Site icon Vistara News

ವಿಸ್ತಾರ ಸಂಪಾದಕೀಯ: ಅಭ್ಯರ್ಥಿಗಳ ಆಮಿಷ ತಿರಸ್ಕರಿಸೋಣ, ಪ್ರಜಾಪ್ರಭುತ್ವ ಉಳಿಸೋಣ

#image_title

ಕರ್ನಾಟಕ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಇಂದಿನಿಂದ ಮನೆಮನೆ ಪ್ರಚಾರ ಶುರುವಾಗಲಿದೆ. ಬಹಿರಂಗ ಪ್ರಚಾರದ ನಂತರ ಮತದಾನದ ದಿನದವರೆಗಿನ ಎರಡು ದಿನಗಳ ಅವಧಿ ಅಭ್ಯರ್ಥಿಗಳ ಪಾಲಿಗೆ ಮಹತ್ವದ್ದು. ಈ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಕೈ ಬದಲಾಯಿಸುತ್ತದೆ. ಮನೆಮನೆ ಪ್ರಚಾರದ ನೆಪದಲ್ಲಿ ಅವ್ಯಾಹತವಾಗಿ ಅಭ್ಯರ್ಥಿಗಳ ಪ್ರತಿನಿಧಿಗಳಿಂದ ಹಣ ಹಂಚಿಕೆ ಆಗುವುದು ರಹಸ್ಯ ಸಂಗತಿ ಏನಲ್ಲ. ವಿವೇಚನೆಯನ್ನು ಬಳಸಬೇಕಾದ ಸಮಯ ಇದು.

ಕೆಲವು ಕಡೆಗಳಲ್ಲಿ ಮನೆಮನೆ ಪ್ರಚಾರದ ನೆಪದಲ್ಲಿ 500 ರೂ.ಯಿಂದ 10 ಸಾವಿರ ರೂ.ವರೆಗೆ ಪ್ರತಿ ಮತಕ್ಕೆ ಹಂಚಿಕೆ ಮಾಡಲು ಸಿದ್ಧತೆ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಚುನಾವಣೆ ಆಯೋಗ ಈವರೆಗೆ ನಡೆಸಿದ ದಾಳಿಯಲ್ಲಿ 300 ಕೋಟಿಗೂ ಹೆಚ್ಚು ಹಣ ಮತ್ತು ವಸ್ತುಗಳನ್ನು ವಶಪಡಿಸಿಕೊಂಡಿದೆ. ಈ ಚುನಾವಣೆಯಲ್ಲಿ ನಡೆಯುತ್ತಿರುವ ಅಗಾಧ ಅಕ್ರಮಕ್ಕೆ ಇದು ಸಾಕ್ಷಿಯಾಗಿದೆ. ಹಿಂದೆಂದೂ ಈ ಪ್ರಮಾಣದ ಅಕ್ರಮ ಹಣ ವಶವಾಗಿರಲಿಲ್ಲ. ಚುನಾವಣಾ ಆಯೋಗ ಪ್ರತಿ ವಿಧಾನಸಭಾ ಚುನಾವಣೆ ಅಭ್ಯರ್ಥಿಯ ವೆಚ್ಚದ ಮೇಲ್ಮಿತಿಯನ್ನು 40 ಲಕ್ಷಕ್ಕೆ ನಿಗದಿಪಡಿಸಿದೆ. ಆದರೆ ಈ 40 ಲಕ್ಷದಲ್ಲಿ ಇಂದು ಯಾವ ಅಭ್ಯರ್ಥಿಯೂ ಚುನಾವಣೆ ಮುಗಿಸುವುದಿಲ್ಲ. ಹೀಗಾಗಿಯೇ ಅರ್ಹತಾವಂತರಾಗಿದ್ದರೂ ಕುಬೇರರಲ್ಲದ ವ್ಯಕ್ತಿಗಳಿಗೆ ಪಕ್ಷಗಳು ಟಿಕೆಟ್ ನೀಡುವುದೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಹಣ ಹಂಚಿಕೆ ಎನ್ನುವುದು ಈಗ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಎಲ್ಲ ಪಕ್ಷಗಳ ಅಭ್ಯರ್ಥಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಸೋಲು ಖಚಿತ ಎನ್ನುವುದು ಗೊತ್ತಿರುವ ಅಭ್ಯರ್ಥಿಯೂ ಇಂದು ಕನಿಷ್ಠ 500 ರೂ. ಆದರೂ ಕೊಡಬೇಕಾದ ಪರಿಸ್ಥಿತಿ ನೋಡಿದರೆ ಸೋಜಿಗವೆನಿಸುತ್ತದೆ. ಕೋಟ್ಯಂತರ ರೂ.ಯ ಬೆಂಬಲ ಇಲ್ಲದ ವ್ಯಕ್ತಿ ಈಗ ಚುನಾವಣೆಗೆ ಸ್ಪರ್ಧಿಸಲು ಅರ್ಹರೇ ಅಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಕೆಲವು ಕ್ಷೇತ್ರಗಳ ಕೊಳೆಗೇರಿ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಹಣ ಹಂಚಿಕೆ ಈಗ ಸಾರ್ವತ್ರಿಕವಾಗಿದೆ. ಈ ಸನ್ನಿವೇಶ ಪ್ರಜಾಪ್ರಭುತ್ವದ ಅಣಕವಾಗಿದೆ.

