ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾಗಿ 17 ದಿನವಷ್ಟೇ ಕಳೆದಿದೆ. ಇನ್ನೂ ಸರಿಯಾಗಿ ಕಾಮಗಾರಿಯೇ ಪೂರ್ತಿಯಾಗಿ ಮುಗಿದಿಲ್ಲ. ಅಷ್ಟರೊಳಗೇ ಟೋಲ್ ದರವನ್ನು ಶೇ.22ರಷ್ಟು ಏರಿಸಲಾಗಿದೆ. ಏ.1ರಿಂದಲೇ ಇದನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಕನಿಷ್ಠ 30 ರೂ.ಯಿಂದ ಗರಿಷ್ಠ 305 ರೂ.ವರೆಗೂ ಸುಂಕ ಏರಿಕೆಯಾಗಿದೆ. ಶುಲ್ಕ ನಿಯಮ 2008ರ ಪ್ರಕಾರ ಟೋಲ್ ದರ ಏರಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿಕೊಂಡಿದೆ. ಬೆಂಗಳೂರಿನ ದೇವನಹಳ್ಳಿ ಏರ್‌ಪೋರ್ಟ್‌ಗೆ ಹೋಗುವ ರಸ್ತೆಯ ಟೋಲನ್ನೂ ಏರಿಸಲಾಗಿದೆ. ಈ ಬಗ್ಗೆ ಅಥಾಂಗ್ ಟೋಲ್ ವೇ ಪ್ರೈ. ಲಿ. ಪ್ರಕಟಣೆ ಹೊರಡಿಸಿದ್ದು, ಕಾರು, ಜೀಪುಗಳ ಏಕಮುಖ ಸಂಚಾರ ದರವನ್ನು 105 ರೂ.ಯಿಂದ 110 ರೂ.ಗೆ ಏರಿಸಿದೆ. 3555 ರೂ. ಇದ್ದ ಮಾಸಿಕ ಪಾಸ್ ಶುಲ್ಕವನ್ನು 3755 ರೂ.ಗೆ ಏರಿಸಲಾಗಿದೆ. ಭಾರಿ ವಾಹನಗಳ ಟೋಲ್ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದು ಹೀಗೇ ಮುಂದುವರಿದರೆ ಜನತೆಯ ಆಕ್ರೋಶಕ್ಕೆ ಟೋಲ್ ತುತ್ತಾಗುವ ದಿನ ದೂರವಿಲ್ಲ.
ವ್ಯವಸ್ಥಿತ ಹೆದ್ದಾರಿ ನಿರ್ಮಿಸಿದ ಮೇಲೆ ನ್ಯಾಯಯುತವಾಗಿ ಟೋಲ್ ದರ ನಿಗದಿಪಡಿಸುವುದು ತಪ್ಪಲ್ಲ. ಆದರೆ ಇದು ಲೂಟಿಯಂತಾಗಬಾರದು. ಜನ ಸಾಮಾನ್ಯರಿಗೆ ಹೊರೆಯಾಗಬಾರದು. ಜನ ಟೋಲ್ ದರದ ಬಿಸಿ ಅನುಭವಿಸುತ್ತ, ಅದರ ಬಗ್ಗೆ ಗೊಣಗುತ್ತಲೇ ಇದ್ದಾರೆ. ಆದರೆ ಸರ್ಕಾರ ಇದನ್ನು ಕಿವಿಗೇ ಹಾಕಿಕೊಳ್ಳುತ್ತಿಲ್ಲ. ಟೋಲ್ ಬೂತ್‌ಗಳನ್ನು ಕಡಿಮೆಗೊಳಿಸಲಾಗುವುದು, ಟೋಲ್ ದರದ ಹೊರೆ ಇಳಿಸಲಾಗುವುದು ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಆಗಿಂದಾಗ ಹೇಳಿಕೆ ನೀಡುತ್ತಲೇ ಇರುತ್ತಾರೆ. ಆದರೆ ಇದು ಕಾರ್ಯರೂಪಕ್ಕೆ ಬರುತ್ತಿಲ್ಲ. ಅಸಮರ್ಪಕ ಟೋಲ್ ದರದ ವಿರುದ್ಧ ಜನ ನಿರಂತರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಸುರತ್ಕಲ್‌ನಲ್ಲಿ 60 ಕಿ.