಳು, ಕಾಲಾವಧಿಯ ಬಗ್ಗೆ ಹೇಳಿದರೆ ಹೊರತು, ಅವುಗಳ ಅನುಷ್ಠಾನಕ್ಕೆ ಸಂಪನ್ಮೂಲಗಳ ಕ್ರೋಡೀಕರಣದ ಸ್ಪಷ್ಟ ಚಿತ್ರಣವನ್ನು ನೀಡಲಿಲ್ಲ. ಹಾಗಾಗಿ, ಅನುಮಾನಗಳು ಹಾಗೆಯೇ ಉಳಿದಿವೆ.

ಈ ಕಾಲದ ರಾಜಕಾರಣದಲ್ಲಿ ಚುನಾವಣೆಗಳನ್ನು ಗೆಲ್ಲಲು ರಾಜಕೀಯ ಪಕ್ಷಗಳು ನಾನಾ ಕಸರತ್ತುಗಳನ್ನು ಮಾಡುತ್ತವೆ. ಆದರೆ, ತೀರಾ ‘ಉಚಿತ ಕಲ್ಯಾಣ ಕಾರ್ಯಕ್ರಮ’ಗಳು ಮಿತಿಯನ್ನು ದಾಟಿದರೆ ಅಪಾಯ ತಪ್ಪಿದ್ದಲ್ಲ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಯೋಚಿಸಬೇಕಿದೆ. ಮೊದ ಮೊದಲಿಗೆ ಎಲ್ಲವೂ ಸಲೀಸಾಗಬಹುದು. ಆದರೆ, ದಿನಗಳದಂತೆ ಅವುಗಳ ಜಾರಿಗಾಗಿ, ತೆರಿಗೆ ಹೆಚ್ಚಳದಂಥ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಬಹುದು. ಇಲ್ಲವೇ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಾದ ಹಣ ಬಳಕೆಯಾಗಬಹುದು. ಇದರಿಂದ ರಾಜ್ಯದ ಬೆಳವಣಿಗೆ ಹಿಮ್ಮುಖವಾಗಿ ಚಲಿಸಬಹುದು. ಒಂದು ಕಡೆ ಕೊಡಲು ಮತ್ತೊಂದೆ ಕಡೆ ಕಿತ್ತುಕೊಳ್ಳುವಂಥ ಪ್ರಯತ್ನವನ್ನು ರಾಜ್ಯ ಸರ್ಕಾರವು ಮಾಡದಿರಲಿ. ತಮ್ಮ ವಾಗ್ದಾನದಂತೆ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಲಿ. ಜತೆಗೆ, ದೇಶದಲ್ಲೇ ಸದೃಢ ರಾಜ್ಯ ಎನಿಸಿಕೊಂಡಿರುವ ಕರ್ನಾಟಕದ ಘನತೆಗೆ ಧಕ್ಕೆ ಬಾರದಿರಲಿ. 14 ಬಜೆಟ್‍‌ಗಳನ್ನು ಮಂಡಿಸಿ ಅನುಭವ ಇರುವ ಸಿಎಂ ಸಿದ್ದರಾಮಯ್ಯ ಅವರು ಈ ನಿಟ್ಟಿನಲ್ಲಿ ಸಮತೋಲನದ ಹಾದಿಯನ್ನು ಹುಡುಕಬಹುದು. ಆ ಹಾದಿ ಯಾವುದು ಎಂಬುದನ್ನು ಅವರು ಆದಷ್ಟು ಬೇಗ ಜನರ ಮುಂದೆ ಇಡಲಿ. ಆರ್ಥಿಕ ಶಿಸ್ತು ಕಾಪಾಡಿಕೊಂಡೇ ಸರ್ಕಾರವು ಜನಕಲ್ಯಾಣದ ಜತೆಗೆ ರಾಜ್ಯದ ಅಭಿವೃದ್ಧಿಯ ಕಾರ್ಯಕ್ರಮಗಳನ್ನೂ ಮುಂದುವರಿಸಲಿ.

Exit mobile version