ಇಷ್ಟೆಲ್ಲದರ ನಡುವೆಯೂ ಈ ಬಾರಿಯ ಚುನಾವಣೆ ಕಣದಲ್ಲಿ ಬೆರಳೆಣಿಕೆಯಷ್ಟು ಪ್ರಾಮಾಣಿಕರಿದ್ದಾರೆ. ನಿಜವಾಗಿಯೂ ಜನ ಸೇವೆ ಮಾಡಲು ಬಯಸಿದವರಿದ್ದಾರೆ. ಹಣವಂತ ಅಭ್ಯರ್ಥಿಗಳ ಆಮಿಷದ ಅಬ್ಬರದಲ್ಲಿ ಇಂಥವರು ಸೋತು ಹೋಗಬಾರದು. ಅಭ್ಯರ್ಥಿಗಳು ಮತದಾರರಿಗೆ ನೀಡುವ ಹಣ, ಅವರು ಗೆದ್ದ ಮೇಲೆ ಮಾಡುವ ಭ್ರಷ್ಟಾಚಾರಕ್ಕೆ ಹೂಡುವ ಬಂಡವಾಳ ಅಷ್ಟೆ. ಈಗ ಚುನಾವಣೆಯಲ್ಲಿ 50 ಕೋಟಿ ಖರ್ಚು ಮಾಡುವವರು ಅಧಿಕಾರ ಹಿಡಿದಾಗ 500 ಕೋಟಿ ಲೂಟಿ ಹೊಡೆಯುತ್ತಾರೆ. ಅಂತಿಮವಾಗಿ ಇದು ನಮ್ಮದೇ ಖಜಾನೆಯ ಹಣ, ನಮ್ಮದೇ ಹಣದ ಲೂಟಿಯಾಗಿರುತ್ತದೆ. ಅಭ್ಯರ್ಥಿಗಳಿಂದ ಹಣ ಪಡೆಯುವುದೆಂದರೆ ನಮ್ಮದೇ ಹಣದ ಲೂಟಿಗೆ ಖಜಾನೆಯ ಕೀಲಿಕೈ ಕೊಟ್ಟಂತೆ. ಮತಕ್ಕಾಗಿ ಹಣ ಪಡೆದ ಮತದಾರನಿಗೆ ಶಾಸಕನಿಂದ ಕೆಲಸ ಮಾಡಿಸಿಕೊಳ್ಳಲು ಏನು ಹಕ್ಕಿರುತ್ತದೆ? ಶಾಸಕ ಮಾಡಿಸುವ ಕೆಲಸದಲ್ಲಿ ಭ್ರಷ್ಟಾಚಾರ ಎದ್ದು ಕಂಡರೂ ಅದನ್ನು ಹೇಳಲಾಗದ ಸ್ಥಿತಿಯಲ್ಲಿ ಮತದಾರರು ಇರುತ್ತಾರೆ. ಕೆಲವೊಮ್ಮೆ ಶಾಸಕರೇ, ಹಣ ಕೊಟ್ಟಿದ್ದೇವೆ, ಇನ್ನೇನೂ ಕೇಳಬೇಡಿ ಎಂದು ನೇರವಾಗಿಯೇ ಅಹವಾಲು ತರುವ ಕ್ಷೇತ್ರದ ಜನತೆಗೆ ಹೇಳುವುದುಂಟು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಕೊಹಿನೂರ್ ವಜ್ರ ಇನ್ನಾದರೂ ಭಾರತಕ್ಕೆ ಮರಳಲಿ

ಇಂಥ ಪರಿಸ್ಥಿತಿ ಬರಬಾರದು ಎಂದಿದ್ದರೆ, ಮತದಾರರು ಇಂಥ ಕ್ಷಣಿಕ ಆಮಿಷವನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿ, ಪ್ರಾಮಾಣಿಕವಾಗಿ ಮತ ಚಲಾಯಿಸಬೇಕು. ಮತದಾರರಲ್ಲೇ ಇಲ್ಲದ ಪ್ರಾಮಾಣಿಕತೆಯನ್ನು ರಾಜಕಾರಣಿಗಳಲ್ಲಿ ನಿರೀಕ್ಷಿಸಲಾದೀತೆ? ಒಂದು ಮತದ ಮೌಲ್ಯ ಇರುವುದು ಆ ಕ್ಷಣದಲ್ಲಾಗಲೀ ಐನೂರು ರೂಪಾಯಿ ಹಣದಲ್ಲಾಗಲೀ ಹೆಂಡದಲ್ಲಾಗಲೀ ಅಲ್ಲ. ಅದಕ್ಕೆ ಐದು ವರ್ಷಗಳ ಕಾಲಾವಧಿಯ ಮೌಲ್ಯವಿದೆ. ಉತ್ತಮ ಸರ್ಕಾರ ಸೃಷ್ಟಿಯಾಗುವುದು ಯೋಚಿಸಬಲ್ಲ ವಿವೇಕಿ ಪ್ರಜೆಗಳಿಂದ. ಅಭ್ಯರ್ಥಿಗಳು ಒಡ್ಡುವ ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸೋಣ, ಪ್ರಜಾಪ್ರಭುತ್ವವನ್ನು ರಕ್ಷಿಸೋಣ.

Exit mobile version