ಮೀ ಮಧ್ಯಂತರದಲ್ಲಿ ಯಾವುದೇ ಟೋಲ್ ಬೂತ್‌ಗಳು ಇರುವಂತಿಲ್ಲ ಎಂದು ನಿಯಮವನ್ನು ಮೀರಿ ಕಾರ್ಯಾಚರಿಸುತ್ತಿದ್ದ ಎರಡು ಟೋಲ್‌ಗಳ ವಿರುದ್ಧ ಜನ ಪ್ರತಿಭಟಿಸಿದ್ದನ್ನು, ಒಂದನ್ನು ಕಿತ್ತು ಹಾಕಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 2015ರಲ್ಲಿ ಹೊಸಕೋಟೆಯ ಬಳಿ ಒಂದು ಟೋಲ್ ಬೂತ್ ಪ್ರತಿಭಟಿಸಿದ ನಾಗರಿಕರು ಅದಕ್ಕೆ ಬೆಂಕಿ ಹಚ್ಚಿ ನಾಶಪಡಿಸಿದ್ದರು. ಮಹಾರಾಷ್ಟ್ರವೂ ಸೇರಿದಂತೆ ಹಲವೆಡೆ ಈ ಟೋಲ್ ಬೂತ್‌ಗಳ ಬಗ್ಗೆ ಜನತೆ ಹೊಂದಿರುವ ಆಕ್ರೋಶವು ಭಾರಿ ಪ್ರತಿಭಟನೆಯಾಗಿ ಪರಿವರ್ತಿತವಾಗಿದೆ. ಇಂಥ ಪ್ರತಿಭಟನೆಗಳಿಗೆ ಸರ್ಕಾರ ಆಸ್ಪದ ಕೊಡಬಾರದು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಕಿ.ಮೀ ಅಂತರದಲ್ಲಿ 28ಕ್ಕೂ ಅಧಿಕ ಟೋಲ್ ಬೂತ್‌ಗಳಿವೆ ಎಂದು ಒಂದು ಲೆಕ್ಕಾಚಾರ ತಿಳಿಸುತ್ತದೆ. ಸ್ಥಳೀಯರಿಗೆ ಆಧಾರ್ ಕಾರ್ಡ್ ಆಧಾರದಲ್ಲಿ ಪಾಸ್ ನೀಡುವುದಾಗಿ ಹೇಳಲಾಗಿದೆ. ಅದು ಎಷ್ಟರ ಮಟ್ಟಿಗೆ ಜಾರಿಗೆ ಬಂದಿದೆಯೋ ತಿಳಿಯದು. ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಬೂತ್‌ಗಳನ್ನು ಹಂತಹಂತವಾಗಿ ಪೂರ್ತಿ ಮುಚ್ಚುವುದಾಗಿ ಸಚಿವರು ಹೇಳಿದ್ದರು. ಅದೂ ಜಾರಿಯಾಗುತ್ತಿಲ್ಲ. ಬದಲಾಗಿ ರಾಜ್ಯ ಹೆದ್ದಾರಿಗಳಲ್ಲಿ ಬೂತ್‌ಗಳು ಹೆಚ್ಚುತ್ತಲೇ ಇವೆ. ಹಲವು ಟೋಲ್ ಬೂತ್‌ಗಳಲ್ಲಿ ಖಾಸಗಿಯವರು ರೌಡಿಗಳನ್ನೂ ಇಟ್ಟುಕೊಂಡಿದ್ದಾರೆ ಎಂಬ ಆರೋಪಗಳಿವೆ. ಇದರಿಂದಾಗಿಯೂ ಆಗಾಗ ಬೂತ್‌ಗಳಲ್ಲಿ ಕ್ಷೋಭೆ ಉಂಟಾಗುತ್ತಿದೆ. ರಸ್ತೆಗಳ ನಿರ್ವಹಣೆ ಚೆನ್ನಾಗಿ ಆಗಬೇಕು ಎಂಬ ಕಾರಣದಿಂದ ಟೋಲ್ ವಸೂಲಿ ಮಾಡಲಾಗುತ್ತದೆ. ಆದರೆ ಪ್ರಜೆಗಳು ಪ್ರತ್ಯೇಕವಾಗಿ ರಸ್ತೆ ಸುಂಕ ತೆರುತ್ತಾರೆ. ವಾಹನ ಮಾಲಿಕರೆಲ್ಲರೂ ಜೀವಾವಧಿ ರಸ್ತೆ ಸುಂಕ ಪಾವತಿಸಬೇಕಾಗುತ್ತದೆ. ಅದೆಲ್ಲಾ ಎಲ್ಲಿ ಹೋಗುತ್ತದೆಯೋ ತಿಳಿಯದು. ಅದಕ್ಕೆ ತಕ್ಕಂತೆ ನಿರ್ವಹಣೆಯನ್ನು ಪ್ರಜೆಗಳು ಅಪೇಕ್ಷಿಸಿದರೆ ಯಾವ ತಪ್ಪೂ ಇಲ್ಲ. ಪ್ರಯಾಣಿಕರು ಪಾವತಿಸುವ ಸುಂಕ ಹಾಗೂ ನಿರ್ವಹಣೆ ವೆಚ್ಚದ ಬಗ್ಗೆ ಪಾರದರ್ಶಕತೆ ಎಲ್ಲೂ ಕಾಣಿಸುವುದಿಲ್ಲ.
ಈ ಎಲ್ಲಾ ಅಸಮರ್ಪಕತೆ ಸರಿಹೋಗದ ಹೊರತು ಟೋಲ್ ದರ ಏರಿಸುವ ಕ್ರಮ ಸರಿಯಲ್ಲ. ಟೋಲ್ ಎನ್ನುವುದು ಜನರಿಗೆ ದುಃಸ್ವಪ್ನವಾಗದಂತೆ ಸರ್ಕಾರ ಸಂಚಾರ ಸ್ನೇಹಿ, ಜನಸ್ನೇಹಿ ಸುಂಕ ವ್ಯವಸ್ಥೆಯನ್ನು ರೂಪಿಸಬೇಕು.